ಬುಧವಾರ, ಜೂಲೈ 8, 2020
28 °C

ಜೂನ್‌ 11ರಿಂದ ತಿರುಪತಿ ವೆಂಕಟೇಶ್ವರ ದರ್ಶನ: ನಿತ್ಯ 6,000 ಭಕ್ತಾದಿಗಳಿಗೆ ಅವಕಾಶ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ತಿರುಪತಿ ದೇವಾಲಯ

ಹೈದರಾಬಾದ್: ಜೂನ್‌ 11ರಿಂದ ಭಕ್ತಾದಿಗಳಿಗೆ ತಿರುಪತಿ ವೆಂಕಟೇಶ್ವರ ದರ್ಶನ ಸಿಗಲಿದೆ. ಸೀಮಿತ ಸಂಖ್ಯೆಯಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.

ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ 80ಕ್ಕೂ ಹೆಚ್ಚು ದಿನಗಳಿಂದ ದೇವಾಲಯ ಮುಚ್ಚಲಾಗಿತ್ತು. ಲಾಕ್‌ಡೌನ್‌ ಸಡಿಲಿಕೆಯ ನಂತರದಲ್ಲಿ ಭಕ್ತಾದಿಗಳಿಗೆ ದರ್ಶನಕ್ಕೆ ಜೂನ್‌ 11ರಿಂದ ಮತ್ತೆ ಅವಕಾಶ ಕಲ್ಪಿಸಲಾಗುತ್ತಿದೆ.

ನಿತ್ಯ 6,000 ಭಕ್ತಾದಿಗಳಿಗೆ ಮಾತ್ರ ಅವಕಾಶ ಸಿಗಲಿದೆ. ಸಾಮಾನ್ಯ ಸಂದರ್ಭಗಳಲ್ಲಿ ನಿತ್ಯ ಸುಮಾರು 60,000 ಜನರಿಗೆ ದರ್ಶನದ ಅವಕಾಶ ನೀಡಲಾಗುತ್ತಿತ್ತು. ಕೋವಿಡ್‌–19ನಿಂದಾಗಿ ಭಕ್ತಾದಿಗಳ ನಡುವೆ 6 ಅಡಿ ಅಂತರ ಹಾಗೂ ಮಾಸ್ಕ್ ಧರಿಸುವುದನ್ನು ಅನುಸರಿಸಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ಹೇಳಿದ್ದಾರೆ.

ಮಾರ್ಚ್‌ 20ರಿಂದ ಭಕ್ತಾದಿಗಳ ಪ್ರವೇಶ ನಿಷೇಧಿಸಲಾಗಿತ್ತು. ಜೂನ್‌ 11ರ ಬೆಳಗಿನಿಂದ ಸಂಜೆ ವರೆಗೂ ಪ್ರತಿ ಗಂಟೆಗೆ 500 ಭಕ್ತಾದಿಗಳ ಪ್ರವೇಶಕ್ಕೆ ಅವಕಾಶ ಕೊಡಲಾಗುತ್ತದೆ. ನಿತ್ಯ 13 ಗಂಟೆ ದರ್ಶನಕ್ಕೆ ಪ್ರವೇಶ ನೀಡಲಾಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬ ರೆಡ್ಡಿ ಮಾಹಿತಿ ನೀಡಿದ್ದಾರೆ.

10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ 65 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಭಕ್ತಾದಿಗಳಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ದೇವಸ್ಥಾನದ ಸಿಬ್ಬಂದಿ ಸುರಕ್ಷಾ ಸ್ಯೂಟ್‌ (ಪಿಪಿಇ) ಧರಿಸಲಿದ್ದಾರೆ. ಭಕ್ತಾದಿಗಳಿಗೆ ಪ್ರವೇಶ ನೀಡುವುದಕ್ಕೂ ಮುನ್ನ ಅವರ ಸಂಚಾರದ ಮಾಹಿತಿ ಹಾಗೂ ಕೋವಿಡ್‌–19 ಪರೀಕ್ಷೆ ನಡೆಸಲಾಗುತ್ತದೆ. ಜ್ವರದಂತಹ ಲಕ್ಷಣಗಳು ಕಂಡು ಬಂದರೆ, ಅವರನ್ನು ತಕ್ಷಣವೇ ಕ್ವಾರಂಟೈನ್‌ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿತ್ಯ 3,000 ವಿಶೇಷ ದರ್ಶನ ಟಿಕೆಟ್‌ಗಳು (₹300 ಬೆಲೆ) ಆನ್‌ಲೈನ್‌ನಲ್ಲಿ ಸಿಗಲಿದೆ. 3,000 ಜನರಿಗೆ ಉಚಿತ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ತಿರುಮಲದ ಅಲಿಪಿರಿಯಲ್ಲಿ ಉಚಿತ ದರ್ಶನಕ್ಕೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಜೂನ್‌ 8ರಿಂದ ಆನ್‌ಲೈನ್ ಟಿಕೆಟ್ ಮಾರಾಟ ಆರಂಭವಾಗಲಿದೆ. ಲಾಕ್‌ಡೌನ್‌ ಅವಧಿಯಲ್ಲಿ ಸುಮಾರು ₹500 ಕೋಟಿ ನಷ್ಟ ಆಗಿರುವುದಾಗಿ ಟಿಟಿಡಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು