ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌ಗೆ ರಾಜ್ಯಸಭೆಯಲ್ಲಿ ಅಗ್ನಿಪರೀಕ್ಷೆ

ನವದೆಹಲಿ: ಮಸೂದೆ ಚರ್ಚೆಗೆ ಮೂರು ಗಂಟೆ ಸಮಯಾವಕಾಶ
Last Updated 30 ಜೂನ್ 2019, 19:40 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಕಲಾಪದ ಮುಂದಿನ ವಾರದ ಕಾರ್ಯಸೂಚಿಯಲ್ಲಿ ತ್ರಿವಳಿ ತಲಾಖ್‌ ಮಸೂದೆ ಸ್ಥಾನ ಪಡೆದಿದೆ. ಆದರೆ, ಇದಕ್ಕೆ ಅಂಗೀಕಾರ ಪಡೆಯಲು ಸರ್ಕಾರವು ರಾಜ್ಯಸಭೆಯಲ್ಲಿ ನಿಜವಾದ ಪರೀಕ್ಷೆ ಎದುರಿಸಲಿದೆ. ಆಡಳಿತಾರೂಢ ಎನ್‌ಡಿಎ ಭಾಗವಾಗಿರುವ ಎಐಎಡಿಎಂಕೆಯಿಂದಲೇ ಮಸೂದೆಗೆ ವಿರೋಧವಿದೆ.

ಕಳೆದ 18 ತಿಂಗಳಲ್ಲಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಎರಡು ಬಾರಿ ಅಂದರೆ 2017 ಮತ್ತು 2018ರಲ್ಲಿ ಮಸೂದೆಗೆ ಅಂಗೀಕಾರ ಪಡೆದುಕೊಂಡಿತ್ತು. ಆದರೆ, ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದು ಸಾಧ್ಯವಾಗಿಲ್ಲ.

ತ್ರಿವಳಿ ತಲಾಖ್‌ ಅನ್ನು ಅಪರಾಧೀಕರಣಗೊಳಿಸುವ ಅಂಶವನ್ನು ಮಸೂದೆಯಿಂದ ಕೈಬಿಡಬೇಕು ಎಂಬುದು ಪ್ರತಿಪಕ್ಷಗಳ ಒತ್ತಾಯ. ರಾಜ್ಯಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಎಐಎಡಿಎಂಕೆ ಮತ್ತು ಆರು ಸದಸ್ಯರಿರುವ ಜೆಡಿಯು ಕೂಡಾ ಇದೇ ನಿಲುವು ಹೊಂದಿವೆ.

ಆದರೆ, 17ನೇ ಲೋಕಸಭೆಯಲ್ಲಿ ಮೊದಲ ಮಸೂದೆಯಾಗಿ ತ್ರಿವಳಿ ತಲಾಖ್‌ ಮಸೂದೆಯನ್ನೇ ಮಂಡಿಸಿರುವ ಬಿಜೆಪಿ ಈ ವಿಷಯದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಮಸೂದೆಯ ಚರ್ಚೆಗೆ ಮೂರು ಗಂಟೆ ಸಮಯವನ್ನು ಕಲಾಪ ಸಲಹಾ ಸಮಿತಿಯು ನಿಗದಿ ಮಾಡಿದೆ.

ಲೋಕಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದೆ. ಹಾಗಾಗಿ ಅಲ್ಲಿ ಮಸೂದೆ ಅಂಗೀಕಾರ ಸಮಸ್ಯೆಯೇ ಅಲ್ಲ, ಆದರೆ, ಇದೇ ಪರಿಸ್ಥಿತಿ ರಾಜ್ಯಸಭೆಯಲ್ಲಿ ಇಲ್ಲ.

ಪ್ರಸ್ತುತ ರಾಜ್ಯಸಭೆ ಸದಸ್ಯ ಬಲ 235. ಹತ್ತು ಸ್ಥಾನಗಳು ಖಾಲಿ ಇವೆ. ರಾಜ್ಯಸಭೆಯಲ್ಲಿ ವಿಪಕ್ಷಗಳ ಬಲ 107 ಆಗಿದ್ದರೆ, ಬಿಜೆಪಿ ಸದಸ್ಯ ಬಲ 92.

ಒಟ್ಟು 32 ಸದಸ್ಯರಿರುವ ಎಐಎಡಿಎಂಕೆ, ಜೆಡಿಯು, ಬಿಜೆಡಿ, ಟಿಆರ್‌ಎಸ್‌, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳು ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿವೆ. ರಾಜ್ಯಸಭೆಯಲ್ಲಿ ಮತಕ್ಕೆ ಹಾಕಿದಾಗ, ಈ ಸದಸ್ಯರು ವಿರುದ್ಧವಾಗಿ ಮತ ಚಲಾಯಿಸುವರೋ, ಮತದಾನದಿಂದ ದೂರ ಉಳಿಯುವರೋ ಎಂಬುದು ಖಾತರಿಯಾಗಿಲ್ಲ.

ಎಐಎಡಿಎಂಕೆ ಮತ್ತು ಜೆಡಿಯು ಈ ಮೊದಲು ಮಸೂದೆಯನ್ನು ವಿರೋಧಿಸಿದ್ದರೂ, ಬಳಿಕ ಮತ್ತೊಂದು ಸುತ್ತಿನ ಮಾತುಕತೆಗೆ ಒಪ್ಪಿದ್ದವು. ಆದರೆ ಮಸೂದೆಯನ್ನು ಬೆಂಬಲಿಸುವುದಿಲ್ಲ ಎಂದು ಜೆಡಿಯು ಮತ್ತೆ ಹೇಳಿದೆ.

ಐವರು ಸದಸ್ಯರಿರುವ ಬಿಜೆಡಿ, ಆರು ಸದಸ್ಯರಿರುವ ಟಿಆರ್‌ಎಸ್‌ ತಕರಾರು ಎತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT