ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ಬಾರದ ತ್ರಿವಳಿ ತಲಾಖ್‌

ಜಂಟಿ ಸಂಸದೀಯ ಆಯ್ಕೆ ಸಮಿತಿಗೆ ಮಸೂದೆ; ವಿರೋಧ ಪಕ್ಷಗಳ ಬಿಗಿಪಟ್ಟು
Last Updated 31 ಡಿಸೆಂಬರ್ 2018, 19:28 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ತೀವ್ರ ಪ್ರತಿರೋಧದಿಂದಾಗಿ ಮಹತ್ವದ ತ್ರಿವಳಿ ತಲಾಖ್‌ ನಿಷೇಧ ತಿದ್ದುಪಡಿ ಮಸೂದೆ ಸೋಮವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿಲ್ಲ.

ಮಸೂದೆಯನ್ನು ಜಂಟಿ ಸಂಸದೀಯ ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸುವಂತೆ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಬಿಗಿಪಟ್ಟು ಹಿಡಿದ ಕಾರಣ ಚರ್ಚೆಗೆ ಅವಕಾಶ ದೊರೆಯಲಿಲ್ಲ. ವಿರೋಧ ಪಕ್ಷಗಳ ಬೇಡಿಕೆಗೆ ಸರ್ಕಾರ ಸೊಪ್ಪು ಹಾಕದ ಕಾರಣ ಗದ್ದಲ ಆರಂಭವಾಯಿತು. ರಾಜ್ಯಸಭಾ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್‌ ಪದೇ ಪದೇ ಮಾಡಿಕೊಂಡ ಮನವಿ ಫಲ ನೀಡಲಿಲ್ಲ.

ಆಗ, ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ನಾಳೆ ರಜೆ ಇರುವುದರಿಂದ ಬುಧವಾರ ಮಸೂದೆ ಮತ್ತೆ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ.

ಇದಕ್ಕೂ ಮೊದಲು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ‘ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ–2018’ ಮಂಡಿಸಿದರು.

‘ತ್ರಿವಳಿ ತಲಾಖ್‌ ನಿಷೇಧ ಮಸೂದೆ ಮಹತ್ವದ ಮಸೂದೆಯಾಗಿದೆ. ಕರಡಿನಲ್ಲಿರುವ ಲೋಪದೋಷ ಸರಿಪಡಿಸಲು ಸಂಸದೀಯ ಜಂಟಿ ಆಯ್ಕೆ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕು’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಒತ್ತಾಯಿಸಿದರು.

ವಿವಿಧ ವಿರೋಧ ಪಕ್ಷಗಳಿಗೆ ಸೇರಿದ ರಾಜ್ಯಸಭೆಯ ಅರ್ಧಕ್ಕೂ ಹೆಚ್ಚು ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು.

ಮಸೂದೆಯನ್ನು ಆಯ್ಕೆ ಸಮಿತಿಗೆ ಕಳಿಸುವಂತೆ ಸಭಾಧ್ಯಕ್ಷರಿಗೆ ಹೊಸದಾಗಿ ನೋಟಿಸ್‌ ಸಲ್ಲಿಸಿದ್ದಾಗಿ ವಿರೋಧ ಪಕ್ಷಗಳು ತಿಳಿಸಿವೆ.

ಕಾಂಗ್ರೆಸ್‌ ಅಡ್ಡಗಾಲು: ‘ಮಸೂದೆ ಜಾರಿಯಾಗದಂತೆ ಕಾಂಗ್ರೆಸ್‌ ಅಡ್ಡಗಾಲು ಹಾಕುತ್ತಿದೆ. ಮಸೂದೆ ಮೇಲೆ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್‌ ಗೋಯೆಲ್‌ ಸದನಕ್ಕೆ ಸ್ಪಷ್ಟಪಡಿಸಿದರು.

‘ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸುತ್ತಿಲ್ಲ. ಸಂಸದೀಯ ಆಯ್ಕೆ ಸಮಿತಿಗೆ ಕಳಿಸುವಂತೆ ಮಾತ್ರ ಒತ್ತಾಯಿಸುತ್ತಿವೆ. ಸರ್ಕಾರ ಏಕೆ ಹಠಮಾರಿ ಧೋರಣೆ ಅನುಸರಿಸುತ್ತಿದೆ’ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಆನಂದ್‌ ಶರ್ಮಾ ಪ್ರಶ್ನಿಸಿದರು.

ವಿರೋಧ ಪಕ್ಷಗಳ ಮೇಲುಗೈ

ಎಐಎಡಿಎಂಕೆ ಪಕ್ಷದ 13 ಸಂಸದರು ಸೇರಿದಂತೆ ರಾಜ್ಯಸಭೆಯಲ್ಲಿ ತಮಗೆ 130 ಸಂಸದರ ಬೆಂಬಲವಿದೆ ಎಂದು ವಿರೋಧ ಪಕ್ಷಗಳು ಹೇಳಿಕೊಂಡಿವೆ.

ಮಸೂದೆಯನ್ನು ಮತಕ್ಕೆ ಹಾಕಿದರೆ ಎನ್‌ಡಿಎ ಅಂಗಪಕ್ಷವಾದ ಜೆಡಿಯು ಕೂಡ ಮತದಾನದಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮಸೂದೆಯನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆ ಬಗ್ಗೆ ಬಿಜೆಡಿ ತಟಸ್ಥ ನಿಲುವು ತಾಳಿದೆ.

ಮಸೂದೆಯಲ್ಲಿ ಅಗತ್ಯ ಮಾರ್ಪಾಡು ಮಾಡುವಂತೆ ಬಿಜೆಪಿ ಮನವಿ ಮಾಡಿದೆ. ಮುಸ್ಲಿಂ ಪುರುಷರಿಗೆ ಜೈಲು ಶಿಕ್ಷೆ ನೀಡುವ ಪ್ರಸ್ತಾಪವನ್ನು ಕೈಬಿಡುವಂತೆ ಸಲಹೆ ಮಾಡಿದೆ. ಜೈಲು ಶಿಕ್ಷೆಯ ಬದಲು ದಂಡ ವಿಧಿಸುವಂತೆ ಬಿಜೆಡಿ ಮನವಿ ಮಾಡಿದೆ.

* ಮಹತ್ವದ ಕಾನೂನು ರೂಪಿಸುವ ಮೊದಲು ಕರಡು ಮಸೂದೆಗಳನ್ನು ಆಯ್ಕೆ ಸಮಿತಿ ಪರಿಶೀಲನೆಗೆ ಕಳಿಸುವ ಪರಿಪಾಠವನ್ನು ಸರ್ಕಾರ ಉಲ್ಲಂಘಿಸುತ್ತಿದೆ

-ಗುಲಾಂ ನಬಿ ಆಜಾದ್‌, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ

* ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ರೂಪಿಸಲಾಗಿರುವ ಮಸೂದೆ ಸಂಬಂಧ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ರಾಜಕೀಯ ನಾಟಕವಾಡುತ್ತಿವೆ

-ವಿಜಯ್‌ ಗೋಯೆಲ್‌, ಸಂಸದೀಯ ವ್ಯವಹಾರಗಳ ರಾಜ್ಯಖಾತೆ ಸಚಿವ

* ರಾಜ್ಯಸಭೆ ರಬ್ಬರ್‌ ಸ್ಟ್ಯಾಂಪ್‌ ಅಲ್ಲ. ಕೂಲಂಕಷವಾಗಿ ಪರಿಶೀಲಿಸದೇ ಮಸೂದೆಗೆ ಅಂಗೀಕಾರ ನೀಡುವುದಿಲ್ಲ. ಸರ್ಕಾರ ಈ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ
– ಆನಂದ್‌ ಶರ್ಮಾ, ರಾಜ್ಯಸಭೆಯ ವಿರೋಧ ಪಕ್ಷದ ಉಪ ನಾಯಕ

* ತ್ರಿವಳಿ ತಲಾಖ್‌ ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿದ ನಂತರವೂ ಏಕಕಾಲಕ್ಕೆ ತಲಾಖ್‌ ಹೇಳಿ ವಿಚ್ಛೇದನ ನೀಡುವ ಪದ್ಧತಿ ನಿಂತಿಲ್ಲ. ಇದು ಲಿಂಗ ಸಮಾನತೆಯ ಪ್ರಶ್ನೆ. ಹೀಗಾಗಿ ಮಸೂದೆ ಅಂಗೀಕಾರ ಮುಖ್ಯವಾಗಿದೆ
- ರವಿಶಂಕರ್‌ ಪ್ರಸಾದ್‌, ಕಾನೂನು ಸಚಿವ

* ಇದು ಬಿಜೆಪಿಯ ರಾಜಕೀಯ ಗಿಮಿಕ್‌. ರಾಜ್ಯಸಭೆಯಲ್ಲಿ ಬಿಜೆಪಿಗೆ ಅಗತ್ಯ ಬಲವಿಲ್ಲದ ಕಾರಣ ಮಸೂದೆಗೆ ಅಂಗೀಕಾರ ದೊರೆಯುವುದು ಕಷ್ಟಸಾಧ್ಯ
– ಡೆರೆಕ್‌ ಒಬ್ರಿಯಾನ್‌,ಟಿಎಂಸಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT