ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ರಾಜಧಾನಿಯಲ್ಲಿ ತ್ರಿಕೋನ ಹಣಾಹಣಿ

ಎಎಪಿಗೆ ಸತ್ವಪರೀಕ್ಷೆ l ಪ್ರಾಬಲ್ಯ ಉಳಿಸಿಕೊಳ್ಳಲು ಬಿಜೆಪಿ ಯತ್ನ l ಕಾಂಗ್ರೆಸ್‌ಗೆ ಪುನಶ್ಚೇತನದ ಕನಸು
Last Updated 11 ಮೇ 2019, 11:24 IST
ಅಕ್ಷರ ಗಾತ್ರ

ನವದೆಹಲಿ: ಪರ್ಯಾಯ ರಾಜಕಾರಣದ ಆಮ್‌ ಆದ್ಮಿ ಪಕ್ಷದ (ಎಎಪಿ) ಪ್ರಯೋಗವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡ ರಾಜ್ಯ ದೆಹಲಿ. ನಾಲ್ಕು ವರ್ಷಗಳ ಹಿಂದೆ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅಲ್ಲಿನ 70 ಕ್ಷೇತ್ರಗಳ ಪೈಕಿ 67ರಲ್ಲಿ ಎಎಪಿ ಗೆದ್ದಿತ್ತು. ಅದಕ್ಕೆ ಕೆಲ ತಿಂಗಳು ಮೊದಲು ನಡೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಎಲ್ಲ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಹಾಗಾಗಿಯೇ, ಬಿಜೆಪಿಯ ಜೈತ್ರಯಾತ್ರೆಗೆ ತಡೆ ಒಡ್ಡಿದ ಎಎಪಿಯ ಗೆಲುವು ಮಹತ್ವ ಪಡೆದುಕೊಂಡಿತ್ತು.

ಆದರೆ, ನಾಲ್ಕು ವರ್ಷಗಳ ಬಳಿಕ ಬಂದಿರುವ ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಸ್ಥಿತಿ ಅಷ್ಟು ಗಟ್ಟಿಯಾಗಿಯೇನೂ ಉಳಿದಿಲ್ಲ ಎಂದು ಹೇಳಲು ಆಧಾರವಿದೆ. ಕಳೆದ ಎರಡು ತಿಂಗಳಲ್ಲಿ ಎಎಪಿ–ಕಾಂಗ್ರೆಸ್‌ ಹೊಂದಾಣಿಕೆಗೆ ಸಂಬಂಧಿಸಿ ಹಲವು ಮಾತುಕತೆಗಳು ನಡೆದಿದ್ದವು. ಮೈತ್ರಿ ಆಗಿಯೇ ಬಿಟ್ಟಿತು ಎಂಬ ಸುದ್ದಿಗಳು ಬಂದಷ್ಟೇ ವೇಗವಾಗಿ ಮೈತ್ರಿ ಕೈಗೂಡಿಲ್ಲ ಎಂಬ ಸುದ್ದಿಗಳೂ ಪ್ರಕಟವಾದವು. ಕೊನೆಗೂ ಎಎಪಿ ಮತ್ತು ಕಾಂಗ್ರೆಸ್ ಪಕ್ಷ ಪ್ರತ್ಯೇಕವಾಗಿಯೇ ಸ್ಪರ್ಧಿಸಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜೋಡಿಯನ್ನು ಸೋಲಿಸಲು ಕಾಂಗ್ರೆಸ್‌ ಜತೆಗೆ ಮೈತ್ರಿ ಬೇಕು ಎಂಬ ವಾದವನ್ನು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಮುಂದಿಟ್ಟಿದ್ದರು. ಕಾಂಗ್ರೆಸ್‌ನ ಒಂದು ವರ್ಗವೂ ಮೈತ್ರಿಯ ಪರವಾಗಿತ್ತು. ಆದರೆ, ದೆಹಲಿಯ ಹೆಚ್ಚಿನ ಮುಖಂಡರು ಮೈತ್ರಿಯನ್ನು ವಿರೋಧಿಸಿದರು. ಕೆಲವೇ ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ ಈ ವಿರೋಧಕ್ಕೆ ಕಾರಣವಾಗಿರಬಹುದು. ಕಾಂಗ್ರೆಸ್ ಪಕ್ಷದ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದ ಎಎಪಿ ಬಗ್ಗೆ ಕಾಂಗ್ರೆಸ್ಸಿಗರಲ್ಲಿ ಇರುವ ಅಸಮಾಧಾನ ಇದಕ್ಕೆ ಒಂದು ಕಾರಣವಾಗಿರಬಹುದು. ಜತೆಗೆ, ಎಎಪಿಯತ್ತ ಹೋಗಿರುವ ದೆಹಲಿಯ ಕಾಂಗ್ರೆಸ್‌ ಮತದಾರರು ಮರಳಿ ಬರಬಹುದು ಎಂಬ ನಿರೀಕ್ಷೆಯೂ ಕಾಂಗ್ರೆಸ್‌ ಮುಖಂಡರಲ್ಲಿ ಇದೆ.

ಅದೇನೇ ಇದ್ದರೂ ಈ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಇದೆ. ಅತ್ಯಂತ ಪ್ರಬಲ ಎಂದು ಗೋಚರಿಸುವ ಬಿಜೆಪಿ ಮತ್ತು ಎಎಪಿಯ ಜತೆಗೆ ಸ್ವಲ್ಪ ಮಟ್ಟಿಗೆ ‘ಪುನಶ್ಚೇತನ’ಗೊಂಡಿರುವ ಕಾಂಗ್ರೆಸ್‌ ಕೂಡ ಸ್ಪರ್ಧೆಯಲ್ಲಿದೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗಳಿಸಿದ ಮತ ಪ್ರಮಾಣದಲ್ಲಿ ಏರಿಕೆ ಆಗಿರುವುದು ಕಾಂಗ್ರೆಸ್ಸಿಗರ ಆತ್ಮವಿಶ್ವಾಸಕ್ಕೆ ಕಾರಣ ಎನ್ನಲಾಗುತ್ತಿದೆ.

ಕೇಂದ್ರ ಸರ್ಕಾರದ ‘ಸಾಧನೆ’ಗಳು ಮತ್ತು ಮೋದಿ ಅವರ ವರ್ಚಸ್ಸನ್ನೇ ಬಿಜೆಪಿ ಪ್ರಧಾನವಾಗಿ ನಂಬಿಕೊಂಡಿದೆ. ನಾಲ್ಕು ವರ್ಷಗಳ ಆಳ್ವಿಕೆಯನ್ನೇ ನೆಚ್ಚಿಕೊಂಡು ಎಎಪಿ ಕಣಕ್ಕಿಳಿದಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕಣ್ಣಿಗೆ ಕಾಣಿಸುವ ರೀತಿ ಆಗಿರುವ ಕೆಲಸಗಳು ಕೈಬಿಡಲಿಕ್ಕಿಲ್ಲ ಎಂಬ ಲೆಕ್ಕಾಚಾರ ಎಎಪಿಗೆ ಇದೆ. ಜತೆಗೆ, ಕೇಂದ್ರ ಸರ್ಕಾರ ಒಡ್ಡಿದ ತೊಡಕಿನಿಂದಾಗಿ ಯಾವುದೇ ಕೆಲಸವನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗಿಲ್ಲ ಎಂದು ಎಎಪಿ ಹೇಳುತ್ತಿದೆ. ಹಾಗಾಗಿಯೇ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ಬೇಕು ಎಂಬುದು ಈ ಚುನಾವಣೆಯಲ್ಲಿ ಎಎಪಿಯ ಮುಖ್ಯ ವಿಚಾರ.15 ವರ್ಷ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಅವರೇ ಕಾಂಗ್ರೆಸ್‌ ಪಕ್ಷದ ಪ್ರಚಾರದ ಮುಂಚೂಣಿಯಲ್ಲಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜಧಾನಿಯಲ್ಲಿ ರೋಡ್‌ಷೋ ಆರಂಭಿಸಿದ್ದಾರೆ. ಇನ್ನಷ್ಟು ಸಭೆಗಳನ್ನು ಅವರು ನಡೆಸಲಿದ್ದಾರೆ.

ಏರ್ಪಡದ ಮೈತ್ರಿ: ಬಿಜೆಪಿಗೆ ಲಾಭ?

ಎಎಪಿ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಏರ್ಪಟ್ಟಿದ್ದರೆ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿತ್ತು. 2014ರ ಲೋಕಸಭಾ ಚುನಾವಣೆಯ ಮತ ಗಳಿಕೆ ಪ್ರಮಾಣ ಇದನ್ನು ಪುಷ್ಟೀಕರಿಸುತ್ತದೆ. ಎಎಪಿಗೆ ಶೇ 33.1ರಷ್ಟು ಮತ ಸಿಕ್ಕಿದ್ದರೆ, ಕಾಂಗ್ರೆಸ್‌ ಪಾಲು ಶೇ 15.2ರಷ್ಟು. ಎಲ್ಲ ಕ್ಷೇತ್ರಗಳನ್ನು ಗೆದ್ದುಕೊಂಡಿದ್ದ ಬಿಜೆಪಿಗೆ ಶೇ 46.6ರಷ್ಟು ಮತ ದೊರೆತಿತ್ತು.

ಕಳೆದ ಚುನಾವಣೆಯಲ್ಲಿ ಮೋದಿ ಅಲೆ ಬಹಳ ಬಲವಾಗಿ ಇತ್ತು. ಹಾಗಿದ್ದರೂ,ಎಎಪಿ ಮತ್ತು ಕಾಂಗ್ರೆಸ್‌ ಪಕ್ಷ ಪಡೆದ ಮತಗಳನ್ನು ಸೇರಿಸಿದರೆ ಅದು ಬಿಜೆಪಿ ಪಡೆದ ಮತಗಳಿಗಿಂತ ಹೆಚ್ಚಾಗುತ್ತದೆ. ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಅದು ಬಿಜೆಪಿಗೆ ಲಾಭಕರ ಎನ್ನುವುದರಲ್ಲಿ ಅನುಮಾನ ಇಲ್ಲ.

ಅಲ್ಪಸಂಖ್ಯಾತರು, ಕೊಳೆಗೇರಿ ನಿವಾಸಿಗಳು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಕೆಲವು ವಿಭಾಗಗಳ ಮತಗಳನ್ನು ಎಎಪಿ ಮತ್ತು ಕಾಂಗ್ರೆಸ್‌ ಪಕ್ಷಗಳೆರಡೂ ನೆಚ್ಚಿಕೊಂಡಿವೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಶೇ. 24.6ರಷ್ಟು ಮತ ಪಡೆದಿತ್ತು. 2013ರಲ್ಲಿ ಶೇ 33ರಷ್ಟಿದ್ದ ಬಿಜೆಪಿ ಮತಪ್ರಮಾಣ 2015ರ ಚುನಾವಣೆಯ ಹೊತ್ತಿಗೆ ಶೇ 32ರಷ್ಟಿತ್ತು. ಆದರೆ 2015ರಲ್ಲಿ ಕಾಂಗ್ರೆಸ್‌ ಪಕ್ಷವು ಶೇ 9ಕ್ಕಿಂತ ಸ್ವಲ್ಪ ಹೆಚ್ಚಿನ ಮತವನ್ನಷ್ಟೇ ಪಡೆಯಿತು. ಹಾಗಾಗಿ, ಕಾಂಗ್ರೆಸ್‌ ಮತಗಳಿಗೆ ಎಎಪಿ ಕನ್ನ ಹಾಕುತ್ತಿದೆಯೇ ಹೊರತು ಬಿಜೆಪಿಯ ಮತಗಳಿಗೆ ಅಲ್ಲ ಎಂಬುದು ಸ್ಪಷ್ಟ. ಎಎಪಿ ಮತ್ತು ಕಾಂಗ್ರೆಸ್‌ ನಡುವೆ ಆಗುವ ಮತ ವಿಭಜನೆಯಿಂದ ಬಿಜೆಪಿಗೆ ಲಾಭ ಎಂಬುದು ನಿಚ್ಚಳ.

ಕಣದಲ್ಲಿ ಪ್ರಮುಖರು

ಶೀಲಾ – ಮನೋಜ್‌ ತಿವಾರಿ:ಸಕ್ರಿಯ ರಾಜಕಾರಣದಿಂದ ಬಹುತೇಕ ಹಿಂದೆ ಸರಿದಿದ್ದ ಶೀಲಾ ದೀಕ್ಷಿತ್‌ ಅವರು ಈ ಬಾರಿ ಈಶಾನ್ಯ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸ್ಪರ್ಧೆಯ ಒಲವು ಇಲ್ಲದಿದ್ದರೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಒತ್ತಾಯದಿಂದಾಗಿ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಶೀಲಾ ಸ್ಪರ್ಧೆಯಿಂದ ದೆಹಲಿಯ ಒಟ್ಟು ಲೆಕ್ಕಾಚಾರವೇ ಬದಲಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಹಾಲಿ ಸಂಸದ ಮನೋಜ್‌ ತಿವಾರಿ ಅವರನ್ನೇ ಬಿಜೆಪಿ ಕಣಕ್ಕೆ ಇಳಿಸಿದೆ. ಭೋಜ್‌ಪುರಿ ನಟ ದಿಲೀಪ್‌ ಪಾಂಡೆ ಇಲ್ಲಿ ಎಎಪಿ ಅಭ್ಯರ್ಥಿ. ಈ ಕ್ಷೇತ್ರದ ಮೇಲೆ ಕಾಂಗ್ರೆಸ್‌ ನಿರೀಕ್ಷೆ ಇಟ್ಟಿದೆ.

ವಿಜೇಂದರ್‌– ರಾಘವ್‌ ಚಡ್ಡಾ:ಹಾಲಿ ಸಂಸದ, ಹಿರಿಯ ರಾಜಕಾರಣಿ ರಮೇಶ್‌ ಬಿಧೂರಿ ಅವರು ದಕ್ಷಿಣ ದೆಹಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ.ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟು ವಿಜೇಂದರ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ. ಎಎಪಿಯ ರಾಷ್ಟ್ರೀಯ ವಕ್ತಾರ ರಾಘವ್‌ ಚಡ್ಡಾ ಅವರು ಭಾರಿ ಸ್ಪರ್ಧೆ ಒಡ್ಡಿದ್ದಾರೆ. ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಎಎಪಿಯ ದೇವಿಂದರ್ ಶೆರಾವತ್‌ ಅವರು ಈಗ ಬಿಜೆಪಿಯಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ಗೆ ಮೂರನೇ ಸ್ಥಾನ ಸಿಕ್ಕಿತ್ತು.

ಲೇಖಿ–ಮಾಕನ್‌:ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿ ಅವರು ನವದಹೆಲಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. 2004 ಮತ್ತು 2009ರಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದ ಅಜಯ ಮಾಕನ್‌ ಅವರು ಕಾಂಗ್ರೆಸ್ ಅಭ್ಯರ್ಥಿ. ಎಎಪಿಯ ಬ್ರಿಜೇಶ್‌ ಗೋಯಲ್‌ ಅವರಿಗೆ ಇದು ಚೊಚ್ಚಲ ಸ್ಪರ್ಧೆ. 2014ರಲ್ಲಿ ಮಾಕನ್‌ ಅವರು ಮೂರನೇ ಸ್ಥಾನಕ್ಕೆ ಹೋಗಿದ್ದರು. ಈ ಬಾರಿ ಲೇಖಿ ಮತ್ತು ಮಾಕನ್‌ ನಡುವೆ ತೀವ್ರ ಹಣಾಹಣಿ ಇದೆ ಎಂದು ಹೇಳಲಾಗುತ್ತಿದೆ.

ಗಂಭೀರ್‌–ಆತಿಶಿ–ಲವ್ಲಿ:ಪೂರ್ವ ದೆಹಲಿ ಕುತೂಹಲ ಕೆರಳಿಸಿರುವ ಇನ್ನೊಂದು ಕ್ಷೇತ್ರ. ಲೋಕಸಭಾ ಚುನಾವಣೆ ಘೋಷಣೆಯಾದ ಮೇಲೆ ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು ಇಲ್ಲಿ ಆ ಪಕ್ಷದ ಅಭ್ಯರ್ಥಿ. ದೆಹಲಿಯ ಶಿಕ್ಷಣ ಕ್ಷೇತ್ರದ ಸುಧಾರಣೆಯ ಹಿಂದಿನ ಸೂತ್ರಧಾರಿ ಎಂದು ಹೇಳಲಾಗುವ ಆತಿಶಿ ಅವರನ್ನು ಎಎಪಿ ಕಣಕ್ಕೆ ಇಳಿಸಿದೆ. ಅವರು ಆಕ್ಸ್‌ಫರ್ಡ್‌ ಪದವೀಧರೆ. ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗ ಸಚಿವರಾಗಿದ್ದ ಅರವಿಂದರ್‌ ಸಿಂಗ್ ಲವ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿ. ಆತಿಶಿ ಭಾರಿ ಪ್ರಚಾರ ನಡೆಸುತ್ತಿದ್ದಾರೆ. ಅವರು ಗೆಲ್ಲಬಹುದು ಎಂಬ ಆಶಾವಾದ ಎಎಪಿಯಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT