ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಂದ ಗ್ರೆನೇಡ್‌ ದಾಳಿ: ಪೊಲೀಸ್‌ ಸೇರಿ 14 ಮಂದಿಗೆ ಗಾಯ

Last Updated 5 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಉಗ್ರರು ನಡೆಸಿದ ಗ್ರೆನೇಡ್‌ ದಾಳಿಗೆ ಸಂಚಾರ ಪೊಲೀಸರೊಬ್ಬರು ಸೇರಿದಂತೆ 14 ಮಂದಿ ಗಾಯಗೊಂಡಿದ್ದಾರೆ.

‘ಭಾರಿ ಭದ್ರತೆಯ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಉಗ್ರರು ಗ್ರೆನೇಡ್‌ ಎಸೆದಿದ್ದಾರೆ. ಅದು ಗುರಿ ತಪ್ಪಿ ರಸ್ತೆ ಬದಿ ಸ್ಫೋಟಗೊಂಡಿದೆ.’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಪತ್ರಕರ್ತರೊಬ್ಬರು ಕೂಡ ಗಾಯಗೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಉಗ್ರರ ಪತ್ತೆಗಾಗಿ ಭದ್ರತಾ ಪಡೆಗಳು, ಸ್ಫೋಟ ನಡೆದ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿವೆ. ಯಾವುದೇ ಭಯೋತ್ಪಾದಕ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ನಡೆದ ಎರಡನೇ ಗ್ರೆನೇಡ್‌ ದಾಳಿ ಇದಾಗಿದೆ.

ಸೆಪ್ಟೆಂಬರ್‌ 28ರಂದು ಶ್ರೀನಗರದ ನವಾ ಕಡಲ್‌ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಸಿಆರ್‌ಪಿಎಫ್‌ನ 38ನೇ ಬೆಟಾಲಿಯನ್‌ ಯೋಧರ ಮೇಲೆ ಉಗ್ರರು ಗ್ರೆನೇಡ್‌ ಎಸೆದಿದ್ದರು.

ಮುಂದುವರಿದ ಅನಿಶ್ಚಿತತೆ:

ವಿಶೇಷ ಸ್ಥಾನಮಾನ ರದ್ದುಪಡಿಸಿ ಎರಡು ತಿಂಗಳುಗಳು ಕಳೆದರೂ ಕಾಶ್ಮೀರದಲ್ಲಿ ಇನ್ನೂ ಅನಿಶ್ಚಿತತೆ ಮುಂದುವರಿದಿದೆ.

ಮುಂಜಾಗ್ರತಾ ಕ್ರಮವಾಗಿ ಆಗಸ್ಟ್‌ 5ರಂದು ಕಾಶ್ಮೀರದಾದ್ಯಂತ ನಿರ್ಬಂಧ ಹೇರಲಾಗಿತ್ತು. ಅನಂತರ ಪರಿಸ್ಥಿತಿ ಸುಧಾರಿಸಿದಂತೆ ಅದನ್ನು ತೆರವುಗೊಳಿಸಲಾಗಿತ್ತು. ಆದರೂ ಪ್ರತಿ ಶುಕ್ರವಾರ ಕೆಲವು ಪ್ರದೇಶಗಳಲ್ಲಿ ಅಧಿಕಾರಿಗಳು ನಿರ್ಬಂಧ ಹೇರುತ್ತಿದ್ದಾರೆ.

ಶ್ರೀನಗರದ ಇತಿಹಾಸ ಪ್ರಸಿದ್ಧ ಜಾಮಿಯಾ ಮಸೀದಿಯಲ್ಲಿ ಕಳೆದ ಒಂಬತ್ತು ವಾರಗಳಿಂದ ಶುಕ್ರವಾರದ ಪ್ರಾರ್ಥನೆಗೆ ಅಧಿಕಾರಿಗಳು ಅವಕಾಶ ನೀಡಿಲ್ಲ.

ಶ್ರೀನಗರ ಸೇರಿದಂತೆ ಕಣಿವೆ ರಾಜ್ಯದ ವಿವಿಧೆಡೆ ಈಗಲೂ ಭಾರಿ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಸ್ಥಿರ ದೂರವಾಣಿ ಸಂಪರ್ಕವನ್ನು ಕಳೆದ ತಿಂಗಳು ಮರು ಸ್ಥಾಪಿಸಿದ್ದರೂ, ಮೊಬೈಲ್‌ ಮತ್ತು ಅಂತರ್ಜಾಲ ಸೇವೆ ಇನ್ನೂ ಮರುಸ್ಥಾಪನೆಯಾಗಿಲ್ಲ.

ಪೊಲೀಸರ ಕೈಸೇರಲಿವೆ ಯುಎವಿ

ಉಗ್ರರು ಮತ್ತು ಕಲ್ಲು ತೂರಾಟ ನಡೆಸುವವರ ಮೇಲೆ ನಿಗಾ ವಹಿಸಲು, 50 ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ಅಥವಾ ಡ್ರೋನ್‌ಗಳು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕೈಸೇರಲಿವೆ.

ಯುಎವಿ ಖರೀದಿಗೆ ಕೇಂದ್ರ ಗೃಹ ಸಚಿವಾಲಯದಿಂದ ಮಂಜೂರಾತಿ ಲಭಿಸಿದ ಬಳಿಕ ಟೆಂಡರ್‌ ಕೂಡ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ವರ್ಷಾಂತ್ಯಕ್ಕೆ ಮೊದಲು ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ‘ ಎಂದಿವೆ.

‘ಈಗಾಗಲೇಯುಎವಿಗಳನ್ನು ಬಳಸಲಾಗುತ್ತಿದೆ. ಹೊಸದಾಗಿ ಖರೀದಿಸುವ ಯುಎವಿಗಳನ್ನು ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸರ ಬಳಕೆಗೆ ನೀಡಲಾಗುವುದು’ ಎಂದೂ ಹೇಳಿವೆ.‌

‘ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಯುಎವಿಗಳು ಸಹಾಯವಾಗಲಿವೆ. ಇವುಗಳ ಬಳಕೆ ಕುರಿತು ಪೊಲೀಸ್‌ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು‘ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT