‘ತ್ರಿವಳಿ ತಲಾಖ್‌’ ಶುಕ್ರವಾರ ರಾಜ್ಯಸಭೆಗೆ: ಕುತೂಹಲ ಮೂಡಿಸಿದ ಪ್ರತಿಪಕ್ಷಗಳ ನಡೆ

7

‘ತ್ರಿವಳಿ ತಲಾಖ್‌’ ಶುಕ್ರವಾರ ರಾಜ್ಯಸಭೆಗೆ: ಕುತೂಹಲ ಮೂಡಿಸಿದ ಪ್ರತಿಪಕ್ಷಗಳ ನಡೆ

Published:
Updated:

ನವದೆಹಲಿ: ತ್ರಿವಳಿ ತಲಾಖ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸರ್ಕಾರ ಗುರುವಾರ ಒಪ್ಪಿಗೆ ನೀಡಿದೆ. ಇದರ ಬೆನ್ನಲ್ಲೆ ಇಂದು(ಶುಕ್ರವಾರ) ಮಸೂದೆಗೆ ಅಂಗೀಕಾರ ಪಡೆಯಲು ರಾಜ್ಯಸಭೆಗೆ ಮತ್ತೊಮ್ಮೆ ಬರಲಿದೆ.

ರಾಜ್ಯಸಭೆಯಲ್ಲಿ ಈ ಬಾರಿ ವಿರೋಧ ಪಕ್ಷಗಳು ಮತ್ತೆ ಆಕ್ಷೇಪ ಎತ್ತಿ, ವಿರೋಧಿಸಿದರೆ ಕಾನೂನನ್ನು ಜಾರಿಗೆ ತರಲು ಸುಗ್ರೀವಾಜ್ಞೆ ಅಥವಾ ತುರ್ತುಜಾರಿ ಆದೇಶವನ್ನು ನೀಡಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಪತ್ನಿಯರಿಗೆ ತ್ರಿವಳಿ ತಲಾಖ್‌ ನೀಡುವ ವ್ಯಕ್ತಿ ಜಾಮೀನು ಪಡೆಯಬಹುದಾದ ಅವಕಾಶವಿರುವ ಅಂಶವುಳ್ಳ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ. ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಗಬೇಕಿದೆ. 

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿತ್ತು. ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆಗೆ (ತ್ರಿವಳಿ ತಲಾಖ್‌ ನಿಷೇಧ ಮಸೂದೆ) ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಆತಂಕ ಮತ್ತು ವ್ಯಾಪಕ ವಿರೋಧ ವ್ಯಕ್ತಪಡಿಸಿ, ತಿದ್ದುಪಡಿಗೆ ಒತ್ತಾಯಿಸಿದ್ದವು. 

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಯಿತು. ತ್ರಿವಳಿ ತಲಾಖ್‌ ನೀಡಿ ಅಪರಾಧಿ ಸ್ಥಾನದಲ್ಲಿದ್ದ ವ್ಯಕ್ತಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಜಾಮೀನು ಪಡೆಯಲು ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಂಪುಟ ಸಭೆ ನಿರ್ಧಾರದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ‘ಇಂತಹ ಗಂಭೀರ ಅಪರಾಧ ನಡೆದಾಗ ಈ ಮೊದಲು ನೆರೆಹೊರೆಯವರು ಸಹ ದೂರು ದಾಖಲಿಸಬಹುದಾಗಿತ್ತು. ಆ ಭಯವನ್ನು ನಿವಾರಿಸಲಾಗಿದೆ. ಈಗ ಸಂತ್ರಸ್ತೆ ಮತ್ತು ಅವರ ರಕ್ತ ಸಂಬಂಧಿಕರು ಅಥವಾ ಸಂಬಂಧಿಕರು ಮಾತ್ರ ದೂರು ನೀಡಬೇಕು’ ಎಂದು ತಿಳಿಸಿದರು.

ಇನ್ನು ತ್ರಿವಳಿ ತಲಾಖ್ ಅಪರಾಧ ಜಾಮೀನು ರಹಿತವಾಗಿದ್ದರೂ ಮ್ಯಾಜಿಸ್ಟ್ರೇಟ್ ಕೋರ್ಟ್ ಸಂತ್ರಸ್ತ ಮಹಿಳೆಯ ಅಹವಾಲು ಆಲಿಸಿದ ನಂತರ ಜಾಮೀನು ನೀಡಬಹುದಾಗಿದೆ. ಅಲ್ಲದೆ, ಪತಿ ಮತ್ತು ಪತ್ನಿ ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು, ಪ್ರಕರಣ ವಾಪಸ್‌ ಪಡೆಯಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಈಗಾಗಲೇ ಕಾನೂನಿನಲ್ಲಿ ಅಡಕವಾಗಿರುವ ತ್ರಿವಳಿ ತಲಾಖ್‌ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿ ಮುಂದುವರಿಯಲಿದೆ. ಆರೋಪಿಯನ್ನು ನೋಟಿಸ್‌ ನೀಡದೆ ಪೊಲೀಸರು ಬಂಧಿಸಬಹುದಾಗಿದೆ.

ಮಸೂದೆ ರಾಜ್ಯಸಭೆಗೆ ಬಂದಾಗ ಎನ್‌ಡಿಎಗೆ ಸಾಕಷ್ಟು ಸಂಖ್ಯಾ ಬಲ ಇಲ್ಲದ ಕಾರಣ ಹಾಗೂ ವಿಪಕ್ಷಗಳು ಆಕ್ಷೇಪ ವ್ಯಕ್ತಪಿಡಿಸಿ ತಿದ್ದುಪಡಿ ಮಾಡುವಂತೆ ಒತ್ತಾಯಿಸಿದ್ದರಿಂದ ಅಂಗೀಕಾರ ಪಡೆಯದೆ ಹಾಗೆಯೇ ಉಳಿಯಿತು. 

ಗುರುವಾರ ರಾಜ್ಯಸಭೆಯಲ್ಲಿ ಉಪ ಸಭಾಪತಿ ಸ್ಥಾನವನ್ನು 125 ಮತಗಳನ್ನು ಪಡೆಯುವ ಮೂಲಕ ಎನ್‌ಡಿಎ ತನ್ನ ಅಭ್ಯರ್ಥಿ ಹರಿವಂಶ್‌ ನಾರಾಯಣ ಸಿಂಗ್‌ ಅವರನ್ನು ಗೆಲ್ಲಿಸಿತು. 

ರಾಜ್ಯಸಭೆಯಲ್ಲಿ ಮಸೂದೆಗೆ ಪೂರ್ಣ ಬೆಂಬಲ ಸಿಗಲಿದೆ ಎಂಬ ವಿಶ್ವಾಸದಲ್ಲಿರುವ ಬಿಜೆಪಿ, ರಾಜ್ಯಸಭೆಯ ತನ್ನೆಲ್ಲಾ ಸದಸ್ಯರಿಗೆ ಸದನದಲ್ಲಿ ಹಾಜರಿರುವಂತೆ ಆದೇಶಿಸಿದೆ.  

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !