ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಂಗಲ್ ಉಡುಗೊರೆಗೆ ತಡೆ

Last Updated 9 ಜನವರಿ 2019, 20:01 IST
ಅಕ್ಷರ ಗಾತ್ರ

ಚೆನ್ನೈ: ಪಡಿತರ ಚೀಟಿ ಹೊಂದಿರುವವರಿಗೆ ಪೊಂಗಲ್ ಉಡುಗೊರೆಯಾಗಿ ₹ 1,000 ನೀಡುವ ತಮಿಳುನಾಡು ಸರ್ಕಾರದ ಯೋಜನೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

‘ಗಾಜಾ’ ಚಂಡಮಾರುತ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಮೊದಲೇ ಈ ರೀತಿ ಹಣ ಹಂಚುವ ಉದ್ದೇಶವಿದ್ದರೆ, ಆಗ ಈ ಹಣ ಬಳಸಿಕೊಂಡು ಇನ್ನಷ್ಟು ಉತ್ತಮವಾಗಿ ಪರಿಹಾರ ಹಾಗೂ ಮೂಲಸೌಕರ್ಯ ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಬಹುದು ಎಂದು ಹೈಕೋರ್ಟ್ ಸಲಹೆ ನೀಡಿದೆ.

ಆರ್ಥಿಕ ಸ್ಥಿತಿ ಪರಿಗಣಿಸದೆ, ಪಡಿತರ ಚೀಟಿ ಹೊಂದಿರುವ ಎಲ್ಲರಿಗೂ ಹಣ ನೀಡುವ ಸರ್ಕಾರದ ಕ್ರಮ ಪ್ರಶ್ನಿಸಿ ಕಾರ್ಯಕರ್ತ ಜೆ. ಡೇನಿಯಲ್ ಜೇಸುದಾಸ್‌ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ. ಸತ್ಯನಾರಾಯಣನ್ ಹಾಗೂ ಪಿ. ರಾಜಮಣಿಕಂ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ, ಈ ಮಧ್ಯಂತರ ಆದೇಶ ನೀಡಿದೆ.

ಎಲ್ಲ ಪಡಿತರ ಚೀಟಿದಾರರಿಗೂ ₹ 1,000 ಉಡುಗೊರೆ ಕೊಟ್ಟು ಅದನ್ನು ಸರ್ಕಾರದ ನೀತಿ ನಿರ್ಧಾರ ಎಂದು ಹೇಗೆ ಕರೆಯುವಿರಿ ಎಂದು ಪ್ರಶ್ನಿಸಿದ ನ್ಯಾಯಪೀಠ, ಈಗಾಗಲೇ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಇದರಿಂದ ಇನ್ನಷ್ಟು ಹೊರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿತು.

‘ಬಡತನ ರೇಖೆಗಿಂತ ಕೆಳಗಿರುವವರಿಗೆ ಉಡುಗೊರೆ ಕೊಡುವುದು ತಪ್ಪಲ್ಲ. ಆದರೆ, ಎಲ್ಲ ಪಡಿತರ ಚೀಟಿದಾರರಿಗೂ ಹೀಗೆ ಉಡುಗೊರೆ ನೀಡುವುದರ ಹಿಂದಿನ ಉದ್ದೇಶವೇನು? ಹಬ್ಬದ ಹೆಸರಿನಲ್ಲಿ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದೀರಿ. ರಾಜಕೀಯ ಪಕ್ಷಗಳು ತಮ್ಮ ಹಣ ನೀಡಿದರೆ ಆಗ ಈ ಪ್ರಶ್ನೆಗಳನ್ನು ನಾವು ಕೇಳುವುದಿಲ್ಲ. ಹೈಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ರಾಜ್ಯದ ಅಡ್ವೊಕೇಟ್‌ ಜನರಲ್‌ ಅಂತಹವರೂ ಸರ್ಕಾರದಿಂದ ಪೊಂಗಲ್‌ ಹೆಸರಿನಲ್ಲಿ ₹ 1,000 ಪಡೆಯುವ ಅಗತ್ಯವಾದರೂ ಏನಿದೆ’ ಎಂದು ಪೀಠ ಅಚ್ಚರಿ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT