ಮಂಗಳವಾರ, ಜನವರಿ 21, 2020
23 °C
ಉತ್ತರಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಸಾವು: ಕಾಂಗ್ರೆಸ್‌, ಎಸ್‌ಪಿ ಬೀದಿಗಿಳಿದು ಹೋರಾಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಸಾವು, ಉತ್ತರಪ್ರದೇಶದಲ್ಲಿ ರಾಜಕೀಯವಾಗಿ ಸಂಚಲನ ಉಂಟುಮಾಡಿದೆ. ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಟೀಕಾ ಪ್ರಹಾರ ನಡೆಸಿವೆ. ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷ ಬೀದಿಗಿಳಿದು ಪ್ರತಿಭಟನೆ ಆರಂಭಿಸಿವೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಶನಿವಾರ ಬೆಳಿಗ್ಗೆ ಸಂತ್ರಸ್ತೆಯ ಮನೆಗೆ ಭೇಟಿನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಲೈಂಗಿಕ ದೌ‌ರ್ಜನ್ಯಕ್ಕೆ ಒಳಗಾದ ಮಹಿಳೆಯೊಬ್ಬರಿಗೆ ರಕ್ಷಣೆ ಒದಗಿಸಲು ಸರ್ಕಾರ ವಿಫಲವಾಗಿದೆ. ಸಂತ್ರಸ್ತರ ಮೇಲೆ ದಾಳಿ ನಡೆಸಿದ ಘಟನೆಗಳು ರಾಜ್ಯದಲ್ಲಿ ಹಿಂದೆಯೂ ನಡೆದಿವೆ. ಇದು ಗೊತ್ತಿದ್ದರೂ ಸಂತ್ರಸ್ತೆಗೆ ರಕ್ಷಣೆ ಒದಗಿಸಲಿಲ್ಲವೇಕೆ? ದೂರು ದಾಖಲಿಸಲು ನಿರಾಕರಿಸಿದ ಪೊಲೀಸ್‌ ಅಧಿಕಾರಿಯ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಮಹಿಳೆಯರ ಮೇಲೆ ಪ್ರತಿನಿತ್ಯ ಎಂಬಂತೆ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಯಾವ ಕ್ರಮ ಕೈಗೊಂಡಿದೆ’ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.

‘ನ್ಯಾಯಕ್ಕಾಗಿ ಕಾಯುತ್ತಲೇ ಇನ್ನೊಬ್ಬ ಪುತ್ರಿ ಪ್ರಾಣ ಬಿಟ್ಟಿದ್ದಾಳೆ. ಇದು ಅತ್ಯಂತ ದುಃಖದ ಸನ್ನಿವೇಶ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು, ‘ಬೇಟಿ ಕೊ ನ್ಯಾಯ್‌ ದೋ’ ಹ್ಯಾಷ್‌ಟ್ಯಾಗ್‌ ಮೂಲಕ ಟ್ವೀಟ್‌ ಮಾಡಿದ್ದಾರೆ.

ಲಖನೌದಲ್ಲಿ ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಇದರಲ್ಲಿ ಹಲವರು ಗಾಯಗೊಂಡಿದ್ದಾರೆ.

ಬಿಎಸ್‌ಪಿ ನಾಯಕಿ ಮಾಯಾವತಿ ಅವರೂ ಉತ್ತರಪ್ರದೇಶ ಸರ್ಕಾರವನ್ನು ತೀವ್ರ ಟೀಕೆಗೆ ಗುರಿ ಮಾಡಿದ್ದಾರೆ. ‘ದೇಶದಾದ್ಯಂತ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೊಲೆಯಂಥ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಉತ್ತರಪ್ರದೇಶದಲ್ಲಿ ಅವುಗಳ ಪ್ರಮಾಣ ಇನ್ನೂ ಹೆಚ್ಚಾಗಿದೆ. ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಣೆಯಿಂದ ಮಧ್ಯಪ್ರವೇಶ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರಗಳಿಗೆ ಅಗತ್ಯ ಸೂಚನೆ ನೀಡಬೇಕು’ ಎಂದಿದ್ದಾರೆ.

ತಿಂಗಳೊಳಗೆ ಗಲ್ಲಿಗೇರಿಸಿ: ‘ಉನ್ನಾವ್‌ ಅತ್ಯಾಚಾರ ಹಾಗೂ ಹತ್ಯೆ ಘಟನೆಯ ಅರೋಪಿಗಳನ್ನು ಒಂದು ತಿಂಗಳೊಳಗೆ ಗಲ್ಲಿಗೇರಿಸಬೇಕು’ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ ಆಗ್ರಹಿಸಿದ್ದಾರೆ.

‘ಅತ್ಯಾಚಾರ ಸಂತ್ರಸ್ತೆಯರ ಕೂಗಿಗೆ ಸರ್ಕಾರಗಳು ಕಿವುಡಾಗಿವೆ. ದೇಶದಲ್ಲಿ ಇಂಥ ಸರ್ಕಾರ ಇರುವುದಕ್ಕೆ ನನಗೆ ನಾಚಿಕೆ ಎನಿಸುತ್ತಿದೆ’ ಎಂದು ಮಾಲಿವಾಲ್‌ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಹೇಳಿದರು.

ತನಿಖೆಗೆ ನ್ಯಾಯತಜ್ಞರ ಆಗ್ರಹ

‘ತೆಲಂಗಾಣ ಪಶುವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ಪ್ರಕರಣವನ್ನು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು’ ಎಂದು ಕಾನೂನು ತಜ್ಞರ ಅಂತರರಾಷ್ಟ್ರೀಯ ಆಯೋಗ (ಐಸಿಜೆ) ಆಗ್ರಹಿಸಿದೆ. ಈ ಆಯೋಗದಲ್ಲಿ ಜಗತ್ತಿನ ವಿವಿಧೆಡೆಯ 60 ಖ್ಯಾತ ಕಾನೂನು ತಜ್ಞರಿದ್ದಾರೆ. ‘ಈ ಎನ್‌ಕೌಂಟರ್‌ಗೆ ಸಂಬಂಧಿಸಿದ ವಿವರಗಳು ಅನುಮಾನಾಸ್ಪದವಾಗಿವೆ. ಪೊಲೀಸ್ ವಶದಲ್ಲಿದ್ದಾಗ ಆರೋಪಿಗಳ ಸಾವು ಮತ್ತು ಎನ್‌ಕೌಂಟರ್‌ಗಳ ಮೂಲಕ ಆರೋಪಿಗಳ ಹತ್ಯೆಯ ಇತಿಹಾಸವನ್ನು ನೋಡಿದರೆ, ಇಂತಹ ತನಿಖೆಯ ಅಗತ್ಯವಿದೆ’ ಎಂದು ಐಸಿಜೆ ಆಗ್ರಹಿಸಿದೆ.

ಅಖಿಲೇಶ್‌ ನೇತೃತ್ವದಲ್ಲಿ ಧರಣಿ

ಉನ್ನಾವ್‌ ಸಂತ್ರಸ್ತೆಯ ಹತ್ಯೆಯನ್ನು ಖಂಡಿಸಿ ಮತ್ತು ಘಟನೆಗೆ ಆದಿತ್ಯನಾಥ ನೇತೃತ್ವದ ಸರ್ಕಾರವೇ ಹೊಣೆ ಎಂದು ಆರೋಪಿಸಿ ಎಸ್‌ಪಿ ಮುಖಂಡ ಅಖಿಲೇಶ್‌ ಯಾದವ್‌ ಹಾಗೂ ಪಕ್ಷದ ಹಿರಿಯ ನಾಯಕರು ಉತ್ತರ ಪ್ರದೇಶ ವಿಧಾನ ಸಭೆಯ ಮುಂದೆ ಶನಿವಾರ ಧರಣಿ ನಡೆಸಿದರು.

ಸಚಿವರಿಗೆ ಜನಾಕ್ರೋಶದ ಬಿಸಿ

ಉನ್ನಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರದ ಇಬ್ಬರು ಸಚಿವರು ಜನರ ಆಕ್ರೋಶವನ್ನು ಎದುರಿಸಬೇಕಾಯಿತು.

ಸಂತ್ರಸ್ತೆಯ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಲು ಸಚಿವರಾದ ಸ್ವಾಮಿಪ್ರಸಾದ್‌ ಮೌರ್ಯ ಹಾಗೂ ಕಮಲರಾಣಿ ವರುಣ್‌ ಅವರು ಸಂತ್ರಸ್ತೆಯ ಊರಿಗೆ ಶನಿವಾರ ಸಂಜೆ ಭೇಟಿನೀಡಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಮತ್ತು ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ನಡೆಸಿದರು.

‘ಸಚಿವರೇ ವಾಪಸ್‌ ಹೋಗಿ’ ಎಂದು ಸ್ಥಳೀಯರು ಘೋಷಣೆಗಳನ್ನು ಕೂಗಿದರು. ಸುಮಾರು 15 ನಿಮಿಷ ಪ್ರತಿಭಟನೆ ನಡೆಯಿತು. ಇದಾದ ಬಳಿಕ ಪೊಲೀಸರು ಬಲಪ್ರಯೋಗಿಸಿ ಪ್ರತಿಭಟನಕಾರರನ್ನು ಚದುರಿಸಿದರು. ಆನಂತರ ಸಚಿವರು ಸಂತ್ರಸ್ತೆಯ ಕುಟುಂಬದವರನ್ನು ಭೇಟಿಮಾಡಿದರು. ಸಚಿವರ ಜತೆಗೆ ಬಿಜೆಪಿ ಸಂಸದ ಸಾಕ್ಷಿ ಮಹರಾಜ್‌ ಅವರೂ ಇದ್ದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಾಕ್ಷಿ ಮಹರಾಜ್‌, ‘ಪ್ರಿಯಾಂಕಾ ಗಾಂಧಿ ಅವರು ಇಡೀ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ’ ಎಂದರು.

ತೈಲ ಸುರಿದು ಪ್ರತಿಭಟನೆ: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ಪಾರ್ಥಿವ ಶರೀರವನ್ನು ಆಕೆಯ ಊರಿಗೆ ಕಳುಹಿಸಿದ ಸ್ವಲ್ಪ ಹೊತ್ತಿನಲ್ಲೇ ದೆಹಲಿಯ ಸಫ್ದರ್‌ಜಂಗ್‌  ಆಸ್ಪತ್ರೆಯ ಹೊರಗೆ ಮಹಿಳೆಯೊಬ್ಬರು ತಮ್ಮ ಮಗಳ ಮೇಲೆ ತೈಲ ಸುರಿಯುವ ಮೂಲಕ ಪ್ರತಿಭಟನೆ ನಡೆಸಿದರು. ಸಂತ್ರಸ್ತೆಯ ಕುಟುಂಬದವರಿಗೆ ನ್ಯಾಯ ಒದಗಿಸುವಂತೆ ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು