ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಸಿ ಸುತ್ತೋಲೆ ವಿವಾದ: ವಿ.ವಿಯಲ್ಲೂ ಹಿಂದಿ ಹೇರಿಕೆ

ಚರ್ಚೆ ಬಿಟ್ಟ ಜೆಎನ್‌ಯು
Last Updated 25 ಜೂನ್ 2019, 20:08 IST
ಅಕ್ಷರ ಗಾತ್ರ

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಮತ್ತೆ ವಿವಾದ ಸೃಷ್ಟಿಸಿದೆ. ಎಲ್ಲ ವಿದ್ಯಾರ್ಥಿಗಳಿಗೆ ಹಿಂದಿ ಕಡ್ಡಾಯ ಮಾಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ನೀಡಿದ ಸುತ್ತೋಲೆ ಈ ವಿವಾದಕ್ಕೆ ಕಾರಣ. ಬಿಜೆಪಿ ಮುಖಂಡರೊಬ್ಬರು ಸಲ್ಲಿಸಿದ ಪ್ರಸ್ತಾವದ ಆಧಾರದಲ್ಲಿ ಈ ಸೂಚನೆಯನ್ನು ಯುಜಿಸಿ ನೀಡಿತ್ತು.

ಯುಜಿಸಿಯ ಈ ಕ್ರಮದ ವಿರುದ್ಧ ದೇಶದ ಎಲ್ಲ ವರ್ಗಗಳ ಜನರು ಮತ್ತು ಸಂಘಟನೆಗಳು ಒಟ್ಟಾಗಬೇಕು. ಆ ಮೂಲಕ ಸುತ್ತೋಲೆಯನ್ನು ಯುಜಿಸಿ ಹಿಂದಕ್ಕೆ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಸಿಪಿಎಂ ಕರೆ ಕೊಟ್ಟಿದೆ.

ಈ ಸುತ್ತೋಲೆಯನ್ನು ಕಳೆದ ಅಕ್ಟೋಬರ್‌ನಲ್ಲಿ ಹೊರಡಿಸಲಾಗಿದೆ. ಆದರೆ, ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯವು (ಜೆಎನ್‌ಯು) ಮುಂದಿನ ಅಕಾಡೆಮಿಕ್‌ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ನಿರ್ಧರಿಸಿದ ಬಳಿಕ ಇದು ಬಹಿರಂಗವಾಯಿತು. ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಈ ಬಗ್ಗೆ ಚರ್ಚೆ ನಡೆಸುವ ನಿರ್ಧಾರವನ್ನು ಜೆಎನ್‌ಯು ಕೈಬಿಟ್ಟಿತು.

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಲ್ಲಿ ಇದ್ದ ಹಿಂದಿ ಹೇರಿಕೆಯ ಪ್ರಸ್ತಾವಕ್ಕೆ ದೇಶದಾದ್ಯಂತ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಈ ಪ್ರತಿರೋಧಕ್ಕೆ ಮಣಿದು ಆ ಪ್ರಸ್ತಾವವನ್ನೇ ಕೈಬಿಡಲಾಗಿತ್ತು. ಈಗ ಅಂತಹುದೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ.

ಬಿಜೆಪಿ ಮುಖಂಡನ ಪ್ರಸ್ತಾವ

ಉನ್ನತ ಶಿಕ್ಷಣದಲ್ಲಿ ಹಿಂದಿಯನ್ನು ಕಡ್ಡಾಯ ಮಾಡಬೇಕು ಎಂದು ಬಿಜೆಪಿ ಮುಖಂಡ ವಿಜಯ ಕುಮಾರ್‌ ಮಲ್ಹೋತ್ರಾ ಅವರು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳೆದ ವರ್ಷ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವವನ್ನು ಸಚಿವಾಯಲವು ಯುಜಿಸಿಗೆ ಕಳುಹಿಸಿ ಅಗತ್ಯ ಕ್ರಮಕ್ಕೆ ಸೂಚಿಸಿತ್ತು.

ಯುಜಿಸಿ ಜಂಟಿ ಕಾರ್ಯದರ್ಶಿ ಜಿತೇಂದ್ರ ಕುಮಾರ್‌ ತ್ರಿಪಾಠಿ ಅವರು ಕಳೆದ ಅ.24ರಂದು ಜೆಎನ್‌ಯುಗೆ ಪತ್ರ ಬರೆದು ಹಿಂದಿಗೆ ಸಂಬಂಧಿಸಿದ ಸುತ್ತೋಲೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಸಂಬಂಧ ಹಲವು ಪತ್ರಗಳನ್ನು ಬರೆಯಲಾಗಿದೆ ಎಂಬುದನ್ನೂ ನೆನಪಿಸಿದ್ದರು. ಈ ವಿಚಾರದಲ್ಲಿ ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಆದಷ್ಟು ಬೇಗನೆ ತಿಳಿಸಿದರೆ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ವರದಿ ನೀಡಲು ಅನುಕೂಲ ಎಂದೂ ಪತ್ರದಲ್ಲಿ ಹೇಳಲಾಗಿತ್ತು.
ಕನ್ನಡ ಕಲಿಕೆ ಕಡ್ಡಾಯ

ಬೆಂಗಳೂರು: ಸಿಬಿಎಸ್ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು. ಇದರಲ್ಲಿ ಲೋಪ ಕಂಡುಬಂದರೆ ಬಿಇಒ ಮತ್ತು ಡಿಡಿಪಿಐಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಆರ್.ಶ್ರೀನಿವಾಸ್ ಎಚ್ಚರಿಸಿದರು.

**

ಸಲಹೆಗೆ ವಿ.ವಿಗಳನ್ನು ಕೋರಿದ್ದೆವು. ನಮ್ಮ ಕಡೆಯಿಂದ ಒತ್ತಾಯ ಇರಲಿಲ್ಲ. ಸ್ವಾಯತ್ತ ಸಂಸ್ಥೆಗಳಾಗಿರುವ ವಿ.ವಿಗಳಿಗೆ ತಮ್ಮ ಕೋರ್ಸ್‌ ನಿರ್ಧರಿಸುವ ಅಧಿಕಾರ ಇದೆ
– ಡಿ.ಪಿ. ಸಿಂಗ್‌, ಯುಜಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT