ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊತ್ತೂರು ವಿರುದ್ಧ ಪ್ರಕರಣ ದಾಖಲು

ಚುನಾವಣಾ ಆಯೋಗಕ್ಕೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ ವಿವಾದ: ಸಿಆರ್‌ಇಸಿ ದೂರು
Last Updated 17 ಮೇ 2018, 10:07 IST
ಅಕ್ಷರ ಗಾತ್ರ

ಕೋಲಾರ: 2013ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನಕಲಿ ಜಾತಿ ಪ್ರಮಾಣ
ಪತ್ರ ಸಲ್ಲಿಸಿ ವಂಚಿಸಿದ ಆರೋಪದ ಮೇಲೆ ಜಿಲ್ಲೆಯ ಮುಳಬಾಗಿಲು ಮೀಸಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ವಿರುದ್ಧ ಬುಧವಾರ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಮಂಜುನಾಥ್‌, ತಾವು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಬುಡ್ಗ ಜಂಗಮ ಜಾತಿಗೆ ಸೇರಿದವರೆಂದು ಚುನಾವಣಾ ಆಯೋಗಕ್ಕೆ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದರು.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಬೈರಾಗಿ ಜಾತಿಯ ಮಂಜುನಾಥ್‌ ಚುನಾವಣಾ ಆಯೋಗಕ್ಕೆ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಮುನಿಆಂಜಿನಪ್ಪ ರಾಜ್ಯ ಹೈಕೋರ್ಟ್‌ನಲ್ಲಿ ಧಾವೆ ಹೂಡಿದ್ದರು. ಈ ಸಂಬಂಧ ಐದು ವರ್ಷಗಳ ಕಾಲ ವಿಚಾರಣೆ ನಡೆದು ಹೈಕೋರ್ಟ್‌ ಏ.25ರಂದು ಮಂಜುನಾಥ್‌ರ ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಿತ್ತು. ಜಾತಿ ಪ್ರಮಾಣಪತ್ರ ನಕಲಿ ಎಂದು ನ್ಯಾಯಾಲಯ ಆದೇಶಿಸಿತ್ತು.

ಈ ಆದೇಶದ ಅನ್ವಯ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ (ಸಿಆರ್‌ಇಸಿ) ಇನ್‌ಸ್ಪೆಕ್ಟರ್‌ ಕೆ.ಒ.ಓಬಳರೆಡ್ಡಿ ಅವರು ನೀಡಿದ ದೂರು ಆಧರಿಸಿ ಮುಳಬಾಗಿಲು ನಗರ ಠಾಣೆ ಪೊಲೀಸರು ಮಂಜುನಾಥ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?: ಮಂಜುನಾಥ್ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಬೈರಾಗಿ ಜಾತಿಗೆ ಸೇರಿದವರಾಗಿದ್ದು, ಮೀಸಲಾತಿ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುವ ದುರುದ್ದೇಶದಿಂದ ಮುಳಬಾಗಿಲು ತಹಶೀಲ್ದಾರ್‌ಗೆ ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಬುಡ್ಗ ಜಂಗಮ ಜಾತಿಯ ಪ್ರಮಾಣಪತ್ರ ಪಡೆದುಕೊಂಡು ವಂಚಿಸಿರುವುದು ಹೈಕೋರ್ಟ್‌ ವಿಚಾರಣೆಯಿಂದ ಸಾಬೀತಾಗಿದೆ ಎಂದು ಇನ್‌ಸ್ಪೆಕ್ಟರ್‌ ಕೆ.ಒ.ಓಬಳರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.

ಮಂಜುನಾಥ್‌ ಅವರು ನಕಲಿ ಜಾತಿ ಪ್ರಮಾಣಪತ್ರದ ನೆರವಿನಿಂದ ಮುಳಬಾಗಿಲು ಮೀಸಲು ಕ್ಷೇತ್ರದಿಂದ 2013ರಲ್ಲಿ ವಿಧಾನಸಭಾ ಸದಸ್ಯರಾಗಿ ಚುನಾಯಿತರಾಗಿದ್ದು, ಸರ್ಕಾರದಿಂದ ಜನಪ್ರತಿನಿಧಿಯ ಸವಲತ್ತುಗಳನ್ನು ಪಡೆದಿದ್ದಾರೆ. ಆದರೆ, ಅವರ ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಿರುವ ಹೈಕೋರ್ಟ್‌ ಆ ಪ್ರಮಾಣಪತ್ರಕ್ಕೆ ಕಾನೂನಿನ ಮಾನ್ಯತೆ ಇಲ್ಲವೆಂದು ಹೇಳಿದೆ. ಹೀಗಾಗಿ ಅವರ ವಿಧಾನಸಭಾ ಸದಸ್ಯತ್ವವು ಕಾನೂನುಬಾಹಿರವೆಂದು ಆದೇಶಿಸಿದೆ ಎಂದು ಹೇಳಿದ್ದಾರೆ.

ನಕಲಿ ದಾಖಲೆಪತ್ರ ಸೃಷ್ಟಿ, ವಂಚನೆ ಆರೋಪ ಹಾಗೂ ದಲಿತರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಮಂಜುನಾಥ್‌ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT