ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾಖ್ ನಿಷೇಧ ಕಾಯ್ದೆ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

Last Updated 23 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ನವದೆಹಲಿ:ತ್ರಿವಳಿ ತಲಾಖ್‌ ನೀಡುವುದನ್ನು ಅಪರಾಧೀಕರಣಗೊಳಿಸುವ 2019ರ ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆಯ ಸಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಒಪ್ಪಿಕೊಂಡಿದೆ.

ಈ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎನ್‌.ವಿ.ರಮಣ ಮತ್ತು ಅಜಯ್ ರಸ್ತೋಗಿ ಅವರಿದ್ದ ಪೀಠವು ಮಾನ್ಯ ಮಾಡಿದೆ.

‘ತ್ರಿವಳಿ ತಲಾಖ್‌ ಅನ್ನು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ನಿಷೇಧಿಸಿತ್ತು. ಈಗಾಗಲೇ ನಿಷೇಧಿಸಿರುವ ವಿಷಯದ ಮೇಲೆ ಹೊಸ ಕಾನೂನನ್ನು ಹೇಗೆ ರಚಿಸಲಾಗುತ್ತದೆ? ತ್ರಿವಳಿ ತಲಾಖ್‌ ಎಂಬುದೇ ಇಲ್ಲವೆಂದ ಮೇಲೆ, ಅದನ್ನು ಅಪರಾಧೀಕರಣಗೊಳಿಸುವುದು ಹೇಗೆ? ಸರ್ಕಾರದ ಈ ಕ್ರಮಅಸಂವಿಧಾನಿಕ’ ಎಂದು ಅರ್ಜಿದಾರರ ಪರ ವಕೀಲ ಸಲ್ಮಾನ್ ಖುರ್ಶಿದ್ ವಾದ ಮಂಡಿಸಿದರು.

‘ತ್ರಿವಳಿ ತಲಾಖ್‌ನಂತಹ ಧಾರ್ಮಿಕ ಪದ್ಧತಿಯನ್ನು ನಿಷೇಧಿಸಿರಬಹುದು. ಆದರೆ ವರದಕ್ಷಿಣೆಯನ್ನು ನಿಷೇಧಿಸಲಾಗಿದ್ದರೂ, ಅದು ಚಾಲ್ತಿಯಲ್ಲಿದೆ. ತ್ರಿವಳಿ ತಲಾಖ್‌ ವಿಚಾರದಲ್ಲೂ ಹೀಗೇ ಆದರೆ ಏನು ಮಾಡುವುದು’ ಎಂದು ಪೀಠವು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.

‘ತ್ರಿವಳಿ ತಲಾಖ್‌ ಅನ್ನು ಅಪರಾಧೀಕರಣಗೊಳಿಸುವ ಕಾಯ್ದೆಯ ಅಂಶಗಳನ್ನು ಬೇರೆ–ಬೇರೆ ಆಯಾಮಗಳಲ್ಲಿ ಪರಿಶೀಲಿಸುವ ಅಗತ್ಯವಿದೆ. ತ್ರಿವಳಿ ತಲಾಖ್ ನೀಡಿದ ವ್ಯಕ್ತಿಗೆ ಮೂರು ವರ್ಷ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಸಂತ್ರಸ್ತ ಮಹಿಳೆಯ ಹೇಳಿಕೆ ಪಡೆದ ನಂತರವಷ್ಟೇ ಆಕೆಯ ಪತಿಗೆ ಜಾಮೀನು ನೀಡಲು ಅವಕಾಶ ದೊರೆಯುತ್ತದೆ. ಈ ಎಲ್ಲಾ ಅಂಶಗಳು ಸಾಂವಿಧಾನಿಕವೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ. ತ್ರಿವಳಿ ತಲಾಖ್‌ ಪದ್ಧತಿಯು ಮುಸ್ಲಿಂ ಮಹಿಳೆಯ ಹಕ್ಕುಗಳನ್ನು ನಿರಾಕರಿಸುತ್ತದೆಯೇ ಎಂಬುದನ್ನೂ ಪರಿಶೀಲಿಸಬೇಕು’ ಎಂದು ಸಲ್ಮಾನ್ ಖುರ್ಶಿದ್ ಹೇಳಿದರು.

ಅವರ ವಾದವನ್ನು ಮನ್ನಿಸಿದ ಪೀಠವು, ಕಾಯ್ದೆಯನ್ನು ಪರಿಶೀಲಿಸಲು ಒಪ್ಪಿಕೊಂಡಿತು.

* ವರದಕ್ಷಿಣೆ ಮತ್ತು ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ, ಅವು ಚಾಲ್ತಿಯಲ್ಲಿವೆ. ತ್ರಿವಳಿ ತಲಾಖ್‌ ವಿಚಾರದಲ್ಲೂ ಹೀಗೇ ಆದರೆ ಏನು ಮಾಡುವುದು

-ಅರ್ಜಿದಾರರಿಗೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT