ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌: ಲಾಭದ ಲೆಕ್ಕಾಚಾರ

ಮಸೂದೆ ಅಂಗೀಕಾರ ಆಗದಿದ್ದರೆ ಹೆಚ್ಚು ಪ್ರಯೋಜನ ಎಂಬುದು ಬಿಜೆಪಿ ಲೆಕ್ಕಾಚಾರ
Last Updated 1 ಜನವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ತ್ರಿವಳಿ ತಲಾಖ್‌ ಮಸೂದೆಯನ್ನು ರಾಜ್ಯಸಭೆಯ ಆಯ್ಕೆ ಸಮಿತಿ ಪರಿಶೀಲನೆಗೆ ಕಳುಹಿಸದಂತೆ ಆಡಳಿತ ಪಕ್ಷ ಬಿಜೆಪಿ ನೋಡಿಕೊಳ್ಳಬಹುದು. ಹಾಗೆಯೇ, ಮಸೂದೆ ಈಗ ಇರುವ ಸ್ವರೂಪದಲ್ಲಿ ಅಂಗೀಕಾರ ಆಗದಂತೆ ಮಾಡುವಲ್ಲಿ ವಿರೋಧ ಪಕ್ಷಗಳು ಯಶಸ್ವಿಯಾಗಬಹುದು. ಹೀಗೆ ಮಾಡುವುದರಿಂದ ರಾಜಕೀಯವಾಗಿ ಲಾಭವಾಗಬಹುದು ಎಂಬುದು ಬಿಜೆಪಿ ಮತ್ತು ವಿರೋಧ ಪಕ್ಷಗಳ ಲೆಕ್ಕಾಚಾರ.

ಲೋಕಸಭೆಯು ಈ ಮಸೂದೆಗೆ ಕಳೆದ ವಾರ ಅನುಮೋದನೆ ನೀಡಿದೆ. ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ. ಆದರೆ, ಮಸೂದೆಯನ್ನು ರಾಜ್ಯಸಭೆಯ ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಹಟ ಹಿಡಿದ ಕಾರಣ ಮಸೂದೆಯ ಮೇಲೆ ಯಾವುದೇ ಚರ್ಚೆ ಸಾಧ್ಯವಾಗಿಲ್ಲ. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಬಲ ಹೆಚ್ಚಿರುವುದರಿಂದ ಸರ್ಕಾರದ ಕೈ ಕಟ್ಟಿ ಹಾಕಿದಂತಾಗಿದೆ.

‘ಮುಸ್ಲಿಂ ಮಹಿಳೆಯರಿಗೆ ನ್ಯಾಯದ ಖಾತರಿ’ ನೀಡುವ ಮಸೂದೆಯ ಅಂಗೀಕಾರಕ್ಕೆ ತಡೆ ಒಡ್ಡಿದರೆ ಅದರ ಪೂರ್ಣ ಹೊಣೆಯನ್ನು ವಿರೋಧ ಪಕ್ಷಗಳೇ ಹೊರಬೇಕು ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.ಈಗಿನ ಸ್ವರೂಪದಲ್ಲಿ ಈ ಮಸೂದೆಯು ನ್ಯಾಯದ ವಿಡಂಬನೆ ಎಂದು ವಿರೋಧ ಪಕ್ಷಗಳು ಪ್ರತಿಪಾದಿಸುತ್ತಿವೆ.

ಸಂಪ್ರದಾಯವಾದಿ ಮುಸ್ಲಿಮರನ್ನು ಓಲೈಸುವುದಕ್ಕಾಗಿ ಮಸೂದೆ ಅಂಗೀಕಾರ ಆಗದಂತೆ ವಿರೋಧ ಪಕ್ಷಗಳು ನೋಡಿಕೊಂಡಿವೆ ಎಂಬುದನ್ನು ಜನರಿಗೆ ಮನದಟ್ಟು ಮಾಡುವುದಾಗಿ ಬಿಜೆಪಿ ಹೇಳುತ್ತಿದೆ. ಈ ರೀತಿಯ ಪ್ರತಿಪಾದನೆಯಿಂದ ಬಹುಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯಬಹುದು ಎಂಬುದು ಆಡಳಿತ ಪಕ್ಷದ ಲೆಕ್ಕಾಚಾರ.

‘ಇದು ಸಂಪೂರ್ಣವಾಗಿ ನಮಗೆ ಅನುಕೂಲಕರ ಸ್ಥಿತಿ. ಮಸೂದೆ ಅಂಗೀಕಾರ ಆಗದಿದ್ದರೆ ನಮ್ಮ ಮತಬ್ಯಾಂಕ್‌ ಗಟ್ಟಿಗೊಳ್ಳುತ್ತದೆ. ಮುಸ್ಲಿಂ ಮಹಿಳೆಯರ ಮತಗಳೂ ಬಿಜೆಪಿಗೆ ಬೀಳಬಹುದು’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಈ ವಾದದಿಂದ ಬಿಜೆಪಿಗೆ ರಾಜಕೀಯ ಲಾಭ ದೊರೆಯದು ಎಂಬುದು ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ವಾದ. ‘ವಿಚ್ಛೇದನ ಎಂಬುದು ಸಿವಿಲ್‌ ವಿಚಾರ. ಹಾಗಾಗಿ ಈ ಮಸೂದೆಯಲ್ಲಿ ಇರುವ ಕ್ರಿಮಿನಲ್‌ ದಾವೆ ಹೂಡುವ ಅವಕಾಶಗಳ ಬಗ್ಗೆ ಮಾತ್ರ ನಮ್ಮ ವಿರೋಧವಿದೆ. ರಾಜಕೀಯ ಕಾರಣಗಳಿಗಾಗಿ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ. ಬಿಜೆಪಿಯ ರಾಜಕೀಯ ತಂತ್ರವನ್ನು ನಾವು ಬಯಲು ಮಾಡುತ್ತೇವೆ’ ಎಂದು ವಿರೋಧ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಮಸೂದೆಯ ಈಗಿನ ಸ್ವರೂಪವನ್ನು 17 ಪಕ್ಷಗಳು ವಿರೋಧಿಸುತ್ತಿವೆ. ಜೆಡಿಯು, ಬಿಜೆಡಿ ಮತ್ತು ಟಿಆರ್‌ಎಸ್‌ ಅನ್ನೂ ಸೇರಿಸಿದರೆ ಈ ಸಂಖ್ಯೆ 20ಕ್ಕೆ ಏರುತ್ತದೆ. ಬಿಜೆಪಿಯ ನಿಲುವಿಗೆ ಶಿವಸೇನಾ ಮತ್ತು ಅಕಾಲಿ ದಳ ಮಾತ್ರ ಬೆಂಬಲ ನೀಡುತ್ತವೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ.

ಈ ಮಸೂದೆಯ ವಿಚಾರದಲ್ಲಿ ಆಡಳಿತರೂಢ ಮೈತ್ರಿಕೂಟ ಎನ್‌ಡಿಎಯಲ್ಲಿಯೇ ಒಮ್ಮತ ಇಲ್ಲ. ಆರು ಸಂಸದರನ್ನು ಹೊಂದಿರುವ ಜೆಡಿಯು ಎನ್‌ಡಿಎಯ ಭಾಗವಾಗಿದ್ದರೂ ಮಸೂದೆಯನ್ನು ವಿರೋಧಿಸುತ್ತಿದೆ. ಬಿಹಾರದಲ್ಲಿ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಯು, ಮಸೂದೆಯನ್ನು ಮತಕ್ಕೆ ಹಾಕಿದರೆ ಮತದಾನದಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ.

ಎನ್‌ಡಿಎಯ ಭಾಗವಾಗಿಲ್ಲದಿದ್ದರೂ ಎಐಎಡಿಎಂಕೆ ಬಿಜೆಪಿಯನ್ನು ಬೆಂಬಲಿಸುತ್ತಿದೆ. ಆದರೆ, ತ್ರಿವಳಿ ತಲಾಖ್‌ ಮಸೂದೆ ವಿಚಾರದಲ್ಲಿ ಬೆಂಬಲ ಇಲ್ಲ ಎಂದು ಈ ಪಕ್ಷ ಸ್ಪಷ್ಟಪಡಿಸಿದೆ. ಮಸೂದೆಯನ್ನು ಆಯ್ಕೆ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು ಎಂಬ ವಿರೋಧ ಪಕ್ಷಗಳ ಸಹಮತದ ನಿರ್ಣಯಕ್ಕೆ ಎಐಎಡಿಎಂಕೆ ಸದಸ್ಯರು ಕೂಡ ಸಹಿ ಮಾಡಿದ್ದಾರೆ. ಆದರೆ, ಮಸೂದೆಯನ್ನು ಮತಕ್ಕೆ ಹಾಕಿದರೆ ಆ ಪಕ್ಷ ವಿರೋಧ ಪಕ್ಷಗಳ ಜತೆಗೆ ಮತ ಹಾಕುವ ಸಾಧ್ಯತೆ ಕಡಿಮೆ. ಬದಲಿಗೆ ಮತದಾನಕ್ಕೆ ಗೈರು ಹಾಜರಾಗಬಹುದು.

ರಾಜ್ಯಸಭೆಯಲ್ಲಿ ಬಿಜೆಪಿ ದುರ್ಬಲ

ರಾಜ್ಯಸಭೆಯಲ್ಲಿ ಒಟ್ಟು 224 ಸದಸ್ಯರಿದ್ದಾರೆ. ಮಸೂದೆಯನ್ನು 117 ಸದಸ್ಯರು ವಿರೋಧಿಸುತ್ತಿದ್ದಾರೆ. ಎಐಎಡಿಎಂಕೆ ಕೂಡ ಮತ ಹಾಕಲು ನಿರ್ಧರಿಸಿದರೆ ಈ ಸಂಖ್ಯೆ 130ಕ್ಕೆ ಏರಲಿದೆ. ಬಿಜೆಪಿ ಬೆಂಬಲಕ್ಕೆ 100 ಸದಸ್ಯರು ನಿಲ್ಲುವುದೂ ಕಷ್ಟ. ಆರು ಸದಸ್ಯರನ್ನು ಹೊಂದಿರುವ ಟಿಆರ್‌ಎಸ್‌ ಮಸೂದೆಯ ಪರವಾಗಿ ನಿಲ್ಲುವ ಸಾಧ್ಯತೆ ಇಲ್ಲ ಎಂಬುದು ವಿರೋಧ ಪಕ್ಷಗಳ ಲೆಕ್ಕಾಚಾರ.

ಬಿಜೆಡಿ ಮಸೂದೆಯನ್ನು ಬೆಂಬಲಿಸುತ್ತಿದೆ. ಆದರೆ, ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು ಆಗ್ರಹಿಸುತ್ತಿದೆ. ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು ಎಂಬ ಬಗ್ಗೆ ಬಿಜೆಡಿ ಏನನ್ನೂ ಹೇಳಿಲ್ಲ. ತ್ರಿವಳಿ ತಲಾಖ್ ನೀಡುವವರನ್ನು ಜೈಲಿಗೆ ತಳ್ಳುವ ಕಾನೂನು ಬೇಡ, ಅದರ ಬದಲಿಗೆ ದಂಡ ವಿಧಿಸಬೇಕು ಎಂಬುದು ಬಿಜೆಡಿಯ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT