ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯದಲ್ಲಿ ಏಕತೆಯೇ ನಮ್ಮ ಹಿರಿಮೆ: ಮೋದಿ

ರಾಷ್ಟ್ರೀಯ ಏಕತಾದಿನ ವೈವಿಧ್ಯತೆಯೇ ದುಷ್ಟಶಕ್ತಿಗಳಿಗೆ ಸವಾಲು l ಗೋಡೆಯಂತಿದ್ದ 370ನೇ ವಿಧಿ ರದ್ದತಿ ಸಮರ್ಥನೆ
Last Updated 31 ಅಕ್ಟೋಬರ್ 2019, 19:47 IST
ಅಕ್ಷರ ಗಾತ್ರ

ಕೆವಡಿಯಾ (ಗುಜರಾತ್) : ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಶ್ಮೀರದ ವಿಶೇಷಾಧಿಕಾರವೇ ಅಲ್ಲಿ ಭಯೋತ್ಪಾದನೆಯ ಬೆಳವಣಿಗೆಗೆ ಕಾರಣವಾಗಿತ್ತು ಎಂದು ಹೇಳಿದ್ದಾರೆ.

‘ರಾಷ್ಟ್ರೀಯ ಏಕತಾ ದಿನ’ವಾದ ಗುರುವಾರದಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ನಮನ ಸಲ್ಲಿಸಿದ ಪ್ರಧಾನಿ, ವಿವಿಧತೆಯಲ್ಲಿ ಏಕತೆಯೇ ನಮ್ಮ ಹೆಮ್ಮೆ ಎಂದು ಬಣ್ಣಿಸಿದರು. ದೇಶದ ಈ ವೈವಿಧ್ಯವೇ ದುಷ್ಟಶಕ್ತಿಗಳಿಗೆ ಅತಿದೊಡ್ಡ ಸವಾಲಾಗಿದೆ ಎಂದರು.

ಅಕ್ಟೋಬರ್ 31ರಿಂದ ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೊಸ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದಿವೆ.‘ಜಮ್ಮು–ಕಾಶ್ಮೀರ ಹಾಗೂ ಲಡಾಖ್‌ನ ಹೊಸ ವ್ಯವಸ್ಥೆಯ ಅರ್ಥ ಎರಡೂ ಗಡಿಯಲ್ಲಿ ಗೆರೆ ಎಳೆಯುವುದಲ್ಲ. ಗಟ್ಟಿ ಭರವಸೆಯ ಸಂಪರ್ಕ ಬೆಸೆಯುವುದು ಕೇಂದ್ರಾಡಳಿತ ಪ್ರದೇಶ ರಚನೆಯ ಉದ್ದೇಶ’ ಎಂದು ಮೋದಿ ಹೇಳಿದರು.

ಭಾರತದ ವಿರುದ್ಧ ಯುದ್ಧಗಳಲ್ಲಿ ಗೆಲ್ಲಲಾರದವರು ದೇಶದ ಐಕ್ಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ
ಎಂದುಪಾಕಿಸ್ತಾನದ ವಿರುದ್ಧ ಹರಿಹಾಯ್ದರು. ‘ಮೂರು ದಶಕಗಳ ಭಯೋತ್ಪಾದನೆಯಲ್ಲಿ ಸುಮಾರು 40 ಸಾವಿರ ಜನರು ಪ್ರಾಣ ತೆತ್ತಿದ್ದಾರೆ. ಕೇವಲ ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆಯನ್ನು ಪ್ರಚೋದಿಸಿದ್ದ ನೆರೆದೇಶದವರು ದಶಕಗಳ ಕಾಲ ಒಗ್ಗಟ್ಟು ಮುರಿಯಲು ಯತ್ನಿಸಿ ಸೋತಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಸರಿಯಾದ ನಿರ್ಧಾರ’ ಎಂದು ಪ್ರಧಾನಿ ಹೇಳಿದರು.

‘ಗೋಡೆಯ ರೀತಿ ಅಡ್ಡಿಯಾಗಿದ್ದ ಕಾಶ್ಮೀರದ ವಿಶೇಷಾಧಿಕಾರವು ಜನರನ್ನು ಪ್ರತ್ಯೇಕಿಸಿತ್ತು. ಈ ಗೋಡೆಯೇ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದವನ್ನು ಪೋಷಿಸುತ್ತಿತ್ತು. ಆ ಗೋಡೆ ಇಂದು ನೆಲಸಮವಾಗಿದೆ ಎಂದು ಸರ್ದಾರ್ ಪಟೇಲ್ ಅವರಿಗೆ ಹೆಮ್ಮೆಯಿಂದ ಹೇಳಲು ಇಚ್ಛಿಸುತ್ತೇನೆ’ ಎಂದು ಮೋದಿ ಹೇಳಿದರು.

‘ತಾವು ಕಾಶ್ಮೀರ ವಿಷಯವನ್ನು ನಿಭಾಯಿಸಿದ್ದರೆ, ಅದು ಪರಿಹಾರ ಕಾಣಲು ಸುದೀರ್ಘ ಸಮಯ ಹಿಡಿಯುತ್ತಿರಲಿಲ್ಲ ಎಂದು ಪಟೇಲ್ ಒಮ್ಮೆ ಹೇಳಿದ್ದರು’ ಎಂದು ಪ್ರಧಾನಿ ಹೇಳಿದರು. ಈ ಮೂಲಕ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಏಟು ನೀಡಿದರು. ಕಾಶ್ಮೀರದ ಸಮಸ್ಯೆಗೆ ನೆಹರೂ ಅವರ ನಿರ್ಧಾರಗಳೇ ಕಾರಣ ಎಂದು ಬಿಜೆಪಿ ಹಿಂದಿನಿಂದಲೂ ಆರೋಪಿಸುತ್ತಾ ಬಂದಿದೆ.

ಏಕತಾ ಪ್ರತಿಮೆ ಬಳಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಪ್ರಧಾನಿ, ಸಭಿಕರ ಜತೆ ರಾಷ್ಟ್ರೀಯ ಏಕತಾ ಪ್ರತಿಜ್ಞೆ ಸ್ವೀಕರಿಸಿದರು. 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ನಸೀರ್ ಅಹಮದ್ ಅವರ ಪತ್ನಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪಟೇಲ್ ಅವರ ಪ್ರತಿಮೆಗೆ ಹೆಲಿಕಾಪ್ಟರ್‌ಗಳು ಹೂವಿನ ಮಳೆಗರೆದವು. ಗುಜರಾತ್ ಪೊಲೀಸರು, ಜಮ್ಮು–ಕಾಶ್ಮೀರ ಪೊಲೀಸರು, ಕೇಂದ್ರೀಯ ಮೀಸಲು ಪಡೆ ಹಾಗೂ ಗಡಿಭದ್ರತಾ ಪಡೆ ಸಿಬ್ಬಂದಿ ಏಕತಾ ಪೆರೇಡ್ ನಡೆಸಿದರು.

ಪಟೇಲ್ ಪರಂಪರೆ: ಬಿಜೆಪಿ–ಕಾಂಗ್ರೆಸ್ ವಾಕ್ಸಮರ

ಪಟೇಲ್ ಅವರನ್ನು ತಮ್ಮವರು ಎಂದು ಹೇಳಿಕೊಳ್ಳಲು ಕಾಂಗ್ರೆಸ್–ಬಿಜೆಪಿ ಜಿದ್ದಿಗೆ ಬಿದ್ದಿವೆ. ಬಿಜೆಪಿಯವರು ಎಂದು ಹೇಳಿಕೊಳ್ಳಲು ಯಾವುದೇ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಅವರ ಬಳಿ ಇಲ್ಲ ಎಂಬುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಗುರುವಾರ ಮಾಡಿದ ಟ್ವೀಟ್‌ ಬಿಜೆಪಿಯನ್ನು ಕೆರಳಿಸಿದ್ದು, ವಾಕ್ಸಮರಕ್ಕೆ ಕಾರಣವಾಯಿತು.

ಪಟೇಲ್ ಅವರಿಗೆ ಗೌರವ ಸಲ್ಲಿಸುವ ಬಿಜೆಪಿ ನಿರ್ಧಾರ ಒಳ್ಳೆಯದು. ಇದರಿಂದ ಎರಡು ವಿಷಯಗಳು ಸ್ಪಷ್ಟಗೊಂಡಿವೆ. ಅವರ ಬಳಿ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಿಲ್ಲ. ಬಹುತೇಕ ಎಲ್ಲರೂ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ. ಪಟೇಲ್ ಅವರ ಶತ್ರುಗಳೂ ಅವರನ್ನು ಪೂಜ್ಯ ಭಾವದಿಂದ ಕಾಣುತ್ತಾರೆ ಎಂಬುದು ಸ್ಪಷ್ಟವಾಗಿದೆ. ಪಟೇಲ್ ಅವರದ್ದು ಕಾಂಗ್ರೆಸ್‌ ಸಿದ್ಧಾಂತ. ಆರ್‌ಎಸ್‌ಎಸ್‌ ಅನ್ನು ತೀವ್ರವಾಗಿ ವಿರೋಧಿಸಿದ್ದರು

-ಪ್ರಿಯಾಂಕಾ ಗಾಂಧಿ,ಎಐಸಿಸಿ ಪ್ರಧಾನ ಕಾರ್ಯದರ್ಶಿ

ಪಟೇಲ್ ಅವರ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಗೌರವ ಇಲ್ಲ. ಟ್ವಿಟರ್‌ನಲ್ಲಿ ಟೀಕೆ ಮಾಡುವುದು ಸುಲಭ. ಅವರಿಗೆ ನಿಜಕ್ಕೂ ಗೌರವವಿದ್ದಿದ್ದೇ ಆದಲ್ಲಿ, ಅವರು ಏಕತೆಗಾಗಿ ಓಟದಲ್ಲಿ ಭಾಗಿಯಾಗಬೇಕಿತ್ತು. ಕಾಶ್ಮೀರದ ವಿಶೇಷಾಧಿಕಾರ ರದ್ದತಿಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ಪಟೇಲ್ ಅವರ ಹಾದಿಯಿಂದ ದೂರವಿದೆ ಎಂದು ಸ್ಪಷ್ಟಪಡಿಸಿದೆ

ಸ್ಮೃತಿ ಇರಾನಿ,ಕೇಂದ್ರ ಸಚಿವೆ

ಪ್ರಿಯಾಂಕಾ ಮತ್ತು ಅವರ ಪಕ್ಷವು ಒತ್ತಾಯದಿಂದ ಪಟೇಲ್ ಅವರನ್ನು ಗೌರವಿಸುತ್ತಿದೆ. ರಾಷ್ಟ್ರೀಯತೆ ವಿಚಾರದಲ್ಲಿ ಆರ್‌ಎಸ್‌ಎಸ್ ಹಾಗೂ ಪಟೇಲ್ ಅವರ ದೃಷ್ಟಿಕೋನ ಒಂದೇ. ನೆಹರೂ ಸಂಪುಟಕ್ಕೆ ರಾಜೀನಾಮೆ ನೀಡಲು ಪಟೇಲ್ ನಿರ್ಧರಿಸಿದ್ದಾದರೂ ಏಕೆ? ಪ್ರಿಯಾಂಕಾ ಇತಿಹಾಸವನ್ನು ಮತ್ತೆ ಓದಿಕೊಳ್ಳಲಿ.

ರಾಕೇಶ್ ಸಿನ್ಹಾ,
ಬಿಜೆಪಿ ಮುಖಂಡ

ಭಯೋತ್ಪಾದನೆಯ ಹೆಬ್ಬಾಗಿಲು ಬಂದ್: ಶಾ

ನವದೆಹಲಿ:‘ಸಂವಿಧಾನದ 370 ಹಾಗೂ 35ಎ ವಿಧಿಗಳು ಜಮ್ಮು ಕಾಶ್ಮೀರದ ಭಯೋತ್ಪಾದನೆಯ ಹೆಬ್ಬಾಗಿಲು ಆಗಿದ್ದವು. ಸಂಪೂರ್ಣ ಒಕ್ಕೂಟ ರಾಷ್ಟ್ರ ಕಟ್ಟುವ ಸರ್ದಾರ್ ಪಟೇಲ್ ಅವರ ಕನಸನ್ನು ನರೇಂದ್ರ ಮೋದಿ ಅವರು ನನಸಾಗಿಸಿದ್ದು, ಭಯೋತ್ಪಾದನೆಯ ಪ್ರವೇಶ ದ್ವಾರ ಬಂದ್ ಮಾಡಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಆಂತರಿಕ ಭದ್ರತೆಯೇ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆದ್ಯತೆಯ ವಿಷಯ ಎಂದ ಅವರು ಗಡಿಯಲ್ಲಿ ಕಣ್ಗಾವಲು, ಖೋಟಾ ನೋಟು ಸಾಗಣೆಗೆ ತಡೆಯಂತಹ ಹಲವು ದಿಟ್ಟ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದರು.

‘ವಿಶೇಷಾಧಿಕಾರ ರದ್ದುಗೊಳಿಸುವ ವಿಚಾರವನ್ನು ಹಿಂದೆ ಯಾರೂ ಮುಟ್ಟಲು ಹೋಗಿರಲಿಲ್ಲ. 70 ವರ್ಷಗಳಲ್ಲಿ ಎಲ್ಲರೂ ಇದನ್ನು ಅಲಕ್ಷಿಸಿದ್ದರು.500ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ ಪಟೇಲ್ ಅವರ ಮೇಲೆ ಮಹಾತ್ಮಾ ಗಾಂಧೀಜಿ ಅವರಿಗೆ ಅಪಾರ ವಿಶ್ವಾಸವಿತ್ತು. ಜಮ್ಮು ಕಾಶ್ಮೀರವನ್ನು ಒಕ್ಕೂಟಕ್ಕೆ ಸೇರಿಸುವ ಕೆಲಸವನ್ನು ಮೋದಿ ಮಾಡಿದ್ದಾರೆ’ ಎಂದು ಶಾ ಹೇಳಿದರು.

‘ಭಾರತರತ್ನ ವಿಳಂಬದ ಹಿಂದಿನ ಶಕ್ತಿ ಯಾರು?’

ಪಟ್ನಾ: ಭಾರತ ಒಕ್ಕೂಟವನ್ನು ಕಟ್ಟಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ದೇಶದ ಅತ್ಯುನ್ನತ ಗೌರವ ‘ಭಾರತರತ್ನ’ ಪುರಸ್ಕಾರ ನೀಡಲು ವಿಳಂಬವಾಗಿದ್ದು ಏಕೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸದ ಅವರು, ವಿಳಂಬಕ್ಕೆ ಕಾರಣವಾದ ಹಿಂದಿನ ಶಕ್ತಿಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ತಕ್ಷಣ ತಿರುಗೇಟು ನೀಡಿರುವ ಕಾಂಗ್ರೆಸ್, ಇಂತಹ ಗಂಭೀರ ಸಂದರ್ಭವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕೇಂದ್ರ ಸಚಿವರ ಯತ್ನವನ್ನು ಟೀಕಿಸಿದೆ.

‘ಪಟೇಲ್ ಅವರು ನಿಧನರಾದ ನಾಲ್ಕು ದಶಕಗಳ ಬಳಿ 1991ರಲ್ಲಿ ಮರಣೋತ್ತರವಾಗಿ ಭಾರತರತ್ನ ಪುರಸ್ಕಾರ ನೀಡಲಾಯಿತು. ಅವರ ಸಾಧನೆ ಏನೆಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಇಂದಿರಾಗಾಂಧಿ, ವಿ.ವಿ. ಗಿರಿ ಅವರ ಬಳಿಕ ಉಕ್ಕಿನ ಮನುಷ್ಯನಿಗೆ ಪುರಸ್ಕಾರ ನೀಡಲಾಯಿತು’ ಎಂದು ಪ್ರಸಾದ್ ಹೇಳಿದ್ದಾರೆ.

ಪಟೇಲ್ ಅವರ ದೂರದರ್ಶಿತ್ವದಿಂದಾಗಿ ಇಂದು ಭಾರತ ಏಕತೆಯಿಂದ ಕೂಡಿದೆ. ದೇಶವಿರೋಧಿ ಶಕ್ತಿಗಳು ಜಾಗೃತವಾಗಿದ್ದು, ದೇಶ ಒಡೆಯಲು ಸಂಚು ರೂಪಿಸುತ್ತಿವೆ
-ಯೋಗಿ ಆದಿತ್ಯನಾಥ,ಉತ್ತರ ಪ್ರದೇಶ ಮುಖ್ಯಮಂತ್ರಿ

ಪಟೇಲ್‌ ಅವರಿಗೆ ಅರ್ಹ ಗೌರವ ಸಿಗಲಿಲ್ಲ. ಅವರನ್ನು ಹಿನ್ನೆಲೆಗೆ ಸರಿಸುವ ಯತ್ನವೂ ನಡೆಯಿತು. ಬಹಳ ವರ್ಷ ಅವರಿಗೆ ಭಾರತರತ್ನ ಸಿಗಲಿಲ್ಲ
ಅಮಿತ್ ಶಾ, ಕೇಂದ್ರ ಗೃಹಸಚಿವ

562 ಸಂಸ್ಥಾನ ಒಗ್ಗೂಡಿಸಿದ್ದ ಪಟೇಲ್ ಜಗತ್ತಿಗೇ ಮಾದರಿಯಾದರು. ಜಮ್ಮು ಕಾಶ್ಮೀರದ ಪೂರ್ಣ ಪ್ರಮಾಣದ ಏಕೀಕರಣದಿಂದ ಅವರ ಕನಸು ನನಸಾಗಿದೆ
ಮನೋಹರ ಲಾಲ್ ಖಟ್ಟರ್, ಛತ್ತೀಸಗಡ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT