ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಪ್ರಚಾರಕ್ಕೆ ರಾಬರ್ಟ್‌ ವಾದ್ರಾ

ಬುಧವಾರ, ಏಪ್ರಿಲ್ 24, 2019
31 °C

ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಪ್ರಚಾರಕ್ಕೆ ರಾಬರ್ಟ್‌ ವಾದ್ರಾ

Published:
Updated:

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ತಾವು ಪ್ರಚಾರ ನಡೆಸುವುದಾಗಿ ಪ್ರಿಯಾಂಕಾ ಗಾಂಧಿಯ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ಭಾನುವಾರ ಹೇಳಿದ್ದಾರೆ.

‘ಅತ್ತೆ ಸೋನಿಯಾ ಗಾಂಧಿ ಹಾಗೂ ಬಾವ ರಾಹುಲ್‌ ಗಾಂಧಿ ಅವರು ನಾಮಪತ್ರ ಸಲ್ಲಿಸುವಾಗ ನಾನು ಅವರ ಜೊತೆಗೆ ಇರುತ್ತೇನೆ. ಇದಾದ ನಂತರ ರಾಯ್‌ಬರೇಲಿ ಮತ್ತು ಅಮೇಠಿ ಮಾತ್ರವಲ್ಲದೆ ದೇಶದಾದ್ಯಂತ ಸಂಚರಿಸಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ’ ಎಂದು ವಾದ್ರಾ ಹೆಳಿದ್ದಾರೆ.

ರಾಹುಲ್‌ ಗಾಂಧಿ ಅವರು ಏಪ್ರಿಲ್‌ 10ರಂದು ಅಮೇಠಿ ಲೋಕಸಭಾ ಕ್ಷೇತ್ರಕ್ಕೆ ಮತ್ತು ಮರುದಿನ (ಏ.11) ಸೋನಿಯಾ ಗಾಂಧಿ ಅವರು ರಾಯ್‌ಬರೇಲಿ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.

ವಾದ್ರಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ, ಕೇಂದ್ರದ ಹಣಕಾಸು ಸಚಿವ ಅರುಣ್‌ ಜೇಟ್ಲಿ, ‘ಅವರ (ವಾದ್ರಾ) ಚುನಾವಣಾ ಪ್ರಚಾರ ಕಾಂಗ್ರೆಸ್‌ಗೆ ವರವಾಗುತ್ತದೋ ಅಥವಾ ಬಿಜೆಪಿಗೆ ವರವಾಗುತ್ತದೋ ಎಂದು ಹೇಳುವುದು ಕಷ್ಟ’ ಎಂದಿದ್ದಾರೆ.

ಲಂಡನ್‌ನಲ್ಲಿ ಆಸ್ತಿ ಖರೀದಿಗಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಆರೋಪವನ್ನು ವಾದ್ರಾ ಎದುರಿಸುತ್ತಿದ್ದಾರೆ. ದೆಹಲಿ ಹೈಕೋರ್ಟ್‌ ಈಚೆಗೆ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.

‘ಅಬ್ ಹೋಗಾ ನ್ಯಾಯ್’
ನವದೆಹಲಿ:
‘ಅಬ್ ಹೋಗಾ ನ್ಯಾಯ್’ (ಇನ್ನು ಸಿಗಲಿದೆ ನ್ಯಾಯ) – ಇದು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಘೋಷಣೆ. 

‘ಮೋದಿ ಸರ್ಕಾರದ ಅವಧಿಯಲ್ಲಿ ಜನರಿಗೆ ಅನ್ಯಾಯವಾಗಿದ್ದು, ದೇಶದಲ್ಲಿ ಹತಾಶೆಯ ವಾತಾವರಣ ಇದೆ’ ಎಂಬುದನ್ನು ಬಿಂಬಿಸಲು ಕಾಂಗ್ರೆಸ್ ಯತ್ನಿಸಿದೆ. ಕಾಂಗ್ರೆಸ್‌ನಿಂದ ಮಾತ್ರ ನ್ಯಾಯ ಸಿಗಲಿದೆ ಎಂದು ಕಾಂಗ್ರೆಸ್ ಹೇಳಿದೆ. 

ಚುನಾವಣೆಯಲ್ಲಿ ನೀಡಿರುವ ಭರವಸೆಗಳು ಹಾಗೂ ಮೋದಿ ಸರ್ಕಾರದ ವೈಫಲ್ಯಗಳನ್ನು ಕುರಿತ ಗೀತೆಯೊಂದನ್ನು ಕಾಂಗ್ರೆಸ್ ಸಿದ್ಧಪಡಿಸಿದೆ. ‘ಮೈ ಹಿ ತೊ ಹಿಂದೂಸ್ತಾನ್ ಹೂ’ ಗೀತೆಯನ್ನು ಖ್ಯಾತ ಚಿತ್ರಸಾಹಿತಿ ಜಾವೇದ್ ಅಖ್ತರ್ ರಚಿಸಿದ್ದಾರೆ. 

‘ಕಾಂಗ್ರೆಸ್ ಘೋಷಿಸಿರುವ ಕನಿಷ್ಠ ಆದಾಯ ಖಾತ್ರಿ ಯೋಜನೆಗೆ ಮಾತ್ರವೇ ‘ನ್ಯಾಯ್’ ಸೀಮಿತವಾಗಿಲ್ಲ. ಎಲ್ಲರಿಗೂ ನ್ಯಾಯ ನೀಡುವ ಪರಿಕಲ್ಪನೆ ಇದು. ಯುವಕರು, ರೈತರು, ಉದ್ಯಮಿಗಳನ್ನೂ ಇದು ಒಳಗೊಂಡಿದೆ’ ಎಂದು ಪ್ರಚಾರ ಸಮಿತಿ ಮುಖ್ಯಸ್ಥ ಆನಂದ್ ಶರ್ಮಾ ಹೇಳಿದ್ದಾರೆ. ಕೆಲವೊಂದು ತಿದ್ದುಪಡಿ ಬಳಿಕ ಪ್ರಚಾರದ ಥೀಮ್ ಬಿಡುಗಡೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !