ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಷ್‌ ಉಗ್ರರು ಬಲಿ

7
ನೆರವಾದ ಕಲ್ಲು ತೂರಾಟ: ಭಯೋತ್ಪಾದಕರು ಪರಾರಿ

ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಷ್‌ ಉಗ್ರರು ಬಲಿ

Published:
Updated:

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಕುಂದಲನ್‌ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ ಮತ್ತು ಪ್ರತಿಭಟನೆಯಲ್ಲಿ  ಜೈಷ್‌–ಎ–ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಇಬ್ಬರು ಉಗ್ರರು ಮತ್ತು ಒಬ್ಬರು ನಾಗರಿಕರು ಬಲಿಯಾಗಿದ್ದಾರೆ. ಸೇನೆಯ ಇಬ್ಬರು ಯೋಧರು ಗಾಯಗೊಂಡಿದ್ದಾರೆ. 

ಕುಂದಲನ್‌ನಲ್ಲಿ ಮಂಗಳವಾರ ಬೆಳಿಗ್ಗೆ ಹಲವು ತಾಸು ಗುಂಡಿನ ಚಕಮಕಿ ನಡೆಯಿತು. ಬಲಿಯಾದ ಇಬ್ಬರೂ ಉಗ್ರರು ಜೈಷ್‌ ಸಂಘಟನೆಗೆ ಸೇರಿದವರಾಗಿದ್ದು ಅವರಲ್ಲೊಬ್ಬ ಸ್ಥಳೀಯ ವ್ಯಕ್ತಿ ಎಂದು ರಾಜ್ಯ ಪೊಲೀಸ್‌ ಮುಖ್ಯಸ್ಥ ಶೇಷ್‌ ಪಾಲ್‌ ವೈದ್‌ ತಿಳಿಸಿದ್ದಾರೆ. 

ಎನ್‌ಕೌಂಟರ್‌ ನಡೆಯುತ್ತಿದ್ದಾಗ ನೂರಾರು ಸ್ಥಳೀಯರು ಜಮಾಯಿಸಿ ಯೋಧರ ಮೇಲೆ ಕಲ್ಲುತೂರಾಟ ನಡೆಸಿದರು. ಅಡಗಿಕೊಂಡಿದ್ದ ಉಗ್ರರು ತಪ್ಪಿಸಿಕೊಳ್ಳಲು ನೆರವಾಗುವುದು ಅವರ ಉದ್ದೇಶವಾಗಿತ್ತು. ಆದರೆ, ಪೊಲೀಸರು ಮತ್ತು ಅರೆಸೇನಾ ಪಡೆ ಯೋಧರು ಸ್ಥಳೀಯರ ಮೇಲೆ ಅಶ್ರುವಾಯು ಷೆಲ್‌ಗಳನ್ನು ಸಿಡಿಸಿದರು. ಪೆಲೆಟ್‌ ಗುಂಡು ಮತ್ತು ಗುಂಡು ಹಾರಾಟ ನಡೆಸಿ ಜನರನ್ನು ಚೆದುರಿಸಿದರು. ಪ್ರತಿಭಟನಕಾರರಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲೊಬ್ಬರು ಶ್ರೀನಗರದ ಆಸ್ಪತ್ರೆಯಲ್ಲಿ ಮೃತಪಟ್ಟರು.

ಸೇನೆ 44–ರಾಷ್ಟ್ರೀಯ ರೈಫಲ್ಸ್‌, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣಾ ಪಡೆ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಕುಂದಲನ್‌ ಗ್ರಾಮದಲ್ಲಿ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಗುಂಡಿನ ಚಕಮಕಿ ಆರಂಭವಾಯಿತು. 

‘ಅಲ್ಲಿ ಅಡಗಿದ್ದ 5–6 ಉಗ್ರರು ಯೋಧರತ್ತ ಗುಂಡು ಹಾರಾಟ ನಡೆಸಿದರು. ಯೋಧರು ಪ್ರತಿದಾಳಿ ಆರಂಭಿಸಿದರು. ಕಿರಿಯ ಅಧಿಕಾರಿ ಸೇರಿ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಇವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ. 

ಇಬ್ಬರು ಉಗ್ರರು ಬಲಿಯಾದರೆ ಮೂರರಿಂದ ನಾಲ್ಕು ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಜನರು ಕಲ್ಲು ತೂರಾಟ ನಡೆಸಿದ್ದರಿಂದಾಗಿ ಅವರಿಗೆ ಪರಾರಿಯಾಗುವುದು ಸಾಧ್ಯವಾಯಿತು ಎಂದು ಮೂಲಗಳು ಹೇಳಿವೆ. 

ಉಗ್ರನ ತಂದೆ ಸಾವು: ಜೀನತ್‌ ಎಂಬ ಯುವಕ ಇತ್ತೀಚೆಗೆ ಉಗ್ರಗಾಮಿ ಗುಂಪು ಸೇರಿದ್ದ. ಕುಂದಲನ್‌ ಗ್ರಾಮದಲ್ಲಿ ಭದ್ರತಾ ಸಿಬ್ಬಂದಿ ಸುತ್ತುವರಿದ ಉಗ್ರರ ಗುಂಪಿನಲ್ಲಿ ಈತನೂ ಇದ್ದಾನೆ ಎಂಬ ಮಾಹಿತಿ ತಿಳಿದ ಆತನ ತಂದೆಗೆ ಆಘಾತವಾಗಿದೆ. ಮುಹಮ್ಮದ್‌ ಇಸಾಕ್‌ ನೈಕೂ ಎಂಬ ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆ ತಲುಪುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ವಿರಾಮದ ಬಳಿಕ ಕಾರ್ಯಾಚರಣೆ ಬಿರುಸು: ರಮ್ಜಾನ್‌ ತಿಂಗಳಲ್ಲಿ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ವಿರಾಮ ಘೋಷಿಸಿತ್ತು. ರಮ್ಜಾನ್‌ ಬಳಿಕ ಕಾರ್ಯಾಚರಣೆ ತೀವ್ರಗೊಳಿಸಲು ಸೂಚಿಸಿತು. ಹಾಗಾಗಿ ಈಗ ಕಾರ್ಯಾಚರಣೆ ಬಿರುಸುಗೊಂಡಿದೆ. ಪುಲ್ವಾಮಾದಲ್ಲಿ ಜೂನ್‌ 20ರಂದು ವಿರಾಮದ ಬಳಿಕ ನಡೆದ ಮೊದಲ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿದ್ದರು. 

ಅನಂತನಾಗ್‌ ಜಿಲ್ಲೆಯ ಶ್ರೀಗುಪ್ವಾರಾ ಗ್ರಾಮದಲ್ಲಿ ಜೂನ್‌ 22ರಂದು ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರು ಬಲಿಯಾಗಿದ್ದರು. 

ಈ ವರ್ಷದ ಕಾರ್ಯಾಚರಣೆ

* 110 ಸತ್ತ ಉಗ್ರರ ಸಂಖ್ಯೆ

* 62 ಬಲಿಯಾದ ನಾಗರಿಕರು

* 48  ಹುತಾತ್ಮರಾದ ಪೊಲೀಸರು 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !