ಗುರುವಾರ , ಆಗಸ್ಟ್ 22, 2019
22 °C

ಸರ್ಕಾರಿ ಗೌರವದೊಂದಿಗೆ ಸುಷ್ಮಾ ಅಂತ್ಯಕ್ರಿಯೆ

Published:
Updated:
Prajavani

ನವದೆಹಲಿ: ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (67) ಅವರ ಅಂತ್ಯಕ್ರಿಯೆಯು ಇಲ್ಲಿನ ಲೋಧಿ ಚಿತಾಗಾರಾದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಬುಧವಾರ ನಡೆಯಿತು.

ಇಲ್ಲಿನ ಜಂತರ್‌ ಮಂತರ್ ರಸ್ತೆಯಲ್ಲಿರುವ ಸ್ವರಾಜ್ ಅವರ ಸ್ವಗೃಹದಲ್ಲಿ ಅವರ ದೇಹವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಮಂಗಳವಾರ ರಾತ್ರಿಯಿಂದಲೇ ಹಲವು ರಾಜಕೀಯ ನಾಯಕರು ಅಲ್ಲಿಗೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು. ಬುಧವಾರ ಬೆಳಿಗ್ಗೆಯೂ ರಾಜಕೀಯ ನಾಯಕರು ಅಲ್ಲಿಗೆ ಭೇಟಿ ನೀಡುತ್ತಲೇ ಇದ್ದರು.

ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಸುಷ್ಮಾ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸುಷ್ಮಾ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಮತ್ತು ಮಗಳು ಬಾನ್ಸುರಿ ಸ್ವರಾಜ್ ಅವರಿಗೆ ಪ್ರಧಾನಿ ಸಾಂತ್ವನ ಹೇಳಿದರು. ನಂತರ ಅಂತ್ಯಕ್ರಿಯೆ ಮುಗಿಯುವವರೆಗೂ ಮೋದಿ ಅವರು ಸುಷ್ಮಾ ಅವರ ಕುಟುಂಬದ ಜತೆಯಲ್ಲೇ ಇದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಅವರು ಜತೆಯಲ್ಲಿದ್ದರು.

ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಅಂತಿಮ ನಮನ ಸಲ್ಲಿಸಿದರು.

‘ಅಮ್ಮನನ್ನು ಕಳೆದುಕೊಂಡಂತಾಗಿದೆ’

ಇಂದೋರ್: ‘ತಾಯಿಯಂತೆ ನನ್ನನ್ನು ನೋಡಿಕೊಳ್ಳುತ್ತಿದ್ದ ಪೋಷಕಿಯನ್ನು ಕಳೆದುಕೊಂಡಿದ್ದೇನೆ’ ಎಂದು ಗೀತಾ ಅವರು ತಮ್ಮ ದುಃಖವನ್ನು ಹೊರಹಾಕಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಅಚಾನಕ್ ಆಗಿ ಪಾಕಿಸ್ತಾನದ ಗಡಿದಾಟಿದ್ದ ಗೀತಾ ಅವರು ಭಾರತಕ್ಕೆ ಹಿಂತಿರುಗಿದ್ದು 2015ರಲ್ಲಿ, ಅದೂ ದಶಕಗಳ ನಂತರ. ಕಿವಿ ಕೇಳದ, ಮಾತು ಬಾರದ ಈ ಹುಡುಗಿ ಭಾರತಕ್ಕೆ ವಾಪಸ್ ಆಗುವಲ್ಲಿ ಸುಷ್ಮಾ ಸ್ವರಾಜ್ ಅವರ ರಾಜತಾಂತ್ರಿಕ ಕೊಡುಗೆ ಅಪಾರವಾಗಿತ್ತು.

‘ಗೀತಾ ಭಾರತದ ಮಗಳು. ಆಕೆಯ ತಂದೆ–ತಾಯಿ ಸಿಗುವವರೆಗೂ ಅವಳ ಜವಾಬ್ದಾರಿ ನನ್ನದು’ ಎಂದು ಗೀತಾಳನ್ನು ಭಾರತಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಸುಷ್ಮಾ ಸ್ವರಾಜ್ ಹೇಳಿದ್ದರು. 

ಗೀತಾ ಅವರು ಈಗ ಇಂದೋರ್‌ನಲ್ಲಿ ಸ್ವಯಂಸೇವಾ ಸಂಸ್ಥೆಯೊಂದು ನಡೆಸುತ್ತಿರುವ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸುಷ್ಮಾ ಅವರು ಕಾಲವಾದ ಸುದ್ದಿ ತಿಳಿದಾಗಿನಿಂದ ಗೀತಾ ಅವರ ಕಣ್ಣಾಲಿಗಳು ತುಂಬಿವೆ. ಬುಧವಾರ ಬೆಳಿಗ್ಗೆ ಶಾಲೆಯ ಆವರಣದಲ್ಲಿ ನಡೆದ ಸಂತಾಪ ಸೂಚನಾ ಸಬೆಯಲ್ಲಿ ಗೀತಾ ಅವರು ತಮ್ಮ ಸಂಜ್ಞಾ ಭಾಷೆಯಲ್ಲೇ ಸುಷ್ಮಾ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

‘ನನ್ನ ಆರೋಗ್ಯ ಮತ್ತು ವಿದ್ಯಾಭ್ಯಾಸದ ಬಗ್ಗೆ ಅವರು ಸದಾ ವಿಚಾರಿಸಿಕೊಳ್ಳುತ್ತಿದ್ದರು. ತೀರಾ ಕಾಳಜಿ ತೋರಿಸುತ್ತಿದ್ದರು’ ಎಂದು ಗೀತಾ ಹೇಳಿದ್ದಾರೆ.

ಅಮೆರಿಕ ಸಾಂತ್ವನ

‘ಭಾರತದ ವಿದೇಶಾಂಗ ಸಚಿವೆಯಾಗಿ ಭಾರತ ಮತ್ತು ಅಮೆರಿಕದ ನಡುವೆ ಸಂಬಂಧ ಗಟ್ಟಿಯಾಗುವಲ್ಲಿ ಸುಷ್ಮಾ ಸ್ವರಾಜ್ ಅವರ ಕೊಡುಗೆ ಅಪಾರವಾದುದು. ಸುಷ್ಮಾ ಅವರನ್ನು ಅಮೆರಿಕವು ಸದಾ ತಮ್ಮ ಸ್ನೇಹಿತೆ ಎಂದು ಪರಿಗಣಿಸುತ್ತದೆ. ಸುಷ್ಮಾ ಅವರ ಕುಟುಂಬದ ಸದಸ್ಯರ ಜತೆಗೆ ನಾವಿದ್ದೇವೆ’ ಎಂದು ಭಾತದಲ್ಲಿನ ಅಮೆರಿಕದ ರಾಯಭಾರ ಕಚೇರಿ ಸಾಂತ್ವನ ಹೇಳಿದೆ.

Post Comments (+)