ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವಿಗಳ ಮಕ್ಕಳ ಸೋಲು– ಗೆಲುವು

Last Updated 15 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಮಕ್ಕಳಿಗೂ ರಾಜಕೀಯ ಪಟ್ಟುಗಳ ಪರಿಚಯ ಮಾಡಿಸಬೇಕು ಎಂಬ ಕೆಲ ಪ್ರಭಾವಿ ಮುಖಂಡರ ಲೆಕ್ಕಾಚಾರವನ್ನು ಚುನಾವಣಾ ಫಲಿತಾಂಶ ತಲೆಕೆಳಗಾಗುವಂತೆ ಮಾಡಿದೆ.

ಬಿಜೆಪಿ ಸಂಸದ ಕರಡಿ ಸಂಗಣ್ಣ, ಪಕ್ಷದ ಹೈಕಮಾಂಡ್‌ಗೇ ಸಡ್ಡು ಹೊಡೆದು ಮಗ ಅಮರೇಶ್‌ ಅವರಿಗೆ ಕೊಪ್ಪಳ ಕ್ಷೇತ್ರದಿಂದ ಟಿಕೆಟ್ ಕೊಡಿಸಿದ್ದರು. ಅಲ್ಲದೆ, ‘ಮಗ ಗೆದ್ದೇ ಗೆಲ್ಲುತ್ತಾನೆ’ ಎಂದು ಶಪಥವನ್ನೂ ಮಾಡಿದ್ದರು. ಆದರೆ, ಅಮರೇಶ್ ಕಾಂಗ್ರೆಸ್‌ನ ಕೆ.ರಾಘವೇಂದ್ರ ಹಿಟ್ನಾಳ್ ಅವರ ವಿರುದ್ಧ 26,351 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಮೀಸಲು ಕ್ಷೇತ್ರವಾದ ನಾಗಠಾಣದಿಂದ ಕಣಕ್ಕಿಳಿದಿದ್ದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಸಹ, ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಅವರ ಎದುರು 5,601 ಮತಗಳ ಅಂತರದಿಂದ ಸೋತಿದ್ದಾರೆ. ಈಗ ಅವರು, ‘ಸ್ವಪಕ್ಷದಲ್ಲಿ ಉಂಟಾದ ಭಿನ್ನಮತವೇ ಸೋಲಿಗೆ ಕಾರಣ’ ಎನ್ನುತ್ತಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ ಬಿ.ಎನ್‌. ಬಚ್ಚೇಗೌಡ ಅವರ ಪುತ್ರ ಶರತ್‌ ಕುಮಾರ್, ಕಾಂಗ್ರೆಸ್‌ನ ಎನ್‌. ನಾಗರಾಜು (ಎಂಟಿಬಿ) ಅವರ ವಿರುದ್ಧ 7,597 ಮತಗಳಿಂದ ಮಣಿದಿದ್ದಾರೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಚಿವ ಟಿ.ಬಿ.ಜಯಚಂದ್ರ ಅವರ ಪುತ್ರ ಸಂತೋಷ್‌, 45,893 ಮತಗಳನ್ನು ಪಡೆದುಕೊಂಡರೂ ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

ಬಿಜೆಪಿ ಹಿರಿಯ ಮುಖಂಡ ರಾಮಚಂದ್ರಗೌಡ ಅವರ ಪುತ್ರ ಎ.ಆರ್.ಸಪ್ತಗಿರಿಗೌಡ ಸಹ ಗಾಂಧಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ಅವರ ವಿರುದ್ಧ ಸೋಲೊಪ್ಪಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಸೋತರೂ, ಅವರ ಮಗ ಎಸ್.ಯತೀಂದ್ರ ವರುಣಾದಲ್ಲಿ ವಿಜಯಶಾಲಿಯಾಗಿ ಆ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲೇ ಉಳಿಯುವಂತೆ ಮಾಡಿದ್ದಾರೆ.

ಕೆ.ಎಚ್.ಮುನಿಯಪ್ಪ ಅವರ ಮಗಳು ಎಂ.ರೂಪಕಲಾ, ಮಾಜಿ ಶಾಸಕ ವೈ.ಸಂಪಂಗಿ ಅವರ ಪುತ್ರಿ ಅಶ್ವಿನಿ ಅವರ ವಿರುದ್ಧ 40,827 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT