ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಮುನ್ನ ಮೃಷ್ಟಾನ್ನ

Last Updated 2 ಜುಲೈ 2019, 7:10 IST
ಅಕ್ಷರ ಗಾತ್ರ

ನವದೆಹಲಿ:ಲೋಕಸಭಾ ಚುನಾವಣೆಗಳ ಹೊಸ್ತಿಲಲ್ಲಿ ಬಜೆಟ್ 'ಉಡುಗೊರೆಗಳ' ರಂಗು ರಂಗಿನ ಪೊಟ್ಟಣವನ್ನು ನರೇಂದ್ರ ಮೋದಿ ಸರ್ಕಾರ ಮತದಾರರ ಕೈಗಿಟ್ಟಿದೆ. ಚಿಕಿತ್ಸೆಗಾಗಿ ಹೊರದೇಶಕ್ಕೆ ತೆರಳಿರುವ ಅರುಣ್ ಜೇಟ್ಲಿ ಅವರ ಬದಲಿಗೆ ಪೀಯೂಷ್ ಗೋಯಲ್ ಶುಕ್ರವಾರ ಲೋಕಸಭೆಯಲ್ಲಿ ಬಜೆಟ್ ಮಂಡಿಸಿದರು.

ಚುನಾವಣಾ ಪ್ರಚಾರ ಸಮರಕ್ಕೆ ನೀಡಿದ ಚಾಲನೆಯಂತಿದ್ದ ಬಜೆಟ್ ಭಾಷಣಕ್ಕೆ ಪ್ರಧಾನಿ ಮೋದಿಯವರ ಆಕ್ರಮಣಕಾರಿ ಹಾವಭಾವಗಳು ‘ಜುಗಲ್ ಬಂದಿ’ಯಂತೆ ಬೆರೆತವು. ಮತದಾರರನ್ನು ಒಲಿಸಿಕೊಳ್ಳುವ ಜೊತೆಗೆ ಆಡಳಿತ ಪಕ್ಷದ ಸಂಸದರು ಮತ್ತು ಕಾರ್ಯಕರ್ತ ಸೇನೆಯನ್ನು ಹುರಿದುಂಬಿಸುವ ಕಾರ್ಯತಂತ್ರಗಳ ಸಾಲಿಗೆ ಬಜೆಟ್ ಕೂಡ ಸೇರಿಹೋಯಿತು.

'ಪ್ರಧಾನಮಂತ್ರಿಯವರನ್ನು ಮತ್ತೆ ಗೆಲ್ಲಿಸಿ ತರುವ ಯೋಜನೆ' ಮತ್ತು 'ಬಿಜೆಪಿ ಚುನಾವಣಾ ಪ್ರಣಾಳಿಕೆ' ಎಂಬುದಾಗಿ ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿರುವ ಇಂದಿನ ಬಜೆಟ್, 'ಎಲ್ಲ ವ್ಯಾಧಿಗಳಿಗೂ ತನ್ನಲ್ಲಿ ಔಷಧಿ ಇದೆ' ಎಂಬ ಆತ್ಮವಿಶ್ವಾಸ ಪ್ರಕಟಿಸಿತು.

ರೈತರಿಗೆ ನಗದು ಆದಾಯ ಬೆಂಬಲ ನೀಡಿದ ನಂತರವೂ ವಿತ್ತೀಯ ಕೊರತೆಯನ್ನು ಹದ್ದು ಮೀರಲು ಬಿಟ್ಟಿಲ್ಲ ಎಂಬುದು ಕಾರ್ಪೊರೆಟ್ ವಲಯದ ಸಮಾಧಾನ. ಹೀಗಾಗಿ ಷೇರು ಮಾರುಕಟ್ಟೆಯ ಸೂಚ್ಯಂಕಗಳು ಏರುಪೇರು ಕಂಡಿಲ್ಲ.

ಮಧ್ಯಮವರ್ಗ- ಕೆಳಮಧ್ಯಮವರ್ಗ, ಸಣ್ಣ ರೈತರು, ಹೈನು ಉತ್ಪಾದಕರು, ಮೀನುಗಾರರು, ಅಸಂಘಟಿತ ವಲಯಗಳ ಕಾರ್ಮಿಕರಿಗೆ ನೇರ ಆದಾಯ ಪಾವತಿ, ವೈಯಕ್ತಿಕ ಆದಾಯ ತೆರಿಗೆ ಮಿತಿ ಏರಿಕೆ, ಬಡ್ಡಿದರ ರಿಯಾಯಿತಿ, ಪಿಂಚಣಿ ನೀಡಿಕೆಯ ಭರವಸೆಗಳನ್ನು ಮಧ್ಯಂತರ ಹಣಕಾಸು ಮಂತ್ರಿ ನೀಡಿದರು. ಚುನಾವಣೆಗೆ ಮುನ್ನ 'ಸುಖಾನುಭವ' ಮೂಡಿಸುವ ಉದ್ದೇಶದ ಈ ಬಜೆಟ್ ಅರ್ಥನೀತಿಯ ಒಳಿತು ಕೆಡುಕುಗಳ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ. 2019-20ರ ಸಾಲಿಗೆ ಸಂಬಂಧಿಸಿದಂತೆ ಇದೇ ಅಂತಿಮ ಬಜೆಟ್ ಅಲ್ಲ. ಮೇ ತಿಂಗಳಲ್ಲಿ ಹೊಸ ಸರ್ಕಾರ ಆರಿಸಿ ಬಂದರೆ ಜೂನ್‌ನಲ್ಲಿ ಪೂರ್ಣಪ್ರಮಾಣದ ಮತ್ತೊಂದು ಬಜೆಟ್ ಮಂಡಿಸಲಿದೆ.

ಚುನಾವಣಾ ವರ್ಷದಲ್ಲಿ ಸರ್ಕಾರಗಳು ಪೂರ್ಣ ಬಜೆಟ್ ಮಂಡಿಸದಿರುವುದು ಸಾಮಾನ್ಯ ಸಂಪ್ರದಾಯ. ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡು ಪೂರ್ಣಪ್ರಮಾಣದ ಬಜೆಟ್ ಮಂಡಿಸುವ ತನಕ ಮಾಡಲೇಬೇಕಿರುವ ಅನಿವಾರ್ಯ ವೆಚ್ಚಗಳಿಗೆ ಲೇಖಾನುದಾನ ಅಥವಾ ಮಧ್ಯಂತರ ಬಜೆಟ್ ಮಂಡಿಸಿ ಸಂಸತ್ತಿನ ಅನುಮೋದನೆ ಪಡೆಯಲಾಗುತ್ತದೆ. ಆದರೆ ಇಂದು ಮಂಡಿಸಲಾದ ಬಜೆಟ್, ಇಂತಹ ಇತಿಮಿತಿಗಳನ್ನು ದಾಟಿ ಭಾರಿ ವೆಚ್ಚಗಳು ಮತ್ತು ದೊಡ್ಡ ತೆರಿಗೆ ರಿಯಾಯಿತಿಗಳ ನಿರ್ಧಾರಗಳನ್ನು ಪ್ರಕಟಿಸಿದೆ. ಹೊಸ ಸರ್ಕಾರಕ್ಕೆ ತನ್ನ ನೀತಿ ನಿರ್ಧಾರಗಳ ಭಾರವನ್ನು ದಾಟಿಸಕೂಡದು ಎಂಬ ಸಂಪ್ರದಾಯವನ್ನು ಬದಿಗೊತ್ತಿದಂತಾಗಿದೆ.

ವಿಶೇಷವಾಗಿ ಸಣ್ಣ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಯ ನೇರ ನಗದು ಆದಾಯ ಪಾವತಿ ಯೋಜನೆ ಮತ್ತು ಕೆಳಮಧ್ಯಮವರ್ಗದ ತೆರಿಗೆದಾರರ ಆದಾಯಮಿತಿ ಹೆಚ್ಚಳ, ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡಿಕೆಯ ಕ್ರಮಗಳ ಕುರಿತು ಆಳುವ ಪಕ್ಷದ ಸದಸ್ಯರು ಸದನದಲ್ಲಿ ಭಾರೀ ಉತ್ಸಾಹ ವ್ಯಕ್ತಪಡಿಸಿದರು. ಬಜೆಟ್ ಮಂಡನೆ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನಮೂರ್ತಿಯಂತೆ ತುಟಿ ಹೊಲಿದು ಕೊಂಡು ಕುಳಿತಿದ್ದರು.

ಆರಂಭದಲ್ಲಿ ಬಿಗುವಿನಿಂದ ಸೆಟೆದಿದ್ದ ಅವರ ಮುಖಭಾವ ಕ್ರಮೇಣ ಸಡಿಲಗೊಂಡು ಆತ್ಮವಿಶ್ವಾಸ ಬಿಂಬಿಸಿತು. ತಮ್ಮ ಸರ್ಕಾರದ ಬಜೆಟ್ ಘೋಷಣೆಗಳು ಒಂದೊಂದಾಗಿ ಹೊರಬೀಳುತ್ತಿದ್ದಂತೆ ಉತ್ಸಾಹ- ಆವೇಶಭರಿತರಾಗಿ ಮೇಜು ಗುದ್ದಿ ಸ್ವಾಗತಿಸಿದರು. ಅವರ ಸಹೋದ್ಯೋಗಿ ಮಂತ್ರಿಗಳು ಮತ್ತು ಸಂಸದರು ಕೂಡ ಅವರ ಹುಮ್ಮಸ್ಸನ್ನು ಸರಿಗಟ್ಟುವುದು ಆಗಲಿಲ್ಲ.

ದೇಶದಲ್ಲಿ ಉದ್ಯೋಗಸೃಷ್ಟಿ ಪಾತಾಳಕ್ಕೆ ಕುಸಿದಿದ್ದು, ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗದ ಸ್ಥಿತಿ ಉಂಟಾಗಿದೆ ಎಂಬುದಾಗಿ ಅಧಿಕೃತ ಅಂಕಿ ಅಂಶಗಳು ಹೊರಹಾಕಿರುವ ಕಠೋರ ಸತ್ಯ ಮೋದಿ ಸರ್ಕಾರವನ್ನು ವಿಚಲಿತಗೊಳಿಸಿತ್ತು. 2016ರ ಕಡೆಯ ಭಾಗದಲ್ಲಿ ಮೋದಿ ಸರ್ಕಾರ ಕೈಗೊಂಡ ನೋಟು ರದ್ದು ಕ್ರಮದ ನಂತರ ನಡೆದಿದ್ದ ಮೊದಲ ಸಮೀಕ್ಷೆಯ ಈ ವರದಿಯ ಸೋರಿಕೆ ಆಳುವ ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿದೆ.

ಭುಗಿಲೆದ್ದಿರುವ ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ಏನೂ ಮಾಡಿಲ್ಲವೆಂಬ ಕಟು ಟೀಕೆಯನ್ನೂ ಮೋದಿ ಸರ್ಕಾರ ಎದುರಿ
ಸಿತ್ತು. ಇತ್ತೀಚಿನ ದಿನಗಳಲ್ಲಿ ಹೊರಬೀಳುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಪಾಲಿಗೆ ಹಿನ್ನಡೆಯನ್ನೇ ಸಾರಿವೆ. ಎರಡನೆಯ ಅವಧಿಗೆ ಆರಿಸಿಬರುವುದಾಗಿ ಮೋದಿ-ಶಾ ಜೋಡಿಯ ಅಚಲ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ಕ್ರಾಂತಿ
ಕಾರಿ ಕ್ರಮ ಎಂದು ಬಿಜೆಪಿ ಹೇಳಿದ್ದ ನೋಟು ರದ್ದು ಕ್ರಮವು ಅಂತಿಮವಾಗಿ ದೇಶದ ಅರ್ಥಸ್ಥಿತಿಗೆ ಕೊಡಲಿಯೇಟನ್ನೇ ನೀಡಿತು ಎಂಬ ಅಂಶ ದಿನಗಳೆದಂತೆ ಮತ್ತಷ್ಟು ಬಲವಾಗಿ ಹೊರಹೊಮ್ಮತೊಡಗಿದೆ. ಶ್ರೀಮಂತರು ಹಣ ಕಳೆದುಕೊಡರೆಂಬ ಬಡಜನರ ಆರಂಭಿಕ ಹಂಗಾಮಿ ಸಮಾಧಾನ ಈಗ ಮರೆಯಾಗಿದೆ.

ಮೂರು ರಾಜ್ಯ ಸರ್ಕಾರಗಳನ್ನು ಬಿಜೆಪಿ ಕೈಯಿಂದ ಕಿತ್ತುಕೊಂಡ ಕಾಂಗ್ರೆಸ್ ಪಕ್ಷ ಚಿಗುರತೊಡಗಿದೆ.

‘ಪಪ್ಪು’ ಎಂದು ಮೂದಲಿಸಿ ಮೂಲೆಗೆ ಒತ್ತಲಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವ ಹಠಾತ್ತನೆ ಹೊಳಪು ಪಡೆದಿದೆ. ಅವರ ಸೋದರಿ ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕೀಯ ಪ್ರವೇಶ ಕಾಂಗ್ರೆಸ್ ಪಕ್ಷಕ್ಕೆ ಹೊಸ ಹುರುಪು ತುಂಬಿದೆ. ಅಧಿಕಾರಕ್ಕೆ ಬಂದರೆ ಎಲ್ಲ ಬಡಜನರಿಗೂ ಕನಿಷ್ಠ ನಿಗದಿತ ಆದಾಯದ ನೇರ ನಗದುಪಾವತಿ ಮಾಡುವ ರಾಹುಲ್ ಭರವಸೆ ಚರ್ಚೆಯನ್ನು ಹುಟ್ಟಿ ಹಾಕಿದೆ. ಈ ಹಂತದಲ್ಲಿ ಮತದಾರರ ವಿಶ್ವಾಸ ಗೆಲ್ಲಲೇಬೇಕಿರುವ ಅನಿವಾರ್ಯ ಮೋದಿಯವರದು. ಪೂರಕ ಸಾಧನವಾಗಿ ಅವರು ಬಜೆಟ್‌ಗೆ ಶರಣಾಗಿರುವುದು ಸ್ವಾಭಾವಿಕ.

ವಿರೋಧಪಕ್ಷಗಳಿಂದ ಈಗಾಗಲೆ ಹುಸಿ ಭರವಸೆಗಳ ಆಪಾದನೆ ಎದುರಿಸಿರುವ ಮೋದಿ ಸರ್ಕಾರದ ಹಾಲಿ ಬಜೆಟ್ ಭರವಸೆಗಳು ಕೂಡ ಭೂತಗನ್ನಡಿಯ ಪರೀಕ್ಷೆಗೆ ಈಡಾಗಲಿವೆ. ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ವರ್ಷಕ್ಕೆ ತಲಾ ಒಟ್ಟು ಆರು ಸಾವಿರ ರೂಪಾಯಿ ನೀಡುವ ಪ್ರಧಾನಮಂತ್ರಿ ರೈತ ಸಮ್ಮಾನ ನಿಧಿ ಯೋಜನೆಯನ್ನು ಎಕರೆಗೆ ಎಂಟು ಸಾವಿರ ರೂಪಾಯಿ ನೀಡುವ ತೆಲಂಗಾಣದ 'ರೈತ ಬಂಧು' ಯೋಜನೆಗೆ ಹೋಲಿಸಿ ನೋಡಲಾಗುತ್ತಿದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳ ಅಗಾಧತೆಯ ಎದುರು ಕೇಂದ್ರ ಸರ್ಕಾರ ನೀಡಲಿರುವ ಪರಿಹಾರ ಅತ್ಯಲ್ಪ ಎಂಬ ನಿರಾಸೆ-ಟೀಕೆ ಈಗಾಗಲೆ ವ್ಯಕ್ತವಾಗಿದೆ. ಜಮೀನಿನ ಮಾಲೀಕರಲ್ಲದೆ ಕೇವಲ ಉಳುಮೆ ಮಾಡುವ ಗೇಣಿದಾರರಿಗೆ ಈ ನಗದು ಪಾವತಿ ದಕ್ಕುವ ಸೂಚನೆಗಳಿಲ್ಲ. ಆದರೆ ಮೋದಿ ಸರ್ಕಾರ ಈ ಯೋಜನೆಯ ಚುನಾವಣಾ ಯಶಸ್ಸಿನ ಕುರಿತು ಮೋದಿ ಸರ್ಕಾರಕ್ಕೆ ಅನುಮಾನವಿಲ್ಲ. ತಲಾ ಎರಡು ಸಾವಿರ ರೂಪಾಯಿಗಳ ಮೂರು ಕಂತುಗಳ ಪೈಕಿ ಮೊದಲನೆಯದು ಚುನಾವಣೆ ಮತದಾನಕ್ಕೆ ಮುನ್ನವೇ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ಈ ಬಾಬ್ತಿಗಾಗಿ ಬಜೆಟ್ನಲ್ಲಿ 20 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.

ಬಡ ರೈತನಿಗೆ ‘ಸಮ್ಮಾನ’

ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರ ಬ್ಯಾಂಕ್‌ ಖಾತೆಗೆ ವರ್ಷಕ್ಕೆ ₹6,000 ವರ್ಗಾವಣೆ

3 ಕಂತುಗಳಲ್ಲಿ ₹2,000ದಂತೆ ಹಣ ನೀಡಿಕೆ

12 ಕೋಟಿ ರೈತರಿಗೆ ಯೋಜನೆಯ ಪ್ರಯೋಜನ

2018ರ ಡಿಸೆಂಬರ್‌ 1ರಿಂದ ಪೂರ್ವಾನ್ವಯ, ಹಾಗಾಗಿ, ಮಾರ್ಚ್‌ ಮೊದಲೇ ಮೊದಲ ಕಂತು ರೈತರಿಗೆ ಸಿಗಲಿದೆ

ಕಿಸಾನ್‌ ಕ್ರೆಡಿಟ್‌ ಕಾರ್ಡ್ ಮೂಲಕ ಸಾಲ ಪಡೆದರೆ ಬಡ್ಡಿಯಲ್ಲಿ ಶೇ 2ರಷ್ಟು ವಿನಾಯಿತಿ

ಗೋ ಸಂರಕ್ಷಣೆಗೆ ರಾಷ್ಟ್ರೀಯ ಆಯೋಗ. ಹೈನುಗಾರಿಕೆ ಉತ್ತೇಜನಕ್ಕೆ ಕಾಮಧೇನು ಯೋಜನೆ

ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ

ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ 2ರಷ್ಟು ಬಡ್ಡಿ ರಿಯಾಯಿತಿ. ಸಾಲ ಸಕಾಲದಲ್ಲಿ ಮರುಪಾವತಿ ಮಾಡಿದ ರೈತರಿಗೆ ಶೇ 3ರಷ್ಟು ಬಡ್ಡಿ ವಿನಾಯಿತಿ

ಗ್ರಾಮಗಳಲ್ಲಿ ಡಿಜಿಟಲ್ ಕ್ರಾಂತಿ

ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಗ್ರಾಮಗಳಲ್ಲಿ ಡಿಜಿಟಲ್ ಕ್ರಾಂತಿ

ನರೇಗಾ ಯೋಜನೆಗೆ ₹ 60 ಸಾವಿರ ಕೋಟಿ

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಲಾಭ ಪಡೆದವರಲ್ಲಿ ಶೇ 70ಕ್ಕಿಂತ ಹೆಚ್ಚು ಮಂದಿ ಮಹಿಳೆಯರು

ಮುದ್ರಾ ಯೋಜನೆ ಅಡಿ ₹7.23 ಲಕ್ಷ ಕೋಟಿ ಸಾಲ ವಿತರಣೆ

ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಎನ್‌ಡಿಎ ಅವಧಿಯಲ್ಲಿ ಗೃಹ ನಿರ್ಮಾಣ 5 ಪಟ್ಟು ಮತ್ತು ಗ್ರಾಮೀಣ ರಸ್ತೆಯ ನಿರ್ಮಾಣ ಮೂರು ಪಟ್ಟು ಹೆಚ್ಚಳ

2019–20 ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ₹19 ಸಾವಿರ ಕೋಟಿ ಮತ್ತು ನರೇಗಾ ಯೋಜನೆಗೆ ₹60 ಸಾವಿರ ಕೋಟಿ ರೂಪಾಯಿ ಮೀಸಲು

2018–19ರಲ್ಲಿ ಬಡವರು ಮತ್ತು ಮಧ್ಯಮ ವರ್ಗದವರ ಆಹಾರಧಾನ್ಯಕ್ಕೆ ₹1.7 ಕೋಟಿ ಲಕ್ಷ ವೆಚ್ಚ

ನಾಲ್ಕು ವರ್ಷಗಳಲ್ಲಿಬಡವರಿಗೆ ನಿರ್ಮಿಸಲಾದ ಮನೆಗಳ ಸಂಖ್ಯೆ 1.53 ಕೋಟಿ

ಗ್ರಾಮೀಣ ನೈರ್ಮಲ್ಯ ಶೇ 98ರಷ್ಟು ಸಾಧನೆ

ಒಂದು ಲಕ್ಷ ಡಿಜಿಟಲ್‌ ಗ್ರಾಮ

ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಹಳ್ಳಿಗಳನ್ನು ಡಿಜಿಟಲ್‌ ಗ್ರಾಮಗಳಾಗಿ ರೂಪಿಸಲು ಸರ್ಕಾರ ಉದ್ದೇಶಿಸಿದೆ. ಅಲ್ಲದೆ, ಇವುಗಳನ್ನು‘ಡಿಜಿಟಲ್‌ ವಿಲೇಜ್‌’ಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಕೃತಕ ಬುದ್ಧಿಮತ್ತೆ (ಎಐ) ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ಸರ್ಕಾರ ಹೇಳಿದೆ. ತಂತ್ರಜ್ಞಾನವನ್ನು ನಾಗರಿಕ ಸೇವೆಗಳಿಗೆ ಬಳಸಿಕೊಳ್ಳುವ ಕಾರ್ಯವನ್ನು ಈ ಕೇಂದ್ರಗಳು ಮಾಡಲಿವೆ.

ಇದರೊಂದಿಗೆ, ಡಿಜಿಟಲ್‌ ಗ್ರಾಮಗಳ ನಿರ್ಮಾಣ, ಒಳನಾಡು ಸಾರಿಗೆ ಅಭಿವೃದ್ಧಿಗೆ ಬಜೆಟ್‌ ಆದ್ಯತೆ ನೀಡಿದೆ.

* 2030ರ ವೇಳೆಗೆ ಸಂಪೂರ್ಣ ಡಿಜಿಟಲ್‌ ಆರ್ಥಿಕ ವ್ಯವಸ್ಥೆ ನಿರ್ಮಾಣ. ಸರ್ಕಾರದ ಪ್ರಕ್ರಿಯೆಗಳು ಮತ್ತು ಖಾಸಗಿ ವಹಿವಾಟುಗಳ ಡಿಜಿಟಲೀಕರಣ.

* ಉಡಾನ್‌ ಯೋಜನೆಯಡಿ ನಿರ್ಮಾಣವಾಗುತ್ತಿರುವ 100 ವಿಮಾನ ನಿಲ್ದಾಣಗಳ ಪಟ್ಟಿಗೆ ಸಿಕ್ಕಿಂ ಏರ್‌ಪೋರ್ಟ್‌ಸೇರ್ಪಡೆ

* ಸಾಗರಮಾಲಾ ಯೋಜನೆಯಡಿ ಈಶಾನ್ಯ ರಾಜ್ಯಗಳಲ್ಲಿಯೂ ಸರಕು ಸಾಗಣೆ ಹಡಗು ಮಾರ್ಗ ಅಭಿವೃದ್ಧಿ, ಬಂದರು ನಿರ್ಮಾಣ ಮತ್ತು ಒಳನಾಡು ಜಲಸಾರಿಗೆ ಅಭಿವೃದ್ಧಿ.

* ಸರಕು ಸಾಗಣೆ ಹಡಗುಗಳ ಸಂಚಾರ ಹಾಗೂ ಆಮದು ಮತ್ತು ರಫ್ತು ಉತ್ತೇಜಿಸುವ ನಿಟ್ಟಿನಲ್ಲಿ ಬ್ರಹ್ಮಪುತ್ರ ಸಂಚಾರ ಮಾರ್ಗ ಹಾಗೂ ಕರಾವಳಿ ಪ್ರದೇಶ ಅಭಿವೃದ್ಧಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT