ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿ: ಭಾರತಕ್ಕೆ ಅಮೆರಿಕ ಸೂಚನೆ

ಮಸೂದ್ ಅಜರ್ ವಿಚಾರದಲ್ಲಿ ನಿಮಗೆ ಸಹಾಯ ಮಾಡುತ್ತಿದ್ದೇವೆ, ನೀವೂ ನಮಗೆ ಸಹಕರಿಸಿ ಎಂದ ಟ್ರಂಪ್ ಆಡಳಿತ
Last Updated 24 ಏಪ್ರಿಲ್ 2019, 5:09 IST
ಅಕ್ಷರ ಗಾತ್ರ

ವಾಷಿಂಗ್ಟನ್/ ನವದೆಹಲಿ: ‘ಪುಲ್ವಾಮಾ ಉಗ್ರ ದಾಳಿಯ ನಂತರ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕವು ಭಾರತ ಬೆನ್ನಿಗೆ ನಿಂತಿದೆ.ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನ ಪಟ್ಟಿಯಲ್ಲಿ ಸೇರಿಸುವ ವಿಚಾರದಲ್ಲಿಯೂ ಬೆಂಬಲ ನೀಡುತ್ತಿದೆ. ಇದೇ ರೀತಿ ಭಾರತವೂ ಅಮೆರಿಕಕ್ಕೆ ಸಹಕಾರ ನೀಡಬೇಕು. ಭಾರತವು ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸುವುದನ್ನು ಡೊನಾಲ್ಡ್‌ ಟ್ರಂಪ್ ಆಡಳಿತ ಬಯಸುತ್ತಿದೆ’ ಎಂದು ಅಮೆರಿಕ ಆಡಳಿತ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.

ಆದಾಗ್ಯೂ, ಚಾಬಹಾರ್‌ ಬಂದರು ಅಭಿವೃದ್ಧಿ ಯೋಜನೆಗೆ ನೀಡಲಾಗಿರುವ ವಿನಾಯಿತಿ ಮುಂದುವರಿಸುವುದಾಗಿಯೂ ಅಮೆರಿಕ ಭರವಸೆ ನೀಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇರಾನ್‌ನಿಂದ ತೈಲ ಆಮದಿಗೆ ಭಾರತಕ್ಕೆ ಅಮೆರಿಕ ನೀಡಿದ್ದ ವಿನಾಯ್ತಿ ಮೇ 2ಕ್ಕೆ ಕೊನೆಗೊಳ್ಳಲಿದೆ. ಯಾವುದೇ ಕಾರಣಕ್ಕೂ ಈ ವಿನಾಯ್ತಿಯನ್ನು ಮುಂದುವರಿಸುವುದಿಲ್ಲ ಎಂದು ಸೋಮವಾರ ಅಮೆರಿಕ ತಿಳಿಸಿದೆ. ಈ ವಿಚಾರವಾಗಿ ಉಭಯ ರಾಷ್ಟ್ರಗಳ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ. ಇರಾನ್‌ನ ಮೇಲೆ ಗರಿಷ್ಠ ಒತ್ತಡ ಹೇರುವುದಕ್ಕಾಗಿ ನಿರ್ಬಂಧ ವಿಧಿಸಲಾಗುತ್ತಿದೆಯೇ ವಿನಃ ಭಾರತದ ವಿರುದ್ಧದ ತೀರ್ಮಾನ ಇದಲ್ಲ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ,ಅಮೆರಿಕ ನೀಡಿದ್ದ ವಿನಾಯ್ತಿ ಮೇ 2ಕ್ಕೆ ಕೊನೆಗೊಳ್ಳಲಿರುವುದರಿಂದ ಭಾರತ ಪರ್ಯಾಯ ಮಾರ್ಗಗಳ ಮೂಲಕ ತೈಲ ಆಮದು ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಪರ್ಯಾಯವಾಗಿ ಸೌದಿ ಅರೇಬಿಯಾ, ಕುವೈತ್, ಯುಎಇ ಮತ್ತು ಮೆಕ್ಸಿಕೊದಿಂದ ಅಷ್ಟೇ ಪ್ರಮಾಣದ ತೈಲ ಆಮದು ಮಾಡಿಕೊಳ್ಳಲಿದೆ. ಮೇ 2ರ ನಂತರವೂ ವಿನಾಯ್ತಿಯನ್ನು ಮುಂದುವರಿಸುವಂತೆ ಭಾರತವು ಅಮೆರಿಕ ಸರ್ಕಾರಕ್ಕೆ ಒತ್ತಡ ಹೇರಲಿದೆ ಎನ್ನಲಾಗಿದೆ.

ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರಿಸಲು ಬ್ರಿಟನ್ ಮತ್ತು ಫ್ರಾನ್ಸ್ ಜತೆಗೂಡಿ ಅಮೆರಿಕ ಗರಿಷ್ಠ ಪ್ರಯತ್ನ ನಡೆಸುತ್ತಿದೆ. ಪುಲ್ವಾಮಾ ಉಗ್ರ ದಾಳಿ ನಂತರ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ನೇರವಾಗಿ ಪ್ರಸ್ತಾಪಿಸಿತ್ತು. ಇದಕ್ಕೆ ಚೀನಾದಿಂದ ವಿರೋಧವೂ ವ್ಯಕ್ತವಾಗಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT