ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಆಶ್ರಮಕ್ಕೆ ಟ್ರಂಪ್‌ ಭೇಟಿ

ಸ್ವಾಗತಕ್ಕೆ ಬರಲಿದೆ ಜನಸಾಗರ l ಸ್ಥಳೀಯರಿಗಿಲ್ಲ ಆಹ್ವಾನ l ರಾರಾಜಿಸುತ್ತಿರುವ ಫ್ಲೆಕ್ಸ್‌ಗಳು
Last Updated 23 ಫೆಬ್ರುವರಿ 2020, 19:47 IST
ಅಕ್ಷರ ಗಾತ್ರ

ಅಹಮದಾಬಾದ್‌ (ಗುಜರಾತ್‌): ಮಹಾತ್ಮ ಗಾಂಧಿಹುಟ್ಟಿದ ನಾಡಿಗೆ ಕುಟುಂಬ ಸಮೇತವಾಗಿ ಸೋಮವಾರ ಬರಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಹಾತ್ಮನ ಹೆಸರಿನಿಂದಲೇ ಗುರುತಿಸಲಾಗುವ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.

ಪಕ್ಕದಲ್ಲೇ ಶಾಂತವಾಗಿ ಹರಿಯುತ್ತಿರುವ ಸಾಬರಮತಿ ನದಿಯ ಸೌಂದರ್ಯ
ವನ್ನು ಕಣ್ತುಂಬಿಕೊಂಡು, ಶಾಂತಿದೂತ ವಾಸಿಸಿದ್ದ ಕುಟೀರದಲ್ಲಿ ಚರಕದಿಂದ ನೂಲಲಿದ್ದಾರೆ. ಅತಿಥಿಗಳಿಗೆಂದೇ ಮೀಸಲಿರಿಸಲಾದ ಪುಸ್ತಿಕೆಯಲ್ಲಿ ತಮ್ಮ ಅನುಭವವನ್ನು ಬರೆಯಲಿದ್ದಾರೆ. ಟ್ರಂಪ್‌ಗೆ ಪ್ರಧಾನಿ ನರೇಂದ್ರ ಮೋದಿ ಜೊತೆಯಾಗಲಿದ್ದಾರೆ.

ಮಧ್ಯಾಹ್ನ 12ಕ್ಕೆ ಇಲ್ಲಿನ ಸರ್ದಾರ್‌ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪತ್ನಿ, ಪುತ್ರಿ, ಅಳಿಯ ಮತ್ತು 21 ಸಿಬ್ಬಂದಿಯೊಂದಿಗೆ ಬಂದಿಳಿಯಲಿರುವ ಟ್ರಂಪ್‌ ನೇರವಾಗಿ ಈ ಆಶ್ರಮಕ್ಕೆ ತೆರಳಲಿದ್ದಾರೆ.

ಕೇವಲ 10ರಿಂದ 15 ನಿಮಿಷ ಈ ಆಶ್ರಮದಲ್ಲಿ ಕಳೆಯಲಿರುವ ಅತಿಥಿಗಳು ನಂತರ ಮೊಟೆರಾದಲ್ಲಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದತ್ತ ತೆರಳಲಿದ್ದಾರೆ.

ಕಲಾ ತಂಡಗಳು: ಈ ದಾರಿಯುದ್ದಕ್ಕೂ ಸಾಲುಸಾಲಾಗಿ ಸಿದ್ಧಗೊಂಡಿರುವ ವೇದಿಕೆಗಳಲ್ಲಿ ದೇಶದ ವಿಭಿನ್ನ ಸಾಂಸ್ಕೃತಿಕ, ಕಲೆಯನ್ನು ಪರಿಚಯಿಸಲೆಂದೇ ಅಣಿಯಾಗಿರುವ ವಿವಿಧ ರಾಜ್ಯಗಳ ಕಲಾ ತಂಡಗಳು ನೃತ್ಯ ವೈಭವವನ್ನು ಪ್ರದರ್ಶಿಸಲಿವೆ.

ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲುವ ಜನರನ್ನು ನಿಯಂತ್ರಿಸಲು ಬ್ಯಾರಿಕೇಡ್‌ ಅಳವಡಿಸಲಾಗಿದೆ. 15 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಜನರನ್ನು ನಿಯಂತ್ರಿಸಲು ನಿಯೋಜಿಸಲಾಗಿದೆ. ರಸ್ತೆಯ ಅಂಚಿನಲ್ಲಿರುವ ಗೋಡೆಗಳಿಗೆ ಸುಣ್ಣ– ಬಣ್ಣ ಬಳಿಯಲಾಗಿದೆ.

ಟ್ರಂಪ್‌ ಜೊತೆ ಬರಲಿರುವ ಸಿಬ್ಬಂದಿ ತಂಡದಲ್ಲಿ ಭಾರತೀಯ ಮೂಲದ ಇಬ್ಬರು ಅಮೆರಿಕದ ಉನ್ನತಾಧಿಕಾರಿಗಳು ಇದ್ದಾರೆ. ಫೆಡರಲ್‌ ಕಮ್ಯುನಿಕೇಶನ್‌ ಕಮಿಷನ್‌ನ ಅಧ್ಯಕ್ಷ ಅಜಿತ್‌ ಪೈ ಹಾಗೂ ನ್ಯಾಷನಲ್‌ ಸೆಕ್ಯುರಿಟಿ ಕೌನ್ಸಿಲ್‌ನ ಸಲಹೆಗಾರರಾದ ಕಶ್ಯಪ್‌ ಪಟೇಲ್‌ ಅವರು ಟ್ರಂಪ್‌ಗೆ ಸಾಥ್‌ ನೀಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮೂವರ ಫ್ಲೆಕ್ಸ್: ಮೂರು ಗಂಟೆಯ ಭೇಟಿಗಾಗಿ ಇಲ್ಲಿಗೆ ಬರುತ್ತಿರುವ ಟ್ರಂಪ್‌ ಸ್ವಾಗತಕ್ಕಾಗಿ ಅಹಮದಾಬಾದ್‌ ನಗರದ ಇಕ್ಕೆಲಗಳಲ್ಲಿ ಸಾವಿರಾರು ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಟ್ರಂಪ್‌ ಹಾಗೂ ಅವರ ಪತ್ನಿ ಮಲೇನಿಯಾ ಟ್ರಂಪ್‌ ಅವರ ಭಾವಚಿತ್ರಗಳು ಮಾತ್ರ ಫ್ಲೆಕ್ಸ್‌ಗಳಲ್ಲಿವೆ.

ಸ್ಥಳೀಯರಿಗೆ ಇಲ್ಲ ಆಹ್ವಾನ: ಈ ಹಿಂದೆ ಪುಟ್ಟ ಗ್ರಾಮವಾಗಿದ್ದ ಮೊಟೆರಾದಲ್ಲಿ ನಿರ್ಮಿಸಲಾಗಿರುವ ಸರ್ದಾರ್‌ಪಟೇಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮಕ್ಕೆ ಆಹ್ವಾನ ನೀಡದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಮ್ಮೂರಲ್ಲಿ ನಿರ್ಮಿಸಲಾದ ಕ್ರೀಡಾಂಗಣದಲ್ಲೇ ಬೃಹತ್‌ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಅನೇಕ ಜಿಲ್ಲೆಗಳಿಂದ ಜನರನ್ನು ಆಹ್ವಾನಿಸಲಾಗಿದೆ. ಅವರನ್ನು ಕರೆತರಲು ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆದರೆ, ಪಕ್ಕದಲ್ಲೇ ಇರುವವರನ್ನು ಕಡೆಗಣಿಸಲಾಗಿದೆ’ ಎಂದು ಗ್ರಾಮದ ಮುಖಂಡ ಜೈವಿನ್‌ ಪಟೇಲ್‌ ದೂರಿದ್ದಾರೆ.

‘ನಮಸ್ತೆ ಟ್ರಂಪ್‌’: ಅನಿವಾಸಿಗಳ ದೌಡು

ಟ್ರಂಪ್‌ ಬಹಿರಂಗಸಭೆಯಲ್ಲಿ ಪಾಲ್ಗೊಳ್ಳಲು ಅನಿವಾಸಿ ಭಾರತೀಯರೂ ಅಹಮದಾಬಾದ್‌ಗೆ ದೌಡಾಯಿಸಿದ್ದಾರೆ.

ನೌಕರಿ ಮತ್ತು ವ್ಯಾಪಾರದ ಕಾರಣಗಳಿಂದ ಅಮೆರಿಕದಲ್ಲಿ ನೆಲೆ ಕಂಡುಕೊಂಡಿರುವ ದೇಶದ ವಿವಿಧ ರಾಜ್ಯಗಳ ಸಾವಿರಾರು ಜನ ಇಲ್ಲಿಗೆ ಬಂದಿದ್ದು, ಅವರಲ್ಲಿ ಗುಜರಾತಿನವರ ಸಂಖ್ಯೆಯೇ ಅಧಿಕ. ಬಂದಿರುವ ಅನಿವಾಸಿಗಳಲ್ಲಿ ಬಹುತೇಕರು ಅಮೆರಿಕದ ಹ್ಯೂಸ್ಟನ್‌ನಲ್ಲಿ ಇತ್ತೀಚೆಗೆ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದವರೇ.

‘ಕೆಲವೇ ದಿನಗಳಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಅಲ್ಲಿ ನೆಲೆಸಿರುವ 10 ಲಕ್ಷದಷ್ಟು ಭಾರತೀಯರ ಮತಗಳನ್ನು ಸೆಳೆಯಲು ಟ್ರಂಪ್‌, ಮೋದಿ ಮೂಲಕ ಇಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂಬ ಆರೋಪಗಳು ಅಲ್ಲೂ ಕೇಳಿ ಬಂದಿವೆ. ಆದರೆ, ಇಂತಹ ಕಾರ್ಯಕ್ರಮಗಳಿಂದ ಮತ ಬ್ಯಾಂಕ್‌ ಗಟ್ಟಿಯಾಗಲಿದೆ ಎಂಬುದನ್ನು ನಾನು ಒಪ್ಪುವುದಿಲ್ಲ’ ಎಂದು ನ್ಯೂಯಾರ್ಕ್‌ನಿಂದ ಬಂದಿರುವ ಸೂರತ್‌ ಮೂಲದ ಅನಿಕೇತ್ ವಾಡಿಯಾ ಅಭಿಪ್ರಾಯಪಟ್ಟರು.

ಬಾಹುಬಲಿ ಅವತಾರದಲ್ಲಿ ಟ್ರಂಪ್‌!

ಭಾರಿ ಸಂಚಲನ ಸೃಷ್ಟಿಸಿದ್ದ ‘ಬಾಹುಬಲಿ–2’ ಚಲನಚಿತ್ರದ ಆಯ್ದ ದೃಶ್ಯವೊಂದರಲ್ಲಿ ನಾಯಕ ನಟ ಪ್ರಭಾಸ್‌ ಮುಖ ಬದಲಾಗಿ ಟ್ರಂಪ್‌ ಮುಖ ಇರುವಂತೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೊಗಳು ಭಾರಿ ಸದ್ದು ಮಾಡುತ್ತಿವೆ.

ಪ್ರಭಾಸ್‌ ಮುಖಕ್ಕೆ ಬದಲು ಟ್ರಂಪ್‌ ಮುಖ ಇರುವಂತೆ ಮರುಸೃಷ್ಟಿ ಮಾಡಿರುವ ವಿಡಿಯೊ, ‘ಭಾರತ ಮತ್ತು ಅಮೆರಿಕ ಒಂದಾಗಿವೆ’ ಎಂಬ ಟ್ರಂಪ್‌ ಹೇಳಿಕೆಯೊಂದಿಗೆ ಮುಕ್ತಾಯವಾಗುತ್ತದೆ. ಇದು ಎರಡು ಗಂಟೆ ಅವಧಿಯಲ್ಲಿ 17 ಸಾವಿರ ಬಾರಿ ಮರುಟ್ವೀಟ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT