ಜಾತಿ, ಮೈತ್ರಿ ಲೆಕ್ಕ ಮೀರಿದ ಮೋದಿ

ಸೋಮವಾರ, ಜೂನ್ 24, 2019
24 °C
ಉತ್ತರ ಪ್ರದೇಶದಲ್ಲಿ ಹುಸಿಯಾದ ಮಹಾಘಟಬಂಧನದ ನಿರೀಕ್ಷೆ: 17 ಸ್ಥಾನಗಳಿಗೆ ಸೀಮಿತ

ಜಾತಿ, ಮೈತ್ರಿ ಲೆಕ್ಕ ಮೀರಿದ ಮೋದಿ

Published:
Updated:
Prajavani

ಲಖನೌ: ‘ಉತ್ತರಪ್ರದೇಶದಲ್ಲಿ ಗೆದ್ದವರು ದೇಶ ಆಳುತ್ತಾರೆ’ ಎಂಬುದು ಹಳೆಯ ಮಾತು. ರಾಜ್ಯದ 80ರಲ್ಲಿ 71 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಳೆದ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿದಿತ್ತು. ಕಳೆದ ಬಾರಿಯಷ್ಟು ಕ್ಷೇತ್ರಗಳು ಈ ಬಾರಿ ಸಿಕ್ಕಿಲ್ಲದಿದ್ದರೂ ಸಿಕ್ಕ ಗೆಲುವು ಬಹಳ ದೊಡ್ಡದೇ. ಜತೆಗೆ, ಭಾರಿ ಸದ್ದು ಮಾಡಿದ್ದ ಮಹಾಮೈತ್ರಿ ಮೋದಿ ಅಲೆಗೆ ತಡೆ ಒಡ್ಡುವಲ್ಲಿ ದೊಡ್ಡ ಮಟ್ಟದಲ್ಲಿಯೇ ವಿಫಲವಾಗಿದೆ.

ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಎಸ್‌ಪಿ, ಬಿಎಸ್‌ಪಿ, ನಂತರ ಲೋಕಸಭೆಗೆ ನಡೆದ ಉಪ ಚುನಾವಣೆಯಲ್ಲಿ ಕೈಜೋಡಿಸಿ ಗೆಲುವಿನ ರುಚಿ ಕಂಡಿದ್ದವು. ವಿಧಾನಸಭಾ ಚುನಾವಣೆಯವರೆಗೂ ಬದ್ಧ ವೈರಿಗಳಾಗಿದ್ದ ಈ ಪಕ್ಷಗಳು, ಉಪಚುನಾವಣೆಯ ನಂತರ ‘ನಾವು ಒಂದಾದರೆ ಬಿಜೆಪಿಯ ಓಟವನ್ನು ತಡೆಯಬಲ್ಲೆವು’ ಎಂಬ ಲೆಕ್ಕಾಚಾರಕ್ಕೆ ಬಂದವು. ತಮ್ಮ ನಡುವಿನ ಕಹಿಯನ್ನು ನುಂಗಿ, ಆರ್‌ಎಲ್‌ಡಿಯನ್ನೂ ಜೊತೆಗೆ ಸೇರಿಸಿಕೊಂಡು ಮಹಾಮೈತ್ರಿಕೂಟ ರಚಿಸಿದವು. ಉತ್ತರಪ್ರದೇಶದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ ಸಹ ಈ ಕೂಟಕ್ಕೆ ಪರೋಕ್ಷ ನೆರವು ನೀಡಿತು.

ಮೈತ್ರಿ, ಜಾತಿ–ಧರ್ಮ ಎಲ್ಲವನ್ನೂ ಲೆಕ್ಕಹಾಕಿದ ಚುನಾವಣಾ ಪಂಡಿತರು, ‘ಉತ್ತರಪ್ರದೇಶದಲ್ಲಿ ಬಿಜೆಪಿ ಈ ಬಾರಿ ನೆಲಕಚ್ಚಲಿದೆ, 30ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಾರವು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಲೆಕ್ಕಾಚಾರಗಳೂ ಬದಲಾಗುತ್ತ ಹೋದವು. ಚುನಾವಣೆಯ ನಂತರ ಪ್ರಕಟವಾದ ಮತಗಟ್ಟೆ ಸಮೀಕ್ಷೆಗಳು ‘ಬಿಜೆಪಿಗೆ ಹಿನ್ನಡೆ ಆದರೂ ಸಾಧನೆ ತೀರ ಕಳಪೆಯಾಗದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದವು. ಸಮೀಕ್ಷೆಯ ಅಂದಾಜು ನಿಜವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ರಾಜ್ಯದಲ್ಲಿ ಬಿಜೆಪಿಗೆ 11 ಸ್ಥಾನಗಳು ಕಡಿಮೆ ಆಗಿವೆ ಅಷ್ಟೇ. ಒಂದರ್ಥದಲ್ಲಿ ಬಿಜೆಪಿಯು ನಿರೀಕ್ಷೆಗಿಂತ ಉತ್ತಮ ಸಾಧನೆಯನ್ನೇ ಉತ್ತರ ಪ್ರದೇಶದಲ್ಲಿ ಮಾಡಿದೆ.

ಸೀಮಿತ ಪರಿಣಾಮ: ಶತಾಯಗತಾಯ ಬಿಜೆಪಿಗೆ ತಡೆಯೊಡ್ಡಬೇಕು ಎಂಬ ಉದ್ದೇಶದಿಂದ ಎಸ್‌ಪಿ–ಬಿಎಸ್‌ಪಿ ಅಳೆದು ತೂಗಿ ಕ್ಷೇತ್ರಗಳನ್ನು ಹಂಚಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಬಿಎಸ್‌ಪಿ 38 ಕ್ಷೇತ್ರಗಳಲ್ಲಿ, ಎಸ್‌ಪಿ 37 ಮತ್ತು ಆರ್‌ಎಲ್‌ಡಿ 3 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿದ್ದವು. ಅಮೇಠಿ ಹಾಗೂ ರಾಯ್‌ಬರೇಲಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿತ್ತು.

ಆದರೆ ಪ್ರಚಾರದ ಸಂದರ್ಭದಲ್ಲಿ ಮಾಯಾವತಿ ಹಾಗೂ ಕಾಂಗ್ರೆಸ್‌ ನಡುವೆ ಆಗಾಗ ಹತ್ತಿದ ಕಿಡಿ, ಪ್ರಚಾರದುದ್ದಕ್ಕೂ ಎಲ್ಲಾ ಪಕ್ಷಗಳ ಮುಖಂಡರು ಬಳಸಿದ ಭಾಷೆಯು ಪ್ರಮುಖ ವಿಚಾರಗಳು ಮುನ್ನೆಲೆಗೆ ಬಾರದಂತೆ ತಡೆದವು. ಮೋದಿಯ ಅಲೆ ಮತ್ತು ಹಿಂದುತ್ವದ ರಾಜಕಾರಣದ ಮುಂದೆ ಜಾತಿ ರಾಜಕಾರಣ ಕೆಲಸ ಮಾಡಲಿಲ್ಲ. ಫೂಲ್‌ಪುರ, ಗೋರಖಪುರ ಉಪಚುನಾವಣೆಯ ಫಲಿತಾಂಶಗಳು ಈ ಚುನಾವಣೆಯಲ್ಲಿ ಪ್ರತಿಫಲನಗೊಳ್ಳಲಿಲ್ಲ. ಪರಿಣಾಮವಾಗಿ ಮಹಾಮೈತ್ರಿ 17 ಕ್ಷೇತ್ರಗಳಿಗೆ ಸೀಮಿತವಾಗುವಂತಾಯಿತು.

2014ರ ಚುನಾವಣೆಯಲ್ಲಿ ಎಸ್‌ಪಿ 5 ಕ್ಷೇತ್ರಗಳನ್ನು ಗೆದ್ದಿದ್ದರೆ ಬಿಎಸ್‌ಪಿಗೆ ಖಾತೆ ತೆರೆಯಲೂ ಸಾಧ್ಯವಾಗಿರಲಿಲ್ಲ. ಈ ಬಾರಿಯೂ ಎಸ್‌ಪಿ 5 ಕ್ಷೇತ್ರಗಳಿಗೆ ಸೀಮಿತವಾಗಿದೆ. ಅಖಿಲೇಶ್‌ ಪತ್ನಿ ಡಿಂಪಲ್‌ ಯಾದವ್‌ ಸೇರಿದಂತೆ ಅವರ ಕುಟುಂಬದ ಮೂವರು ಸೋಲಿನ ರುಚಿ ಕಂಡಿದ್ದಾರೆ. ಕಳೆದ ಬಾರಿ ಶೂನ್ಯ ಸಾಧನೆ ಮಾಡಿದ್ದ ಬಿಎಸ್‌ಪಿ, ಈ ಬಾರಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಒಂದರ್ಥದಲ್ಲಿ ಮೈತ್ರಿಯಿಂದ ಎಸ್‌ಪಿಗೆ ನಷ್ಟ ಹಾಗೂ ಬಿಎಸ್‌ಪಿಗೆ ಲಾಭವಾಗಿದೆ. ಇದು ಮೈತ್ರಿಯ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾಯ್ದು ನೋಡಬೇಕು. ಆರ್‌ಎಲ್‌ಡಿ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಮೂರೂ ಕ್ಷೇತ್ರಗಳಲ್ಲಿ ಸೋಲು ಕಂಡಿದ್ದಾರೆ.

ಪ್ರಧಾನಿ ಮೋದಿ (ವಾರಾಣಸಿ) 4.70 ಲಕ್ಷ ಮತಗಳ ಅಂತರದಿಂದ ಭಾರಿ ಗೆಲುವು ದಾಖಲಿಸಿದ್ದಾರೆ. ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ (ಲಖನೌ), ಸಚಿವೆ ಸ್ಮೃತಿ ಇರಾನಿ (ಅಮೇಠಿ), ಸಚಿವರಾದ ಸತ್ಯಪಾಲ್‌ ಸಿಂಗ್‌ (ಬಾಗ್‌ಪೇಟ್‌) ಮತ್ತು ಸಂತೋಷ್‌ ಗಂಗ್ವಾರ್‌ (ಬರೇಲಿ) ಗೆಲುವು ಸಾಧಿಸಿದ್ದಾರೆ.

ನಡೆಯದ ಪ್ರಿಯಾಂಕಾ ಮೋಡಿ

ನೆಹರೂ ಕುಟುಂಬದ ಇನ್ನೊಂದು ಕುಡಿ ಪ್ರಿಯಾಂಕಾ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ತರುವ ಮೂಲಕ ಕಾಂಗ್ರೆಸ್‌ ಉತ್ತರಪ್ರದೇಶದಲ್ಲಿ ಈ ಬಾರಿ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಪ್ರಯತ್ನವನ್ನು ಮಾಡಿತು. ‘ಪ್ರಿಯಾಂಕಾ, ಕಾಂಗ್ರೆಸ್‌ನ ಬ್ರಹ್ಮಾಸ್ತ್ರ’ ಎಂದು ಆ ಪಕ್ಷದ ನಾಯಕರು ಬಣ್ಣಿಸಿದರು. ಆದರೆ ಕಾಂಗ್ರೆಸ್‌ ನಿರೀಕ್ಷೆ ಹುಸಿಯಾಗಿದೆ. ಅಷ್ಟೇ ಅಲ್ಲ ಪಾರಂಪರಿಕವಾಗಿ ಕಾಂಗ್ರೆಸ್‌ ಹಿಡಿತದಲ್ಲಿದ್ದ ಅಮೇಠಿ ಕ್ಷೇತ್ರವನ್ನೂ ಕಾಂಗ್ರೆಸ್‌ ಕಳೆದುಕೊಂಡಿದೆ.

ಉತ್ತರಪ್ರದೇಶದದಲ್ಲಿ ಕಾಂಗ್ರೆಸ್‌ ಸಾಧನೆ ಏನೇ ಇರಲಿ, ಪ್ರಿಯಾಂಕಾ ಅವರು ಪಕ್ಷದಲ್ಲಿ ಹೊಸ ಚೈತನ್ಯವನ್ನು ತುಂಬುವ ಸೂಚನೆಯನ್ನು ನೀಡಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ಧುಮುಕುವ ಮೂಲಕ ಪ್ರಿಯಾಂಕಾ ಅವರು ಕಾಂಗ್ರೆಸ್‌ ಕಾರ್ಯಕರ್ತರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ.

**

ವಿರೋಧ ಪಕ್ಷಗಳ ನಕಾರಾತ್ಮಕ ರಾಜಕಾರಣವನ್ನು ಜನರು ತಿರಸ್ಕರಿಸಿದ್ದಾರೆ. ‘ಪರಿವಾರವಾದ’, ‘ವಂಶವಾದ’ ಮತ್ತು ‘ಜಾತಿವಾದ’ದ ರಾಜಕಾರಣ ಇನ್ನು ನಡೆಯದು ಎಂಬುದನ್ನು ಜನರು ಸ್ಪ‍ಷ್ಟವಾಗಿ ಸಾರಿದ್ದಾರೆ.
– ಯೋಗಿ ಆದಿತ್ಯನಾಥ, ಉತ್ತರಪ್ರದೇಶದ ಮುಖ್ಯಮಂತ್ರಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !