ಬುಧವಾರ, ಜನವರಿ 29, 2020
24 °C

ಮೂರು ಕೋಟಿ ಮನೆ ಭೇಟಿ ಗುರಿ: ಬಿಜೆಪಿ ನಾಯಕರ ಸಿಎಎ ಜಾಗೃತಿ ಅಭಿಯಾನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಗೆ(ಸಿಎಎ) ಬೆಂಬಲ ಪಡೆಯುವ ಉದ್ದೇಶದಿಂದ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲು ಬಿಜೆಪಿ ಮುಖಂಡರು ಸಜ್ಜಾಗಿದ್ದಾರೆ. 

10 ದಿನದ ಈ ಬೃಹತ್‌ ಅಭಿಯಾನಕ್ಕೆ ಜ.5ರಂದು ಚಾಲನೆ ಸಿಗಲಿದ್ದು, ಪಕ್ಷದ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಮುಖಂಡರು ರಾಷ್ಟ್ರದಾದ್ಯಂತ ಮೂರು ಕೋಟಿ ಕುಟುಂಬಗಳನ್ನು ಭೇಟಿಯಾಗುವ ಗುರಿ ಹೊಂದಿದ್ದಾರೆ. ಸಿಎಎ ವಿರುದ್ಧ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಯಾಗಿ ಈ ಅಭಿಯಾನವನ್ನು ಬಿಜೆಪಿ ಆಯೋಜಿಸಿದೆ. 

ಎಲ್ಲೆಲ್ಲಿ ಅಭಿಯಾನ: ಅಭಿಯಾನದ ಮೊದಲ ದಿನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮಿತ್‌ ಶಾ, ಗಾಜಿಯಾಬಾದ್‌ನಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಲಖನೌನಲ್ಲಿ ಸಚಿವ ರಾಜನಾಥ್‌ ಸಿಂಗ್‌, ನಾಗ್ಪುರದಲ್ಲಿ ನಿತಿನ್‌ ಗಡ್ಕರಿ, ಜೈಪುರದಲ್ಲಿ ನಿರ್ಮಲಾ ಸೀತಾರಾಮನ್‌ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅನಿಲ್‌ ಜೈನ್‌ ತಿಳಿಸಿದರು.

ಸಹಿಷ್ಣುತೆಯಿಲ್ಲದ ರಾಷ್ಟ್ರ: ‘ಸಿಎಎ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್‌) ಅನುಷ್ಠಾನದಿಂದ ಅಂತರರಾಷ್ಟ್ರೀಯ ಸಮುದಾಯದಿಂದ ಭಾರತ ಬೇರ್ಪಡುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ತವು ಪಾಕಿಸ್ತಾನದಂತೆ ಸಹಿಷ್ಣುತೆಯಿಲ್ಲದ ರಾಷ್ಟ್ರ ಎಂದು ಹೋಲಿಸಲ್ಪಡುತ್ತಿದೆ’ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆನನ್ ತಿಳಿಸಿದರು. 

**
ನಿಲುವು ಬದಲಾಯಿಸುವುದಿಲ್ಲ: ಗೃಹ ಸಚಿವ ಅಮಿತ್‌ ಶಾ
ಜೋಧ್‌ಪುರ(ರಾಜಸ್ತಾನ)(ಪಿಟಿಐ): ‘ವಿಪಕ್ಷಗಳೆಲ್ಲವೂ ಎಷ್ಟೇ ವಿರೋಧಿಸಿದರೂ, ಸಿಎಎ ಅನುಷ್ಠಾನದ ನಿರ್ಧಾರದಿಂದ ಒಂದಿಂಚೂ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಗೃಹ ಸಚಿವ ಅಮಿತ್‌ ಶಾ ಇಲ್ಲಿ ಹೇಳಿದರು.

ಸಿಎಎ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಇಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಸಿಎಎ ಕುರಿತು ಸುಳ್ಳು ಸುದ್ದಿಯ ಅಭಿಯಾನವನ್ನು ಕಾಂಗ್ರೆಸ್‌ ಹಾಗೂ ಇತರೆ ವಿಪಕ್ಷಗಳು ನಡೆಸುತ್ತಿವೆ. ತಿದ್ದುಪಡಿ ಕಾಯ್ದೆಯು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಬದಲಾಗಿ ಪೌರತ್ವವನ್ನು ನೀಡುವ ಕಾಯ್ದೆ ಇದು’ ಎಂದು ಆರೋಪಿಸಿದರು. 

ಭಾಷಾಂತರಿಸಿ ನೀಡುತ್ತೇನೆ: ‘ಕಾಂಗ್ರೆಸ್‌ ಮುಸ್ಲಿಮರನ್ನು ದಾರಿತಪ್ಪಿಸುತ್ತಿದೆ. ರಾಹುಲ್‌ ಗಾಂಧಿ ಕಾಯ್ದೆಯನ್ನು ಓದಿದ್ದರೆ ಚರ್ಚೆಗೆ ಬರಲಿ. ರಾಹುಲ್‌ ಬಾಬಾ ನೀವು ಕಾಯ್ದೆ ಓದಿದ್ದರೆ ಚರ್ಚೆಗೆ ಬನ್ನಿ. ಓದದೇ ಇದ್ದರೆ, ನಾನು ಕಾಯ್ದೆಯನ್ನು ಇಟಾಲಿಯನ್‌ಗೆ ಭಾಷಾಂತರಿಸಿ, ನಿಮಗೆ ಕಳುಹಿಸಿಕೊಡುತ್ತೇನೆ ಓದಿಕೊಳ್ಳಿ’ ಎಂದು ಶಾ ಕುಟುಕಿದರು. 

 


ಸಿಲಿಗುರಿಯಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನಾ ರ್‍ಯಾಲಿಯ ನೇತೃತ್ವ ವಹಿಸಿದ್ದ ಮಮತಾ ಬ್ಯಾನರ್ಜಿ –ಪಿಟಿಐ ಚಿತ್ರ

ಮೋದಿ ಪಾಕಿಸ್ತಾನದ ರಾಯಭಾರಿಯೇ? ಮಮತಾ
ಸಿಲಿಗುರಿ (ಪಶ್ಚಿಮ ಬಂಗಾಳ)(ಪಿಟಿಐ): ‘ಮೋದಿ ಅವರು ಹಿಂದೂಸ್ತಾನದ ಪ್ರಧಾನಿಯೇ ಅಥವಾ ನೆರೆ ರಾಷ್ಟ್ರದ ರಾಯಭಾರಿಯೇ ಎನ್ನುವ ಸಂಶಯ ಹುಟ್ಟಿಕೊಂಡಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಹೇಳಿಕೆಯನ್ನು ಟೀಕಿಸಿದ್ದಾರೆ. 

ಸಿಲಿಗುರಿಯನ್ನು ಸಿಎಎ ವಿರುದ್ಧದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಭಾರತದಲ್ಲಿ ಸಮೃದ್ಧವಾದ ಸಂಸ್ಕೃತಿ, ಪರಂಪರೆಯಿದೆ. ಹೀಗಿರುವಾಗ ಪದೇ ಪದೇ ಭಾರತವನ್ನು ಪಾಕಿಸ್ತಾನದ ಜೊತೆ ಹೋಲಿಸುವುದೇಕೆ?. ಸ್ವಾತಂತ್ರ್ಯ ದೊರಕಿ 70 ವರ್ಷ ಕಳೆದಿದೆ. ಇದೀಗ ಪೌರತ್ವವನ್ನು ಸಾಬೀತುಪಡಿಸಿ ಎಂದು ಜನರಿಗೆ ಸೂಚಿಸಿರುವುದು ನಾಚಿಕೆಯ ವಿಷಯ’ ಎಂದರು. 

11 ಮುಖ್ಯಮಂತ್ರಿಗಳಿಗೆ ಪಿಣರಾಯಿ
ಪತ್ರ( ತಿರುವನಂತಪುರ): ‘ಜಾತ್ಯತೀತ ಹಾಗೂ ಪ್ರಜಾಪ್ರಭುತ್ವ ಉಳಿಸಲು ಪೌರತ್ವ (ತಿದ್ದುಪಡಿ)ಕಾಯ್ದೆಯ ವಿರುದ್ಧ ಎಲ್ಲ ಭಾರತೀಯರು ಒಗ್ಗಟ್ಟಾಗಿ ಹೋರಾಡುವ ಅಗತ್ಯತೆ ಇದೆ’ ಎಂದು ಮಮತಾ ಬ್ಯಾನರ್ಜಿ, ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ 11 ಮುಖ್ಯಮಂತ್ರಿಗಳಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪತ್ರ ಬರೆದಿದ್ದಾರೆ. ಸಿಎಎ ರದ್ದುಪಡಿಸಲು ಆಗ್ರಹಿಸಿ ಕೇರಳ ವಿಧಾನಸಭೆ ಇತ್ತೀಚೆಗೆ ಒಮ್ಮತದಿಂದ ನಿರ್ಣಯ ಅಂಗೀಕರಿಸಿತ್ತು. 

*

ಪೌರತ್ವ ಪ್ರಕ್ರಿಯೆಯ ಬಗ್ಗೆ ಭಾರತೀಯ ಮುಸ್ಲಿಮರು ಚಿಂತಿಸಬೇಕಾಗಿಲ್ಲ. ರಾಷ್ಟ್ರೀಯ ಪೌರತ್ವ ನೋಂದಣಿ ಬಗ್ಗೆಯೂ ಭಯಪಡಬೇಕಾಗಿಲ್ಲ. ಸಂವಿಧಾನವೊಂದೇ ಭಾರತದ ಧರ್ಮ.
–ಅನಿಲ್‌ ಜೈನ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ  

 *
ಸಿಎಎ ವಿರುದ್ಧ ಪ್ರತಿಭಟನೆ ನಡೆಸುವವರು ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರೋಧಿಗಳು. ದೇಶದೊಳಗಿರುವ ಉಗ್ರರನ್ನು ಸರ್ಕಾರ ಕಿತ್ತೆಸೆಯಲಿದೆ.
–ನಿತ್ಯಾನಂದ ರೈ, ಕೇಂದ್ರ ರಾಜ್ಯ ಖಾತೆ ಸಚಿವ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು