ಮಂಗಳವಾರ, ಏಪ್ರಿಲ್ 7, 2020
19 °C
ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧಾರ

ಕೊರೊನಾ: ‘ಪ್ರತ್ಯೇಕವಾಸ’ಕ್ಕೆ ಸಾಯ್‌ ಕೇಂದ್ರಗಳ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೋವಿಡ್‌–19 ಭೀತಿಯ ಕಾರಣ ಮುಚ್ಚಲ್ಪಟಿರುವ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರಗಳನ್ನು(ಸಾಯ್‌) ಸೋಂಕು ಪೀಡಿತರಿಗೆ ‘ಪ್ರತ್ಯೇಕವಾಸ’ (ಕ್ವಾರೆಂಟೈನ್‌) ಸೌಕರ್ಯಕ್ಕೆ ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ತಿಳಿಸಿದೆ.

ಆರೋಗ್ಯ ಸಚಿವಾಲಯದ ಮನವಿಯಂತೆ ಸಾಯ್‌ನ ಪ್ರಾದೇಶಿಕ ಕೇಂದ್ರಗಳು, ಕ್ರೀಡಾಂಗಣಗಳು ಹಾಗೂ ವಸತಿನಿಲಯಗಳನ್ನು ‘ಪ್ರತ್ಯೇಕವಾಸ’ದ ಉಪಯೋಗಕ್ಕೆ ನೀಡಲಾಗುತ್ತಿದೆ.

‘ಇದೊಂದು ಬಿಕ್ಕಟ್ಟಿನ ಸ್ಥಿತಿ. ಸರ್ಕಾರದ ಅಗತ್ಯಕ್ಕೆ ತಕ್ಕಂತೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ. ಸಾಯ್‌ ಕೇಂದ್ರಗಳು ಸಾರ್ವಜನಿಕ ಆಸ್ತಿಯಾಗಿದ್ದು, ‘ಪ್ರತ್ಯೇಕವಾಸ’ಕ್ಕೆ ನೀಡಲು ನಿರ್ಧರಿಸಲಾಗಿದೆ’ ಎಂದು ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್‌ ಜುಲಾನಿಯಾ ಹೇಳಿದ್ದಾರೆ.

ಆರೋಗ್ಯ ಸಚಿವಾಲಯ ಯಾವಾಗ ಇವುಗಳನ್ನು ಉಪಯೋಗಿಸಿಕೊಳ್ಳಲಿದೆ ಎಂಬುದನ್ನು ಜುಲಾನಿಯಾ ನಿಖರವಾಗಿ ಹೇಳಿಲ್ಲ. ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಸಾಯ್‌ನ 10 ಪ್ರಾದೇಶಿಕ ಕೇಂದ್ರಗಳು ಹಾಗೂ ಐದು ಕ್ರೀಡಾಂಗಣಗಳಿವೆ. ಇವುಗಳಲ್ಲಿ ಕನಿಷ್ಠ 2000 ಸೋಂಕಿತರಿಗೆ ‘ಪ್ರತ್ಯೇಕವಾಸ’ದ ಸೌಕರ್ಯ ನೀಡಬಹುದು ಎಂಬುದು ಸರ್ಕಾರದ ಅಂದಾಜು.

ಕೊರೊನಾ ಭೀತಿಯ ಕಾರಣ ಸಾಯ್‌ನ ಎಲ್ಲ ಶಿಬಿರಗಳಲ್ಲಿ ತರಬೇತಿಯನ್ನು ನಿಲ್ಲಿಸಲಾಗಿದೆ. ಅಥ್ಲೀಟುಗಳನ್ನು ಮನೆಗೆ ಕಳುಹಿಸಲಾಗಿದೆ. ಒಲಿಂಪಿಕ್ಸ್‌ಗಾಗಿ ತರಬೇತಿ ನಡೆಸುತ್ತಿರುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮುಂದುವರಿಯಲು ಅವಕಾಶ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು