ಮಂಗಳವಾರ, ಮೇ 18, 2021
24 °C

2019ರಲ್ಲಿ ಲೋಕಸಭೆ: ಯುಪಿಎ ಸರ್ಕಾರದ ಅಭಿವೃದ್ಧಿ ದರಕ್ಕೆ ಕತ್ತರಿ ಹಾಕಿದ ಎನ್‌ಡಿಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್‌ ನೇತೃತ್ವದ ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿನ ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ಕೇಂದ್ರದಲ್ಲಿ ಸದ್ಯಕ್ಕೆ ಅಧಿಕಾರದಲ್ಲಿ ಇರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕತ್ತರಿ ಪ್ರಯೋಗಿಸಿದೆ.

2019ರಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹೊಸ್ತಿಲಲ್ಲಿ ಈ ‘ಪರಿಷ್ಕೃತ ವೃದ್ಧಿ ದರ’ ಪ್ರಕಟಿಸಿರುವುದು ಎನ್‌ಡಿಎ ಸರ್ಕಾರದ ವರ್ಚಸ್ಸು ವೃದ್ಧಿಗೆ ನೆರವಾಗಲಿದೆ ಎಂದು ಭಾವಿಸಲಾಗಿದೆ.

ಈಗ ಹೊಸದಾಗಿ ಪರಿಷ್ಕರಿಸಿರುವ ಜಿಡಿಪಿ ಕುರಿತ ಅಂಕಿ ಅಂಶಗಳು, ರಾಷ್ಟ್ರೀಯ ಸಾಂಖ್ಯಿಕ ಆಯೋಗವು (ಎನ್‌ಎಸ್‌ಸಿ) ನೇಮಿಸಿದ್ದ ಸಮಿತಿಯು ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದ್ದ ವರದಿಗೆ ವ್ಯತಿರಿಕ್ತವಾಗಿವೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 2004–05 ರಿಂದ 2013–14ರವರೆಗಿನ ಅವಧಿಯಲ್ಲಿನ ವೃದ್ಧಿ ದರವು, ಹಾಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಾಲ್ಕು ವರ್ಷಗಳ ಸರಾಸರಿ ಬೆಳವಣಿಗೆಗಿಂತ ಹೆಚ್ಚಿನ ಮಟ್ಟದಲ್ಲಿ ಇತ್ತು ಎಂದು ಈ ಸಮಿತಿ ಅಭಿಪ್ರಾಯಪಟ್ಟಿತ್ತು.

2010–11ನೇ ಹಣಕಾಸು ವರ್ಷ ದಲ್ಲಿ ದೇಶದಲ್ಲಿನ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯ ದರ ಶೇ 10.3ರಷ್ಟು ದಾಖಲಾಗಿತ್ತು. ಈ ಆರ್ಥಿಕ ವೃದ್ಧಿ ದರ ಲೆಕ್ಕ ಹಾಕಲು ಆಧಾರ ವಾಗಿ ಪರಿಗಣಿಸಿದ್ದ 2004–05ನೆ ವರ್ಷದ ಬದಲಿಗೆ, ಈಗ 2011–12 ವರ್ಷವನ್ನು ಆಧಾರವಾಗಿ ಇಟ್ಟುಕೊಂಡು ವೃದ್ಧಿ ದರವನ್ನು ಹೊಸದಾಗಿ ಲೆಕ್ಕಹಾಕಲಾಗಿದೆ. ಕೇಂದ್ರೀಯ ಸಾಂಖ್ಯಿಕ ಕಚೇರಿಯು (ಸಿಎಸ್‌ಒ) ಆ ವರ್ಷದ ಜಿಡಿಪಿ ದರ ಶೇ 8.5ರಷ್ಟಿತ್ತು ಎಂದು ಪ್ರಕಟಿಸಿದೆ.

ಬುಧವಾರ ಇಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ  ಮುಖ್ಯ ಸಾಂಖ್ಯಿಕ ಅಧಿಕಾರಿ ಪ್ರವೀಣ್‌ ಶ್ರೀವಾಸ್ತವ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಅವರು ಈ ಮಾಹಿತಿ ನೀಡಿದರು.

ಅಂತರರಾಷ್ಟ್ರೀಯ ಮಾನದಂಡ ಮತ್ತು ವಿಶ್ವಸಂಸ್ಥೆಯ ನಿಯಮಗಳಿಗೆ ಅನುಗುಣವಾಗಿ ದೇಶಿ ಆರ್ಥಿಕತೆಯ ಬೆಳವಣಿಗೆ ದರವನ್ನು ಹೊಸದಾಗಿ ಲೆಕ್ಕ ಹಾಕಲಾಗಿದೆ. ‘ಈ ಹಿಂದಿನ ಅಂಕಿ ಅಂಶಗಳು ಸರ್ಕಾರದ ದಾಖಲೆಗಳಾಗಿರಲಿಲ್ಲ. ರಾಷ್ಟ್ರೀಯ ಸಾಂಖ್ಯಿಕ ಆಯೋಗ ರಚಿಸಿದ್ದ ಸಮಿತಿಯು ಖಾಸಗಿ ನೆಲೆಯಲ್ಲಿ ಸಂಗ್ರಹಿಸಿದ್ದ ಮಾಹಿತಿ ಆಧರಿಸಿದ್ದವು. ಹೊಸ ವಿವರಗಳು ಆರ್ಥಿಕತೆಯ ಬಗ್ಗೆ ಸಮರ್ಪಕ ಚಿತ್ರಣ ನೀಡುತ್ತವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಪತ್ರಕರ್ತರು ಕೇಳಿದ ಅನೇಕ ಮುಜುಗರದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ರಾಜೀವ್‌ ಕುಮಾರ್‌, ಹಲವಾರು ಬಾರಿ ಸಹನೆ ಕಳೆದುಕೊಂಡ ಘಟನೆಯೂ ನಡೆಯಿತು.

‘ಗಣಿಗಾರಿಕೆ, ಕಲ್ಲು ಗಣಿ ಮತ್ತು ದೂರಸಂಪರ್ಕ ಕ್ಷೇತ್ರವೂ ಸೇರಿದಂತೆ ಆರ್ಥಿಕತೆಯ ವಿವಿಧ ವಲಯಗಳಲ್ಲಿನ ಅಂಕಿ ಅಂಶಗಳ ಮರು ಹೊಂದಾಣಿಕೆಯ ಕಾರಣಕ್ಕೆ ಜಿಡಿಪಿ ದರ ತಗ್ಗಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಯುಪಿಎ ಸರ್ಕಾರದ  ಅವಧಿಯಲ್ಲಿನ ಜಿಡಿಪಿ ಅಂಕಿ ಅಂಶಗಳನ್ನಷ್ಟೇ ಪರಿಷ್ಕರಿಸಿರುವುದು ಕಾಕತಾಳೀಯ ಇದ್ದೀತೆ’ ಎನ್ನುವ ವರದಿಗಾರರ ಪ್ರಶ್ನೆಗೆ, ಸಮರ್ಪಕ ಉತ್ತರ ನೀಡಲಿಲ್ಲ.

‘ಹಾಗೇನೂ ಇಲ್ಲ. ಇದು ಕಾಕತಾಳೀಯವಲ್ಲ. ಸಿಎಸ್‌ಒ ಅಧಿಕಾರಿಗಳು ಕಠಿಣ ಪರಿಶ್ರಮಪಟ್ಟು ಆರ್ಥಿಕತೆಯ ಬೆಳವಣಿಗೆ ಕುರಿತು ಹೊಸದಾಗಿ ಮೌಲ್ಯಮಾಪನ ಮಾಡಿದ್ದಾರೆ. ತಪ್ಪು ಮಾಹಿತಿ ನೀಡುವ ಅಥವಾ ಉದ್ದೇಶಪೂರ್ವಕವಾಗಿ ಹಾದಿ ತಪ್ಪಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

 ಈ ಸಮಿತಿಯ ವರದಿಯನ್ನು ಸರ್ಕಾರ ಒಪ್ಪಿಕೊಂಡಿರಲಿಲ್ಲ. ‘ಜಿಡಿಪಿ ಲೆಕ್ಕ ಹಾಕಲು ಸಮಿತಿ ಅನುಸರಿಸಿದ ಈ ಹಿಂದಿನ ವಿಧಾನವು ದೋಷಪೂರಿತವಾಗಿತ್ತು’ ಎಂದು ರಾಜೀವ್‌ ಕುಮಾರ್‌ ಪ್ರತಿಪಾದಿಸಿದ್ದಾರೆ.

2015ರ ಜನವರಿಯಲ್ಲಿ, ಕೇಂದ್ರ ಸರ್ಕಾರವು ಜಿಡಿಪಿ ಲೆಕ್ಕ ಹಾಕಲು ಆಧಾರವಾಗಿ ಪರಿಗಣಿಸುವ ವರ್ಷವನ್ನು ಈ ಮೊದಲಿನ 2004–05ರ ಬದಲಿಗೆ 2011–12ಕ್ಕೆ ಬದಲಾಯಿಸಿತ್ತು. ಈ ಮೂಲ ವರ್ಷವನ್ನು ಇದಕ್ಕೂ ಮೊದಲು 2010ರಲ್ಲಿ ಪರಿಷ್ಕರಿಸಲಾಗಿತ್ತು.

**

ರಾಜಕೀಯ ಬಣ್ಣ: ಟೀಕೆ

‘ಈ ಒಟ್ಟಾರೆ ಕಸರತ್ತನ್ನು ಸರ್ಕಾರ ರಾಜಕೀಯಗೊಳಿಸಿದೆ. ಅಂಕಿ ಅಂಶ ಲೆಕ್ಕ ಹಾಕುವಲ್ಲಿ ಯಾವುದೇ ಪಾತ್ರ ನಿರ್ವಹಿಸದ ನೀತಿ ಆಯೋಗವನ್ನು ಸರ್ಕಾರವು ವೃಥಾ ಎಳೆದು ತಂದಿದೆ’ ಎಂದು ದೇಶದ ಮೊದಲ ಮುಖ್ಯ ಸಾಂಖ್ಯಿಕ ಅಧಿಕಾರಿಯಾಗಿದ್ದ ಪ್ರಣಬ್‌ ಸೇನ್‌ ಟೀಕಿಸಿದ್ದಾರೆ.

**

ಸರಾಸರಿ ಕಡಿಮೆ ವೃದ್ಧಿ ದರ: ಬಿಜೆಪಿ

ಯುಪಿಎ ಸರ್ಕಾರದ 10 ವರ್ಷಗಳ ಅಧಿಕಾರಾವಧಿಯಲ್ಲಿನ ಜಿಡಿಪಿಯ ಸರಾಸರಿ ವೃದ್ಧಿ ದರವು ಶೇ 6.7ರಷ್ಟಿತ್ತು. ಇದು ಸದ್ಯದ ಎನ್‌ಡಿಎ ಸರ್ಕಾರದ 4 ವರ್ಷಗಳ ಸರಾಸರಿ ಶೇ 7.35ಕ್ಕಿಂತ ಕಡಿಮೆ ಇದೆ ಎಂದು ಬಿಜೆಪಿ ಟ್ಟೀಟ್‌ ಮಾಡಿದೆ.

**

ತಿರುಚಿದ ಅಂಕಿ ಅಂಶ: ಕಾಂಗ್ರೆಸ್‌

ಹಿಂದಿನ ವರ್ಷಗಳ ಜಿಡಿಪಿ ಅಂಕಿ ಅಂಶಗಳನ್ನು ಮೋದಿ ಸರ್ಕಾರ ತಿರುಚಿದೆ. ದೇಶದ ಆರ್ಥಿಕ ಬೆಳವಣಿಗೆ ದರವನ್ನು ನಿರ್ಲಕ್ಷಿಸುವ ಹತಾಶ ಪ್ರಯತ್ನ ಇದಾಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

**

ಜಿಡಿಪಿ ವೃದ್ಧಿ ದರ ಶೇ 10.08ರಷ್ಟಿತ್ತು​: ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅಧಿಕಾರಾವಧಿಯಲ್ಲಿ 2006–07ರ ಜಿಡಿಪಿ ವೃದ್ಧಿ ದರ ಶೇ 10.08ರಷ್ಟಿತ್ತು. ಇದು 1991ರಲ್ಲಿ ಜಾರಿಗೆ ತಂದ ಆರ್ಥಿಕ ಉದಾರೀಕರಣ ನಂತರದ ಗರಿಷ್ಠ ವೃದ್ಧಿ ದರವಾಗಿತ್ತು.

1988–89ರಲ್ಲಿ ರಾಜೀವ್‌ ಗಾಂಧಿ ಅವರ ಅಧಿಕಾರಾವಧಿಯಲ್ಲಿ ವೃದ್ಧಿ ದರ ಶೇ 10.2ರಷ್ಟು ದಾಖಲಾಗಿತ್ತು.  ಸ್ವಾತಂತ್ರ್ಯಾನಂತರದ ಗರಿಷ್ಠ ವೃದ್ಧಿ ದರ ಇದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು