ಈಕೆ ನಾದಿರಾ, ಕಾಲೇಜು ವಿದ್ಯಾರ್ಥಿ ಸಂಘಟನೆ ಚುನಾವಣೆಗೆ ಸ್ಪರ್ಧಿಸಿದ ತೃತೀಯ ಲಿಂಗಿ

7

ಈಕೆ ನಾದಿರಾ, ಕಾಲೇಜು ವಿದ್ಯಾರ್ಥಿ ಸಂಘಟನೆ ಚುನಾವಣೆಗೆ ಸ್ಪರ್ಧಿಸಿದ ತೃತೀಯ ಲಿಂಗಿ

Published:
Updated:

ತಿರುವನಂತಪುರಂ: ಅಕ್ಟೋಬರ್ 9ರಂದು ಕೇರಳ ವಿಶ್ವವಿದ್ಯಾನಿಲಯದ ಎಜೆ ಕಾಲೇಜಿನಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆ ನಾದಿರಾ ಮತ್ತು ಕಾಲೇಜಿನ ಪಾಲಿಗೆ ಹೆಮ್ಮೆಯ ಘಳಿಗೆಯಾಗಿತ್ತು.

ನಾದಿರಾ ತೃತೀಯ ಲಿಂಗಿ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ (ಎಲ್‍ಜಿಬಿಟಿ) ನಾದಿರಾ ಮೆಹರಿನ್ ಕೇರಳ ವಿಶ್ವವಿದ್ಯಾನಿಲಯದಲ್ಲಿನ ಕಾಲೇಜು ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ದಿ ನ್ಯೂಸ್ ಮಿನಿಟ್ ಪತ್ರಿಕೆಯ ಪ್ರತಿನಿಧಿ ಜತೆ ಮಾತನಾಡಿದ ನಾದಿರಾ, ವಿದ್ಯಾರ್ಥಿ ಸಂಘಟನೆ ಚುನಾವಣೆಯೂ ನನ್ನ ಸಮುದಾಯದ ಜನರಿಗೆ ಪ್ರೇರಣೆಯಾಗಲಿ ಎಂದಿದ್ದಾರೆ.

ತಿರುವನಂತಪುರಂ ತೊನ್ನಕ್ಕಲ್ ಎಜೆ ಕಾಲೇಜಿನಲ್ಲಿ ತೃತೀಯ ವರ್ಷ ಜರ್ನಲಿಸಂ ವಿದ್ಯಾರ್ಥಿಯಾಗಿರುವ ನಾದಿರಾ ಕೇರಳ ವಿವಿಯಲ್ಲಿ  ಚುನಾವಣೆಗೆ ಸ್ಪರ್ಧಿಸಿದ ಮೊದಲ ತೃತೀಯ ಲಿಂಗಿ ಆಗಿದ್ದಾರೆ. ಎಐಎಸ್‍ಎಫ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಇವರು, ಈ ಮೂಲಕ ಲೈಂಗಿಕ ಅಲ್ಪಸಂಖ್ಯಾತರೂ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬುದಕ್ಕೆ ಸ್ಫೂರ್ತಿ ನೀಡಿದೆ. ಜನರು ನಮ್ಮನ್ನು ಸ್ವೀಕರಿಸುತ್ತಾರೆ ಎಂಬುದು ಮನವರಿಕೆಯಾಗಿದ್ದು, ಇದು ಅಭಿವೃದ್ಧಿಯ ಸಂಕೇತ ಎಂದು ಹೇಳಿದ್ದಾರೆ.

ನಾನೊಬ್ಬ ತೃತೀಯ ಲಿಂಗಿ ಎಂಬ ಕಾರಣಕ್ಕೆ ನನಗೆ ಮತ ನೀಡಬೇಕೆಂದು ನಾನು ಆಗ್ರಹಿಸಿಲ್ಲ. ನನ್ನ ಲಿಂಗತ್ವವನ್ನು ಆಧರಿಸಿ ನಾನು ಮತ ಪಡೆಯಲು ಯತ್ನಿಸಲೂ ಇಲ್ಲ. ಕಾಲೇಜು ಮತ್ತು ಅಲ್ಲಿನ ವಿದ್ಯಾರ್ಥಿಗಳ ಒಳಿತಿಗಾಗಿ ನಾನು ಏನೆಲ್ಲಾ ಮಾಡಬಲ್ಲೆ ಎಂಬುದನ್ನು ಮುಂದಿಟ್ಟುಕೊಂಡೇ ನಾನು ಮತಯಾಚಿಸಿದ್ದೆ. ಕಮ್ಯೂನಲಿಸಂ ಮತ್ತು ಸಂಘರ್ಷ ಮುಕ್ತ ಕ್ಯಾಂಪಸ್ ನಮ್ಮ ಉದ್ದೇಶ ಎಂದಿದ್ದಾರೆ.

2015ರಲ್ಲಿ  ಲಿಂಗ ಪರಿವರ್ತನೆ ಬಗ್ಗೆ ನಾದಿರಾ ತಮ್ಮ ಹೆತ್ತವರಿಗೆ ತಿಳಿಸಿದ್ದರು. ಇದನ್ನು ಕೇಳಿ ಆಘಾತಗೊಂಡ ಅವರು ಆ ಸತ್ಯವನ್ನು ಸ್ವೀಕರಿಸಲು ನಿರಾಕರಿಸಿದ್ದರು. ಸ್ವಲ್ಪ ದಿನ ನಾನು ಆ ಮನೆಯಲ್ಲಿ ಹೇಗೋ ಹೊಂದಿಕೊಂಡು ಬದುಕಿದ ನಂತರ ನನ್ನ ಮನೆ ಬಿಟ್ಟು ಬೇರೆ ಮನೆಯಲ್ಲಿ ವಾಸ ಮಾಡಲು ಆರಂಭಿಸಿದೆ.
ತಿರುವನಂತಪುರಂನಲ್ಲಿರುವ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯವೇ ನನಗೆ ಪ್ರೇರಣೆ. ನಾನು ತಿರುವನಂತಪುರಂನಲ್ಲಿರುವ ಕಾರಣ ಅದೃಷ್ಟವಂತೆ. ಇಲ್ಲಿರುವ ನಮ್ಮ ಸಮುದಾಯದವರು ಇತರ ಜನರಂತೆ ಕೆಲಸ ಮಾಡಿ ಉತ್ತಮ ಬದುಕು ಸಾಗಿಸುತ್ತಿದ್ದಾರೆ. ಇವರಿಂದ ನನಗೆ ಉತ್ತಮ ಬೆಂಬಲ ಸಿಕ್ಕಿದೆ. ನಾನು ಮಾಧ್ಯಮ ಕ್ಷೇತ್ರದಲ್ಲೇ ಕೆಲಸ ಮಾಡಲು ಇಚ್ಛಿಸಿದ್ದು, ಅವಕಾಶ ಸಿಕ್ಕಿದರೆ ಮಾಡೆಲಿಂಗ್ ಮಾಡುವ ಆಸೆಯಿದೆ. ಪದವಿ ಮುಗಿದ ನಂತರ ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಬಯಕೆ ಇದೆ ಎಂದಿದ್ದಾರೆ.

ನಾದಿರಾ ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ಎಐಎಸ್‍ಎಫ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅರುಣ್ ಬಾಬು, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರನ್ನು ಮುಖ್ಯವಾಹಿನಿಗೆ ಕರೆತಂದು ಅವರಿಗೆ ಅಧಿಕಾರ ನೀಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !