ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆರವಣಿಗೆ, ಶಕ್ತಿ ಪ್ರದರ್ಶಿಸಿದ ಅಭ್ಯರ್ಥಿಗಳು

ಉಮೇದುವಾರಿಕೆ ಸಲ್ಲಿಸಲು ಕಡೆಯ ದಿನ ಇಂದು
Last Updated 24 ಏಪ್ರಿಲ್ 2018, 6:17 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಕ್ಷೇತ್ರದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದರು.

ಇದೇ 20ರಂದು ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿಗಳಾದ ಅಭಯ ಪಾಟೀಲ (ದಕ್ಷಿಣ) ಮತ್ತು ಅನಿಲ ಬೆನಕೆ (ಉತ್ತರ) ಮತ್ತೊಮ್ಮೆ ನಾಯಕರೊಂದಿಗೆ ಬಂದು ಉಮೇದುವಾರಿಕೆ ನೀಡಿದರು.

ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಫಿರೋಜ್‌ ಸೇಠ್‌, ಆಮ್‌ ಆದ್ಮಿ ಪ‍ಕ್ಷದಿಂದ ಫಕ್ರುದ್ದೀನ್‌ ನದಾಫ್‌, ದಕ್ಷಿಣದಿಂದ ಕಾಂಗ್ರೆಸ್‌ನ ಎಂ.ಡಿ.  ಲಕ್ಷ್ಮೀನಾರಾಯಣ, ಆಮ್‌ ಆದ್ಮಿ ಪಕ್ಷದಿಂದ ಸದಾನಂದ ಮೇತ್ರಿ ಮುಖಂಡರೊಂದಿಗೆ ನಗರಪಾಲಿಕೆಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.

ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜಯ ಪಾಟೀಲ ಮತ್ತೊಂದು ಸೆಟ್‌ ನಾಮಪತ್ರ ಸಲ್ಲಿಸಿದರು. ಇದೇ 19ರಂದೂ ಸಲ್ಲಿಸಿದ್ದ ಅವರು, ಸೋಮವಾರ ಸಿಪಿಇಡಿ ಮೈದಾನದಿಂದ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು, ಸ್ವಾಮಿ ವಿವೇಕಾನಂದ ಮಾರ್ಗದ ತಹಶೀಲ್ದಾರ್‌ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಜೆಡಿಎಸ್‌ನ ಶಿವನಗೌಡ ಪಾಟೀಲ ಎತ್ತಿನಗಾಡಿಗಳ ಮೆರವಣಿಗೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಅಭ್ಯರ್ಥಿಯಾಗಿ ಮನೋಹರ್ ಕಿಣೇಕರ್‌, ಪಕ್ಷೇತರ ಅಭ್ಯರ್ಥಿಯಾಗಿ ಮೋಹನ್‌ ಮೋರೆ ನಾಮಪತ್ರ ಸಲ್ಲಿಸಿದರು.

ಅಂಬೇಡ್ಕರ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ನಗರ ಘಟಕದ ಕಚೇರಿಯಿಂದ ಪಾಲಿಕೆವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಫಿರೋಜ್‌ ಸೇಠ್‌ ಅವರಿಗೆ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ರಾಜು ಸೇಠ್‌, ಪ‍ಕ್ಷದ ಮುಖಂಡ ಸಂಜಯ ಸುಂಟಕರ ಸಾಥ್‌ ನೀಡಿದರು.

ರಾಣಿ ಚನ್ನಮ್ಮ ವೃತ್ತದಲ್ಲಿರುವ ಗಣಪತಿ ಮಂದಿರದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದ ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಂಸದ ಸುರೇಶ ಅಂಗಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ವಕೀಲ ಎಂ.ಬಿ. ಝಿರಲಿ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

ಒಂದರ ಮೇಲೊಂದು ಮೆರವಣಿಗೆಗಳು ನಡೆದಿದ್ದರಿಂದ ಚನ್ನಮ್ಮ ವೃತ್ತ, ಅಂಬೇಡ್ಕರ್‌ ರಸ್ತೆ, ಪಾಲಿಕೆ ಕಚೇರಿ, ತಹಶೀಲ್ದಾರ್‌ ಕಚೇರಿ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಕಾಂಗ್ರೆಸ್‌–ಬಿಜೆಪಿ ಮುಖಾಮುಖಿ!

ಅಂಬೇಡ್ಕರ್‌ ರಸ್ತೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮೆರವಣಿಗೆ ಮುಖಾಮುಖಿಯಾದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಚನ್ನಮ್ಮ ವೃತ್ತದ ಕಡೆಗೆ ಸಾಗುವ ರಸ್ತೆಯಲ್ಲಿ ನೂರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ನಿಂತಿದ್ದರು. ಕೊಲ್ಲಾಪುರ ವೃತ್ತ ಕಡೆಯ ರಸ್ತೆಯಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಎಚ್ಚೆತ್ತುಕೊಂಡ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ರಸ್ತೆ ವಿಭಜಕದಲ್ಲಿ ನಿಂತು ಭದ್ರತೆ ಒದಗಿಸಿದರು. ಮೆರವಣಿಗೆಯು ಶಾಂತಿಯುತವಾಗಿ ಮುಕ್ತಾಯವಾಯಿತು. ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ, ಡಿಸಿಪಿ ಸೀಮಾ ಲಾಟ್ಕರ್‌, ಮಾರ್ಕೆಟ್‌ ಇನ್‌ಸ್ಪೆಕ್ಟರ್‌ ಪ್ರಶಾಂತ್‌ ಬಂದೋಬಸ್ತ್‌ ನೇತೃತ್ವ ವಹಿಸಿದ್ದರು. ಸಿಆರ್‌ಪಿಎಫ್‌ ತುಕಡಿಯನ್ನೂ ನಿಯೋಜಿಸಲಾಗಿತ್ತು.

ನಾಮಪತ್ರ ಸ್ವೀಕರಿಸುವ ಸ್ಥಳಗಳಾದ ಪಾಲಿಕೆ ಹಾಗೂ ತಹಶೀಲ್ದಾರ್‌ ಕಚೇರಿ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT