ಶುಕ್ರವಾರ, ನವೆಂಬರ್ 22, 2019
21 °C

ಹೆಣ್ಣುಮಗುವಿನ ಜೀವಂತ ಸಮಾಧಿಗೆ ಯತ್ನ

Published:
Updated:
Prajavani

ಹೈದರಾಬಾದ್‌: ನವಜಾತ ಶಿಶುವನ್ನು ಜೀವಂತ ಸಮಾಧಿ ಮಾಡಲು ಇಬ್ಬರು ಮುಂದಾದ ಅಮಾನವೀಯ ಘಟನೆ ವರದಿಯಾಗಿದೆ. 

ಆಟೊ ಚಾಲಕನೊಬ್ಬ ನೀಡಿದ ಮಾಹಿತಿಯಿಂದ ಚುರುಕುಗೊಂಡ ಪೊಲೀಸರು ಇಬ್ಬರನ್ನು (ಮಗುವಿನ ಅಪ್ಪ ಮತ್ತು ಅಜ್ಜ) ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ.

ಸಮೀಪದ ಸಿಕಂದರಾಬಾದ್‌ನ ಜುಬಿಲಿ ಬಸ್‌ ನಿಲ್ದಾಣದ ಸಮೀಪ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ಗುರುವಾರ ಮುಂಜಾನೆ ಇಬ್ಬರು ವ್ಯಕ್ತಿಗಳು ಬಸ್‌ ನಿಲ್ದಾಣದ ಸಮೀಪ ಬಂದಿದ್ದರು. ಅವರಲ್ಲಿ ಹಿರಿಯ ವ್ಯಕ್ತಿಯು ಬಟ್ಟೆಯಲ್ಲಿ ಸುತ್ತಿದ್ದ ಯಾವುದೋ ವಸ್ತುವನ್ನು ಹಿಡಿದುಕೊಂಡಿದ್ದರು. ಇನ್ನೊಬ್ಬರು ಸಮೀಪದಲ್ಲೇ ಗುಂಡಿ ತೋಡುತ್ತಿದ್ದರು. ಮೂತ್ರವಿಸರ್ಜನೆಗಾಗಿ ಆ ಪ್ರದೇಶಕ್ಕೆ ಹೋಗಿದ್ದ ಆಟೊ ಚಾಲಕ ಕುಮಾರ್‌ ಎಂಬುವರಿಗೆ ಇವರ ಚಲನವಲನ ಕಂಡು ಸಂದೇಹ ಮೂಡಿ, ಸಮೀಪದ ಮರ್‍ರೆಡಪಲ್ಲಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಇವರನ್ನು ಬಂಧಿಸಿದ್ದಾರೆ.

‘ಮಗು ಹುಟ್ಟುವಾಗಲೇ ಸತ್ತುಹೋಗಿದೆ. ನಾವು ಕರೀಂನಗರದ ನಿವಾಸಿಗಳಾಗಿದ್ದು, ಸತ್ತ ಮಗುವನ್ನು ಬಸ್‌ನಲ್ಲಿ ಊರಿಗೆ ಒಯ್ಯಲು ಬಿಡುವುದಿಲ್ಲ. ಅದಕ್ಕಾಗಿ ಇಲ್ಲಿ ಹೂಳುತ್ತಿದ್ದೇವೆ’ ಎಂದು ಹೇಳುವ ಮೂಲಕ ಹಿರಿಯ ವ್ಯಕ್ತಿಯು (ಮಗುವಿನ ಅಜ್ಜ) ಪೊಲೀಸರನ್ನು ಸಾಗಹಾಕಲು ಪ್ರಯತ್ನಿಸಿದ್ದರು. ಹೀಗೆ ಮಾತನಾಡುತ್ತಿರುವಾಗಲೇ ಅವರು ಮಗುವಿನ ಮೂಗನ್ನು ಮುಚ್ಚುವ ಪ್ರಯತ್ನ ನಡೆಸಿದ್ದು ಪೊಲೀಸರು ದಾಖಲಿಸಿರುವ ವಿಡಿಯೊದಲ್ಲಿ ಕಾಣಿಸಿದೆ.

ಮಗು ಜೀವಂತವಾಗಿದೆ ಎಂಬುದು ಪೊಲೀಸರಿಗೆ ಮನವರಿಕೆ ಆಗುತ್ತಿದ್ದಂತೆ ಹೇಳಿಕೆ ಬದಲಿಸಿದ ವ್ಯಕ್ತಿಯು, ‘ಮಗು ವಿಗೆ ಆರೋಗ್ಯ ಸಮಸ್ಯೆ ಇದೆ, ಶಸ್ತ್ರಚಿಕಿತ್ಸೆ ಮಾಡಿದರೂ ಬದುಕಲಾರದು ಎಂದು ವೈದ್ಯರು ಹೇಳಿದ್ದಾರೆ. ಅದಕ್ಕೆ ಇಲ್ಲಿ ಹೂಳಲು ಬಂದಿದ್ದೇವೆ’ ಎಂದಿದ್ದರು. ಆದರೆ ಇವರ ಉದ್ದೇಶವನ್ನು ಮನಗಂಡ ಪೊಲೀಸರು ಅಪ್ಪ–ಮಗನನ್ನು ಬಂಧಿಸಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)