ಗುರುವಾರ , ಆಗಸ್ಟ್ 22, 2019
27 °C
ಆಜಂಖಾನ್‌ಗೆ ಇನ್ನಷ್ಟು ಸಂಕಷ್ಟ

ಭೂ ಅಕ್ರಮದಲ್ಲಿ 27 ಎಫ್‌ಐಆರ್ ದಾಖಲು

Published:
Updated:
Prajavani

ರಾಂಪುರ: ಸಮಾಜವಾದಿ ಪಕ್ಷದ ಮುಖಂಡ ಹಾಗೂ ಸಂಸದ ಆಜಂ ಖಾನ್ ಅವರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ರಾಂಪುರದಲ್ಲಿನ ಅವರ ವಿಶ್ವವಿದ್ಯಾಲಯಕ್ಕೆ ರೈತರ ಭೂಮಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂಬ ಆರೋಪದಲ್ಲಿ ಖಾನ್‌ ವಿರುದ್ಧ ಕಳೆದ ಒಂದು ತಿಂಗಳಲ್ಲಿ 27 ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸಂಸತ್ ಕಲಾಪದ ವೇಳೆ ಸಂಸದೆ ರಮಾದೇವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆಜಂ ಖಾನ್‌ ಅವರು ಭಾರಿ ಟೀಕೆಗೆ ಒಳಗಾಗಿದ್ದರು. ಕೊನೆಗೆ ಅವರು ಕ್ಷಮೆಯಾಚಿಸಿದ್ದರು.

ಅಖಿಲೇಶ್‌ ಯಾದವ್‌ ಅವರು  ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಆಜಂ ಅವರು ಸಚಿವರಾಗಿದ್ದರು. ಮೊಹಮ್ಮದ್‌ ಅಲಿ ಜೌಹಾರ್ ವಿಶ್ವವಿದ್ಯಾಲಯವನ್ನು ಇವರು 2006 ರಲ್ಲಿ ಆರಂಭಿಸಿದ್ದು, ಅವರು ಕುಲಾಧಿಪತಿಯೂ ಆಗಿದ್ದಾರೆ. 

‘ಜುಲೈ 11 ರಿಂದ 24ಕ್ಕೂ ಹೆಚ್ಚು ರೈತರು ಪೊಲೀಸರಿಗೆ ದೂರು ನೀಡಿದ್ದಾರೆ. ಖಾನ್ ಅವರು ತಮ್ಮ ವಿಶ್ವವಿದ್ಯಾಲಯಕ್ಕೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ 27 ಎಫ್‌ಐಆರ್‌ ದಾಖಲಿಸಿದ್ದೇವೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ’ ಎಂದು ರಾಂಪುರ ಎಸ್ಪಿ ಅಜಯ್‌ ಪಾಲ್‌ ಶರ್ಮಾ ತಿಳಿಸಿದ್ದಾರೆ. ಆಜಂ ಖಾನ್ ಅವರ ವಿಶ್ವವಿದ್ಯಾಲಯದಲ್ಲಿ 3000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, 121 ಹೆಕ್ಟೇರ್‌ ವಿಸ್ತೀರ್ಣದಲ್ಲಿದೆ. 

Post Comments (+)