ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಚ್ಚೆದೆಯ ಹುತಾತ್ಮರಿಗೆ ದೇಶದ ನಮನ

ಹುತಾತ್ಮರ ಶೌರ್ಯ, ತ್ಯಾಗ, ಬಲಿದಾನ ಸ್ಮರಿಸಿದ ರಾಷ್ಟ್ರಪತಿ, ಪ್ರಧಾನಮಂತ್ರಿ
Last Updated 26 ನವೆಂಬರ್ 2018, 20:22 IST
ಅಕ್ಷರ ಗಾತ್ರ

ಮುಂಬೈ: ಉಗ್ರರು ಮುಂಬೈ ಮಹಾನಗರದ ಮೇಲೆ 10 ವರ್ಷಗಳ ಹಿಂದೆ ನಡೆಸಿದ್ದ ದಾಳಿ ವೇಳೆ ಹುತಾತ್ಮರಾದ ಯೋಧರು ಹಾಗೂ ಪೊಲೀಸರಿಗೆ ಸೋಮವಾರ ಹಲವು ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದರು.

ದಾಳಿಯಲ್ಲಿ ಜೀವ ಕಳೆದುಕೊಂಡ ನಾಗರಿಕರು ಮತ್ತು ಯೋಧರ ತ್ಯಾಗ, ಬಲಿದಾನವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸ್ಮರಿಸಿದ್ದಾರೆ.

ಅರಬ್ಬಿ ಸಮುದ್ರದ ಕರಾವಳಿ ತೀರದಲ್ಲಿನ ಪೊಲೀಸ್‌ ಜಿಮ್ಖಾನಾದಲ್ಲಿರುವ 26/11 ಹುತಾತ್ಮರ ಸ್ಮಾರಕದ ಬಳಿ ಸೋಮವಾರ ಮುಂಜಾನೆ ಗೌರವ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೇಶದ ಇತಿಹಾಸದಲ್ಲೇ ಕರಾಳ ಘಟನೆ ಎನಿಸಿದ ಮುಂಬೈ ದಾಳಿಯಲ್ಲಿ ಜೀವ ಕಳೆದುಕೊಂಡವರ ಕುಟುಂಬ ಸದಸ್ಯರು, ಸಹೋದ್ಯೋಗಿಗಳು ಸ್ಮಾರಕದ ಬಳಿ ನೆರೆದು, ಹುತಾತ್ಮರನ್ನು ನೆನೆದು ಕಣ್ಣೀರಾದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರು ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿದರು. ಪೊಲೀಸ್‌ ವಾದ್ಯ ತಂಡವು ಸಂಗೀತ ನುಡಿಸುವ ಮೂಲಕ ಗೌರವ ಅರ್ಪಿಸಿತು.

ಓಂಬ್ಳೆ ಸ್ಮಾರಕಕ್ಕೆ ಗೌರವ: ಗಿರ್‌ಗಾವ್‌ ಚೌಪಾಟಿಯಲ್ಲಿ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದ ತುಕಾರಾಂ ಓಂಬ್ಳೆ ಅವರ ಸ್ಮಾರಕಕ್ಕೆ ಇದೇ ವೇಳೆ ಗೌರವ ನಮನ ಸಲ್ಲಿಸಲಾಯಿತು.

ಉಗ್ರ ಅಜ್ಮಲ್ ಕಸಾಬ್‌ ಗುಂಡು ಹಾರಿಸಿದರೂ ಲೆಕ್ಕಿಸದೆ ತುಕಾರಾಂ ಅವರು ಕಸಾಬ್‌ನನ್ನು ಜೀವಂತವಾಗಿ ಸೆರೆಹಿಡಿದುಕೊಟ್ಟು ಪ್ರಾಣಬಿಟ್ಟಿದ್ದರು. ದಾಳಿ ನಡೆದ ನಾಲ್ಕು ವರ್ಷಗಳ ನಂತರ ಕಸಾಬ್‌ನನ್ನು 2012ರ ನವೆಂಬರ್‌ 21ರಂದು ನೇಣಿಗೇರಿಸಲಾಗಿತ್ತು. ಮೂರು ದಿನಗಳವರೆಗೆ ನಡೆದ ಈ ದಾಳಿಯಲ್ಲಿ 18 ಪೊಲೀಸ್‌ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಇಬ್ಬರು ಕಮಾಂಡೊಗಳು ಸೇರಿದಂತೆ 166 ಮಂದಿ ಜೀವ ಕಳೆದುಕೊಂಡಿದ್ದರು. 308 ಜನ ಗಾಯಗೊಂಡಿದ್ದರು.

ಅಗಲಿಕೆ ಭರಿಸಲಾಗದು: ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಹಿರಿಯ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿಜಯ್‌ ಸಲಾಸ್ಕರ್‌ ಅವರ ಪುತ್ರಿ ದಿವ್ಯಾ ಮಾತನಾಡಿ ‘ಹತ್ತು ವರ್ಷಗಳು ಉರುಳಿ ಹೋದವು. ಇನ್ನೂ ಅಷ್ಟೇ ನೋವು ಉಳಿದಿದೆ. ಪ್ರೀತಿಪಾತ್ರರಾದ ತಂದೆ ಅಥವಾ ಪತಿ ಯಾರನ್ನೇ ಕಳೆದುಕೊಂಡರೂ ಆ ನಷ್ಟವನ್ನು ಯಾರಿಂದಲೂ, ಎಂತಹುದರಿಂದಲೂ ಭರಿಸಲಾಗದು’ ಎಂದು ಹೇಳಿದರು.

ಸಂಚುಕೋರರನ್ನು ಕಟಕಟೆಗೆ ನಿಲ್ಲಿಸುತ್ತೇವೆ: ಮೋದಿ
ಭಿಲ್ವಾರ (ರಾಜಸ್ಥಾನ) (ಪಿಟಿಐ):
‘ಮುಂಬೈ ದಾಳಿ ಮತ್ತು ಈ ಕೃತ್ಯದ ಅಪರಾಧಿಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ದಾಳಿಯ ಹಿಂದಿರುವ ಸಂಚುಕೋರರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಿ, ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿ ಸೋಮವಾರ ನಡೆದ ಚುನಾವಣಾ ರ‍್ಯಾಲಿಯಲ್ಲಿ, ದಶಕ ತುಂಬಿದ ಮುಂಬೈ ದಾಳಿಯನ್ನು ಪ್ರಸ್ತಾಪಿಸಿ ಅವರು ಮಾತನಾಡಿದರು. ‘ಮುಂಬೈ ಮೇಲೆ 60 ಗಂಟೆಗೂ ಹೆಚ್ಚು ಕಾಲ ಪಾಕಿಸ್ತಾನದ 10 ಉಗ್ರರು ದಾಳಿ ನಡೆಸಿ, 166 ಜನರನ್ನು ಕೊಂದಿದ್ದಾರೆ. ಇದಕ್ಕೆ ದೇಶದ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಎಂದು ದೇಶದ ಜನತೆಗೆ ಭರವಸೆ ನೀಡುತ್ತೇನೆ’ ಎಂದರು.

26/11ರ ದಾಳಿಗೆ ದಶಕ: ಆಮೆಗತಿಯಲ್ಲಿ ವಿಚಾರಣೆ
ಲಾಹೋರ್‌ (ಪಿಟಿಐ):
ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ದಾಳಿ ನಡೆಸಿ ಹತ್ತು ವರ್ಷಗಳಾದರೂ, ಈ ಪ್ರಕರಣದ ವಿಚಾರಣೆ ಆಮೆ ವೇಗದಲ್ಲಿ ನಡೆಯುತ್ತಿದೆ.

ಲಷ್ಕರ್‌–ಎ–ತಯ್ಯಬಾದ (ಎಲ್‌ಇಟಿ) ಏಳು ಉಗ್ರರ ವಿಚಾರಣೆಯನ್ನು ಪಾಕಿಸ್ತಾನದ ಭಯೋತ್ಪಾದನ ನಿಗ್ರಹ ನ್ಯಾಯಾಲಯ ನಡೆಸುತ್ತಿದೆ. ಇಸ್ಲಾಮಾಬಾದ್‌ ಹೈಕೋರ್ಟ್‌ ಎರಡು ತಿಂಗಳೊಳಗೇ ವಿಚಾರಣೆ ಮುಕ್ತಾಯಗೊಳಿಸುವಂತೆ 2015ರಲ್ಲೇ ಈ ನ್ಯಾಯಾಲಯಕ್ಕೆ ಸೂಚನೆ ನೀಡಿತ್ತು.

ದಾಳಿಯ ರೂವಾರಿ, ಎಲ್‌ಇಟಿ ಕಮಾಂಡರ್‌ ಝಾಕಿ–ಉರ್‌ ರೆಹಮಾನ್‌ ಲಖ್ವಿ ಅವರಿಗೆ ಜಾಮೀನು ನೀಡಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸದೆ ಪರೋಕ್ಷವಾಗಿ ಅವನನ್ನು ಪಾಕಿಸ್ತಾನ ಸರ್ಕಾರ ರಕ್ಷಿಸುತ್ತಿದೆ. ಇತರೆ ಆರು ಅರೋಪಿಗಳು ಪ್ರಕರಣದಿಂದ ಖುಲಾಸೆಯಾಗುವ ಸಾಧ್ಯತೆ ದಟ್ಟವಾಗಿದೆ.

ಲಖ್ವಿ ಅಲ್ಲದೆ, ಅಬ್ದುಲ್‌ ವಾಜಿದ್‌, ಮಝರ್‌ ಇಕ್ಬಾಲ್‌, ಹಮದ್‌ ಅಮಿನ್‌ ಸಾದಿಕ್‌, ಶಾಹಿದ್‌ ಜಮಿಲ್‌ ರಿಯಾಜ್‌, ಜಮಿಲ್‌ ಅಹ್ಮದ್‌, ಯೂನಿಸ್‌ ಅಂಜುಂ 2009ರಿಂದ ವಿಚಾರಣೆ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT