ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮರಿಗೆ ಕಂಬನಿಯ ವಿದಾಯ

Last Updated 16 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿಗೆ ಬಲಿಯಾದ ಹುತಾತ್ಮ ಯೋಧರಿಗೆ ಇಡೀ ರಾಷ್ಟ್ರದ ಜನರು ಶನಿವಾರ ಕಂಬನಿಯ ವಿದಾಯ ನೀಡಿದರು.

ನವದೆಹಲಿಯಿಂದ ವಿಶೇಷ ವಿಮಾನಗಳಲ್ಲಿ ಯೋಧರ ಪಾರ್ಥಿವ ಶರೀರಗಳನ್ನು ಅವರ ಸ್ವಗ್ರಾಮಗಳಿಗೆ ಕಳಿಸಲಾಯಿತು. ಸಚಿವರು, ಹಿರಿಯ ಅಧಿಕಾರಿಗಳು, ಗ್ರಾಮದ ಜನರುಅಂತಿಮ ನಮನ ಸಲ್ಲಿಸಿದರು.

ಹುತಾತ್ಮ ಯೋಧರ ಕುಟುಂಬದ ಸದಸ್ಯರ ಆಕ್ರಂದನ ಮನ ಕಲುಕುವಂತಿತ್ತು. ಸಕಲ ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.

ಡೆಹ್ರಾಡೂನ್‌ ವರದಿ: ಸಿಆರ್‌ಪಿಎಫ್‌ ಎಎಸ್‌ಐ ಮೋಹನ್‌ ಲಾಲ್‌, ವೀರೇಂದ್ರ ಸಿಂಗ್‌ ಪಾರ್ಥಿವ ಶರೀರಕ್ಕೆ ಉತ್ತರಾಖಂಡ್‌ ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್‌ ರಾವತ್‌ ಅಂತಿಮ ಗೌರವ ಸಲ್ಲಿಸಿದರು.

ಔರಂಗಾಬಾದ್‌ ವರದಿ: ಮಹಾರಾಷ್ಟ್ರದ ಯೋಧರಾದ ನಿತೀನ್‌ ಶಿವಾಜಿ ರಾಠೋಡ (36) ಹಾಗೂ ಸಂಜಯ ಸಿಂಗ್‌ ದೀಕ್ಷಿತ್‌ (ರಜಪೂತ್‌) (47) ಅವರ ಮೃತದೇಹಗಳನ್ನು ಬುಲ್ಧಾನಾ ಜಿಲ್ಲೆಯ ಅವರ ಸ್ವಂತ ಗ್ರಾಮಗಳಿಗೆ ತರಲಾಯಿತು.

ಭುವನೇಶ್ವರ ವರದಿ: ಒಡಿಶಾದ ಎಲ್ಲ ಶಾಲಾ–ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಎರಡು ನಿಮಿಷ ಮೌನಾಚರಣೆ ನಡೆಸುವ ಮೂಲಕ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಹುತಾತ್ಮರಾದ ಯೋಧರ ಪೈಕಿ ಇಬ್ಬರು ಒಡಿಶಾ ರಾಜ್ಯದವರಿದ್ದಾರೆ. ಜಗತ್‌ಸಿಂಗ್‌ಪುರ್‌ ಜಿಲ್ಲೆಯ ಶಿಖರ್‌ ಗ್ರಾಮದ ಪ್ರಸನ್ನ ಕುಮಾರ್‌ ಸಾಹು ಹಾಗೂ ಕಟಕ್‌ ಜಿಲ್ಲೆಯ ರತನ್‌ಪುರ್‌ ಗ್ರಾಮದ ಮನೋಜಕುಮಾರ್‌ ಬೆಹರಾ ಹುತಾತ್ಮರಾದ ಯೋಧರು. ಯೋಧರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹10 ಲಕ್ಷ ಗೌರವಧನ ಘೋಷಿಸಿದೆ.

ಚೆನ್ನೈ ವರದಿ: ಹುತಾತ್ಮರಾದ ತಮಿಳುನಾಡಿನ ಇಬ್ಬರು ಸಿಆರ್‌ಪಿಎಫ್‌ ಯೋಧರ ಕುಟುಂಬಗಳ ತಲಾ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಶನಿವಾರ ಆದೇಶಿಸಿದ್ದಾರೆ. ಹುತಾತ್ಮರಾದ ಜಿ.ಸುಬ್ರಮಣಿಯನ್‌ ಮತ್ತು ಸಿ.ಶಿವಚಂದ್ರನ್‌ ಅವರ ಪಾರ್ಥಿವ ಶರೀರವನ್ನು ದೆಹಲಿಯಿಂದ ಮದುರೆ ಹಾಗೂ ತಿರುಚಿನಾಪಳ್ಳಿಗೆ ವಿಮಾನದ ಮೂಲಕ ತರಲಾಯಿತು.

ತಲಾ ₹50 ಲಕ್ಷ ಸಹಾಯಧನ: ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಪೈಕಿ ರಾಜಸ್ಥಾನದ ಐವರು ಯೋಧರ ಕುಟುಂಬಗಳಿಗೆ ಘೋಷಿಸಿದ್ದ ಸಹಾಯಧನವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ತಲಾ ₹50 ಲಕ್ಷ ನೀಡುವುದಾಗಿ ಶನಿವಾರ ಪ್ರಕಟಿಸಿದೆ.

ಕಪಿಲ್‌ ಶೋ’ದಿಂದ ಸಿಧುಗೆ ಕೊಕ್‌

ಪುಲ್ವಾಮಾ ದಾಳಿ ಕುರಿತು ನೀಡಿದ್ದ ಪ್ರತಿಕ್ರಿಯೆಗಾಗಿ ಪಂಜಾಬ್‌ ಸಚಿವ ಮತ್ತು ಮಾಜಿ ಕ್ರಿಕೆಟಿಗ ನವಜ್ಯೋತ್‌ ಸಿಂಗ್ ಸಿಧು ಅವರನ್ನು ಕಿರುತೆರೆಯ ಪ್ರಸಿದ್ಧ ಹಾಸ್ಯ ಕಾರ್ಯಕ್ರಮ ‘ಕಪಿಲ್‌ ಶರ್ಮಾ ಶೋ’ ದಿಂದ ಕೈ ಬಿಡಲಾಗಿದೆ. ತೆರವಾದ ಜಾಗದಲ್ಲಿ ನಟಿ ಅರ್ಚನಾ ಪೂರಣ್‌ ಸಿಂಗ್‌ ಅವರನ್ನು ಕರೆ ತರಲಾಗಿದೆ.

‘ಯಾರೋ ಒಬ್ಬ ನಡೆಸಿದ ದಾಳಿಗೆ ಪಾಕಿಸ್ತಾನವನ್ನು ಹೊಣೆ ಮಾಡುವುದು ಎಷ್ಟು ಸಮಂಜಸ’ ಎಂದು ಎಂದು ಸಿಧು ಪ್ರಶ್ನಿಸಿದ್ದರು.ಉಗ್ರರಿಗೆ ಯಾವುದೇ ಧರ್ಮ ಇಲ್ಲ ಎಂದು ಪ್ರತಿಪಾದಿಸಿದ್ದರು.

ಸ್ನೇಹಕ್ಕಿಂತ ದೇಶ ದೊಡ್ಡದು: ‘ದೋಸ್ತಿಗಿಂತ ದೇಶ ಮೊದಲು’ ಎಂದು ಶನಿವಾರ ಪ್ರತಿಕ್ರಿಯೆ ನೀಡಿರುವ ಸಿಧು, ಈಗಲೂ ತಮ್ಮ ಹೇಳಿಕೆಗೆ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

‘ಹೇಡಿಯೊಬ್ಬ ಎಸಗಿದ ಪೈಶಾಚಿಕ ಕೃತ್ಯಕ್ಕೆ ಪಾಕಿಸ್ತಾನದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ’ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಿರುಗೇಟು

ಪುಲ್ವಾಮಾ ಘಟನೆಯನ್ನು ರಾಜಕೀಯ ದೃಷ್ಟಿಯಿಂದ ನೋಡದಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಮನವಿಯನ್ನು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಹಿಂದೆ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಮೇಲೆ ನಡೆದ ಉಗ್ರರ ದಾಳಿಯನ್ನು ಚುನಾವಣಾ ಪ್ರಚಾರ ಸಭೆಗಳಲ್ಲಿ ಮೋದಿ ಲೇವಡಿ ಮಾಡಿದ್ದನ್ನು ಪವಾರ್‌ ಸ್ಮರಿಸಿಕೊಂಡಿದ್ದಾರೆ.

ಮೋದಿ ಅವರಂತೆ ನಾವು ಉಗ್ರರ ದಾಳಿಯ ವಿಷಯವನ್ನು ಖಂಡಿತ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದಿದ್ದಾರೆ.

ದೇಣಿಗೆಗೆ ವೆಬ್‌ಸೈಟ್‌

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ 49 ಯೋಧರ ಕುಟುಂಬಗಳಿಗೆ ನೆರವು ಒದಗಿಸಲು ಇಚ್ಛಿಸುವವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹೊಸ ವೆಬ್‌ಸೈಟ್‌ ಆರಂಭಿಸಿದೆ.

https://bharatkeveer.gov.in ಎಂಬ ವೆಬ್‌ಸೈಟ್‌ ಅನ್ನು ಗೃಹ ಸಚಿವಾಲಯ ಆರಂಭಿಸಿದೆ. ದೇಣಿಗೆ ನೀಡಬಯಸುವವರು ಈ ವೆಬ್‌ಸೈಟ್‌ಗೆ ಹೋಗಿ ತಮಗೆ ಬೇಕಾದಯೋಧರ ಕುಟುಂಬಗಳ ಹೆಸರನ್ನು ಆಯ್ಕೆ ಮಾಡಿಕೊಂಡು ಸಹಾಯ ಒದಗಿಸಬಹುದು. ದೇಣಿಗೆಯು ತೆರಿಗೆ ವಿನಾಯಿತಿಗೆ ಒಳಪಟ್ಟಿರುತ್ತದೆ. ಗರಿಷ್ಠ ₹15 ಲಕ್ಷದವರೆಗೆ ದೇಣಿಗೆ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT