ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ನಷ್ಟವಾಗುತ್ತಿದೆ, ಉದ್ಯಮ ಮುಚ್ಚುತ್ತಿದೆ: ಕೇಂದ್ರ ವಿರುದ್ಧ ಠಾಕ್ರೆ ಟೀಕೆ

Last Updated 8 ಅಕ್ಟೋಬರ್ 2019, 12:11 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ಆರ್ಥಿಕ ಹಿಂಜರಿತ ಇದೆಯೋ ಇಲ್ಲವೋ ಎಂಬುದನ್ನು ಆಮೇಲೆ ನೋಡೋಣ. ಆದರೆ ಉದ್ಯೋಗ ನಷ್ಟವಾಗುತ್ತಿದೆ, ಉದ್ಯಮಗಳು ಮುಚ್ಚುತ್ತಿರುವುದುಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಪರಿಸ್ಥಿತಿಯನ್ನು ನಾವು ಒಪ್ಪಿಕೊಳ್ಳಬೇಕಿದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಶಿವಸೇನೆ ಮುಖವಾಣಿ ಸಾಮ್ನಾಗೆ ನೀಡಿದ ಸಂದರ್ಶನದಲ್ಲಿ ಠಾಕ್ರೆ ಕೇಂದ್ರದಲ್ಲಿರುವ ಬಿಜೆಪಿ ವಿರುದ್ಧ ಈ ರೀತಿ ಟೀಕೆಮಾಡಿದ್ದಾರೆ.

ಮುಂಬೈ ಮೆಟ್ರೊ ಕಾಮಗಾರಿಗಾಗಿ ಆರೆ ಪ್ರದೇಶದಲ್ಲಿ ಮರಗಳನ್ನು ನಾಶ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ ಠಾಕ್ರೆ, ಮರಗಳನ್ನು ನಾಶ ಮಾಡಿದ್ದಕ್ಕಾಗಿ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ. ಮುಂಬೈ ಮೆಟ್ರೊ ಕಾಮಗಾರಿಗಾಗಿ ಆರೆ ಮಿಲ್ಕ್ ಕಾಲೊನಿಯಲ್ಲಿ 2,141 ಮರಗಳನ್ನು ಕಡಿಯಲಾಗಿದೆ.

ಅದೇ ವೇಳೆ ರಾಜಕೀಯ ಹಗೆತನವನ್ನು ಖಂಡಿಸಿದ ಶಿವಸೇನೆ ಮುಖ್ಯಸ್ಥ ರಾಜಕೀಯನಾಯಕರ ವಿರುದ್ಧ ಹಗೆತನ ಸಾಧಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐನ್ನು ಬಳಸಬಾರದು ಎಂದಿದ್ದಾರೆ.

ಸರ್ಕಾರವು ಪ್ರತೀಕಾರ ಅಥವಾ ಹಗೆತನದ ಮನಸ್ಥಿತಿ ಹೊಂದಿದ್ದರೆ ಅದಕ್ಕಾಗಿ ಅಧಿಕಾರ ಮತ್ತು ಹಕ್ಕುಗಳನ್ನು ದುರುಪಯೋಗ ಮಾಡಬಾರದು. ಯಾರೊಬ್ಬರು ಹಗೆತನದ ರಾಜಕಾರಣ ಮಾಡಬಾರದು. ಚುನಾವಣೆಗೆ ಮುನ್ನ ಈ ರೀತಿ ಯಾವುದನ್ನೂ ಮಾಡಬಾರದು ಎಂದು ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರ ನೆರೆ ಸಂತ್ರಸ್ತರಿಗೆ ಸಹಾಯ ವಿಳಂಬವಾಗಿರುವುದರ ಬಗ್ಗೆ ಪ್ರಶ್ನೆ ಕೇಳಿದಾಗ ಠಾಕ್ರೆ ಅದಕ್ಕೆ ನೇರ ಉತ್ತರ ನೀಡಿಲ್ಲ. ಈ ಪ್ರಶ್ನೆಗೆ ಉತ್ತರ ನೀಡುವ ಬದಲು ಅವರು ಹವಾಮಾನ ವೈಪರೀತ್ಯ ಮಹಾರಾಷ್ಟ್ರಕ್ಕೆ ಮಾತ್ರ ಅಲ್ಲ ಇಡೀ ಜಗತ್ತಿಗೇ ಸಮಸ್ಯೆಯನ್ನುಂಟುಮಾಡಿದೆ. ತಿಂಗಳಲ್ಲಿ ಸುರಿಯುವಷ್ಟು ಮಳೆ ಈ ಬಾರಿ ಒಂದೇ ದಿನ ಸುರಿದಿದೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT