ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಗರಿಗೆದರಿದ ವ್ಯಾಪಾರ: ಭಾರತ–ಅಮೆರಿಕ ನಡುವಣ ವಹಿವಾಟು ಹೊಸ ಎತ್ತರಕ್ಕೆ

Last Updated 24 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಭಾರತದೊಂದಿಗಿನ ವಾಣಿಜ್ಯ ವಹಿವಾಟಿನಲ್ಲಿ ಚೀನಾವನ್ನು ಈಗಾಗಲೇ ಹಿಂದಿಕ್ಕಿ ಅಗ್ರಸ್ಥಾನದಲ್ಲಿರುವ ಅಮೆರಿಕ, ಉಪಖಂಡದೊಂದಿಗಿನ ವ್ಯಾಪಾರ ಸಂಬಂಧವನ್ನು ಹೊಸ ಎತ್ತರಕ್ಕೆ ಒಯ್ಯಲು ಹವಣಿಸುತ್ತಿದೆ. ತನ್ನ ಕೃಷಿ ಉತ್ಪನ್ನಗಳಿಗೆ ಭಾರತದಂತಹ ದೊಡ್ಡ ಮಾರುಕಟ್ಟೆಯನ್ನು ಹೊಂದಲೂ ಅದು ತವಕಿಸುತ್ತಿದೆ. ಅಮೆರಿಕದ ಸೇವಾ ವಲಯದಲ್ಲಿ ಸದ್ದು ಮಾಡಿರುವ ಭಾರತ ಸಹ ತನ್ನ ವ್ಯಾಪಾರದ ಮಿಗತೆಯನ್ನು ಕಾಯ್ದುಕೊಳ್ಳಲು ಹಾತೊರೆಯುತ್ತಿದೆ. ಮಂಗಳವಾರ ನಡೆಯಲಿರುವ ಟ್ರಂಪ್‌–ಮೋದಿ ಮಾತುಕತೆ ಎರಡೂ ದೇಶಗಳ ವಾಣಿಜ್ಯದ ಹೊಸ ಕನಸುಗಳಿಗೆ ಯಾವ ದಿಕ್ಕು ತೋರಲಿದೆ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಅಹಮದಾಬಾದ್‌ನಲ್ಲಿ ರೋಡ್‌ ಷೋದಲ್ಲಿ ಪಾಲ್ಗೊಂಡು, ದೊಡ್ಡ ಸಮಾವೇಶದಲ್ಲಿ ಮಾತನಾಡಿದರೂ ಉದ್ಯಮಿಗಳ ಕಣ್ಣು ಮಾತ್ರ ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಮಂಗಳವಾರ ನಡೆಯಲಿರುವ ಮಾತುಕತೆಯ ಮೇಲೆ ನೆಟ್ಟಿದೆ. ಎರಡೂ ದೇಶಗಳ ನಡುವಿನ ಭವಿಷ್ಯದ ವ್ಯಾಪಾರ ವಹಿವಾಟಿಗೆ ಈ ಮಾತುಕತೆಯು ದಿಕ್ಸೂಚಿಯಾಗಲಿದೆ ಎಂದು ಬಣ್ಣಿಸಲಾಗಿದೆ. ಹೀಗಾಗಿ ಇಬ್ಬರೂ ‘ಮಿತ್ರ’ರ ಚರ್ಚೆ ಕುತೂಹಲ ಕೆರಳಿಸಿದೆ.

ಭಾರತದ ಜತೆಗೆ ವಾಣಿಜ್ಯ ವಹಿವಾಟು ನಡೆಸುತ್ತಿರುವ ರಾಷ್ಟ್ರಗಳಲ್ಲಿ ಈಗ ಅಮೆರಿಕ ಮೊದಲ ಸ್ಥಾನದಲ್ಲಿ ವಿರಾಜಮಾನವಾಗಿದೆ. ಕಳೆದ ವರ್ಷದವರೆಗೆ ಈ ಸ್ಥಾನದಲ್ಲಿದ್ದ ಚೀನಾ ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ. 2018–19ರಲ್ಲಿ ಭಾರತ–ಅಮೆರಿಕ ಮಧ್ಯೆ ₹ 4.78 ಲಕ್ಷ ಕೋಟಿ ಮೌಲ್ಯದ ವ್ಯಾಪಾರ ವಹಿವಾಟು ಆಗಿದೆ. ಇದೇ ಅವಧಿಯಲ್ಲಿ ಭಾರತ–ಚೀನಾ ಮಧ್ಯೆ ₹ 4.57 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ.

ಭಾರತ–ಅಮೆರಿಕ ಮಧ್ಯೆ ಮುಂದಿನ ವರ್ಷಗಳಲ್ಲಿ ವ್ಯಾಪಾರ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದ್ದು, ವಹಿವಾಟಿನ ಮೌಲ್ಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿದರೆ ಎರಡೂ ದೇಶಗಳ ನಡುವಿನ ವಹಿವಾಟು ಹೊಸದೊಂದು ಮಜಲನ್ನು ತಲುಪಲಿದೆ ಎಂದೂ ಅವರು ವಿಶ್ಲೇಷಿಸುತ್ತಾರೆ.

‘ಭಾರತದ ಸರಕು ಮತ್ತು ಸೇವೆಗಳಿಗೆ ಅಮೆರಿಕ ಬಹುದೊಡ್ಡ ಮಾರುಕಟ್ಟೆಯಾಗಿರುವ ಕಾರಣ ಎಫ್‌ಟಿಎಯಿಂದ ಭಾರತಕ್ಕೆ ಹೆಚ್ಚಿನ ಅನುಕೂಲ ಆಗಲಿದೆ’ ಎನ್ನುತ್ತಾರೆ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಜಯ್‌ ಸಹಾಯ್‌. ‘ಅಮೆರಿಕದ ಜತೆಗಿನ ರಫ್ತು ಮತ್ತು ಆಮದು ವಹಿವಾಟು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗಿದ್ದು, ಇದೇ ಅವಧಿಯಲ್ಲಿ ಚೀನಾದ ಜತೆಗಿನ ವಹಿವಾಟಿನ ಪ್ರಮಾಣ ಕುಸಿಯುತ್ತಿದೆ’ ಎಂದು ಅವರು ಹೇಳುತ್ತಾರೆ.

ಅಮೆರಿಕದ ಜತೆಗಿನ ವಹಿವಾಟಿನಲ್ಲಿ ಭಾರತದ ಆಮದು ಪ್ರಮಾಣಕ್ಕಿಂತ ರಫ್ತಿನ ಪ್ರಮಾಣವೇ (ವ್ಯಾಪಾರ ಮಿಗತೆ) ಹೆಚ್ಚಾಗಿದೆ. ಆದರೆ, ಚೀನಾದಿಂದ ಭಾರತ ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಂಡರೆ, ರಫ್ತು ಮಾಡುವ ಪ್ರಮಾಣ ತುಂಬಾ ಕಡಿಮೆ (ವ್ಯಾಪಾರ ಕೊರತೆ) ಇದೆ. 2013–14 ರಿಂದ 2017–18ರವರೆಗೆ ಚೀನಾ, ನಮ್ಮ ದೇಶದೊಂದಿಗೆ ಅತ್ಯಧಿಕ ವಹಿವಾಟು ನಡೆಸಿದ ರಾಷ್ಟ್ರವಾಗಿತ್ತು. ಚೀನಾಕ್ಕಿಂತ ಮೊದಲು ಯುಎಇ ಆ ಸ್ಥಾನದಲ್ಲಿತ್ತು.

ಭಾರತ–ಅಮೆರಿಕ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟರೆ ಭಾರತೀಯ ವೃತ್ತಿಪರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ, ಎರಡೂ ದೇಶಗಳ ನಡುವಿನ ವಾಣಿಜ್ಯ ವಿವಾದಗಳೂ ಬಗೆಹರಿಯಲಿವೆ ಎಂದು ಅಮೆರಿಕದ ವಾಣಿಜ್ಯ ಸಂಘಟನೆ ಹೇಳಿದೆ.

‘ಅಮೆರಿಕ ಜತೆ ಕೃಷಿ ಹಾಗೂ ಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಾಗ ಭಾರತ ಸ್ವಲ್ಪ ಎಚ್ಚರಿಕೆಯಿಂದ ಚೌಕಾಸಿ ಮಾಡುವುದು ಒಳ್ಳೆಯದು. ಏಕೆಂದರೆ, ಜಗತ್ತಿನಲ್ಲಿಯೇ ಮೆಕ್ಕೆಜೋಳ ಮತ್ತು ಸೋಯಾಬಿನ್‌ನನ್ನು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ ರಾಷ್ಟ್ರ ಅಮೆರಿಕ’ ಎಂದು ಸಲಹೆ ನೀಡುತ್ತಾರೆ ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆಯ ಪ್ರಾಧ್ಯಾಪಕ ಮೋಹನ್‌ ಜೋಶಿ.

ಭಾರತಕ್ಕೆ ಏನು ಬೇಕು?

-ಅಮೆರಿಕಕ್ಕೆ ಹೊರಡುವ ಭಾರತೀಯ ವೃತ್ತಿಪರರಿಗೆ ವೀಸಾ ನೀಡಿಕೆ ಪ್ರಮಾಣ ಏರಿಕೆ

-ಸ್ಟೀಲ್‌ ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲಿನ ಅಧಿಕ ಸುಂಕದಿಂದ ಮುಕ್ತಿ

- ಭಾರತೀಯ ಕೃಷಿ, ಆಟೊಮೊಬೈಲ್‌, ಎಂಜಿನಿಯರಿಂಗ್‌ ಉತ್ಪನ್ನಗಳಿಗೆ ಅಮೆರಿಕದಲ್ಲಿ ವಿಸ್ತರಿತ ಮಾರುಕಟ್ಟೆ

ಅಮೆರಿಕದಿಂದ ಭಾರತಕ್ಕೆ ಆಮದು

- ಬೆಲೆಬಾಳುವ ಕಲ್ಲು, ಲೋಹ

- ಖನಿಜ ತೈಲ

- ವಿಮಾನ ಮತ್ತು ಬಿಡಿಭಾಗ

-ಯಂತ್ರೋಪಕರಣ

- ಸಾವಯವ ರಾಸಾಯನಿಕ

- ತಾಜಾ ಹಣ್ಣು, ಹೈನು ಉತ್ಪನ್ನ

- ಸಿದ್ಧ ಆಹಾರ

- ಸಾರಿಗೆ ಸೇವೆ, ಕಂಪ್ಯೂಟರ್ ಸಂಬಂಧಿತ ಸೇವೆ

ಭಾರತದಿಂದ ಅಮೆರಿಕಕ್ಕೆ ರಫ್ತು

-ಬೆಲೆಬಾಳುವ ವಜ್ರದ ಹರಳು, ಲೋಹ,

- ಔಷಧಿ ಉತ್ಪನ್ನ

-ಸಂಬಾರ ಪದಾರ್ಥ

- ಅಕ್ಕಿ, ಮಾಂಸ

- ತೈಲ, ಸಸ್ಯಜನ್ಯ ಎಣ್ಣೆ

- ಟೆಲಿಕಮ್ಯುನಿಕೇಷನ್, ಕಂಪ್ಯೂಟರ್ ಮತ್ತು ಮಾಹಿತಿ ಸೇವೆ

- ಸಂಶೋಧನೆ ಮತ್ತು ಅಭಿವೃದ್ಧಿ, ಸಾರಿಗೆ ಕ್ಷೇತ್ರದ ಸೇವೆ

ಅಮೆರಿಕದ ಬೇಡಿಕೆಗಳು

- ಕೃಷಿ, ಆಹಾರ ಮತ್ತು ಡೇರಿ ಉತ್ಪನ್ನಗಳು, ವೈದ್ಯಕೀಯ ಸಲಕರಣೆಗಳಿಗೆ ಭಾರತದಲ್ಲಿ ವಿಸ್ತರಿತ ಮಾರುಕಟ್ಟೆ

- ಸಂವಹನ ತಂತ್ರಜ್ಞಾನದ ಸಲಕರಣೆಗಳ ಮೇಲಿನ ಸುಂಕದಲ್ಲಿ ವಿನಾಯಿತಿ

-ವ್ಯಾಪಾರ ಕೊರತೆಯ (ರಫ್ತು ಪ್ರಮಾಣಕ್ಕಿಂತ ಆಮದು ಹೆಚ್ಚು) ವ್ಯತ್ಯಾಸ ನೀಗಿಸಿಕೊಳ್ಳುವ ಹೊಸ ಅವಕಾಶ

ಭಾರತ ಅಮೆರಿಕ ವಾಣಿಜ್ಯ ವಹಿವಾಟು: ಕುಸಿಯುತ್ತಿದೆ ವ್ಯಾಪಾರ ಮಿಗತೆ

- ಭಾರತ–ಅಮೆರಿಕದ ನಡುವಣ ವ್ಯಾಪಾರ ವಹಿವಾಟು ಕಳೆದ ಆರು ಆರ್ಥಿಕ ವರ್ಷಗಳಲ್ಲಿ ಭಾರಿ ಏರಿಕೆ ಕಂಡಿದೆ

- ಭಾರತದಿಂದ ಅಮೆರಿಕಕ್ಕೆ ರಫ್ತಿನ ಪ್ರಮಾಣವು ಏರಿಕೆಯಾಗಿದೆ

- ಅಮೆರಿಕದಿಂದ ಭಾರತಕ್ಕೆ ಆಮದು ಪ್ರಮಾಣವೂ ಏರಿಕೆಯಾಗಿದೆ

-ಆಮದು ಏರಿಕೆಯ ಪ್ರಮಾಣ ಅಧಿಕವಾಗಿದೆ. ಆದರೆ, ರಫ್ತು ಏರಿಕೆಯ ಪ್ರಮಾಣ ಕಡಿಮೆ ಇದೆ

-ಅಮೆರಿಕ ಮತ್ತು ಭಾರತದ ನಡುವಣ ವ್ಯಾಪಾರ ಮಿಗತೆಯಲ್ಲಿ (ಆಮದಿಗಿಂತ ರಫ್ತು ಪ್ರಮಾಣ ಹೆಚ್ಚಾಗಿರುವ ಸ್ಥಿತಿ) ಭಾರಿ ಪ್ರಮಾಣದ ಇಳಿಕೆ ಆಗಿದೆ. ಇದು ಭಾರತ–ಅಮೆರಿಕದ ನಡುವಣ ವಾಣಿಜ್ಯ ವಹಿವಾಟಿನ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಯನ್ನು ಸೂಚಿಸುತ್ತದೆ

- ಆರಂಭದ ವರ್ಷಗಳಲ್ಲಿ ವ್ಯಾಪಾರ ಮಿಗತೆ ಪ್ರಮಾಣ ಅಧಿಕವಾಗಿದೆ. ಆದರೆ, ನಂತರದ ವರ್ಷಗಳಲ್ಲಿ ಮಿಗತೆ ಪ್ರಮಾಣ ಕಡಿಮಯಾಗುತ್ತಾ ಬಂದಿದೆ. ಮಿಗತೆ ಪ್ರಮಾಣ ಅಧಿಕವಾದಷ್ಟೂ ಅದರಿಂದ ಭಾರತಕ್ಕೆ ಲಾಭ ಹೆಚ್ಚು. ಇದು ಕಡಿಮೆಯಾದರೆ ನಷ್ಟ

ಮುಟ್ಟಲಾಗಲಿಲ್ಲ ಗುರಿ

ಭಾರತದಿಂದ ಅತಿಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಅಮೆರಿಕವು ಹಲವು ವರ್ಷಗಳಿಂದ ಮೊದಲ ಸ್ಥಾನ ಕಾಯ್ದುಕೊಂಡಿದೆ. ಭಾರತದಿಂದ ಆಗುವ ರಫ್ತಿನಲ್ಲಿ ಸಂಸ್ಕರಿಸಿದ ಮಾಂಸ, ಸಿದ್ಧ ಉಡುಪುಗಳು, ಔಷಧ, ಚರ್ಮದ ವಸ್ತುಗಳು ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳ ಪಾಲು ದೊಡ್ಡದು. ಮಾಹಿತಿ ತಂತ್ರಜ್ಞಾನ ಸೇವೆಯ ರಫ್ತಿನ ಮೂಲಕ 2020ರ ವೇಳೆಗೆ ಅಮೆರಿಕದೊಂದಿಗಿನ ವ್ಯಾಪಾರದ ಮೊತ್ತವನ್ನು ₹ 6.8 ಲಕ್ಷ ಕೋಟಿಗೆ ಏರಿಕೆ ಮಾಡುವ ಗುರಿಯನ್ನು ಭಾರತವು ಹಾಕಿಕೊಂಡಿತ್ತು. ಈ ಗುರಿಯನ್ನು ಮುಟ್ಟಲು ಬೇಕಿರುವ ಕ್ರಮಗಳ ಬಗ್ಗೆ ‘2017ರ ವಿದೇಶಿ ವ್ಯಾಪಾರ ನೀತಿ ವರದಿ’ಯಲ್ಲಿ ವಿವರಿಸಲಾಗಿತ್ತು. ಅಮೆರಿಕದ ಆರ್ಥಿಕತೆಯು ವಾರ್ಷಿಕ ಶೇ 3.1ರಷ್ಟು ವೃದ್ಧಿಸುತ್ತಿದೆ. ಇದೇ ವೃದ್ಧಿದರ ಮುಂದುವರಿಯುವ ಸೂಚನೆಗಳಿವೆ. ಹೀಗಾಗಿ ಅಮೆರಿಕವನ್ನು ದೊಡ್ಡ ಮಾರುಕಟ್ಟೆ ಆಗಿಸಿಕೊಳ್ಳುವ ಎಲ್ಲಾ ಅವಕಾಶಗಳು ಭಾರತಕ್ಕೆ ಇವೆ. ಭಾರತದ ತಂತ್ರಜ್ಞಾನ ಆಧರಿತ ಉತ್ಪನ್ನಗಳಿಗೆ ಅಮೆರಿಕ ದೊಡ್ಡ ಗ್ರಾಹಕನಾಗಬಲ್ಲದು. ಇದನ್ನು ಬಳಸಿಕೊಂಡರೆ, ಈ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಜವಳಿ ಉತ್ಪನ್ನ, ಕೃಷಿ ಉತ್ಪನ್ನ, ಚರ್ಮದ ಉತ್ಪನ್ನಗಳು ಮತ್ತು ಆಭರಣಗಳ ತಯಾರಿಕಾ ಕ್ಷೇತ್ರದಲ್ಲೂ ಉದ್ಯೋಗವಕಾಶ ಹೆಚ್ಚಲಿದೆ. ಹೀಗಾಗಿ ಈ ಕ್ಷೇತ್ರಗಳತ್ತ ಗಮನಹರಿಸಬೇಕು. ಆದರೆ, ಈ ಗುರಿಯನ್ನು ಮುಟ್ಟಲು ಭಾರತಕ್ಕೆ ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT