ಜನರಿಗೆ ಗೊತ್ತಿಲ್ಲದಂತೆ ಮೊಬೈಲ್‌ನಲ್ಲಿ ಸೇವ್‌ ಆಗುತ್ತಿರುವ ಆ ಸಂಖ್ಯೆ ಯಾರದ್ದು?

7

ಜನರಿಗೆ ಗೊತ್ತಿಲ್ಲದಂತೆ ಮೊಬೈಲ್‌ನಲ್ಲಿ ಸೇವ್‌ ಆಗುತ್ತಿರುವ ಆ ಸಂಖ್ಯೆ ಯಾರದ್ದು?

Published:
Updated:

ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ(ಯುಐಡಿಎಐ) ಸಹಾಯವಾಣಿ ಸಂಖ್ಯೆ ಎಂದು ದೇಶದಲ್ಲಿನ ಸಾವಿರಾರು ಜನರ ಮೊಬೈಲ್‌ಗಳ ಕಾಂಟ್ಯಾಕ್ಟ್‌ ಲೀಸ್ಟ್‌ನಲ್ಲಿ 1800 300 1947 ಸಂಖ್ಯೆ ತಾನೇ ತಾನಾಗಿ ಸೇವ್‌ ಆಗುತ್ತಿದೆ. ಇದರಿಂದ ಬಳಕೆದಾರರಲ್ಲಿ ಗೊಂದಲ ಮೂಡಿದೆ.

ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ ಎಂದು ಫೋನ್‌ಬುಕ್‌ನಲ್ಲಿ ಸೇವ್‌ ಆಗಿರುವ 1800 300 1947 ನಂಬರ್‌ ಅನ್ನು ಸ್ಕ್ರೀನ್‌ ಶಾಟ್‌ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಜನರು ಹಂಚಿಕೊಳ್ಳುತ್ತಿದ್ದಾರೆ.

 

ಎಲಿಯಟ್‌ ಆ್ಯಂಡರ್‌ಸನ್‌ ಎಂಬ ಫ್ರೆಂಚ್‌ ತಂತ್ರಜ್ಞ, ‘ವಿವಿಧ ಕಂಪನಿಯ ಟೆಲಿಕಾಂ ಸೇವೆ ಪಡೆಯುತ್ತಿರುವ, ಆಧಾರ್‌ ಕಾರ್ಡ್‌ ಹೊಂದಿರುವ, ಕಾರ್ಡ್‌ ಹೊಂದಿಲ್ಲದೆ ಇರುವ, ಎಂಆಧಾರ್‌ ಆ್ಯಪ್‌ ಬಳಸುತ್ತಿರುವ, ಆ್ಯಪ್‌ ಬಳಸದೇ ಇರುವವರ ಮೊಬೈಲ್‌ಗಳಲ್ಲಿ, ಅವರ ಗಮನಕ್ಕೆ ಬಾರದೆ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ ಸೇರ್ಪಡೆಯಾಗಿದೆ. ಇದಕ್ಕೆ ಕಾರಣವೆನೆಂದು ವಿವರಿಸಿ?’ ಎಂದು ಪ್ರಾಧಿಕಾರಕ್ಕೆ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ಕಾವೇರುತ್ತಿರುವುದನ್ನು ಗಮನಿಸಿದ ಪ್ರಾಧಿಕಾರವು ಪ್ರತಿಕ್ರಿಯೆ ನೀಡಿದೆ. 1800-300-1947 ಪ್ರಾಧಿಕಾರದ ಅಧಿಕೃತ ಸಂಖ್ಯೆಯಲ್ಲ ಎಂದು ಸ್ಪಷ್ಟನೆ ನೀಡಿದೆ.

‘ಸಹಾಯವಾಣಿ ಸಂಖ್ಯೆಯನ್ನು ಬಳಕೆದಾರರ ಮೊಬೈಲ್‌ಗಳಲ್ಲಿ ಸ್ವಯಂಚಾಲಿತವಾಗಿ ಸೇರಿಸಲು ಟೆಲಿಕಾಂ ಸೇವಾ ಕಂಪನಿಗಳೊಂದಿಗೆ ಯಾವುದೇ ಮಾತುಕತೆ ಆಗಿಲ್ಲ’ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

‘1800–300–1947 ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆಯಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜನರಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿವೆ. ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 1947 ಸಂಖ್ಯೆಯೇ ಪ್ರಾಧಿಕಾರದ ಅಧಿಕೃತ ಸಹಾಯವಾಣಿಯಾಗಿದೆ’ ಎಂದು ಯುಐಡಿಎಐ ತಿಳಿಸಿದೆ.

ಮಾಧ್ಯಮಗಳಲ್ಲಿ ಈ ಹಿಂದೆ ಪ್ರಕಟವಾಗಿದ್ದ ಜಾಹೀರಾತುಗಳಲ್ಲಿ 1800–300–1947 ಸಂಖ್ಯೆಯನ್ನೆ ಸಹಾಯವಾಣಿಯೆಂದು ಪ್ರಕಟಿಸಲಾಗಿತ್ತು. ಪ್ರಾಧಿಕಾರವು ಈಗಿನ ಸ್ಪಷ್ಟನೆಯಲ್ಲಿ ಈ ಸಂಖ್ಯೆ ತನ್ನದಲ್ಲ ಎಂದಿದೆ. ಹೀಗಾಗಿ ಜನರಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಯಾಗಿದೆ.

1800–300–1947 ಸಂಖ್ಯೆಗೆ ಕರೆ ಮಾಡಿದಾಗ ನಾಟ್‌ ವ್ಯಾಲಿಡ್‌ ನಂಬರ್‌ ಎಂದು ಪ್ರತಿಕ್ರಿಯೆ ಬಂತು. ಈ ವಿದ್ಯಮಾನದ ಕುರಿತು ಪ್ರಮುಖ ಟೆಲಿಕಾಂ ಕಂಪನಿಗಳು ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.

 

ಆಧಾರ್‌ ಮಾಹಿತಿಯನ್ನು ಕದಿಯಲು ಸಾಧ್ಯವಿಲ್ಲ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಟ್ವಿಟರ್‌ನಲ್ಲಿ ತಮ್ಮ ಆಧಾರ್‌ ಸಂಖ್ಯೆಯನ್ನು ಇತ್ತೀಚೆಗೆ ಪ್ರಕಟಿಸಿದ್ದರು. ಆ ಬಳಿಕ ಅವರ ವೈಯಕ್ತಿಕ ಮಾಹಿತಿ ಒಳಗೊಂಡ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅದರಲ್ಲಿ ಶರ್ಮಾರ ಮೊಬೈಲ್‌ ಸಂಖ್ಯೆ, ಮನೆ ವಿಳಾಸ, ಜನ್ಮದಿನಾಂಕ, ಪ್ಯಾನ್‌ ಸಂಖ್ಯೆ, ವಾಟ್ಸ್‌ ಆ್ಯಪ್‌ ಡಿಪಿ ಚಿತ್ರ ಮತ್ತು ಮತದಾನದ ಗುರುತಿನ ಚೀಟಿಯ ಸಂಖ್ಯೆಯು ಒಳಗೊಂಡಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !