ಬುಧವಾರ, ನವೆಂಬರ್ 13, 2019
23 °C
ಜಿಯೊ–ಏರ್‌ಟೆಲ್‌ ನಡುವಣ ತಿಕ್ಕಾಟಕ್ಕೆ ಅಂತ್ಯ ಹಾಡಿದ ಟ್ರಾಯ್‌

30 ಸೆಕೆಂಡ್‌ ರಿಂಗಣಿಸಲೇಬೇಕು ಮೊಬೈಲ್‌

Published:
Updated:

ನವದೆಹಲಿ: ಮೊಬೈಲ್‌ ಮತ್ತು ಸ್ಥಿರ ದೂರವಾಣಿ ಕರೆಯು ರಿಂಗಣಿಸುವ ಅವಧಿಯನ್ನು ನಿಗದಿ ಮಾಡಿ ಭಾರತೀಯ ದೂರಸಂಪರ್ಕ ನಿಯಂತ್ರಣ ಸಂಸ್ಥೆಯು (ಟ್ರಾಯ್‌) ನಿಯಮವನ್ನು ರೂಪಿಸಿದೆ. ಬಳಕೆದಾರರು ಕರೆಯನ್ನು ತಿರಸ್ಕರಿಸದಿದ್ದರೆ ಅಥವಾ ಕರೆಗೆ ಉತ್ತರಿಸದಿದ್ದರೆ ಮೊಬೈಲ್‌ ಕರೆಯು ಕನಿಷ್ಠ 30 ಸೆಕೆಂಡ್‌ ಮತ್ತು ಸ್ಥಿರ ದೂರವಾಣಿಯು 60 ಸೆಕೆಂಡ್‌ ರಿಂಗ್‌ ಆಗಬೇಕು ಎಂದು ಟ್ರಾಯ್‌ ಹೇಳಿದೆ.

ದೂರಸಂಪರ್ಕ ಸೇವಾ ಸಂಸ್ಥೆಗಳಾದ ಭಾರ್ತಿ ಏರ್‌ಟೆಲ್‌ ಮತ್ತು ರಿಲಯನ್ಸ್‌ ಜಿಯೊ ನಡುವೆ ಈ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಟ್ರಾಯ್‌ನ ಹೊಸ ನಿಯಮದಿಂದಾಗಿ ಈ ವಿವಾದ ಪರಿಹಾರವಾಗಿದೆ. 

ಈ ನಿಯಮ ಜಾರಿಗೆ ತರುವುದಕ್ಕಾಗಿ ದೂರವಾಣಿ ಸೇವೆ ಮತ್ತು ಮೊಬೈಲ್‌ ದೂರವಾಣಿ ಸೇವೆ ಮೂಲ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಈ ವರೆಗೆ, ದೂರವಾಣಿ ಕರೆಯು ಎಷ್ಟು ಹೊತ್ತು ರಿಂಗಣಿಸಬೇಕು ಎಂಬ ನಿಯಮ ಭಾರತದಲ್ಲಿ ಇರಲಿಲ್ಲ. 

ರಿಂಗ್‌ ಸಮಯಕ್ಕೆ ಸಂಬಂಧಿಸಿ ಟ್ರಾಯ್‌ ಚರ್ಚೆ ನಡೆಸಿತ್ತು. ದೂರಸಂಪರ್ಕ ಕ್ಷೇತ್ರದ ವಿವಿಧ ಸಂಸ್ಥೆಗಳ ಪ್ರತಿಕ್ರಿಯೆಯನ್ನೂ ಕೇಳಿತ್ತು. ರಿಂಗ್‌ ಸಮಯ 45 ಸೆಕೆಂಡ್‌ ಇರಬೇಕು ಎಂದುಏರ್‌ಟೆಲ್‌ ಪ್ರತಿಪಾದಿಸಿತ್ತು. 20–25 ಸೆಕೆಂಡ್‌ ಸಾಕು ಎಂದು ಜಿಯೊ ಮತ್ತು 30 ಸೆಕೆಂಡ್‌ ಇರಬೇಕು ಎಂದು ವೊಡಾಫೋನ್‌ ವಾದಿಸಿದ್ದವು. 

ಏರ್‌ಟೆಲ್‌ ಫೋನ್‌ಗಳಲ್ಲಿ ರಿಂಗ್ ಸಮಯ 45 ಸೆಕೆಂಡ್‌ ಇತ್ತು. ಆದರೆ, ರಿಂಗ್‌ ಸಮಯವನ್ನು ಜಿಯೊ 25 ಸೆಕೆಂಡ್‌ಗೆ ಇಳಿಸಿದೆ ಎಂದು ಆರೋಪಿಸಿ, ತನ್ನ ಫೋನ್‌ಗಳ ರಿಂಗ್‌ ಸಮಯವನ್ನೂ 25 ಸೆಕೆಂಡ್‌ಗೆ ಇಳಿಸಿತ್ತು.  ಟ್ರಾಯ್‌ ನಿಯಮದಿಂದಾಗಿ ದೂರ
ಸಂಪರ್ಕ ಸೇವಾ ಸಂಸ್ಥೆಗಳು ಇಷ್ಟ ಬಂದ ರೀತಿಯಲ್ಲಿ ರಿಂಗ್‌ ಸಮಯ ಕಡಿತ ಮಾಡಲು ಅವಕಾಶ ಇಲ್ಲದಂತಾಗಿದೆ. 

 

ರಿಂಗ್‌ ಸಮಯ ಕಡಿತದ ಕಾರಣ

ಒಂದು ದೂರಸಂಪರ್ಕ ಸಂಸ್ಥೆಯ ಮೊಬೈಲ್‌ನಿಂದ ಮತ್ತೊಂದು ಸಂಸ್ಥೆಯ ಮೊಬೈಲ್‌ಗೆ ಕರೆ ಮಾಡುವಾಗ ರಿಂಗ್ ಅವಧಿಯು ಕಡಿಮೆ ಇದ್ದರೆ, ವ್ಯಕ್ತಿಯು ಕರೆ ಸ್ವೀಕರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಪರಿಣಾಮವಾಗಿ ಅವರು ಮರಳಿ ಕರೆ ಮಾಡಬೇಕಾಗುತ್ತದೆ. ಇದರಿಂದಾಗಿ, ಮೊದಲನೇ ಕಂಪನಿಯ ಮೊಬೈಲ್‌ಗೆ ಒಳಬರುವ ಕರೆಗಳ ಸಂಖ್ಯೆ ಹೆಚ್ಚಾಗುತ್ತದೆ.

ಪ್ರತಿಸ್ಪರ್ಧಿ ಸಂಸ್ಥೆಯ ಮೊಬೈಲ್‌ ಜಾಲದಿಂದ ಬರುವ ಕರೆಗಳಿಗೆ ಬಳಕೆದಾರ ಶುಲ್ಕ (ಇಂಟರ್‌ಕನೆಕ್ಟ್‌ ಯೂಸೇಜ್‌ ಚಾರ್ಜ್‌) ವಿಧಿಸಲಾಗುತ್ತದೆ. ಹೆಚ್ಚು ಹೆಚ್ಚು ಒಳಬರುವ ಕರೆಗಳು ಬಂದಷ್ಟು ಸಂಸ್ಥೆಯ ವರಮಾನ ಹೆಚ್ಚಾಗುತ್ತದೆ. ಈಗ, ಒಳಬರುವ ಕರೆಗಳ ಬಳಕೆದಾರ ಶುಲ್ಕವು ಪ್ರತಿ ನಿಮಿಷಕ್ಕೆ ಆರು ಪೈಸೆ ಇದೆ. ಈ ಶುಲ್ಕವನ್ನು ರದ್ದು ಮಾಡಬೇಕು ಎಂದು ಜಿಯೊ ಆಗ್ರಹಿಸುತ್ತಿದೆ.

 

ಪ್ರತಿಕ್ರಿಯಿಸಿ (+)