ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿ ನಾಡಲ್ಲಿ ಮತ್ತೆ ಸದ್ದು ಮಾಡಿದ ಬಂದೂಕು: ಒಂದೇ ತಿಂಗಳಲ್ಲಿ 30 ಎನ್‌ಕೌಂಟರ್‌

Last Updated 29 ಜೂನ್ 2019, 7:21 IST
ಅಕ್ಷರ ಗಾತ್ರ

ಲಖನೌ: ಕಳೆದ ಮೂರು ತಿಂಗಳಿನಿಂದ ನಿಶ್ಯಬ್ದವಾಗಿದ್ದ ಉತ್ತರಪ್ರದೇಶ ಪೊಲೀಸರ ಬಂದೂಕುಗಳು ಮತ್ತೆ ಸದ್ದು ಮಾಡಿವೆ. ಹಲವು ಪ್ರಕರಣಗಳಲ್ಲಿ ಬೇಕಾಗಿರುವ ಕ್ರಿಮಿನಲ್‌ಗಳ ಮೇಲೆಇದೊಂದೇ(ಜೂನ್‌) ತಿಂಗಳಲ್ಲಿ 30ಕ್ಕೂ ಹೆಚ್ಚು ಎನ್‌ಕೌಂಟರ್‌ ನಡೆಸಲಾಗಿದೆ.ಕಳೆದ ನಾಲ್ಕು ದಿನಗಳಲ್ಲಿ ಕನಿಷ್ಠ 15 ಎನ್‌ಕೌಂಟರ್‌ ನಡೆದಿದ್ದು, ಮೂವರು ಕ್ರಿಮಿನಲ್‌ಗಳು ಹತ್ಯೆಯಾಗಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದಾಗಿನಿಂದ ಇಲ್ಲಿಯವರೆಗೆ ನಡೆಸಲಾಗಿರುವ ಎನ್‌ಕೌಂಟರ್‌ ವೇಳೆ 77 ಅಪರಾಧಿಗಳು ಪ್ರಾಣ ಬಿಟ್ಟಿದ್ದಾರೆ. 1,100ಕ್ಕೂ ಹೆಚ್ಚಿನವರು ಗಾಯಗೊಂಡಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಎರಡು ವರ್ಷ ಪೂರೈಸಿತ್ತು. ಆ ವೇಳೆ ಮಾತನಾಡಿದ್ದ ಯೋಗಿ, ‘ಎರಡು ವರ್ಷಗಳಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಿದ್ದೇವೆ. 3,500ಕ್ಕೂ ಹೆಚ್ಚು ಎನ್‌ಕೌಂಟರ್‌ ಪ್ರಕರಣಗಳ ವೇಳೆ ಸಾವಿರಕ್ಕೂ ಹೆಚ್ಚು ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ. ಸುಮಾರು 12 ಸಾವಿರಕ್ಕೂ ಹೆಚ್ಚು ಕ್ರಿಮಿನಲ್‌ಗಳು ತಮ್ಮ ಜಾಮೀನನ್ನು ರದ್ದುಪಡಿಸುವಂತೆ ಹಾಗೂ ಶರಣಾಗುವುದಾಗಿ ಮನವಿ ಮಾಡಿದ್ದಾರೆ. ಎನ್‌ಕೌಂಟರ್‌ ಸಂದರ್ಭದಲ್ಲಿ ನಡೆದಿರುವ ಗುಂಡಿನ ಚಕಮಕಿ ವೇಳೆ 6 ಮಂದಿ ಪೊಲೀಸರೂ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಹೆಚ್ಚುವರಿ ಮಹಾನಿರ್ದೇಶಕ ಪಿ.ವಿ.ರಾಮಶಾಸ್ತ್ರಿ, ಕ್ರಿಮಿನಲ್‌ಗಳ ಬಂಧನ ಮತ್ತು ಎನ್‌ಕೌಂಟರ್‌ ಪ್ರಕರಣಗಳು ತಕ್ಷಣವೇ ಹೆಚ್ಚಾಗಿವೆ ಎಂಬುದನ್ನು ಅಲ್ಲಗಳೆದಿದ್ದಾರೆ.

‘ಇವು(ಎನ್‌ಕೌಂಟರ್‌) ಯೋಜಿತವಾದುವಲ್ಲ. ಬಂಧನ ಪ್ರಕ್ರಿಯೆ ವೇಳೆಕ್ರಿಮಿನಲ್‌ಗಳು ಹೇಗೆ ವರ್ತಿಸುತ್ತಾರೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಅವರು ತಮ್ಮ ಬಂಧನವನ್ನು ಹಿಂಸಾತ್ಮಕವಾಗಿ ವಿರೋಧಿಸುತ್ತಾರೆ. ಕಾನೂನಿನ ಪ್ರಕಾರ ಮುಂಜಾಗ್ರತೆಯಾಗಿ ಕನಿಷ್ಠ ಬಲ ಪ್ರಯೋಗಿಸಲು ಅವಕಾಶವಿದೆ. ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಎನ್‌ಕೌಂಟರ್‌ ಪ್ರಕರಣಗಳು ಹೆಚ್ಚಾಗಿವೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ’ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ನಡೆದ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆರಾಜ್ಯದ ಡಿಜಿಪಿ ಕಚೇರಿ ಹೊರಡಿಸಿದ್ದ ಪ್ರಕಟಣೆಯಲ್ಲಿ, ‘ಪೊಲೀಸರು ಹಾಕಿದ್ದ ತಡೆಗೋಡೆಯನ್ನು ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿ, ಪೊಲೀಸರತ್ತಲೇ ಗುಂಡು ಹಾರಿಸಿದ್ದ ಇಬ್ಬರು ಕ್ರಿಮಿನಲ್‌ಗಳು ಬಾರಾಬಂಕಿ ಪ್ರದೇಶದಲ್ಲಿ ಶುಕ್ರವಾರ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಅವರ ಸುಳಿವು ಕೊಟ್ಟವರಿಗೆ ತಲಾ ₹75 ಸಾವಿರ ಹಾಗೂ ₹25 ಸಾವಿರ ಘೋಷಿಸಲಾಗಿತ್ತು’ ಎಂದು ತಿಳಿಸಲಾಗಿದೆ.

‘ದರೋಡೆ ನಡೆಸಿ ಪರಾರಿಯಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿಅವರಿಬ್ಬರನ್ನು ಬಂಧಿಸಲು ಬದ್ದುಪುರ್‌ ಹಾಗೂ ಮೊಹಮ್ಮದ್‌ಪುರ್‌ ಖಾಲಾ ಠಾಣೆಗಳ ಪೊಲೀಸರ ತಂಡ ತಡೆಗೋಡೆ(ಬ್ಯಾರಿಕೇಡ್‌) ನಿರ್ಮಿಸಿತ್ತು.ತಡೆಯಲು ಬಂದ ಇಬ್ಬರು ಪೊಲೀಸರತ್ತ ಕ್ರಿಮಿನಲ್‌ಗಳು ಗುಂಡು ಹಾರಿಸಿದ್ದರು. ಈ ವೇಳೆ ಪ್ರತಿದಾಳಿ ಸಂಘಟಿಸಿದಾಗ ಜುಬೆರ್‌ ಹಾಗೂ ಜೋಮಸ್‌ ಎಂಬ ಇಬ್ಬರು ಕ್ರಿಮಿನಲ್‌ಗಳು ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಮೃತಪಟ್ಟಿದ್ದರು’ ಎಂದು ಉಲ್ಲೇಖಿಸಲಾಗಿದೆ.

ಈ ವೇಳೆಬದ್ದುಪುರ್‌ ಠಾಣಾಧಿಕಾರಿ ಸುಮಿತ್‌ ಕುಮಾರ್‌ ಶ್ರೀವತ್ಸವ್‌ ಅವರೂ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ತಿಳಿಸಲಾಗಿದೆ.

ಪ್ರಕಟಣೆಯ ಪ್ರಕಾರ ಜುಬೆರ್‌ ಎಂಬಾತನ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಿದ್ದವು. ಆತನ ಸುಳಿವು ಕೊಟ್ಟವರಿಗೆ ₹ 75ಸಾವಿರ ಬಹುಮಾನ ಘೋಷಿಸಲಾಗಿತ್ತು. ಮೃತಪಟ್ಟ ಮತ್ತೊಬ್ಬ ಅಪರಾಧಿ ಜೋಮಸ್‌ ಎಂಬಾತನ ವಿರುದ್ಧ 45ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಿದ್ದವು. ಈತನಿಗಾಗಿ ₹ 25ಸಾವಿರ ಘೋಷಿಸಲಾಗಿತ್ತು.

ಶುಕ್ರವಾರ ನಡೆದ ಮತ್ತೆರಡು ಎನ್‌ಕೌಂಟರ್‌ ಪ್ರಕರಣಗಳಲ್ಲಿ ಇಬ್ಬರು ಕ್ರಿಮಿನಲ್‌ಗಳನ್ನು ಬಂಧಿಸಲಾಗಿದೆ. ಗೋವರ್ಧನ್‌ ಠಾಣಾ ವ್ಯಾಪ್ತಿಯಲ್ಲಿ ದುರ್ಗಪಾಲ್‌ ಎಂಬಾತನನ್ನು ಬಂಧಿಸಲಾಗಿದೆ. ಗಾಜಿಯಾಬಾದ್‌ ಠಾಣಾ ವ್ಯಾಪ್ತಿಯಲ್ಲಿ ಆಮಿರ್‌ ಎಂಬಾತ ಸೆರೆಸಿಕ್ಕಿದ್ದಾನೆ. ಈ ಇಬ್ಬರಿಗಾಗಿ ತಲಾ ₹ 25ಸಾವಿರ ಹಾಗೂ ₹ 15ಸಾವಿರ ಬಹುಮಾನ ಘೋಷಿಸಲಾಗಿತ್ತು. ಈ ಬಗ್ಗೆಯೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT