ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಜ್ಞಾನ ಬಳಸಿ: ವಿಪಕ್ಷಗಳಿಗೆ ಮೋದಿ ತಿರುಗೇಟು

Last Updated 4 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಜಾಮನಗರ/ಗುಜರಾತ್‌: ರಫೇಲ್‌ ಯುದ್ಧ ವಿಮಾನಗಳಿದ್ದರೆ ಬಾಲಾಕೋಟ್‌ ಮೇಲಿನ ವಾಯುದಾಳಿಯ ಚಿತ್ರಣ ಬೇರೆಯಾಗುತ್ತಿತ್ತು ಎಂಬ ತಮ್ಮ ಹೇಳಿಕೆ ಪ್ರಶ್ನಿಸುತ್ತಿರುವ ವಿರೋಧ ಪಕ್ಷಗಳ ನಾಯಕರು ’ಸಾಮಾನ್ಯ ಜ್ಞಾನ ಉಪಯೋಗಿಸಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.

‘ನಿಗದಿತ ಅವಧಿಯೊಳಗೆ ರಫೇಲ್‌ ಯುದ್ಧ ವಿಮಾನ ಸೇನೆಯ ಕೈಸೇರಿದ್ದರೆ ಪರಿಣಾಮ ಬದಲಾಗುತ್ತಿತ್ತು ಎಂದು ಹೇಳಿದ್ದೆ. ಆದರೆ, ವಿರೋಧ ಪಕ್ಷಗಳು ಮೋದಿ ಅವರು ವೈಮಾನಿಕ ದಾಳಿ ಪ್ರಶ್ನಿಸುತ್ತಿದ್ದಾರೆ ಎಂದು ಹುಯಿಲೆಬ್ಬಿಸುತ್ತಿವೆ’ ಎಂದು ತರಾಟೆಗೆ ತೆಗೆದುಕೊಂಡರು.

‘ನಮ್ಮ ಬಳಿ ರಫೇಲ್‌ ಇದ್ದರೆ ನಮ್ಮ ಒಂದೇ ಒಂದು ಯುದ್ಧವಿಮಾನವೂ ಪತನವಾಗುತ್ತಿರಲಿಲ್ಲ. ಜತೆಗೆ ಅವರ ಯಾವೊಂದು ಯುದ್ಧವಿಮಾನವೂ ಉಳಿಯುತ್ತಿರಲಿಲ್ಲ ಎಂದಷ್ಟೇ ನಾನು ಹೇಳಿದ್ದೆ. ದಯಮಾಡಿ ವಿರೋಧ ಪಕ್ಷಗಳು ಸಾಮಾನ್ಯ ಜ್ಞಾನ ಉಪಯೋಗಿಸುವುದನ್ನು ಕಲಿಯಲಿ’ ಎಂದರು.

ಜಾಮನಗರದಲ್ಲಿ ಸೋಮವಾರ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ‘ವಿರೋಧ ಪಕ್ಷಗಳು ನನ್ನನ್ನು ಅರ್ಥ ಮಾಡಿಕೊಳ್ಳದಿದ್ದರೆ ನಾನೇನು ಮಾಡಲಿ. ವಿರೋಧ ಪಕ್ಷಗಳಿಗೂ ಅವರದೇ ಆದ ಇತಿಮಿತಿಗಳಿವೆ ಎಂಬುವುದು ಗೊತ್ತು’ ಎಂದು ಲೇವಡಿ ಮಾಡಿದರು.

ಪಾಕಿಸ್ತಾನದ ಬಾಲಾಕೋಟ್‌ ಉಗ್ರರ ಶಿಬಿರಗಳ ಮೇಲಿನ ದಾಳಿಯಲ್ಲಿ ರಫೇಲ್‌ ಯುದ್ಧ ವಿಮಾನ ಇದ್ದರೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತಿದ್ದವು. ಆದರೆ, ವಿರೋಧ ಪಕ್ಷಗಳು ರಫೇಲ್‌ಗೆ ಅಡ್ಡಗಾಲು ಹಾಕುತ್ತಿವೆ ಎಂದು ಮೋದಿ ದೂರಿದರು.

ಭಯೋತ್ಪಾದನೆ ರೋಗದ ಬೇರುಗಳು ನೆರೆಯ ರಾಷ್ಟ್ರದಲ್ಲಿವೆ. ಬೇರುಗಳಿಗೆ ಚಿಕಿತ್ಸೆ ನೀಡುವುದು ಬೇಡವೇ. ಸುಮ್ಮನೇ ಕೈಕಟ್ಟಿ ಕೂಡಬೇಕೇ ಎಂದು ಅವರು ಜನರನ್ನು ಪ್ರಶ್ನಿಸಿದರು.

‘ರಫೇಲ್‌ ಏಕಿಲ್ಲ, ಇದು ಯಾರ ಲೋಪ?‘

ಹಾಗಾದರೆ ಪ್ರಧಾನಿ ಮೋದಿ ಅವರು ಏಕೆ ತಮ್ಮ ನಾಲ್ಕೂವರೆ ವರ್ಷದ ಆಡಳಿತ ಅವಧಿಯಲ್ಲಿ ಒಂದೇ ಒಂದು ರಫೆಲ್‌ ಯುದ್ಧ ವಿಮಾನವನ್ನು ವಾಯುಪಡೆಗೆ ನೀಡಲಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಪ್ರಶ್ನಿಸಿದ್ದಾರೆ.

‘ದೇಶದ ಭದ್ರತೆ ಮತ್ತು ಸುರಕ್ಷತೆ ವಿಷಯದಲ್ಲಿ ಬಿಜೆಪಿಯಿಂದಲೇ ಇಂತಹ ನಿರ್ಲಕ್ಷ್ಯ ಮತ್ತು ಲೋಪ ಆಗಿರುವುದು ಏಕೆ ಎಂಬ ಬಗ್ಗೆ ಜನರಿಗೆ ತಿಳಿಸಬೇಕು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘ಅಮೇಠಿ ಶಸ್ತ್ರಾಸ್ತ್ರ ಕಾರ್ಖಾನೆ: ಸುಳ್ಳು ಹೇಳಿದ ಮೋದಿ’

ನವದೆಹಲಿ: ಅಮೇಠಿಯಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ.

‘2010ರಲ್ಲಿ ಅಮೇಠಿಯಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆಗೆ ಖುದ್ದು ನಾನೇ ಶಂಕುಸ್ಥಾಪನೆ ನೆರವೇರಿಸಿದ್ದೆ. ಕೆಲವು ವರ್ಷಗಳಿಂದ ಇಲ್ಲಿ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರ ತಯಾರಿಸಲಾಗುತ್ತಿದೆ. ಆದರೆ, ಮೋದಿ ಭಾನುವಾರ ಅಮೇಠಿಗೆ ಹೋಗಿ ಸುಳ್ಳು ಹೇಳಿ ಬಂದಿದ್ದಾರೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

‘ಅಮೇಠಿಯಲ್ಲಿಯ ಅಭಿವೃದ್ಧಿ ಕಂಡು ನಿಮಗೆ ಭಯವಾಗುತ್ತಿದೆ. ಅಮೇಠೀಯ ಕೊರ್ವಾ ಪ್ರದೇಶಲ್ಲಿ ಭಾರತ–ರಷ್ಯಾ ಜಂಟಿ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರತದ ಸೇನೆಗಾಗಿ ಎ.ಕೆ–203 ಬಂದೂಕು ನಿರ್ಮಿಸಲಾಗುವುದು’ ಎಂದು ಕೆಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT