ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಡವ, ಶ್ರೀಮಂತ ಎಲ್ಲರನ್ನೂ ಒಂದೇ ರೀತಿ ಗೌರವಿಸಿ’

ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಕಿವಿಮಾತು
Last Updated 20 ಆಗಸ್ಟ್ 2019, 20:26 IST
ಅಕ್ಷರ ಗಾತ್ರ

ಮುಂಬೈ: ‘ನಾಗರಿಕರು ಬಡವರಿರಲಿ, ಶ್ರೀಮಂತರಿರಲಿ ಅವರಿಬ್ಬರನ್ನೂ ಸರ್ಕಾರ ಸಮಾನ ಗೌರವದಿಂದ ಕಾಣಬೇಕು’ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಮಹಾರಾಷ್ಟ್ರ ಸರ್ಕಾರಕ್ಕೆ ಕಿವಿಮಾತು ಹೇಳಿದೆ.

ಮುಂಬೈನ ರಾಸಾಯನಿಕ ಮಾಲಿನ್ಯ ಪೀಡಿತ ಮಹುಲ್‌ ಪ್ರದೇಶದಲ್ಲಿ 15 ಸಾವಿರ ಕುಟುಂಬಗಳಿಗೆ (60 ಸಾವಿರ ಮಂದಿ) ಬಲವಂತವಾಗಿ ವಾಸಿಸಲು ಒತ್ತಾಯಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಈ ಮಾತು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದ್ರಜೋಗ್ ಮತ್ತು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರನ್ನೊಳಗೊಂಡ ಪೀಠವು, ಬೈಬಲ್‌ನ ನೋಹಾ ಮತ್ತು ನಾವೆಯ ಕಥೆಯನ್ನು ಉಲ್ಲೇಖಿಸಿ, ‘ಮಹಾಪ್ರವಾಹ ಉಂಟಾದಾಗ ನೋಹಾ ಒಂದೇ ಒಂದು ಪ್ರಾಣಿಯನ್ನೂ ಕೈಬಿಡಲಿಲ್ಲ. ಎಲ್ಲಾ ಪ್ರಾಣಿಗಳನ್ನೂ ತನ್ನ ನಾವೆಯಲ್ಲಿ ಹೊತ್ತೊಯ್ದ. ಅಂತೆಯೇ ಸರ್ಕಾರ, ಎಲ್ಲಾ ನಾಗರಿಕರ ಹಿತಾಸಕ್ತಿಯನ್ನು ಕಾಪಾಡಬೇಕು. ಅವರು ಬಡವರಿರಲಿ, ಶ್ರೀಮಂತರಿರಲಿ ಅವರಲ್ಲಿ ತಾರತಮ್ಯ ಮಾಡದೇ ಸಮಾನ ಗೌರವದಿಂದ ಕಾಣಬೇಕು’ ಎಂದು ಹೇಳಿತು.

ಮುಂಬೈನ ತಾನ್ಸಾ ವಾಟರ್ ಪೈಪ್‌ಲೈನ್‌ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ್ದ ಮನೆಗಳನ್ನು ಕಳೆದ ವರ್ಷ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಕೆಡವಿತ್ತು. ಪರ್ಯಾಯ ವಸತಿ ಸ್ಥಳ ಮಹುಲ್‌ಗೆ ಸ್ಥಳಾಂತರಗೊಳ್ಳಲು ಒಪ್ಪಂದ ಸುಮಾರು 15 ಸಾವಿರ ಸಂತ್ರಸ್ತ ಕುಟುಂಬಗಳು ಪಾಲಿಕೆಯ ಕ್ರಮವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೊರೆ ಹೊಕ್ಕಿವೆ.

ಮಹುಲ್ ಪ್ರದೇಶದ ಸುತ್ತಮುತ್ತ ಮೂರು ಕಚ್ಚಾತೈಲ ಸಂಸ್ಕರಣಾ ಘಟಕಗಳು ಮತ್ತು ರಾಸಾಯನಿಕ ಕಾರ್ಖಾನೆಗಳಿವೆ. ಈ ಪ್ರದೇಶ ಮನುಷ್ಯವಾಸಕ್ಕೆ ಯೋಗ್ಯವಲ್ಲ ಎಂದು ರಾಷ್ಟ್ರೀಯ ಹಸಿರು ಮಂಡಳಿ 2015ರಲ್ಲಿ ಹಾಗೂ ಮುಂಬೈ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ವರ್ಷ ಘೋಷಿಸಿವೆ.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಮತ್ತೊಂದು ಪೀಠ ಏಪ್ರಿಲ್‌ನಲ್ಲಿ, ‘ಮಹುಲ್‌ನಂಥ ಮಾಲಿನ್ಯಪೀಡಿತ ಪ್ರದೇಶದಲ್ಲಿ ನಾಗರಿಕರಿಗೆ ವಾಸಿಸಲು ಬಲವಂತ ಮಾಡಬಾರದು’ ಎಂದು ಬಿಎಂಸಿಗೆ ಹೇಳಿತ್ತು. ಅಷ್ಟೇ ಅಲ್ಲ ಮಹುಲ್‌ನಲ್ಲಿ ವಾಸಿಸಲು ಇಚ್ಛಿಸದ ಕುಟುಂಬಗಳಿಗೆ ಪ್ರತಿತಿಂಗಳು ₹ 15 ಸಾವಿರ ಮೊತ್ತವನ್ನು ಬಾಡಿಗೆ ರೂಪದಲ್ಲಿ ಪಾವತಿಸಬೇಕೆಂದೂ’ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು.

ಸಂತ್ರಸ್ತರ ಅರ್ಜಿಯನ್ನು ಮಂಗಳವಾರ ಬಾಂಬೆ ಹೈಕೋರ್ಟ್‌ ವಿಚಾರಣೆ ನಡೆಸಿದಾಗ, ‘ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದರಿಂದ ಅರ್ಜಿದಾರ ಸಂತ್ರಸ್ತರಿಗೆ ಸರ್ಕಾರದಿಂದ ಇದುವರೆಗೆ ಬಾಡಿಗೆ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ’ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ತಿಳಿಸಿತು.

ಈ ಬಗ್ಗೆ ಕೋರ್ಟ್‌ ದಾಖಲೆಗಳನ್ನು ಪರಿಶೀಲಿಸಿದಾಗ, ರಾಜ್ಯ ಸರ್ಕಾರದ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಬಾಡಿಗೆ ಮೊತ್ತ ಪಾವತಿಸಲು ಯಾವುದೇ ರೀತಿಯ ತಡೆ ನೀಡಿಲ್ಲ ಎಂದು ತಿಳಿಸಿತು.

‘ಬಡವ, ಶ್ರೀಮಂತ ಅನ್ನುವ ತಾರತಮ್ಯ ಮಾಡದೇ ಸರ್ಕಾರ ಎಲ್ಲಾ ನಾಗರಿಕರನ್ನು ಸಮಾನ ಗೌರವದಿಂದ ಕಾಣಬೇಕು. ಕುಂಭಮೇಳದಲ್ಲಿ 5 ಕೋಟಿ ಜನರನ್ನು ನಿಭಾಯಿಸುವ ನೀವು, ಈ ಪ್ರಕರಣದಲ್ಲಿ 60 ಸಾವಿರ ಜನರಿಗೆ ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ‘ ಎಂದು ಹೇಳಿದ ಪೀಠ, ಪ್ರಕರಣದ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT