ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಬಾರದ ಟ್ವಿಟರ್ ಸಿಇಒಗೆ ಸಂಸದೀಯ ಸಮಿತಿ ಎಚ್ಚರಿಕೆ

Last Updated 9 ಫೆಬ್ರುವರಿ 2019, 17:32 IST
ಅಕ್ಷರ ಗಾತ್ರ

ನವದೆಹಲಿ:ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆ ಬಗ್ಗೆ ಚರ್ಚಿಸಲು ‘ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿ’ ಕರೆದಿದ್ದ ಸಭೆಗೆ ಹಾಜರಾಗಲು ಟ್ವಿಟರ್ ಸಿಇಒ ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ.

ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ನೇತೃತ್ವದ ಸಂಸದೀಯ ಸಮಿತಿ ತನ್ನ ಎದುರು ಹಾಜರಾಗುವಂತ ಟ್ವಿಟರ್‌ ಸಿಇಒ ಜಾಕ್‌ ಡೋರ್ಸೆ ಮತ್ತು ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದರು.

ಒಂದು ವೇಳೆ ಹಾಜರಾಗದಿದ್ದರೆ ತಕ್ಕ ಕ್ರಮ ಎದುರಿಸಬೇಕಾಗುತ್ತದೆ ಎಂದು ಸಮಿತಿಯು ಟ್ವಿಟರ್‌ಗೆ ಎಚ್ಚರಿಕೆ ನೀಡಿದೆ.

ಸಭೆಯ ದಿನಾಂಕಕ್ಕೂ ಮತ್ತು ತಮಗೆ ನೋಟಿಸ್ ತಲುಪಿದ ದಿನದ ನಡುವೆ ಕಾಲಾವಕಾಶ ಕಡಿಮೆ ಇರುವ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಟ್ವಿಟರ್ ಸ್ಪಷ್ಟನೆ ನೀಡಿದೆ. ಹೀಗಾಗಿ ಸಭೆಯನ್ನು ಫೆ.11ಕ್ಕೆ ಮುಂದೂಡಲಾಗಿದೆ. ಆದರೆ ಈ ಸಭೆಗೂ ಹಾಜರಾಗಲು ಸಾಧ್ಯವಿಲ್ಲ ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ.

‘ನಮ್ಮ ಸಿಇಒಗೆ ಬಿಡುವಿಲ್ಲದ ಕಾರಣ ಸಭೆಗೆ ಹಾಜರಾಗಲು ಸಾಧ್ಯವಿಲ್ಲ. ಕಿರಿಯ ಅಧಿಕಾರಿಗಳನ್ನು ಸಭೆಗೆ ಕಳುಹಿಸಲು ಸಿದ್ಧರಿದ್ದೇವೆ. ಆದರೆ ಸಮಿತಿಯು ಅದಕ್ಕೆ ಒಪ್ಪುತ್ತಿಲ್ಲ’ ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ.

‘ಬಲಪಂಥೀಯ ರಾಜಕೀಯ ಸಂಘಟನೆಗಳ ಬಗ್ಗೆ ಟ್ವಿಟರ್ ಪಕ್ಷಪಾತವಾಗಿ ವರ್ತಿಸುತ್ತಿದೆ. ಬಲಪಂಥೀಯರ ಖಾತೆಗಳನ್ನು ಟ್ವಿಟರ್ ಸ್ಥಗಿತಗೊಳಿಸುತ್ತಿದೆ’ ಎಂದು ಯೂತ್‌ ಫಾರ್ ಸೋಷಿಯಲ್ ಮೀಡಿಯಾ ಡೆಮಾಕ್ರಸಿ ಸಂಘಟನೆಯು ಆರೋಪಿಸಿತ್ತು.

ಇದಕ್ಕೆ ಟ್ವಿಟರ್ ಸಹ ಪ್ರತಿಕ್ರಿಯೆ ನೀಡಿತ್ತು. ‘ನಾವು ಪಕ್ಷಪಾತ ಮಾಡುತ್ತಿಲ್ಲ. ದ್ವೇಷದಿಂದ ಕೂಡಿದ ಟ್ವೀಟ್‌ಗಳು ಎಲ್ಲಾ ರಾಜಕೀಯ ಸಿದ್ಧಾಂತಗಳ ಅನುಯಾಯಿಗಳಿಂದಲೂ ಪ್ರಕಟವಾಗುತ್ತವೆ. ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವಂತಹ ಎಲ್ಲಾ ಟ್ವೀಟ್‌ಗಳ ವಿರುದ್ಧ ನಾವು ತೆಗೆದುಕೊಳ್ಳುತ್ತಿರುವ ಕ್ರಮವನ್ನು ಮುಂದುವರಿಸುತ್ತೇವೆ’ ಎಂದು ಟ್ವಿಟರ್ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT