ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳಲ್ಲಿ ಸೆಪ್ಟೆಂಬರ್‌ನಿಂದ ತರಗತಿ ಆರಂಭಿಸಿ:ಯುಜಿಸಿ ಸಮಿತಿ ಶಿಫಾರಸು

Last Updated 25 ಏಪ್ರಿಲ್ 2020, 13:27 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೆಪ್ಟೆಂಬರ್‌ನಿಂದ ಬೋಧನಾ ತರಗತಿಗಳನ್ನು ಆರಂಭಿಸಬಹುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯೋಜಿಸಿದ್ದ ಆಯೋಗವು ಶಿಫಾರಸು ಮಾಡಿದೆ.

ಕೋವಿಡ್‌–19ನಿಂದಾಗಿ ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಶಾಲೆಗಳಲ್ಲಿ ಪರೀಕ್ಷೆ ರದ್ದು ಪಡಿಸಿ ಮುಂದಿನ ತರಗತಿಗಳಿಗೆ ಕಳುಹಿಸುವಂತೆ ಸರ್ಕಾರಗಳು ಕ್ರಮಕೈಗೊಂಡಿವೆ. ಕಾಲೇಜುಗಳು ಪರೀಕ್ಷೆಮುಂದೂಡಿವೆ. ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು, ಪದವಿ ಸೆಮಿಸ್ಟರ್‌ ತರಗತಿಗಳು ಅರ್ಧಕ್ಕೆ ನಿಂತಿವೆ. ಜುಲೈನಿಂದ ತರಗತಿಗಳನ್ನು ಆರಂಭಿಸುವಬಗ್ಗೆ ಕ್ರಮವಹಿಸಲು ವಿಶ್ವವಿದ್ಯಾಲಯಗಳು ಸಿದ್ಧತೆ ನಡೆಸಿದ್ದವು. ಆದರೆ, ಯುಜಿಸಿ ಸಮಿತಿಯು ಸೆಪ್ಟೆಂಬರ್‌ನಿಂದ ಕಾರ್ಯಾರಂಭಿಸುವಂತೆ ಶಿಫಾರಸು ಮಾಡಿದೆ.

ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕಕಾರಣದಿಂದಾಗಿ ಶೈಕ್ಷಣಿಕವಾಗಿ ಎದುರಾಗಿರುವ ನಷ್ಟ ಹಾಗೂ ಆನ್‌ಲೈನ್‌ ತರಗತಿಗಳನ್ನು ನಡೆಸುವ ವಿಚಾರಗಳ ಕುರಿತು ಶಿಫಾರಸು ನೀಡುವಂತೆ ಯುಜಿಸಿ ಎರಡು ಸಮಿತಿಗಳನ್ನು ರಚಿಸಿತ್ತು.

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ನಡೆಸುವುದು ಹಾಗೂ ಶೈಕ್ಷಣಿಕ ಕ್ಯಾಲೆಂಡರ್‌ ರೂಪಿಸುವ ವಿಚಾರಗಳನ್ನು ಗಮನಿಸಲು ರೂಪಿಸಲಾದ ಸಮಿತಿಗೆ ಹರಿಯಾಣ ವಿಶ್ವವಿದ್ಯಾಲಯದ ಕುಲಪತಿ ಆರ್‌.ಸಿ.ಕುಹದ್‌ ನೇತೃತ್ವ ವಹಿಸಿದ್ದಾರೆ. ಆನ್‌ಲೈನ್‌ ಶಿಕ್ಷಣ ಉನ್ನತೀಕರಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡುವಂತೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) ಕುಲಪತಿ ನಾಗೇಶ್ವರ್‌ ರಾವ್‌ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿ ಕಾರ್ಯನಿರ್ವಹಿಸುತ್ತಿದೆ. ಎರಡೂ ಸಮಿತಿಗಳು ಶುಕ್ರವಾರ ಶಿಫಾರಸು ವರದಿ ಸಲ್ಲಿಸಿವೆ.

'ಜುಲೈಗಿಂತಲೂ ಸೆಪ್ಟೆಂಬರ್‌ನಿಂದ ತರಗತಿಗಳನ್ನು ಆರಂಭಿಸುವಂತೆ ಒಂದು ಸಮಿತಿ ಶಿಫಾರಸು ಮಾಡಿದೆ. ಅಗತ್ಯ ಸೌಕರ್ಯಗಳು ಇದ್ದರೆ ವಿಶ್ವವಿದ್ಯಾಲಯಗಳು ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸಲಿ, ಇಲ್ಲವಾದರೆ ಲಾಕ್‌ಡೌನ್‌ ಅವಧಿ ಮುಗಿಯುವ ವರೆಗೂ ಕಾದು ನಂತರದಲ್ಲಿ ಪೆನ್‌–ಪೇಪರ್‌ ಪರೀಕ್ಷೆಗಳನ್ನು ನಡೆಸುವ ದಿನಾಂಕ ನಿಗದಿ ಪಡಿಸಿಕೊಳ್ಳುವಂತೆ ಎರಡನೇ ಸಮಿತಿ ಸಲಹೆ ನೀಡಿದೆ. ಮಾನವ ಸಂಪನ್ಮೂಲ ಸಚಿವಾಲಯದ ಪ್ರಕಾರ, ಎರಡೂ ವರದಿಗಳ ಅಧ್ಯಯನ ನಡೆಸಿ ಮುಂದಿನ ವಾರದಲ್ಲಿ ಅಧಿಕೃತ ಮಾರ್ಗಸೂಚಿ ಹೊರಡಿಸಲಿದೆ.

ಹೊಸ ಶೈಕ್ಷಣಿಕ ಅವಧಿ ಆರಂಭಿಸಲು ತೊಡಕುಗಳಿವೆ. ಪ್ರವೇಶ ಪರೀಕ್ಷೆ ನಡೆಸುವುದರಲ್ಲಿ ತಡವಾಗಿರುವುದು ಹಾಗೂ ಬೋರ್ಡ್‌ ಪರೀಕ್ಷೆಗಳು ಇನ್ನೂ ನಡೆಯದಿರುವುದರ ಕಡೆಗೂ ಗಮನ ಹರಿಸಲಾಗಿದೆ. ಪ್ರಸ್ತುತ ಯೋಜನೆಯ ಪ್ರಕಾರ, ನೀಟ್‌ ಮತ್ತು ಜೆಇಇ ರೀತಿಯ ಪ್ರವೇಶ ಪರೀಕ್ಷೆಗಳನ್ನು ಜೂನ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದೇಶದಾದ್ಯಂತ ಕೋವಿಡ್‌–19 ಪರಿಸ್ಥಿತಿಯ ಮೇಲೆ ಎಲ್ಲವೂ ಅವಲಂಬಿತವಾಗಿರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್‌ 16ರಿಂದ ದೇಶದಾದ್ಯಂತ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಮೇ 3ರ ವರೆಗೂ ದೇಶದಾದ್ಯಂತ ಲಾಕ್‌ಡೌನ್ ಮುಂದುವರಿದಿದೆ. ಸಿಬಿಎಸ್‌ಇ 29 ವಿಷಯಗಳಿಗೆ ಬೋರ್ಡ್‌ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ.

ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 24,942ಕ್ಕೆ ಏರಿಕೆಯಾಗಿದೆ. ಈ ಪೈಕಿ 779 ಮಂದಿ ಮೃತಪಟ್ಟಿದ್ದು, 5,209 ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ 18,953 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT