ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಗೆದ್ದು ಎಲ್ಲೆಡೆ ಸೋತ ಸಿದ್ದರಾಮಯ್ಯ

Last Updated 15 ಮೇ 2018, 17:03 IST
ಅಕ್ಷರ ಗಾತ್ರ

ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದವರು ಮೂವರು. ಇವರಲ್ಲಿ ಎರಡೂ ಕಡೆಯೂ ಗೆದ್ದು ಗುರಿ ಸಾಧಿಸಿದ್ದು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಮಾತ್ರ. ಒಂದೆಡೆ ಸೋತರೂ ಗುರಿ ಸಾಧಿಸುವಲ್ಲಿ ಯಶಸ್ವಿಯಾದವರು ಬಿಜೆಪಿಯ ಬಿ.ಶ್ರೀರಾಮುಲು. ಒಂದೆಡೆ ಗೆದ್ದೂ ವಿಫಲರಾದದ್ದು ಸಿದ್ದರಾಮಯ್ಯ.

ಮೊಳಕಾಲ್ಮುರಿನಲ್ಲಿ ಟಿಕೆಟ್ ಪಡೆದಿದ್ದ ಶ್ರೀರಾಮುಲು ಬಾದಾಮಿಗೆ ಬಂದು ಸ್ಪರ್ಧಿಸುವುದಕ್ಕೆ ಒಂದು ಕಾರಣವಿತ್ತು. ಸಿದ್ದರಾಮಯ್ಯನವರಿಗೆ ಸುಲಭದ ಗೆಲುವು ದೊರೆಯದಂತೆ ಮಾಡುವುದು. ಅದರಲ್ಲಿ ಅವರು ಯಶಸ್ವಿಯಾದರು. ಇದೇ ಬಗೆಯ ಗುರಿ ಕುಮಾರಸ್ವಾಮಿಯವರಿಗೂ ಇತ್ತು. ಯಾವ ಪಕ್ಷದಿಂದ ಅಥವಾ ಪಕ್ಷೇತರನಾಗಿ ಸ್ಪರ್ಧಿಸಿದರೂ ಗೆಲುವು ತನ್ನದೇ ಎಂಬ ಸಿ.ಪಿ. ಯೋಗೇಶ್ವರ್ ಅವರ ಅಹಂಕಾರವನ್ನು ಉಡುಗಿಸುವುದು. ಆ ಮೂಲಕ ಜೆಡಿಎಸ್‌ಗೆ ಮತ್ತೊಂದು ಸ್ಥಾನವನ್ನು ಖಾತರಿಪಡಿಸುವುದು. ಕುಮಾರಸ್ವಾಮಿ ಇದರಲ್ಲಿ ಯಶಸ್ವಿಯಾದರು ಅಷ್ಟೇ ಅಲ್ಲ ರಾಮನಗರದಲ್ಲೂ ಗೆಲ್ಲುವ ಮೂಲಕ ಜೆಡಿಎಸ್‌ನ ಕೋಟೆಯನ್ನು ಭದ್ರಪಡಿಸಿದರು.

ಸಿದ್ದರಾಮಯ್ಯನವರ ಬಾದಾಮಿ ಸ್ಪರ್ಧೆ ಹೀಗೆ ಯೋಜಿತವಾಗಿರಲಿಲ್ಲ. ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ತಾನು ಸುಲಭವಾಗಿ ಚಾಮುಂಡೇಶ್ವರಿಯಲ್ಲಿ ಗೆಲ್ಲಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತೆಂಬಂತೆ ಕಾಣಿಸುತ್ತದೆ. ಕೊನೆಯ ಕ್ಷಣದಲ್ಲಿ ಗೆಲುವು ಸುಲಭವಲ್ಲ ಎಂದು ಅರಿತು ಬಾದಾಮಿಯಲ್ಲೂ ಸ್ಪರ್ಧಿಸಿದರು. ಮಗನಿಗೆ ಟಿಕೆಟ್ ಪಡೆದದ್ದೇ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಿತ್ತು. ಇದು ಸಾಲದು ಎಂಬಂತೆ ಅವರು ಎರಡೆರಡು ಕಡೆ ಸ್ಪರ್ಧಿಸಿದ್ದು ಸಿದ್ದರಾಮಯ್ಯ ಕೂಡಾ ಭಿನ್ನರಲ್ಲ ಎಂದು ಜನರು ಆಡಿಕೊಳ್ಳುವಂತಾಯಿತು. ‘ಟು ಪ್ಲಸ್ ಒನ್’ ಬಗೆಯ ಕಟಕಿಗಳಿಗೂ ಅವರು ಗುರಿಯಾಗಬೇಕಾಯಿತು. ಇದಿಷ್ಟೇ ಅಲ್ಲದೆ ಪಕ್ಷಕ್ಕಾಗಿ ಇತರ ಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ನಡೆಸಲೂ ಸಾಧ್ಯವಾಗದಂಥ ಸ್ಥಿತಿ ಅವರಿಗೆ ಎದುರಾಯಿತು.

‘ಸಾಧನಾ ಸಂಭ್ರಮ’ದ ಅವಧಿಯಲ್ಲಿ ತಮ್ಮ ಕಾರ್ಯಕ್ರಮಗಳಿಗೆ ದೊರೆತ ಪ್ರತಿಕ್ರಿಯೆ ಸಿದ್ದರಾಮಯ್ಯನವರ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಸಿದ್ದರಾಮಯ್ಯ ವಿರೋಧಿಗಳತ್ತ ಎಸೆಯುವ ವಾಗ್ಬಾಣಗಳಲ್ಲಿಯೂ ಅದು ಕಾಣುತ್ತಿತ್ತು. ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿಯೂ ಸಿದ್ದರಾಮಯ್ಯನವರ ಮಾತುಗಳನ್ನೇ ಜನರು ಹೆಚ್ಚಾಗಿ ಅಪೇಕ್ಷಿಸುತ್ತಿದ್ದರು. ಒಂದರ್ಥದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ನ ‘ತಾರಾ ಪ್ರಚಾರಕ’ನಾಗಿ ಬದಲಾಗಿದ್ದರು. ಕರ್ನಾಟಕದ ವಿಧಾನಸಭಾ ಚುನಾವಣೆ ಎಂಬುದು ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ ನಡುವಣ ಸ್ಪರ್ಧೆ ಎಂದು ರಾಷ್ಟ್ರೀಯ ಮಾಧ್ಯಮಗಳೂ ಹೇಳುವಂತಾಯಿತು.

ಒಂದು ವೇಳೆ ಇದರ ಸಂಪೂರ್ಣ ಪ್ರಯೋಜನವನ್ನು ಅವರು ಪಡೆದಿದ್ದರೆ ಕಾಂಗ್ರೆಸ್ ಪಡೆದ ಸೀಟುಗಳ ಸಂಖ್ಯೆಯಲ್ಲಿಯೂ ವ್ಯತ್ಯಾಸವಾಗುತ್ತಿತ್ತು. ಆದರೆ ಅವರು ತಮ್ಮ ಮಗನಿಗೊಂದು ‘ರಾಜಕೀಯ ಭವಿಷ್ಯ’ವನ್ನು ನಿರ್ಮಿಸಲು ಹೊರಟರು. ಇದು ಅವರ ಮತ್ತು ಕಾಂಗ್ರೆಸ್‌ನ ಭವಿಷ್ಯಕ್ಕೆ ಮುಳುವಾಗಿ ಪರಿಣಮಿಸಿತು.

ವರುಣಾ ಕ್ಷೇತ್ರವನ್ನು ಸಿದ್ದರಾಮಯ್ಯ ಅವರು ಮಗನಿಗೆ ಬಿಟ್ಟುಕೊಡುತ್ತಾರೆಂಬುದು ಖಚಿತವಾದ ತಕ್ಷಣವೇ ಜೆಡಿಎಸ್ ತನ್ನ ರಣತಂತ್ರ ರೂಪಿಸಿತು. ಸಿದ್ದರಾಮಯ್ಯ ಜೆಡಿಎಸ್ ತೊರೆದ ದಿನದಿಂದಲೂ ಅವರಿಗೆ ಅಂಟಿಕೊಂಡಿರುವ ‘ಒಕ್ಕಲಿಗ ವಿರೋಧಿ’ ಇಮೇಜ್ ಅನ್ನು ಬಳಸಿಕೊಂಡು ಜೆಡಿಎಸ್ ತನ್ನ ಸಿದ್ದರಾಮಯ್ಯ ವಿರೋಧಿ ಕಥನವನ್ನು ಕಟ್ಟಿತು. ಪ್ರಧಾನಿ ದೇವೇಗೌಡರ ಚಿತ್ರವನ್ನು ಕಚೇರಿಯಿಂದ ತೆಗೆಸಿದರು ಎಂಬುದರಿಂದ ಆರಂಭಿಸಿ ಸಿದ್ದರಾಮಯ್ಯ ಒಕ್ಕಲಿಗರ ವಿರೋಧಿ ಎಂದು ಬಿಂಬಿಸಲು ಸಾಧ್ಯವಿರುವ ಎಲ್ಲವನ್ನೂ ಜೆಡಿಎಸ್ ಮಾಡಿತು. ಇದನ್ನು ಬಿಜೆಪಿ ಕೂಡಾ ಬಹಳ ಪರಿಣಾಮಕಾರಿಯಾಗಿಯೇ ಬಳಸಿಕೊಂಡಿತು. ಸ್ವತಃ ನರೇಂದ್ರ ಮೋದಿಯವರೇ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಹೇಗೆ ದೇವೇಗೌಡರಿಗೆ ಅವಮಾನಿಸಿದೆ ಎಂಬುದನ್ನು ಪ್ರಸ್ತಾಪಿಸಿದರು.

ಚಾಮುಂಡೇಶ್ವರಿ ತನ್ನ ಕೈ ಹಿಡಿಯುವುದಿಲ್ಲ ಎಂದು ಕೊನೆಯ ಕ್ಷಣದಲ್ಲಿ ಅರಿತು ಬಾದಾಮಿಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಾಗ ಬಿಜೆಪಿ ಎಚ್ಚೆತ್ತುಕೊಂಡು ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸಿತು. ಅಲ್ಪಸಂಖ್ಯಾತರು ಮತ್ತು ದೊಡ್ಡ ಸಂಖ್ಯೆಯಲ್ಲಿ ಕುರುಬ ಸಮುದಾಯದ ವೋಟುಗಳು ಸಾರಾಸಗಟಾಗಿ ಬೀಳದೇ ಇದ್ದರೆ ಎರಡೂ ಕಡೆಯಲ್ಲಿ ಸೋತ ಅವಮಾನ ಸಿದ್ದರಾಮಯ್ಯನವರದಾಗುತ್ತಿತ್ತು. ಇಷ್ಟಾಗಿಯೂ ಗೆಲುವಿನ ಅಂತರ ಎರಡು ಸಾವಿರ ಮತಗಳನ್ನೂ ದಾಟಿಲ್ಲ. ಈ ದೃಷ್ಟಿಯಲ್ಲಿ ನೋಡಿದರೆ ಸಿದ್ದರಾಮಯ್ಯ ತಮ್ಮದೇ ಗೆಲುವಿಗಾಗಿ ತಿಣುಕಾಡುವಂತೆ ಮಾಡುವ ಮೂಲಕ ಜೆಡಿಎಸ್ ಮತ್ತು ಬಿಜೆಪಿಗಳೆರಡೂ ವಿಜಯ ಸಾಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT