ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಪಾಕ್ ಪರ ಸಂಚು: ಅಮೆರಿಕ ಸಮಾಲೋಚನೆಯಲ್ಲಿ ಕಾಶ್ಮೀರಿ ಪತ್ರಕರ್ತೆ ದಿಟ್ಟ ನುಡಿ

Last Updated 23 ಅಕ್ಟೋಬರ್ 2019, 6:52 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 30 ವರ್ಷಗಳಿಂದ ಪಾಕ್‌ ಪ್ರೇರಿತ ಉಗ್ರಗಾಮಿ ಚಟುವಟಿಕೆಗಳ ಹಿಂಸಾಚಾರ ಅನುಭವಿಸಿದ ಸಂತ್ರಸ್ತರ ಭಾವನೆಗಳನ್ನು ವಿಶ್ವ ಸಮುದಾಯ, ಮಾಧ್ಯಮಗಳು ಮತ್ತು ಮಾನವ ಹಕ್ಕು ಸಂಘಟನೆಗಳು ಪರಿಗಣನೆಗೆ ತೆಗೆದುಕೊಳ್ಳಲೇ ಇಲ್ಲಎಂದು ವಾಷಿಂಗ್‌ಟನ್‌ನಲ್ಲಿ ಅಮೆರಿಕ ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದಸಮಾಲೋಚನೆ ವೇಳೆ ಕಾಶ್ಮೀರ ಮೂಲದ ಪತ್ರಕರ್ತೆ ಆರತಿ ಟಿಕೂ ಸಿಂಗ್‌ ಹೇಳಿದರು.

‘ಅಮೆರಿಕ ಕಾಂಗ್ರೆಸ್‌ ಸಮಾಲೋಚನೆಯೂ ಪೂರ್ವಗ್ರಹಪೀಡಿತವಾಗಿದೆ. ಭಾರತದ ವಿರುದ್ಧ ಮತ್ತು ಪಾಕ್‌ ಪರ ಧೋರಣೆ ಹೊಂದಿದೆ’ ಎಂದು ಅವರು ನೇರ ಆರೋಪ ಮಾಡಿದರು.

‘ಈ ಸಮಾಲೋಚನೆಯು ಪಾಕಿಸ್ತಾನವು ಕೊಂದು ಹಾಕಿದ 15 ಸಾವಿರ ಕಾಶ್ಮೀರಿ ಮುಸ್ಲಿಮರ ಬಗ್ಗೆ, 1990ರ ದಶಕದಲ್ಲಿ ತಮ್ಮ ಮನೆಗಳನ್ನು ಬಿಟ್ಟುಓಡಿದಕಾಶ್ಮೀರಿ ಪಂಡಿತರ ಬಗ್ಗೆಕಿಂಚಿತ್ತೂ ಸಹಾನುಭೂತಿ ಹೊಂದಿಲ್ಲ’ ಎಂದು ಅವರು ಹೇಳಿದರು.

ಪಾಕ್‌ ಪ್ರಾಯೋಜಿತ ಭಯೋತ್ಪಾದನೆಯಿಂದ ಸಂತ್ರಸ್ತರಾದವರು ಕಾಶ್ಮೀರದಲ್ಲಿ ನಿಜವಾಗಿಯೂ ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ. ಇದು ನಾನು ಹೇಳುತ್ತಿರುವ ಮುಖ್ಯ ಅಂಶ. ಭಯೋತ್ಪಾದಕ ಪಾಕ್ ಸರ್ಕಾರದಿಂದ ಕಾಶ್ಮೀರದ ಮುಸ್ಲಿಮರು ಅನುಭವಿಸಿದ ಹಿಂಸೆಯನ್ನು ಪದಗಳಲ್ಲಿ ಹಿಡಿದಿಡಲು ಆಗದು. ಜಿಹಾದಿ ಉಗ್ರರಿಂದ ಕಾಶ್ಮೀರಿ ಮುಸ್ಲಿಮರಿಗೆ ಆದ ತೊಂದರೆಯನ್ನುವಿಶ್ವದ ಪ್ರಧಾನಧಾರೆಯ ಮಾಧ್ಯಮಗಳು 30 ವರ್ಷಗಳಿಂದ ನಿರ್ಲಕ್ಷಿಸುತ್ತಿವೆ’ ಎಂದು ದೂರಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ (ಆಗಸ್ಟ್‌ 5) ಕಾಶ್ಮೀರದಲ್ಲಿ ಗಂಭೀರ ಸ್ಥಿತಿ ತಲೆದೋರಿದೆ ಎಂದು ಸಮಾಲೋಚನೆ ವೇಳೆ ಅಮೆರಿಕದ ಹಲವು ಸಂಸದರು ಆತಂಕ ವ್ಯಕ್ತಪಡಿಸಿದರು. ಬಂಧನದಲ್ಲಿರುವ ರಾಜಕಾರಿಣಿಗಳು ಮತ್ತು ಚಳವಳಿಗಾರರನ್ನು ಭಾರತ ಸರ್ಕಾರತಕ್ಷಣ ಬಿಡುಗಡೆ ಮಾಡಬೇಕು. ಸಂವಹನ ವ್ಯವಸ್ಥೆಯ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಅಲಿ ವೆಲ್ಸ್‌, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರುಸ್ಥಾಪಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸ್ವಾಗತಿಸುತ್ತೇವೆ. ಅಲ್ಲಿನ ಸ್ಥಿತಿಯನ್ನು ಅಮೆರಿಕ ಗಮನಿಸುತ್ತಿದೆ. ಕಾಶ್ಮೀರ ಕಣಿವೆ ಆದಷ್ಟೂ ಬೇಗ ಸಹಜ ಸ್ಥಿತಿಗೆ ಮರಳಬೇಕು’ ಎಂದು ಎಚ್ಚರಿಕೆ ನೀಡುವ ದನಿಯಲ್ಲಿ ಹೇಳಿದರು.

ಶುಜಾತ್ ಬುಖಾರಿ, ಡೇನಿಯಲ್ ಪರ್ಲ್ ನೆನಪು

ತಮ್ಮ ಮಾತಿನ ನಡುವೆ ಆರತಿ ಟಿಕೂ ಸಿಂಗ್‌ ಕಳೆದ ವರ್ಷ ಉಗ್ರರಿಂದ ಹತ್ಯೆಗೀಡಾದಕಾಶ್ಮೀರದ ಹಿರಿಯ ಪತ್ರಕರ್ತ ಶುಜಾತ್ ಬುಖಾರಿ ಅವರನ್ನು ನೆನಪಿಸಿಕೊಂಡರು.

‘ಮುಂಬೈನಲ್ಲಿ ದಾಳಿ ನಡೆಸಿದ ಲಷ್ಕರ್ಎ ತಯ್ಯಬಾ (ಎಲ್‌ಇಟಿ) ಉಗ್ರರೇ ಶುಜಾತ್ ಬುಖಾರಿ ಅವರನ್ನೂ ಕೊಂದು ಹಾಕಿದರು. ಶಾಂತಿ ಸ್ಥಾಪನೆಗಾಗಿ ತುಡಿಯುತ್ತಿದ್ದ ಬುಖಾರಿ ಕಾಶ್ಮೀರದ ಸಮಸ್ಯೆಗಳನ್ನು ವಿಶ್ವ ಸಮುದಾಯದ ಗಮನಕ್ಕೆ ತರಲು ಹಲವು ದೇಶಗಳನ್ನು ಸುತ್ತುತ್ತಿದ್ದರು’ ಎಂದು ಆರತಿ ಹೇಳಿದರು.

ಕಾಶ್ಮೀರ ಕಣಿವೆಯನ್ನು ಕಾಡುತ್ತಿರುವ ಜೈಶ್–ಎ–ಮೊಹಮದ್ ಉಗ್ರರು ಕರಪತ್ರಗಳನ್ನು ಹೊರಡಿಸಿ ಜನರನ್ನು ಹೆದರಿಸುತ್ತಿದ್ದಾರೆ. ತನ್ನ ಆದೇಶ ಉಲ್ಲಂಘಿಸಿದ ಕಾರಣಕ್ಕೆ ಮುಸ್ಲಿಂ ವ್ಯಾಪಾರಿಯನ್ನು ಜೈಶ್ ಉಗ್ರರು ಕೊಂದು ಹಾಕಿದ್ದರು. 2002ರಲ್ಲಿ ವಾಲ್‌ ಸ್ಟ್ರೀಟ್‌ ಜರ್ನಲ್‌ನ ಪತ್ರಕರ್ತ ಡೇನಿಯಲ್ ಪರ್ಲ್‌ ಅವರನ್ನು ಕೊಂದ ಅದೇ ಉಗ್ರರ ಆಟಾಟೋಪ ಇಂದಿಗೂ ಮುಂದುವರಿದಿದೆ ಎಂದು ಆರತಿ ನೆನಪಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT