ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ನಲ್ಲಿ ಟಿಕೆಟ್‌ ಗೊಂದಲ, ಭುಗಿಲೆದ್ದ ಆಕ್ರೋಶ

ವಿಧಾನಸಭೆ ಚುನಾವಣೆ: ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ನಾಯಕರ ನಿವಾಸದ ಎದುರು ಅತೃಪ್ತ ಕಾರ್ಯಕರ್ತರ ಪ್ರತಿಭಟನೆ
Last Updated 17 ನವೆಂಬರ್ 2018, 17:04 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಪಕ್ಷಾಂತರಿಗಳಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿ ರಾಜಸ್ಥಾನದ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನಿವಾಸದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ತುಘಲಕ್‌ ರಸ್ತೆಯಲ್ಲಿರುವ ರಾಹುಲ್‌ ನಿವಾಸದ ಎದುರು ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರ ದಂಡು ನೆರೆದಿತ್ತು. ಕಾಂಗ್ರೆಸ್‌ನ ಎರಡನೇ ಪಟ್ಟಿ ಹೊರಬೀಳುತ್ತಿದ್ದಂತೆಯೇ ಅವರೆಲ್ಲ ಪ್ರತಿಭಟನೆಗೆ ಮುಂದಾದರು.

ರಾಹುಲ್‌ ನಿವಾಸದಿಂದ ರಾಜ್ಯ ಘಟಕದ ಅಧ್ಯಕ್ಷ ಸಚಿನ್‌ ಪೈಲಟ್‌ ಹೊರಗೆ ಬರುತ್ತಿದ್ದಂತೆ ಅವರ ಕಾರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು. ಪೈಲಟ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಸ್ಥಳಕ್ಕೆ ಬಂದ ಕೇಂದ್ರ ಮೀಸಲು ಪಡೆ ಸಿಬ್ಬಂದಿ ಹಾಗೂ ದೆಹಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಟಿಕೆಟ್‌ ಮಾರಾಟ ಮಾಡಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ಗೆಲ್ಲುವ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

‘ಬಹಳ ವರ್ಷಗಳಿಂದ ಪಕ್ಷದ ಸಿದ್ಧಾಂತಗಳಿಗೆ ನಿಷ್ಠಾವಂತರಾಗಿ ದುಡಿಯುತ್ತಿರುವವರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ವಲಸೆ ಬಂದವರಿಗೆ ಮಣೆ ಹಾಕಲಾಗಿದೆ. ಹೀಗಾದರೆ, ಪಕ್ಷ ಗೆಲ್ಲುವುದಾದರೂ ಹೇಗೆ?’ ಎಂದು ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ.ಕಾಂಗ್ರೆಸ್ ಅಧಿಕಾರ ಹಿಡಿಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಉಂಟಾಗಿರುವ ತೊಡಕುಗಳು ಕಾಂಗ್ರೆಸ್‌ಗೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

200 ಸದಸ್ಯ ಬಲದ ವಿಧಾನಸಭೆಗೆ ಕಾಂಗ್ರೆಸ್‌ ಒಟ್ಟು 184 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

* ಪ್ರಧಾನಿ ಮೋದಿ ಅವರಿಗೆ ದೇಶದ ಸಮಸ್ಯೆಗಳಿಗಿಂತ ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆ ಕುರಿತು ಹೆಚ್ಚಿನ ಆಸಕ್ತಿ ಇದೆ

ಪಿ. ಚಿದಂಬರಂ,ಕಾಂಗ್ರೆಸ್‌ ನಾಯಕ

* ಛತ್ತೀಸಗಡದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕೇವಲ ಹತ್ತು ದಿನಗಳಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತದೆ

ರಾಹುಲ್‌ ಗಾಂಧಿ ,ಕಾಂಗ್ರೆಸ್‌ ಅಧ್ಯಕ್ಷ

ರಾಜೇ ವಿರುದ್ಧ ಜಸ್ವಂತ್‌ ಪುತ್ರ

ನವದೆಹಲಿ (ಪಿಟಿಐ): ಡಿಸೆಂಬರ್‌ 7 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ 32 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಝಾಲರಾಪಾಟನ ಕ್ಷೇತ್ರದಿಂದ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಜಸ್ವಂತ್‌ ಸಿಂಗ್‌ ಅವರ ಪುತ್ರ, ಮಾನವೇಂದ್ರ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ. ಹಾಲಿ ಶಾಸಕರಾಗಿದ್ದ ಮಾನವೇಂದ್ರ ಸಿಂಗ್‌ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಅಧ್ಯಕ್ಷರ ಪಟ್ಟಿ ನೀಡಿದ ಚಿದಂಬರಂ
ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಯಂತಹ ವಿಷಯದ ಬಗ್ಗೆ ಚರ್ಚಿಸುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಲೇವಡಿ ಮಾಡಿದ್ದಾರೆ.

ಪ್ರಧಾನಿಗೆ ನಿಜವಾಗಿಯೂ ಧೈರ್ಯವಿದ್ದರೆ ರಫೇಲ್‌ ಹಗರಣ, ಸಿಬಿಐ, ಆರ್‌ಬಿಐ, ಜಿಎಸ್‌ಟಿ, ನಿರುದ್ಯೋಗ ಸಮಸ್ಯೆ ಮತ್ತು ರೈತರ ಆತ್ಮಹತ್ಯೆಯಂತಹ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಲಿ ಎಂದು ಸವಾಲು ಹಾಕಿದ್ದಾರೆ.

ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾಗಿದ್ದ ಪ್ರಧಾನಿ ಮೋದಿ ಅವರಿಗೆ ಯಾರೆಲ್ಲ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದರು ಎಂಬ ಚಿಂತೆ ಶುರುವಾಗಿದೆ ಎಂದು ಚಿದಂಬರಂ ತಿರುಗೇಟು ನೀಡಿದ್ದಾರೆ.

ನೆಹರೂ–ಗಾಂಧಿ ಕುಟುಂಬದ ಹೊರತಾಗಿ ಬೇರೆಯವರು ಯಾರು ಐದು ವರ್ಷ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ಶುಕ್ರವಾರ ಛತ್ತೀಸಗಡ ಚುನಾವಣಾ ರ‍್ಯಾಲಿಯಲ್ಲಿ ಮೋದಿ ಸವಾಲು ಹಾಕಿದ್ದರು.

ಮೋದಿ ಸವಾಲು ಸ್ವೀಕರಿಸಿರುವ ಚಿದಂಬರಂ, ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ನೆಹರೂ–ಗಾಂಧಿ ಕುಟುಂಬದವರಲ್ಲದ 15 ಮಂದಿಯ ಪಟ್ಟಿ ನೀಡಿದ್ದಾರೆ.

ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್, ಲಾಲ್‌ ಬಹದ್ದೂರ್‌ ಶಾಸ್ತ್ರಿ, ಕೆ. ಕಾಮರಾಜ್‌, ಸೀತಾರಾಮ ಕೇಸರಿ, ಮನಮೋಹನ ಸಿಂಗ್‌ ಸೇರಿದಂತೆ ಹಲವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು ಎಂದು ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಆಚಾರ್ಯ ಕೃಪಲಾನಿ, ನೀಲಂ ಸಂಜೀವ್‌ ರೆಡ್ಡಿ, ಪಟ್ಟಾಭಿ ಸೀತಾರಾಮಯ್ಯ, ಸಂಜೀವಯ್ಯ, ಎಸ್‌. ನಿಜಲಿಂಗಪ್ಪ, ಜಗಜೀವನ್‌ ರಾಂ, ಶಂಕರ್‌ ದಯಾಳ್‌ ಶರ್ಮಾ, ಪಿ.ವಿ. ನರಸಿಂಹ ರಾವ್‌ ಮುಂತಾದವರು ಹೆಸರನ್ನು ಅವರುಪ್ರಸ್ತಾಪಿಸಿದ್ದಾರೆ.

ಬಿಜೆಪಿ ಮೂರನೇ ಪಟ್ಟಿ 6 ಶಾಸಕರಿಗೆ ಕೊಕ್‌

ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಬಿಜೆಪಿ ಎಂಟು ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಆರು ಹಾಲಿ ಶಾಸಕರಿಗೆ ಟಿಕೆಟ್‌ ನೀಡಿಲ್ಲ. ಬಿಜೆಪಿ ಈವರೆಗೆ 170 ಅಭ್ಯರ್ಥಿಗಳ ಪಟ್ಟಿಯ್ನು ಬಿಡುಗಡೆ ಮಾಡಿದೆ.

ತೆಲಂಗಾಣ: ಕಾಂಗ್ರೆಸ್‌ 3ನೇ ಪಟ್ಟಿ

ಹೈದರಾಬಾದ್‌: ಡಿಸೆಂಬರ್‌ 7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ 13 ಅಭ್ಯರ್ಥಿಗಳ ಮೂರನೇಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಈ ಮುನ್ನ ಪ್ರಟಿಸಿದ್ದ ಎರಡೂ ಪಟ್ಟಿಯಲ್ಲಿ ಟಿಕೆಟ್‌ ಪಡೆಯಲು ವಿಫಲರಾಗಿದ್ದ ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಅಧ್ಯಕ್ಷ ಪೊನ್ನಲ ಲಕ್ಷ್ಮಯ್ಯ ಅವರಿಗೆ ಜನಗಾಂವ್‌ ಕ್ಷೇತ್ರದಿಂದ ಮೂರನೇ ಪಟ್ಟಿಯಲ್ಲಿ ಟಿಕೆಟ್‌ ನೀಡಲಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌, ತೆಲುಗು ದೇಶಂ ಪಾರ್ಟಿ, ಸಿಪಿಐ ಹಾಗೂ ಟಿಜೆಎಸ್‌ ಮಹಾಮೈತ್ರಿ ಮಾಡಿಕೊಂಡಿವೆ. 119 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 94
ಸ್ಥಾನಗಳಿಗೆ ಸ್ಪರ್ಧಿಸಲಿದೆ. ಈವರೆಗೆ 88 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನಾಲ್ವರು ಅಭ್ಯರ್ಥಿಗಳ ಪಟ್ಟಿಯನ್ನು ಟಿಜೆಎಸ್‌ ಶನಿವಾರ ಬಿಡುಗಡೆ ಮಾಡಿದೆ.

‘ರಾಜಕೀಯ ನಿಲುವಲ್ಲ, ನೈತಿಕ ನಡೆ’

ಭೋಪಾಲ್ : ಗರಿಷ್ಠ ಮುಖಬೆಲೆಯ ನೋಟುಗಳನ್ನು ಏಕಾಏಕಿ ಚಲಾವಣೆಯಿಂದ ರದ್ದುಗೊಳಿಸಿದ ಕೇಂದ್ರಸರ್ಕಾರದ ಕ್ರಮ ರಾಜಕೀಯ ನಿಲುವು ಅಲ್ಲ ಎಂದುಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ನೋಟು ರದ್ದತಿಯು ಎನ್‌ಡಿಎ ಸರ್ಕಾರ ತೆಗೆದುಕೊಂಡ ದಿಟ್ಟ ನೈತಿಕ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.

ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನೋಟು ರದ್ದತಿಯ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವರಮಾನ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.

ಅಪರಾಧಿಗಳಿಗೆ ಮಾತ್ರ ಸಿಬಿಐ ಎಂದರೆ ನಡುಕ: ತಪ್ಪು ಮಾಡಿದವರು ಮಾತ್ರ ಸಿಬಿಐ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತಾರೆ
ಎಂದು ಜೇಟ್ಲಿ ಇದೇ ವೇಳೆ ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಸಿಬಿಐ ದಾಳಿ ಮತ್ತು ತನಿಖೆಗೆ ನೀಡಲಾಗಿದ್ದ ಮುಕ್ತ ಸಮ್ಮತಿಯನ್ನು ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಶುಕ್ರವಾರ ವಾಪಸ್‌ ಪಡೆದಿವೆ.

ಸಿಬಿಐಯನ್ನು ಹೊರಗಿಡುವ ಮೂಲಕ ತೃಣಮೂಲ ಕಾಂಗ್ರೆಸ್‌ ನಾಯಕರು ಶಾಮೀಲಾಗಿರುವ ಶಾರದಾ ಚಿಟ್‌ಫಂಡ್‌, ನಾರದಾ ಹಗರಣಗಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದುಜೇಟ್ಲಿ ಎಚ್ಚರಿಕೆ ನೀಡಿದ್ದಾರೆ.

ಎನ್‌ಡಿಎಗೆ ಕುಶ್ವಾಹ ಗಡುವು

ಪಟ್ನಾ: ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧ ಎನ್‌ಡಿಎ ಜತೆ ಮುನಿಸಿಕೊಂಡಿರುವ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್‌ಎಲ್‌ಎಸ್‌ಪಿ) ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ಸಮಸ್ಯೆ ಪರಿಹಾರಕ್ಕೆ
ನ.30ರವರೆಗೆ ಗಡವು ನೀಡಿದ್ದಾರೆ.

‘ಬಿಜೆಪಿಯು ನಮ್ಮ ಪಕ್ಷಕ್ಕೆ ನೀಡಿರುವ ಸೀಟುಗಳ ಸಂಖ್ಯೆ ಸ್ವೀಕಾರವಲ್ಲ. ನಮ್ಮನ್ನು ಅವಮಾನಿಸಲಾಗಿದೆ. ನಮಗೆ ಗೌರವಯುತವಾದ ಪಾಲು ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಪಕ್ಷಕ್ಕೆ ಎಷ್ಟು ಸೀಟು ನೀಡಲಾಗಿದೆ ಎಂಬುದನ್ನು ಬಹಿರಂಗ
ಪಡಿಸಲಿಲ್ಲ. ‘ಸದ್ಯ ಎನ್‌ಡಿಎ ಮೈತ್ರಕೂಟದಲ್ಲಿದ್ದೇನೆ. ಮುಂದಿನ ನಡೆಯ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ’ ಎಂದು ಹೇಳಿದ್ದಾರೆ.

’ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಭೇಟಿ ಯತ್ನ ಮುಗಿದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತ್ರ ಮಾತನಾಡುತ್ತೇನೆ’ ಎಂದು ಕುಶ್ವಾಹಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು
* ನಿಷ್ಠಾವಂತರ ಕಡೆಗಡಣೆ ಆರೋಪ

* ಟಿಕೆಟ್‌ ಮಾರಾಟದ ಆಪಾದನೆ

* ಸಚಿನ್‌ ಪೈಲಟ್‌ ಕಾರಿಗೆ ಮುತ್ತಿಗೆ ಯತ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT