ಗುರುವಾರ , ಜೂಲೈ 9, 2020
29 °C
ಜೈಷ್‌–ಇ–ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆ

ಪುಲ್ವಾಮಾದ ಕಾರು ಬಾಂಬ್‌ ದಾಳಿಯ ಸಂಚುಕೋರನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಪುಲ್ವಾಮಾದಲ್ಲಿ ಇತ್ತೀಚೆಗೆ ಭದ್ರತಾ ಪಡೆಯು ವಿಫಲಗೊಳಿಸಿದ ಕಾರು ಬಾಂಬ್‌ ದಾಳಿಯ ಸಂಚುಕೋರ ಸೇರಿದಂತೆ ಮೂವರು ಜೈಷ್‌–ಇ–ಮೊಹಮ್ಮದ್ ‌ಉಗ್ರ ಸಂಘಟನೆಯ ಉಗ್ರರನ್ನು ದಕ್ಷಿಣ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆ ಬುಧವಾರ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದೆ.

‘ಕಾರು ಬಾಂಬ್‌ ದಾಳಿ ಸಂಚುಕೋರ ಅಬ್ದುಲ್‌ ರೆಹಮಾನ್‌ ಅಲಿಯಾಸ್‌ ಫೌಜು ಭಾಯಿ ಅಥವಾ ಫೌಜು ಬಾಬಾ, 26/11 ಮುಂಬೈ ದಾಳಿ ಸಂಚುಕೋರ ಮಸೂದ್‌ ಅಜರ್‌ನ ರಕ್ತಸಂಬಂಧಿ. ರೆಹಮಾನ್‌ ಪಾಕಿಸ್ತಾನದ ಮುಲ್ತಾನ್‌ ಪ್ರದೇಶದವನಾಗಿದ್ದಾನೆ. ಕಳೆದ ಫೆಬ್ರುವರಿಯಲ್ಲಿ ನಡೆದ ಪುಲ್ವಾಮಾ ದಾಳಿಯಲ್ಲೂ ಈತನ ಪಾತ್ರ ಮಹತ್ವದಾಗಿತ್ತು’ ಎಂದು ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹತ್ಯೆಯಾದ ಉಳಿದ ಇಬ್ಬರು ಉಗ್ರರ ಗುರುತು ಪತ್ತೆಯಾಗಿಲ್ಲ’ ಎಂದರು.

‘ಇಲ್ಲಿಂದ 30 ಕಿ.ಮೀ ದೂರದ ಪುಲ್ವಾಮಾ ಜಿಲ್ಲೆಯ ಕಂಗನ್‌ ಪ್ರದೇಶದ ಅಸ್ತನ್‌ ಮೊಹಲ್ಲಾದಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಇವರು ಈ ಪ್ರದೇಶದಲ್ಲಿ ಕ್ರಿಯಾಶೀಲರಾಗಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಪ್ರದೇಶದ ಸುತ್ತ ಕಾವಲು ಬೇಲಿ ಹಾಕಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಮಂಗಳವಾರ ಹಾಗೂ ಬುಧವಾರದ ರಾತ್ರಿಗಳಲ್ಲಿಗೂ ಶೋಧ ಕಾರ್ಯ ನಡೆದಿತ್ತು’ ಎಂದು ತಿಳಿಸಿದರು.

‘ಬುಧವಾರ ಬೆಳಿಗ್ಗೆ ಉಗ್ರರು ಅಡಗಿದ್ದ ಮನೆಯನ್ನು ಪತ್ತೆ ಮಾಡಿ ಸುತ್ತುವರೆಯಲಾಯಿತು. ಶರಣಾಗುವಂತೆ ಉಗ್ರರಿಗೆ ಹೇಳಲಾಯಿತು. ಆದರೆ, ಅವರು ಗುಂಡಿನ ದಾಳಿ ನಡೆಸಿದರು.  ನಾವು ನಡೆಸಿದ ಪ್ರತಿ ದಾಳಿಯಲ್ಲಿ ಉಗ್ರರು ಹತರಾದರು. ಈ ವೇಳೆ ನಮ್ಮ ಒಬ್ಬ ಸೈನಿಕನಿಗೆ ಗಾಯಗಳಾಗಿವೆ’ ಎಂದು ವಿವರಿಸಿದರು.

‘ಜೈಷ್‌ನ ಮುಖ್ಯಸ್ಥ ರಶೀದ್‌ ಘಾಜಿಯನ್ನೂ ಸಹ ಪತ್ತೆ ಹಚ್ಚಲಾಗಿದೆ. ಆತ ಪುಲ್ವಾಮಾದ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾನೆ. ಅಲ್ಲಿಂದ ಹೊರಗೆ ಬಂದ ತಕ್ಷಣದಲ್ಲಿ ಆತನನ್ನು ನಿಷ್ರಿಯ ಮಾಡಲಾಗುವುದು. ಜತೆಗೆ ಇದೇ ಸಂಘಟನೆಯ ವಲೀದ್‌ ಭಾಯ್‌ ಹಾಗೂ ಲಂಬೂ ಭಾಯ್‌ ಎಂಬ ಇಬ್ಬರು ಉಗ್ರರನ್ನೂ ಪತ್ತೆ ಹಚ್ಚಲಾಗಿದೆ. ಇಬ್ಬರೂ ವಿದೇಶಿಯರಾಗಿದ್ದು, ಸುಧಾರಿತ ಸ್ಫೋಟಕ ಸಾಧನಗಳ ತಜ್ಞತೆ ಹೊಂದಿದ್ದಾರೆ’ ಎಂದರು.

ಹೆಚ್ಚಿದ ಕಾರ್ಯಾಚರಣೆ: ಈ ವರ್ಷದ ಮಾರ್ಚ್‌ನಿಂದ ಈಚೆಗೆ ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕುವ ಕಾರ್ಯಾಚರಣೆಗಳು ಹೆಚ್ಚಿದೆ. ಲಾಕ್‌ಡೌನ್‌ ಘೋಷಣೆ ನಂತರ ಸುಮಾರು 44 ಉಗ್ರರನ್ನು ಹಾಗೂ ಅವರ ಕೆಲವು ಸಹಚರರನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಗಳಲ್ಲಿ ಭಾರತದ 24 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 

ಕಾಶ್ಮೀರದಾದ್ಯಂತ ಈ ವರ್ಷದ ಪ್ರಾರಂಭದಿಂದ ಇಲ್ಲಿಯವರೆಗೆ 82 ಉಗ್ರರನ್ನು ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಲಾಗಿದೆ. 2019ರ ಮೊದಲ ಏಳು ತಿಂಗಳಲ್ಲಿ 154 ಉಗ್ರರನ್ನು ಗುಂಡಿನ ದಾಳಿಯಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ.

ಸ್ಫೋಟಕಗಳ ತಜ್ಞ ರೆಹಮಾನ್‌
‘ಉಗ್ರ ಮಸೂದ್‌ ಅಜರ್‌ನ ಆಪ್ತ ತಲ್ಹಾ ರಶೀದ್‌ ಹತ್ಯೆ ನಂತರ, 2018ರಲ್ಲಿ ಅಬ್ದುಲ್‌ ರೆಹಮಾನ್‌ ಅಲಿಯಾಸ್‌ ಫೌಜು ಭಾಯಿನನ್ನು ಕಾಶ್ಮೀರಕ್ಕೆ ಕಳುಹಿಸಲಾಗುತ್ತದೆ. ಈ ವರ್ಷದ ಜನವರಿಯಲ್ಲಿ ಕಾಶ್ಮೀರ ಜೈಷ್‌ ಮುಖ್ಯಸ್ಥನನ್ನು ಭದ್ರತಾ ಪಡೆ ಹತ್ಯೆ ಮಾಡುತ್ತದೆ. ನಂತರದಲ್ಲಿ ಆತ ಕಾಶ್ಮೀರದ ಜೈಷ್‌ನ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆ’ ಎಂದು ಐಜಿಪಿ ವಿಜಯ್‌ ಕುಮಾರ್‌ ತಿಳಿಸಿದರು.‌

‘ಈತ ಅಫ್ಗಾನ್‌ ಯುದ್ಧದಲ್ಲಿ ಭಾಗವಹಿಸಿದ್ದ. ಸುಧಾರಿತ ಸ್ಫೋಟಕ ಸಾಧನಗಳ ತಜ್ಞತೆ ಹೊಂದಿದ್ದ ಈತ, ಜೈಷ್‌ ಸಂಘಟನೆಗೆ ಬೇಕಾದ ಸ್ಫೋಟಕಗಳನ್ನು ಸಂಗ್ರಹಿಸಿ ಕೊಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ’ ಎಂದರು.

‘ಈತನ ಮೂಲ ಹೆಸರು ಇಕ್ರಮ್‌. ಈತ ಜೈಷ್‌ನ ಕಮಾಂಡರ್‌ ಅಬ್ದುಲ್‌ ರೌಫ್‌ ಅಜ್ಗರ್‌ನ ಅತ್ಯಂತ ಆಪ್ತ ವಲಯದಲ್ಲಿದ್ದವ. ಅಬ್ದುಲ್‌ ರೌಫ್‌ ಅಜ್ಗರ್‌, 1999ರಲ್ಲಿ ಭಾರತದ ವಿಮಾನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾದವನಾಗಿದ್ದ’ ಎಂದರು.

*
ಈ ವರ್ಷ ನಾವು ಹಲವು ಮುಖ್ಯ ಕಾರ್ಯಾಚರಣೆಗಳನ್ನು ನಡೆಸಿ, ಉಗ್ರ ಸಂಘಟನೆಗಳ ಹಲವು ಪ್ರಮುಖರನ್ನು ಹತ್ಯೆ ಮಾಡಿದ್ದೇವೆ. ಈಗ ರೆಹಮಾನ್‌ ಹೊಸ ಸೇರ್ಪಡೆ.
–ವಿಜಯ್‌ ಕುಮಾರ್‌, ಐಜಿಪಿ ಕಾಶ್ಮೀರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು