ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌: ಯಾವ ಧರ್ಮದ ವಿರುದ್ಧವೂ ಅಲ್ಲ-ಕೇಂದ್ರ ಸರ್ಕಾರದ ಸಮರ್ಥನೆ

ತ್ರಿವಳಿ ತಲಾಖ್‌ ನಿಷೇಧ ಮಸೂದೆ: ಸರ್ಕಾರದ ನಿಲುವು ಶಂಕಿಸಿದ ಪ್ರತಿಪಕ್ಷಗಳು; ಮುಸ್ಲಿಂ ರಾಷ್ಟ್ರಗಳಲ್ಲೇ ತ್ರಿವಳಿ ತಲಾಖ್‌ ನಿಷೇಧ
Last Updated 27 ಡಿಸೆಂಬರ್ 2018, 20:24 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿದ ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ ಮೇಲೆ ಗುರುವಾರ ಲೋಕಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ತ್ರಿವಳಿ ತಲಾಖ್‌ ನಿಷೇಧ ಮಸೂದೆ ಯಾವುದೇ ಧರ್ಮ, ಸಮುದಾಯ ಅಥವಾ ಧಾರ್ಮಿಕ ನಂಬುಗೆ ವಿರುದ್ಧ ಅಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.

ಖಂಡಿತ ಇದರಲ್ಲಿ ಯಾವುದೇ ರಾಜಕೀಯ ಅಡಗಿಲ್ಲ. ಮಹಿಳೆಯರ ಬಗೆಗಿನ ಬದ್ಧತೆ ಇದೆ. ಮಸೂದೆ ಮಹಿಳೆಯರಿಗೆ ಅವರ ಹಕ್ಕು ಮತ್ತು ನ್ಯಾಯ ದೊರಕಿಸಿ ಕೊಡಲಿದೆ ಎಂದು ಮನವರಿಕೆ ಮಾಡಿದರು.

ಲೋಕಸಭೆಯಲ್ಲಿ ಗುರುವಾರ ತ್ರಿವಳಿ ತಲಾಖ್‌ ನಿಷೇಧ ಕರಡು ಮಸೂದೆ ಮಂಡಿಸಿ ಮಾತನಾಡಿದ ಅವರು, ಮಸೂದೆ ಕುರಿತು ಮೂಡಿರುವ ತಪ್ಪು ತಿಳಿವಳಿಕೆ, ಕಲ್ಪನೆಗಳನ್ನು ದೂರ ಮಾಡುವ ಪ್ರಯತ್ನ ಮಾಡಿದರು.

ವಿಶ್ವದ 20 ಇಸ್ಲಾಂ ರಾಷ್ಟ್ರಗಳು ತ್ರಿವಳಿ ತಲಾಖ್‌ ವಿವಾಹ ವಿಚ್ಛೇದನ ಪದ್ಧತಿಯನ್ನು ನಿಷೇಧಿಸಿವೆ. ಹೀಗಿರುವಾಗ ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ಏಕೆ ಈ ಪದ್ಧತಿ ನಿಷೇಧಿಸಬಾರದು ಎಂದು ಪ್ರಶ್ನಿಸಿದರು.

ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸುವ ಸರ್ಕಾರದ ಈ ಪ್ರಯತ್ನವನ್ನು ರಾಜಕಾರಣದ ಕನ್ನಡಕ ಹಾಕಿಕೊಂಡು ನೋಡುವುದು ಬೇಡ ಎಂದು ಪ್ರಸಾದ್‌ ಮನವಿ ಮಾಡಿದರು.

ಮಸೂದೆಯನ್ನು ಸಂಸತ್‌ ಆಯ್ಕೆ ಸಮಿತಿ ಪರಾಮರ್ಶೆಗೆ ಒಳಪಡಿಸಬೇಕು ಎಂಬ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಒತ್ತಾಯಿಸಿದವು.

ವಿರೋಧ ಪಕ್ಷಗಳು ಸಲಹೆ, ಸೂಚನೆಗಳನ್ನು ಪರಿಗಣಿಸಿ ಕರಡು ಮಸೂದೆಯಲ್ಲಿ ಈಗಾಗಲೇ ತಿದ್ದುಪಡಿ ತರಲಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಮ್ಮತದಿಂದ ಮಸೂದೆಯನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಅನಿಷ್ಟ ಪದ್ಧತಿಯಿಂದ ಮುಕ್ತಿ: ಕೇಂದ್ರ ಸರ್ಕಾರವು ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ ಪದ್ಧತಿಯಿಂದ ಬಿಡುಗಡೆ ಮಾಡಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವಿಜಯ್‌ ಗೋಯೆಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಮ್ಮತದಿಂದ ಮಸೂದೆಯನ್ನು ಅಂಗೀಕರಿಸಲು ಎನ್‌ಡಿಎ ಸರ್ಕಾರ ಯತ್ನಿಸುತ್ತಿದೆ. 2017ರಲ್ಲಿಯೇ ಮಸೂದೆ ಜಾರಿಯಾಗಬೇಕಿತ್ತು.

ಆದರೆ, ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ತ್ರಿವಳಿ ತಲಾಖ್‌ ಸಾಮಾಜಿಕ ಪಿಡುಗು. ಅದನ್ನು ನಿವಾರಿಸುವ ಕಾಲ ಇದೀಗ ಕೂಡಿ ಬಂದಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಅಭಿಪ್ರಾಯಪಟ್ಟರು.

‘ನೆರೆಯ ಪಾಕಿಸ್ತಾನ ಸೇರಿದಂತೆ ಅನೇಕ ಮುಸ್ಲಿಂ ರಾಷ್ಟ್ರಗಳು ಈಗಾಗಲೇ ಅವೈಜ್ಞಾನಿಕ ವಿವಾಹ ವಿಚ್ಛೇದನ ಪದ್ಧತಿಯನ್ನು ರದ್ದುಪಡಿಸಿವೆ. ನಮ್ಮ ದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತಿದೆ. ಷರಿಯತ್‌ ಆಧಾರದ ಮೇಲೆ ಅಲ್ಲ’ ಎಂದರು.

ಕುರಾನ್‌ನಲ್ಲಿ ಎಲ್ಲಿಯೂ ತಲಾಖ್‌ ಬಗ್ಗೆ ಪ್ರಸ್ತಾಪ ಇಲ್ಲ. ಪುರುಷ ಮತ್ತು ಮಹಿಳೆಗೆ ಮಾತ್ರ ಸಂಬಂಧಿಸಿದ್ದಲ್ಲ. ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ್ದು ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹೇಳಿದರು.

‘ರಾಮ ಮಂದಿರ; ಕಾನೂನು ರೂಪಿಸಿ’

ತ್ರಿವಳಿ ತಲಾಖ್‌ ಮಸೂದೆಗೆ ಆಸಕ್ತಿ ವಹಿಸಿದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸಲು ಸರ್ಕಾರ ಧೈರ್ಯ ಮಾಡಬೇಕು ಎಂದು ಶಿವಸೇನಾ ಲೋಕಸಭೆಯಲ್ಲಿ ಗುರುವಾರ ಒತ್ತಾಯಿಸಿದೆ.

ತ್ರಿವಳಿ ತಲಾಖ್‌ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಸೇನಾ ಸಂಸದ ಅರವಿಂದ ಸಾವಂತ್‌ ಅವರು, ಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸವಂತೆ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರನ್ನು ಒತ್ತಾಯಿಸಿದರು.

ಎರಡು ಬಾರಿ ಮಸೂದೆ ಮಂಡನೆ

* ತ್ರಿವಳಿ ತಲಾಖ್ ಪದ್ಧತಿಯನ್ನು 2017ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿತು

* 2017ರ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ‘ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆ –2018’ ಮಂಡನೆ. ಲೋಕಸಭೆಯಲ್ಲಿ ಅಂಗೀಕಾರ. ರಾಜ್ಯಸಭೆಯಲ್ಲಿ ಅಂಗೀಕಾರ ಸಾಧ್ಯವಾಗಲಿಲ್ಲ

* 2018ರ ಸೆಪ್ಟೆಂಬರ್‌ನಲ್ಲಿ ತ್ರಿವಳಿ ತಲಾಖ್ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ ಸರ್ಕಾರ.ಈ ಸುಗ್ರೀವಾಜ್ಞೆ ಆರು ತಿಂಗಳು ಜಾರಿಯಲ್ಲಿರುತ್ತದೆ. ಅಧಿವೇಶನ ಆರಂಭವಾದ 42 ದಿನಗಳಲ್ಲಿ ಹೊಸ ಮಸೂದೆಗೆ ಅಂಗೀಕಾರ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಸುಗ್ರೀವಾಜ್ಞೆ ರದ್ದಾಗುತ್ತದೆ

* ಹೀಗಾಗಿ ಈಗ ಹೊಸ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ, ಲೋಕಸಭೆಯ ಅನುಮೋದನೆ ಪಡೆಯಲಾಗಿದೆ

**

ಈ ಮಸೂದೆ ಮುಸ್ಲಿಂ ಮಹಿಳೆಯರಿಗೆ ಧ್ವನಿ ಮತ್ತು ನ್ಯಾಯ ನೀಡಲಿದೆ. ಮಸೂದೆಯನ್ನು ಮಾನವೀಯತೆ ಮತ್ತು ನ್ಯಾಯದ ತಕ್ಕಡಿಯಲ್ಲಿ ತೂಗಿ. ರಾಜಕಾರಣದ ತಕ್ಕಡಿಯಲ್ಲಿ ಅಲ್ಲ
- ರವಿಶಂಕರ್‌ ಪ್ರಸಾದ್‌, ಕೇಂದ್ರ ಕಾನೂನು ಸಚಿವ

ಸಾವಿರಾರು ವರ್ಷಗಳಿಂದ ಶೋಷಣೆ ಮತ್ತು ಅನ್ಯಾಯಕ್ಕೆ ಒಳಗಾಗಿರುವ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಇದು ಅತ್ಯಂತ ಮಹತ್ವದ ದಿನ
- ವಿಜಯ್‌ ಗೋಯಲ್‌, ಸಂಸದೀಯ ವ್ಯವಹಾರಗಳ ಸಚಿವ

ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಈ ಕುರಿತು ಸಂಸತ್‌ನಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್‌ ಸಿದ್ಧವಿದೆ
- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ

ತ್ರಿವಳಿ ತಲಾಖ್‌ ನೀಡುವ ಮುಸ್ಲಿಂ ಪುರುಷರನ್ನು ನೇರವಾಗಿ ಜೈಲಿಗೆ ಕಳಿಸುವುದು ಸರಿಯಲ್ಲ. ಮಸೂದೆಯಲ್ಲಿರುವ ಈ ಅಂಶವನ್ನು ತಿದ್ದುಪಡಿ ಮಾಡಬೇಕು
- ಅರವಿಂದ್‌ ಸಾವಂತ್‌, ಶಿವಸೇನಾ ಸಂಸದ

ತ್ರಿವಳಿ ತಲಾಖ್‌ ನಿಷೇಧಿಸುವ ಮಸೂದೆಯನ್ನು ಸಂಸತ್ತಿನ ಆಯ್ಕೆ ಸಮಿತಿಗೆ ಒಪ್ಪಿಸುವುದೊಂದೇ ಪರಿಹಾರ
- ಡಿ. ರಾಜಾ, ಸಿಪಿಐ ನಾಯಕ

ಮಸೂದೆಯ ಮುಖ್ಯ ಉದ್ದೇಶ ಮುಸ್ಲಿಂ ಸಮುದಾಯದ ಮಹಿಳೆಯರ ಸಬಲೀಕರಣವಲ್ಲ. ಮುಸ್ಲಿಂ ಸಮುದಾಯದ ಪುರುಷರಿಗೆ ಶಿಕ್ಷೆ ನೀಡುವ ತಂತ್ರ ಮಸೂದೆ ಹಿಂದಿದೆ
- ಸುಶ್ಮಿತಾ ದೇವ್‌, ಕಾಂಗ್ರೆಸ್‌ ಸಂಸದೆ

ಯಾರನ್ನೂ ಅಪರಾಧ ಸ್ಥಾನದಲ್ಲಿ ನಿಲ್ಲಿಸುವ ಉದ್ದೇಶವಿಲ್ಲ. ಮುಸ್ಲಿಂ ಮಹಿಳೆಯರಿಗೆ ಸ್ವತಂತ್ರ ಮತ್ತು ಸುರಕ್ಷತೆ ಒದಗಿಸುವ ಮಹತ್ವದ ಉದ್ದೇಶವನ್ನು ಮಸೂದೆ ಹೊಂದಿದೆ
- ಮುಖ್ತಾರ್‌ ಅಬ್ಬಾಸ್‌ ನಕ್ವಿ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ

**
ಆಯ್ಕೆ ಸಮಿತಿಗೆ ಒಪ್ಪಿಸಲು ಪಟ್ಟು

ತ್ರಿವಳಿ ತಲಾಖ್‌ ಮಸೂದೆಯಲ್ಲಿನ ಕೆಲವು ನಿಬಂಧನೆಗಳು ಅಸಂವಿಧಾನಿಕವಾಗಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಮಸೂದೆಯ ಕೂಲಂಕಷ ಪರಿಶೀಲನೆಗೆ ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಬೇಕು ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು.

ಈ ಕುರಿತು ಸಂಸತ್‌ನಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್‌ ಸಿದ್ಧವಿದೆ ಎಂದು ಅವರು ಹೇಳಿದರು.

ಎಐಎಡಿಎಂಕೆ ನಾಯಕ ಪಿ.ವೇಣುಗೋಪಾಲ್‌, ಟಿಎಂಸಿಯ ಸುದೀಪ್‌ ಬಂಡೋಪಾಧ್ಯಾಯ, ಎಐಎಂಐಎಂನ ಅಸಾದುದ್ದೀನ್‌ ಒವೈಸಿ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಇದಕ್ಕೆ ಧ್ವನಿಗೂಡಿಸಿದರು.

ವಿವಾಹ ವಿಚ್ಛೇದನ ನೀಡುವುದು ಕೂಡ ಈ ದೇಶದಲ್ಲಿ ಅಪರಾಧವೇ ಎಂದು ಗುಂಟೂರು ಟಿಡಿಪಿ ಸಂಸದ ಜಯದೇವ್‌ ಗಲ್ಲಾ ಪ್ರಶ್ನಿಸಿದರು.

ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬ ಒತ್ತಾಯವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದರು.

**

ಮುಸ್ಲಿಮ್ ರಾಷ್ಟ್ರಗಳಲ್ಲೇ ತ್ರಿವಳಿತಲಾಖ್ ನಿಷೇಧ

ವಿಶ್ವದ ಬಹುತೇಕ ಎಲ್ಲಾ ಮುಸ್ಲಿಂ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ಅನ್ನು ನಿಷೇಧಿಸಿ ದಶಕಗಳೇ ಕಳೆದಿವೆ. ಈಗ 25 ರಾಷ್ಟ್ರಗಳಲ್ಲಿ ಈ ಪದ್ಧತಿಗೆ ನಿಷೇಧವಿದೆ.

* ಒಮ್ಮೆಲೆ ನೇರವಾಗಿ ತ್ರಿವಳಿ ತಲಾಖ್ ನೀಡುವ ಪದ್ಧತಿಗೆ ಮೊದಲಿಗೆ ಕೊನೆ ಹಾಡಿದ್ದು ಈಜಿಪ್ಟ್. ಮೂರು ಬಾರಿ ತಲಾಖ್ ಹೇಳುವುದರ ನಡುವೆ ಹಲವು ಸಾಂಪ್ರದಾಯಿಕ ನಿಯಮ ಮತ್ತು ಕಾನೂನನ್ನು ಅನುಸರಿಸಬೇಕಾಗುತ್ತದೆ. ಜತೆಗೆ ಒಮ್ಮೆ ಹೇಳಿದ ತಲಾಖ್ ಅನ್ನು ರದ್ದು ಪಡಿಸಲು ಕಾನೂನಿನಲ್ಲಿ ಅವಕಾಶವಿದೆ.

* ಹಲವು ರಾಷ್ಟ್ರಗಳಲ್ಲಿ ನ್ಯಾಯಾಲಯದ ಸಮ್ಮುಖದಲ್ಲಿ ನೀಡಿದ ತಲಾಖ್ ಅನ್ನು ಮಾತ್ರ ಪರಿಗಣಿಸಲಾಗುತ್ತದೆ.

* ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ನೇತೃತ್ಬದಲ್ಲಿ ತಲಾಖ್ ಪ್ರಕ್ರಿಯೆ ನಡೆದರೆ ಮಾತ್ರ ಅದಕ್ಕೆ ಕಾನೂನಿನ ಮಾನ್ಯತೆ ನೀಡುವ ಪದ್ಧತಿಯನ್ನು ಕೆಲವು ರಾಷ್ಟ್ರಗಳು ರೂಢಿಸಿಕೊಂಡಿವೆ.

* ನ್ಯಾಯಾಲಯದ ಸಮ್ಮುಖದಲ್ಲಿ ತ್ರಿವಳಿ ತಲಾಖ್ ನೀಡುವುದನ್ನು ಕೆಲವು ರಾಷ್ಟ್ರಗಳು ಮಾನ್ಯ ಮಾಡುತ್ತವೆ. ಆದರೆ ಅದಕ್ಕೂ ಮುನ್ನಾ ಪತಿ ತಲಾಖ್ ನೀಡಲು ಸೂಕ್ತ ಕಾರಣ ತಿಳಿಸಬೇಕು. ಆ ಕಾರಣವನ್ನು ನ್ಯಾಯಾಲಯ ಪರಿಶೀಲಿಸಿದ ನಂತರವಷ್ಟೇ ತಲಾಖ್ ಪ್ರಕ್ರಿಯೆ ಮುಂದುವರಿಯುತ್ತದೆ.

ಎಲ್ಲೆಲ್ಲಿ ನಿಷೇಧ...(ಆವರಣದಲ್ಲಿರುವುದು ಜಾರಿಯಾದ ವರ್ಷ)

ಈಜಿಪ್ಟ್ (1929)

ಸುಡಾನ್ (1935)

ಸಿರಿಯಾ (1953)

ಟ್ಯುನೀಶಿಯಾ (1956)

ಜೋರ್ಡನ್ (1957)

ಅಫ್ಗಾನಿಸ್ತಾನ (1958)

ಲಿಬಿಯಾ (1959)

ಪಾಕಿಸ್ತಾನ (1961)

ಬಾಂಗ್ಲಾದೇಶ (1961)

ಇಂಡೊನೇಷ್ಯಾ (1974)

ಕುವೈತ್ (1976)

ಯೆಮೆನ್ (1977)

ಟರ್ಕಿ

ಸಿಪ್ರಸ್

ಮೊರಾಕ್ಕೊ

ಅಲ್ಜೀರಿಯಾ

ಇರಾನ್

ಇರಾಕ್

ಬಹರೇನ್

ಕತಾರ್

ಯುಎಇ

ಶ್ರೀಲಂಕಾ

ಮಲೇಷ್ಯಾ

ಬ್ರೂನೆ

ಭಾರತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT