ಸೋಮವಾರ, ಆಗಸ್ಟ್ 26, 2019
27 °C
‘ಜೀವ ಬೆದರಿಕೆ’ ಬಗ್ಗೆ ಪತ್ರದಲ್ಲಿ ಉಲ್ಲೇಖ

ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಬರೆದ ಪತ್ರ ನ್ಯಾಯಮೂರ್ತಿಯ ಕೈಸೇರುವಲ್ಲಿ ವಿಳಂಬ

Published:
Updated:
Prajavani

ನವದೆಹಲಿ: ‘ಆರೋಪಿ ಕುಲದೀಪ್‌ ಸಿಂಗ್‌ ಸೆಂಗರ್‌ರಿಂದ ತನಗೆ ಜೀವ ಬೆದರಿಕೆ ಬರುತ್ತಿದ್ದು, ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿ ಅತ್ಯಾಚಾರ ಸಂತ್ರಸ್ತೆಯು ಸುಪ್ರೀಂ ಕೋರ್ಟ್‌ಗೆ ಬರೆದ ಪತ್ರವು ನ್ಯಾಯಮೂರ್ತಿಯ ಕೈಸೇರುವಲ್ಲಿ ವಿಳಂಬ ಆಗಿರುವುದೇಕೆ ಎಂಬ ಬಗ್ಗೆ ತನಿಖೆ ನಡೆಸುವಂತೆ ಶುಕ್ರವಾರ ಆದೇಶಿಸಲಾಗಿದೆ.

‘ಸಂತ್ರಸ್ತೆಯು ಸಂಚರಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾದ ಪ್ರಕರಣ ಸಂಭವಿಸುವುದಕ್ಕೆ ಸಾಕಷ್ಟು ಮುಂಚೆಯೇ ಪತ್ರ ಬರೆದಿದ್ದರೂ, ಅದು ತಲುಪುವಲ್ಲಿ ವಿಳಂಬ ಆಗಿರುವುದಕ್ಕೆ ಕಾರಣವೇನು, ತಪ್ಪಾಗಿರುವುದು ಎಲ್ಲಿ, ನಿರ್ಲಕ್ಷ್ಯ ಆಗಿದ್ದರೆ ಅದಕ್ಕೆ ಕಾರಣರು ಯಾರು ಎಂಬುದನ್ನು ಪತ್ತೆ ಮಾಡುವಂತೆ ಸೂಚನೆ ನೀಡಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ತಿಳಿಸಿದರು.

ತನಗೆ ಬೆದರಿಕೆ ಇರುವ ಬಗ್ಗೆ ಸಂತ್ರಸ್ತೆಯು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗೆ ಬರೆದಿದ್ದ ಪತ್ರವು ಅಪಘಾತ ನಡೆದ ಹಿಂದಿನ ದಿನವಷ್ಟೇ (ಜುಲೈ 17) ನ್ಯಾಯಾಲಯಕ್ಕೆ ಬಂದಿರುವುದಾಗಿ ದಾಖಲೆಗಳಲ್ಲಿ ನಮೂದಾಗಿದೆ.

ಆದೇಶಕ್ಕೆ ತಿದ್ದುಪಡಿ: ಕಾರಿಗೆ ಲಾರಿ ಡಿಕ್ಕಿ ಹೊಡೆಸಿದ ಪ‍್ರಕರಣದ ವಿಚಾರಣೆಯನ್ನು ರಾಯಬರೇಲಿಯಿಂದ ದೆಹಲಿಗೆ ವರ್ಗಾಯಿಸುವಂತೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ತಾತ್ಕಾಲಿಕವಾಗಿ ತಡೆಹಿಡಿದಿದೆ.

‘ಪ್ರಕರಣದ ತನಿಖೆಯು ಇನ್ನೂ ಮುಗಿದಿಲ್ಲ. ಹೀಗಿರುವಾಗ ಪ್ರಕರಣದ ವಿಚಾರಣೆಯನ್ನು ಸ್ಥಳಾಂತರಿಸಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ’ ಎಂಬುದನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಶುಕ್ರವಾರ ಕೋರ್ಟ್‌ ಗಮನಕ್ಕೆ ತಂದರು.

ಇದನ್ನು ಮಾನ್ಯಮಾಡಿದ ಕೋರ್ಟ್‌ ಗುರುವಾರ ನೀಡಿದ್ದ ಆದೇಶವನ್ನು ತಡೆಹಿಡಿದಿದೆ.

ಕಾನೂನು ಅಡ್ಡಿ: ಅತ್ಯಾಚಾರ ಆರೋಪಿ ಸೆಂಗರ್‌ ಅವರ ಆಯುಧ ಪರವಾನಗಿಯನ್ನು ರದ್ದು ಪಡಿಸಲು ಕಾನೂನು ತೊಡಕು ಉಂಟಾಗಿದೆ. ‘ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಿಳಂಬ ಆಗುತ್ತಿರುವುದರಿಂದ ಪರವಾನಗಿ ರದ್ದಾಗಿಲ್ಲ’ ಎಂದು ‍ಪೊಲೀಸರು ಹೇಳಿದ್ದಾರೆ.

‘ಪರವಾನಗಿ ರದ್ದು ಪಡಿಸುವಂತೆ ನಾವು ಮನವಿ ಮಾಡಿದ್ದೇವೆ. ರದ್ದು ಮಾಡುವುದು ನ್ಯಾಯಾಂಗಕ್ಕೆ ಸಂಬಂಧಿಸಿದ ವಿಚಾರ. ಎರಡೂ ಕಡೆಯವರ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯವೇ ಆ ಬಗ್ಗೆ ತೀರ್ಮಾನ ಕಯಗೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ದೇವೇಂದ್ರಕುಮಾರ್‌ ಪಾಂಡೆ ಹೇಳಿದ್ದಾರೆ.

ತನಿಖೆಗೆ ಸಿಬಿಐ ವಿಶೇಷ ತಂಡ
ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಸಂಚರಿಸುತ್ತಿದ್ದ ಕಾರಿಗೆ ಲಾರಿ ಗುದ್ದಿಸಿದ ಪ್ರಕರಣದ ತನಿಖೆ ನಡೆಸಲು ಸಿಬಿಐ 20 ಮಂದಿ ಸದಸ್ಯರ ಹೆಚ್ಚುವರಿ ವಿಶೇಷ ತಂಡವೊಂದನ್ನು ರಚಿಸಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಇದಲ್ಲದೆ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ  ಆರುಮಂದಿ ಅನುಭವಿ ತಜ್ಞರು ಈಗಾಗಲೇ ಘಟನಾ ಸ್ಥಳವನ್ನು ತಲುಪಿದ್ದಾರೆ. ಅಪಘಾತದ ಸಂದರ್ಭದಲ್ಲಿ ಸಂತ್ರಸ್ತೆಯ ಕುಟುಂಬದವರು ಬಳಸಿದ್ದ ಕಾರಿನಂಥದ್ದೇ ಕಾರನ್ನು ಬಳಸಿ ಇಡೀ ಘಟನೆಯನ್ನು ಮರುಸೃಷ್ಟಿಸಲಾಗುತ್ತಿದೆ. ಲಖನೌನಲ್ಲಿರುವ ಐದು ಮಂದಿಯ ತಂಡವು ಈಗಾಗಲೇ ಘಟನೆಯ ತನಿಖೆ ನಡೆಸುತ್ತಿದ್ದು, 20 ಮಂದಿಯ ವಿಶೇಷ ತಂಡವು ಶೀಘ್ರದಲ್ಲೇ ಈ ತಂಡವನ್ನು ಸೇರಿಕೊಳ್ಳಲಿದೆ ಎಂದು ವಕ್ತಾರ ತಿಳಿಸಿದ್ದಾರೆ.

ಲಂಚ: ಪೊಲೀಸ್‌ ವಿರುದ್ಧ ತನಿಖೆ
ಆರೋಪಿ ಕುಲ್‌ದೀಪ್‌ ಸೆಂಗರ್‌ ಅವರನ್ನು ಇರಿಸಲಾಗಿದ್ದ ಜೈಲಿನ ಸಮೀಪದಲ್ಲೇ ಸಿಂಗರ್‌ ಅವರ ನಿಕಟವರ್ತಿಯು ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಲಂಚ ನೀಡುತ್ತಿರುವ ವಿಡಿಯೊ ಒಂದು ಈಗ ವೈರಲ್‌ ಆಗಿದ್ದು, ಆ ಬಗ್ಗೆ ತನಿಖೆ ನಡೆಸುವುದಾಗಿ ಉತ್ತರಪ್ರದೇಶ ಪೊಲೀಸ್‌ ಇಲಾಖೆ ಹೇಳಿದೆ.

‘ನಾನು ಆ ವಿಡಿಯೊ ನೋಡಿಲ್ಲ. ಆದರೆ ಆ ವಿಚಾರ ನನ್ನ ಗಮನಕ್ಕೆ ಬಂದಿದೆ. ಆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸ್‌ ಮಹಾನಿರ್ದೇಶಕ (ಜೈಲು) ಆನಂದ್‌ ಕುಮಾರ್‌ ಹೇಳಿದ್ದಾರೆ.

ವಿಡಿಯೊದಲ್ಲಿ ಲಂಚ ಕೊಡುತ್ತಿರುವಂತೆ ಕಾಣಿಸಿದ ವ್ಯಕ್ತಿಯನ್ನು ರಿಂಕು ಶುಕ್ಲಾ ಎಂದು ಗುರುತಿಸಲಾಗಿದ್ದು, ಅವರು ಪಂಚಾಯಿತಿ ಸದಸ್ಯರಾಗಿದ್ದಾರೆ. ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ಶಾಸಕನನ್ನು ಭೇಟಿಮಾಡಲು ಅವಕಾಶ ನೀಡುವಂತೆ ಅಲ್ಲಿದ್ದ ಪೊಲೀಸ್‌ ಸಿಬ್ಬಂದಿಯಲ್ಲಿ ಮನವಿ ಮಾಡುತ್ತಿರುವ ದೃಶ್ಯವೂ ವಿಡಿಯೊದಲ್ಲಿ ಇದೆ.

Post Comments (+)