ತಾಂತ್ರಿಕೇತರ ಕೋರ್ಸ್ ಮಾನ್ಯತೆಯ ವಿಶ್ವಾಸ

7
ಯುಜಿಸಿ ಅಧಿಕಾರಿಗಳೊಂದಿಗೆ ಕೆಎಸ್ಒಯು ಸಭೆ

ತಾಂತ್ರಿಕೇತರ ಕೋರ್ಸ್ ಮಾನ್ಯತೆಯ ವಿಶ್ವಾಸ

Published:
Updated:

ನವದೆಹಲಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ಕ್ಕೆ 2018-19ರ ಶೈಕ್ಷಣಿಕ ಸಾಲಿನಿಂದ ತಾಂತ್ರಿಕೇತರ ಕೋರ್ಸ್‌ಗಳ ಆರಂಭಕ್ಕೆ ಮಾನ್ಯತೆ ಮರಳಿ ದೊರೆಯುವ ಸಂಪೂರ್ಣ ವಿಶ್ವಾಸವಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಲಿಂಗಯ್ಯ ತಿಳಿಸಿದರು.

‘ಕೆಎಸ್‌ಒಯು ಮಾನ್ಯತೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಅಧಿಕಾರಿಗಳೊಂದಿಗೆ ಗುರುವಾರ ಮಹತ್ವದ ಸಭೆ ನಡೆಸಲಾಗಿದೆ. ಯುಜಿಸಿಯ ಮಾಜಿ ಮುಖ್ಯಸ್ಥ ಪ್ರೊ.ಚೌಹಾಣ್ ಹಾಗೂ ಏಳು ಮಂದಿ ತಜ್ಞರು ನಮ್ಮೊಂದಿಗೆ ಚರ್ಚಿಸಿದ್ದು, ತಾಂತ್ರಿಕೇತರ ಕೋರ್ಸ್‌ಗಳಿಗೆ ಮಾನ್ಯತೆ ನೀಡುವ ಬಗ್ಗೆ ವಿಶ್ವಾಸ ಇದೆ’ ಎಂದು ಅವರು ಸಭೆಯ ನಂತರ ಸುದ್ದಿಗಾರರಿಗೆ ಹೇಳಿದರು.

ಕೆಎಸ್‌ಒಯುಗೆ ಮಾನ್ಯತೆ ನೀಡುವ ಬಗ್ಗೆ ಯುಜಿಸಿ 2017ರಲ್ಲಿ ರೂಪಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ, ಯುಜಿಸಿ ಕೇಳಿದ್ದ ಎಲ್ಲ ದಾಖಲೆಗಳನ್ನು ಒದಗಿಸಲಾಗಿದೆ. ಕೆಎಸ್‌ಒಯು ಪ್ರತಿನಿಧಿಗಳಾಗಿ ಕುಲಸಚಿವ ಖಾದರ್ ಪಾಷಾ, ಡೀನ್ ಡಾ. ಜಗದೀಶ್ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಅವರು ವಿವರಿಸಿದರು.

ತಾಂತ್ರಿಕೇತರ ಕೋರ್ಸ್‌ಗಳಾದ ಬಿ.ಎ, ಎಂ.ಎ, ಎಂಎಸ್ಸಿ, ಎಂಕಾಂ ಮತ್ತು ಬಿ.ಇಡಿ ಕೋರ್ಸ್‌ಗಳಿಗೆ 2018–19ನೇ ಸಾಲಿನಿಂದಲೇ ಮಾನ್ಯತೆ ದೊರೆಯುವ ವಿಶ್ವಾಸವಿದೆ. ಬೇರೆ ರಾಜ್ಯದ ವಿದ್ಯಾರ್ಥಿಗಳೂ ರಾಜ್ಯದಲ್ಲಿರುವ ಕೆಎಸ್‌ಒಯು ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ದೊರೆಯಲಿದೆ ಎಂದು ಶಿವಲಿಂಗಯ್ಯ ಹೇಳಿದರು.

ನಿಯಮಾನುಸಾರ ಜುಲೈ ತಿಂಗಳಲ್ಲೇ ಯುಜಿಸಿ ತನ್ನ ತೀರ್ಮಾನ ಪ್ರಕಟಿಸಬೇಕಿದೆ. ಹಾಗಾಗಿ ಈ ತಿಂಗಳಲ್ಲೇ ಕೆಎಸ್ಒಯು ನೂತನ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಅವರು ವಿವರಿಸಿದರು.

ನಿಯಮಗಳನ್ನು ಉಲ್ಲಂಘಿಸಿ ಕರ್ನಾಟಕದ ಹೊರಗೂ ಕೇಂದ್ರಗಳನ್ನು ಆರಂಭಿಸಲಾಗಿದೆ. ಜೊತೆಗೆ, ಅನುಮತಿ ಪಡೆಯದೇ ದೂರ ಶಿಕ್ಷಣ ಕಾರ್ಯಕ್ರಮದ ಮೂಲಕ ತಾಂತ್ರಿಕ ಕೋರ್ಸ್‌ಗಳನ್ನೂ ಆರಂಭಿಸಿದೆ ಎಂಬ ಕಾರಣದಿಂದ ಯುಜಿಸಿಯು, ಕೆಎಸ್‌ಒಯುಗೆ ನೀಡಲಾಗಿದ್ದ ಮಾನ್ಯತೆಯನ್ನು 2013ರಲ್ಲಿ ರದ್ದುಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !