ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿಚಾರಣೆ: ಜಾಗತಿಕ ಸಮಿತಿ ಕ್ರಮಕ್ಕೆ ಆಕ್ರೋಶ

ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ
Last Updated 3 ಮಾರ್ಚ್ 2020, 19:18 IST
ಅಕ್ಷರ ಗಾತ್ರ

ನವದೆಹಲಿ: ‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಕುರಿತಾಗಿ ನಡೆಯುತ್ತಿರುವ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಅವಕಾಶ ನೀಡಬೇಕು’ ಎಂದು ಕೋರಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಕಚೇರಿಯು (ಒಎಚ್‌ಸಿಎಚ್‌ಆರ್‌) ಸುಪ್ರೀಂ ಕೋರ್ಟ್‌ಗೆ ಮಂಗಳವಾರ ಮನವಿ ಸಲ್ಲಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಹಿಂದೆಂದೂ ಈ ರೀತಿಯ ಅರ್ಜಿಯನ್ನು ಒಎಚ್‌ಸಿಎಚ್‌ಆರ್‌ ಸಲ್ಲಿಸಿದ್ದಿಲ್ಲ.

‘ಸಿಎಎ ಕುರಿತ ವಿಚಾರಣೆಯಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ನ್ಯಾಯಾಲಯದ ಸಹಾಯಕನ ರೂಪದಲ್ಲಿ ತನ್ನನ್ನು ಪರಿಗಣಿಸಬೇಕು’ ಎಂದು ಅದು ವಾದಿಸಿದೆ.

ಈ ನಡೆಗೆ, ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆಕ್ರೋಶದ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಮುಸ್ಲಿಮೇತರರನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ಹೇಳಿದೆ. ಸಿಎಎ ವಿಷಯದಲ್ಲಿ ಆಗಿರುವ ಎಲ್ಲ ‘ಗೊಂದಲ’ಗಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್‌ ಹೇಳಿದೆ.

ಪಾಕಿಸ್ತಾನ ಮತ್ತು ಇತರ ನಿರಂಕುಶಾಧಿಪತ್ಯದ ದೇಶಗಳಲ್ಲಿ ಮಾನವ ಹಕ್ಕುಗಳ ಯಾವುದೇ ರೀತಿಯ ಉಲ್ಲಂಘನೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಗಮನಿಸಿಯೇ ಇಲ್ಲ ಎಂದು ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ. ನಮ್ಮ ದೇಶದ ಸಾರ್ವಭೌಮ ಹಕ್ಕುಗಳು ಮತ್ತು ಆಂತರಿಕ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಹಕ್ಕು ಆ ಸಂಸ್ಥೆಗೆ ಇಲ್ಲ ಎಂದು ಅವರು ಹೇಳಿದ್ದಾರೆ.

ಇದೊಂದು ಅನಪೇಕ್ಷಿತ ಮಧ್ಯಪ್ರವೇಶವಾಗಿದ್ದು ಈ ಎಲ್ಲ ಗೊಂದಲಗಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅಹ್ಮದ್‌ ಪಟೇಲ್ ಹೇಳಿದ್ದಾರೆ.

ಸಿಎಎ ವಿರುದ್ಧ ಕಾಂಗ್ರೆಸ್‌ ಪಕ್ಷವು ತನ್ನ ಕಾರ್ಯಕಾರಿ ಸಮಿತಿಯಲ್ಲಿ ನಿರ್ಣಯ ಅಂಗೀಕರಿಸಿದೆ. ಆದರೆ, ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಿಂದ ಸಾಮಾನ್ಯವಾಗಿ ದೂರವೇ ಉಳಿದಿದೆ. ಈಗಿನ ಬೆಳವಣಿಗೆಗೆ ತೀವ್ರವಾದ ಪ್ರತಿಕ್ರಿಯೆ ನೀಡಿದೆ. ‘ವಿಶ್ವಸಂಸ್ಥೆ ಈಗ ನಮ್ಮದೇ ನ್ಯಾಯಾಲಯದಲ್ಲಿ ನಮ್ಮಿಂದ ಉತ್ತರ ಬಯಸುತ್ತಿದೆ. ಬಿಜೆಪಿಯ ಜಿಗುಟುತನ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರಿಗೆ ಅವಮಾನವಾಗುವಂತೆ ಮಾಡಿದೆ’ ಎಂದು ಕಾಂಗ್ರೆಸ್‌ ಪಕ್ಷವು ಟ್ವೀಟ್‌ ಮಾಡಿದೆ.

ಒಎಚ್‌ಸಿಎಚ್‌ಆರ್‌ ವಾದವೇನು?: ‘ಧರ್ಮದ ಆಧಾರದಲ್ಲಿ ಕಿರುಕುಳ ಅನುಭವಿಸುತ್ತಿರುವವರನ್ನು ರಕ್ಷಿಸುವ ಸಿಎಎಯ ಉದ್ದೇಶವನ್ನು ಒಎಚ್‌ಸಿಎಚ್‌ಆರ್‌ ಸ್ವಾಗತಿಸುತ್ತದೆ. ಆದರೆ, ಕಿರುಕುಳಕ್ಕೆ ಒಳಗಾದ ಮುಸ್ಲಿಮರ ವಿವಿಧ ಪಂಗಡಗಳನ್ನು ಇದರಿಂದ ಹೊರಗಿಟ್ಟಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತದೆ. ಕಿರುಕುಳಕ್ಕೆ ಒಳಗಾದ ಅಹಮದೀಯ, ಹಜರ ಹಾಗೂ ಶಿಯಾ ಮುಸಲ್ಮಾನರನ್ನೂ ಸಿಎಎ ಅಡಿ ಪರಿಗಣಿಸಬೇಕು’ ಎಂದು ಅದು ವಾದಿಸಿದೆ.

‘ಪೌರತ್ವ ಕಾಯ್ದೆಯು ಕಾನೂನಿನಡಿ ಸಮಾನತೆಯ ಹಕ್ಕು ಮತ್ತು ರಾಷ್ಟ್ರೀಯತೆಯ ಆಧಾರದಲ್ಲಿ ತಾರತಮ್ಯ ಮಾಡದಿರುವ ಭಾರತದ ಬದ್ಧತೆಯ ವಿಚಾರದಲ್ಲೂ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಆಂತರಿಕ ವಿಚಾರ: ಭಾರತ
ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ಕಚೇರಿಯ ನಡೆಯನ್ನು ಖಂಡಿಸಿರುವ ಭಾರತವು, ‘ನಮ್ಮ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಅಧಿಕಾರ ಯಾವುದೇ ಬಾಹ್ಯ ಸಂಸ್ಥೆಗೆ ಇರುವುದಿಲ್ಲ’ ಎಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌, ‘ಸಿಎಎ ಭಾರತದ ಆಂತರಿಕ ವಿಚಾರ ಮತ್ತು ಕಾನೂನುಗಳನ್ನು ರೂಪಿಸುವುದು ಭಾರತೀಯ ಸಂಸತ್ತಿನ ಸಾರ್ವಭೌಮ ಅಧಿಕಾರವಾಗಿದೆ. ಸಿಎಎ, ಸಂವಿಧಾನದ ಎಲ್ಲಾ ಮೌಲ್ಯಗಳನ್ನು ಒಳಗೊಂಡಿರುವ ಕಾನೂನು ಎಂಬುದರಲ್ಲಿ ಭಾರತಕ್ಕೆ ಸ್ಪಷ್ಟ ಅರಿವು ಇದೆ. ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ಮಧ್ಯಪ್ರವೇಶಿಸಲು ಯಾವುದೇ ವಿದೇಶಿ ಸಂಸ್ಥೆಗೆ ಅವಕಾಶ ಇಲ್ಲ’ ಎಂದಿದ್ದಾರೆ.

ಪ್ರತಿಭಟನಕಾರರ ಬಂಧನ
ಸಿಎಎ ವಿರೋಧಿಸಿ ಮತ್ತು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗಲಭೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲು ರಾಮಲೀಲಾ ಮೈದಾನದತ್ತ ತೆರಳುತ್ತಿದ್ದ 185 ವಿದ್ಯಾರ್ಥಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ನಗರದ ಬೇರೆಬೇರೆ ಸ್ಥಳಗಳಿಂದ ಇವರನ್ನು ಬಂಧಿಸಿ ಪೊಲೀಸ್‌ ಠಾಣೆಗೆ ಕರೆತರಲಾಗಿದೆ. ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳು ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ಪ್ರತಿಭಟನೆ ನಡೆಸಲು ಅನುಮತಿ ಕೇಳಿ ಫೆ.27ರಂದೇ ನಾವು ಮನವಿ ಸಲ್ಲಿಸಿದ್ದೆವು. ಆದರೆ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ನಮಗೆ ಸೋಮವಾರ ತಿಳಿಸಲಾಗಿತ್ತು’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಎನ್‌. ಸಾಯ್‌ ಬಾಲಾಜಿ ತಿಳಿಸಿದ್ದಾರೆ.

**

ಮಾನವ ಹಕ್ಕುಗಳ ಜಾಗತಿಕ ಮಾನದಂಡಗಳನ್ನು ಉಲ್ಲಂಘಿಸುವ ಕಾನೂನು ಮಾಡಿದ ಕೇಂದ್ರ ಸರ್ಕಾರವೇ ಹಸ್ತಕ್ಷೇಪಕ್ಕೆ ಅವಕಾಶ ಕೊಟ್ಟಿದೆ.
-ಅಹ್ಮದ್‌ ಪಟೇಲ್‌, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT