ಮಂಗಳವಾರ, ಆಗಸ್ಟ್ 20, 2019
23 °C

ನಾಲ್ಕು ರಾಜ್ಯಗಳಿಗೆ ಹೊಸ ರಾಜ್ಯಪಾಲರು

Published:
Updated:

ನವದೆಹಲಿ: ರಾಜಕೀಯವಾಗಿ ಸೂಕ್ಷ್ಮವೆನಿಸಿರುವ ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಕೇಂದ್ರ ಸರ್ಕಾರವು ಹೊಸ ರಾಜ್ಯಪಾಲರನ್ನು ಶನಿವಾರ ನೇಮಕ ಮಾಡಿದೆ. ಮಾಜಿ ಸಂಸದ, ಸುಪ್ರೀಂ ಕೋರ್ಟ್‌ ವಕೀಲ ಜಗದೀಪ್‌ ಧನ್‌ಖರ್‌ ಅವರು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನಿಯುಕ್ತರಾಗಿದ್ದಾರೆ.

1990–91ರಲ್ಲಿ ಕೇಂದ್ರದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಧನ್‌ಖರ್‌ (68) ಅವರು 2003ರಲ್ಲಿ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಕೇಸರಿನಾಥ ತ್ರಿಪಾಠಿ ಅವರ ಅಧಿಕಾರಾವಧಿಯು ಮುಂದಿನ ವಾರಾಂತ್ಯದಲ್ಲಿ ಕೊನೆಗೊಳ್ಳಲಿದ್ದು ಅವರ ಸ್ಥಾನವನ್ನು ಧನ್‌ಖರ್‌ ತುಂಬಲಿದ್ದಾರೆ.

2018ರ ಜನವರಿಯಿಂದ ಮಧ್ಯಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಆನಂದಿಬೆನ್‌ ಪಟೇಲ್‌ (77) ಅವರನ್ನು ಉತ್ತರಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ಕಳೆದ ಆಗಸ್ಟ್‌ ತಿಂಗಳಿಂದ ಬಿಹಾರದ ರಾಜ್ಯಪಾಲರಾಗಿರುವ ಲಾಲ್‌ಜಿ ಟಂಡನ್‌ ಅವರು ಮಧ್ಯಪ್ರದೇಶಕ್ಕೆ ವರ್ಗಾವಣೆಯಾಗಿದ್ದಾರೆ ಎಂದು ರಾಷ್ಟ್ರಪತಿಭವನದ ಪ್ರಕಟಣೆ ತಿಳಿಸಿದೆ.

ಛತ್ತೀಸ್‌ಗಡ ಬಿಜೆಪಿಯ ಹಿರಿಯ ಮುಖಂಡ ರಮೇಶ್‌ ಬಾಯಿಸ್‌ ಅವರನ್ನು ತ್ರಿಪುರಾ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಬಿಜೆಪಿಯಿಂದ ಟಿಕೆಟ್‌ ನಿರಾಕರಿಸಲಾಗಿತ್ತು. ಪ್ರಸಕ್ತ ತ್ರಿಪುರಾ ರಾಜ್ಯಪಾಲರಾಗಿರುವ ಕಪ್ತಾನ್‌ಸಿಂಗ್‌ ಸೋಲಂಕಿ ಅವರ ಅವಧಿಯು ಜುಲೈ 27ರಂದು ಕೊನೆಗೊಳ್ಳಲಿದೆ.

ಗುಪ್ತಚರ ಇಲಾಖೆಯ ನಿವೃತ್ತ ವಿಶೇಷ ನಿರ್ದೇಶಕ, ಸರ್ಕಾರ ಮತ್ತು ನಾಗಾ ಬಂಡುಕೋರರ ನಡುವಿನ ಮಾತುಕತೆಗೆ ಮಧ್ಯಸ್ಥಿಕೆದಾರರಾಗಿದ್ದ ಆರ್‌.ಎನ್‌. ರವಿ ಅವರು ನಾಗಾಲ್ಯಾಂಡ್‌ನ ರಾಜ್ಯಪಾಲರಾಗಿದ್ದಾರೆ. ನಾಗಾ ಬಂಡುಕೋರರು ಮತ್ತು ಸರ್ಕಾರದ ನಡುವೆ ಒಪ್ಪಂದ ಏರ್ಪಡಿಸುವ ನಿಟ್ಟಿನಲ್ಲಿ ಇವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಜೊತೆ ಸೇರಿ ಕೆಲಸ ಮಾಡಿದ್ದರು.

ಲಾಲ್‌ಜಿ ಟಂಡನ್‌ ಅವರ ವರ್ಗಾವಣೆಯಿಂದ ತೆರವಾದ ಬಿಹಾರ ರಾಜ್ಯಪಾಲರ ಸ್ಥಾನಕ್ಕೆ ಫಾಗೂ ಚೌಹಾಣ್‌ ಅವರನ್ನು ನೇಮಕ ಮಾಡಲಾಗಿದೆ. ಫಾಗೂ ಅವರು ಮೂಲತಃ ಉತ್ತರಪ್ರದೇಶದ ಆಜಂಗಡದವರಾಗಿದ್ದು, ಸಮಾಜವಾದಿ ಹಿನ್ನೆಲೆ ಉಳ್ಳವರು. ಮೊದಲಬಾರಿಗೆ ಅವರು ದಲಿತ್‌ ಮಜ್ದೂರ್‌ ಕಿಸಾನ್‌ ಪಾರ್ಟಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಸಕ್ತ ಅವರು ಘೋಸಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಬಿಎಸ್‌ಪಿ ಅಭ್ಯರ್ಥಿಯನ್ನು ಏಳು ಸಾವಿರ ಮತಗಳಿಂದ ಸೋಲಿಸಿದ್ದರು.

Post Comments (+)