ಗುರುವಾರ , ನವೆಂಬರ್ 21, 2019
22 °C

ಫೆ.1ರೊಳಗೆ ಶೇ 90 ಕೇಬಲ್‌ ಗ್ರಾಹಕರು ಹೊಸ ವ್ಯವಸ್ಥೆಗೆ

Published:
Updated:
Prajavani

ನವದೆಹಲಿ: ಫೆಬ್ರುವರಿ 1ರ ಹೊತ್ತಿಗೆ ಶೇ 90ರಷ್ಟು ಟಿವಿ ವಾಹಿನಿಗಳ ಗ್ರಾಹಕರು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನಿಗದಿಪಡಿಸಿದ ಹೊಸ ದರ ವ್ಯವಸ್ಥೆಯೊಳಗೆ ಬರಲಿದ್ದಾರೆ ಎಂದು ಟ್ರಾಯ್‌ ಅಧ್ಯಕ್ಷ ಆರ್‌.ಎಸ್‌.ಶರ್ಮಾ ಹೇಳಿದ್ದಾರೆ.

‘ಜನವರಿ 31ಕ್ಕೆ ಹಳೆಯ ವ್ಯವಸ್ಥೆ ಕೊನೆಗೊಳ್ಳಲಿದೆ. ಗ್ರಾಹಕರಿಗೆ ಬೇಕಿರುವ ಚಾನೆಲ್‌ಗಳ ಆಯ್ಕೆ ಕುರಿತು ಕೆಲ ದಿನಗಳಿಂದ ಉತ್ಸಾಹ ಕಾಣಿಸುತ್ತಿದೆ. ಈ ವೇಗದಲ್ಲಿಯೇ ಪ್ರಕ್ರಿಯೆ ಮುಂದುವರಿದರೆ ಶೇ 100ರಷ್ಟು ಗ್ರಾಹಕರು ಹೊಸ ವ್ಯವಸ್ಥೆಗೆ ಶೀಘ್ರ ಸೇರ್ಪಡೆಯಾಗಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಚಾನೆಲ್‌ಗಳ ಆಯ್ಕೆ ಸಂದರ್ಭದಲ್ಲಿ ಗ್ರಾಹಕರಿಗೆ ಯಾವುದೇ ಶೋಷಣೆ ಆಗದಂತೆ ನೋಡಿಕೊಳ್ಳಲು ಕೇಬಲ್‌ ನೆಟ್‌ವರ್ಕ್‌ ಮಾಲೀಕರ (ಡಿಪಿಒ) ಮೇಲೆ ಟ್ರಾಯ್‌ ನಿಗಾ ಇಟ್ಟಿದೆ.

ಈ ಹೊಸ ವ್ಯವಸ್ಥೆ ಫೆ. 1ರಿಂದ ಜಾರಿಗೆ ಬರಲಿದೆ. ಯಾವುದೇ ಕಾರಣಕ್ಕೂ ಗಡುವು ವಿಸ್ತರಿಸುವುದಿಲ್ಲ. ಕೆಲವು ವಿತರಕರು ಹಾಗೂ ಸಂಘಟನೆಗಳು ಅವಧಿಯನ್ನು ವಿಸ್ತರಿಸಬಾರದು ಎಂದು ಪತ್ರ ಸಹ ಬರೆದಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.

‘ಈ ವ್ಯವಸ್ಥೆ ಸುಗಮವಾಗಿ ಮುಂದುವರಿಯಲಿ ಎಂಬ ಉದ್ದೇಶದಿಂದ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಗ್ರಾಹಕ ಸ್ನೇಹಿಯಾಗಿ ಅವರ ಆಯ್ಕೆಗಳನ್ನು ದಾಖಲಿಸುತ್ತಿರುವ ಬಗ್ಗೆ ವಿವಿಧ ಡಿಟಿಎಚ್ ಆಪರೇಟರ್‌ಗಳ ಆ್ಯಪ್‌ಗಳ ಮೇಲೂ ನಿಗಾ ವಹಿಸಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

‘ಆಯ್ಕೆ ಮಾಡಿಕೊಳ್ಳುವ ಚಾನೆಲ್‌ಗಳಿಗೆ ಮಾತ್ರ ಗ್ರಾಹಕರು ಶುಲ್ಕ ಪಾವತಿಸಬೇಕು. ತಮಗಿಷ್ಟವಾದ ಚಾನೆಲ್‌ಗಳನ್ನು ಬೇಕಾದಾಗ ಆಯ್ಕೆ ಮಾಡಿಕೊಳ್ಳಬಹುದು. ಆಗ ಅದಕ್ಕೆ ಶುಲ್ಕ ನೀಡಿದರೆ ಸಾಕು’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)