ಮಂಗಳವಾರ, ಸೆಪ್ಟೆಂಬರ್ 17, 2019
21 °C

ಕೆಲಸ ಆಗಿಲ್ಲ, ಆದರೂ ಮೋದಿಯದ್ದೇ ಗೆಲುವು: ಹೀಗಂತಾರೆ ವಾರಾಣಸಿ ಜನ

Published:
Updated:

ವಾರಾಣಸಿ: ‘ಐದು ವರ್ಷಗಳಲ್ಲಿ ವಾರಾಣಸಿಯಲ್ಲಿ ಅಂತಹ ಬದಲಾವಣೆಯೇನೂ ಆಗಿಲ್ಲ. ಎಲ್ಲೋ ಕೆಲವು ರಸ್ತೆಗಳನ್ನು ಅಗಲ ಮಾಡಲಾಗಿದೆ ಅಷ್ಟೆ. ಕೊಳಚೆ ನೀರು ಗಂಗಾ ನದಿಗೆ ಹರಿಯುತ್ತಲೇ ಇದೆ, ಅದು ಮಲಿನವಾಗುತ್ತಲೇ ಇದೆ’.

ವಾರಾಣಸಿಯ ಬಹುತೇಕ ಬೀಡಾಅಂಗಡಿಗಳಲ್ಲಿ ಮತ್ತು ಸ್ನಾನಘಟ್ಟಗಳಲ್ಲಿ ಕೇಳಿಬರುವ ಮಾತುಗಳಿವು. ಇಷ್ಟೇ ಅಲ್ಲ. ‘ವಿಮಾನ ನಿಲ್ದಾಣಗಳಿಂದ ವಾರಾಣಸಿಗೆ ಪ್ರಯಾಣ ಮಾಡಿದರೆ ವಾರಾಣಸಿಯಲ್ಲಿ ಆಗಿರುವ ಅಭಿವೃದ್ಧಿ ಕಾಣುತ್ತದೆ’ ಎನ್ನುವ ಮಾತೂ ಅಲ್ಲಿ ಕೇಳಿಬರುತ್ತದೆ. 

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರು ಮತ್ತು ವಿರೋಧ ಪಕ್ಷಗಳ ಬೆಂಬಲಿಗರ ನಡುವೆ ನಡೆಯುವ ಚರ್ಚೆಯ ವೈಖರಿ ಇದು. ಆದರೆ ಈ ಎಲ್ಲಾ ಚರ್ಚೆಗಳು ಅಂತ್ಯವಾಗುವುದು, ‘ಈ ಬಾರಿ ಮೋದಿ ಗೆದ್ದೇ ಗೆಲ್ಲುತ್ತಾರೆ’ ಎಂಬಲ್ಲಿಗೆ. 

ಈ ಬಾರಿ ಮೋದಿ ಗೆಲ್ಲುತ್ತಾರೆ ಎಂಬುದನ್ನು ವಿರೋಧ ಪಕ್ಷಗಳ ಬೆಂಬಲಿಗರೂ ಒಪ್ಪುತ್ತಾರೆ. ‘ವಿರೋಧ ಪಕ್ಷಗಳು ಪ್ರಬಲವಾದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಹೀಗಾಗಿ ಮೋದಿ ಈ ಬಾರಿ ನಿರಾಯಾಸವಾಗಿ ಗೆಲ್ಲುತ್ತಾರೆ’ ಎನ್ನುತ್ತಾರೆ ಅಸ್ಸಿ ಘಾಟ್‌ನಲ್ಲಿ ಬೀಡಾ ಅಂಗಡಿ ನಡೆಸುವ ಅನುರಾಗ್ ಯಾದವ್.

‘ವಿರೋಧ ಪಕ್ಷಗಳ ಅಭ್ಯರ್ಥಿ ಗೆಲ್ಲುವುದು ಬೇಕಿರಲಿಲ್ಲ. ಮೋದಿ ಅವರ ಗೆಲುವಿನ ಅಂತರವನ್ನು ಕಡಿಮೆ ಮಾಡಿದ್ದರೂ ಸಾಕಿತ್ತು. ಅದು ವಿಪಕ್ಷಗಳ ನೈತಿಕ ಗೆಲುವು ಆಗುತ್ತಿತ್ತು’ ಎನ್ನುತ್ತಾರೆ ದಶಾಶ್ವಮೇಧ ಘಾಟ್‌ನಲ್ಲಿ ಗುಟ್ಕಾ ವ್ಯಾಪಾರ ನಡೆಸುವ ರಾಮ್ ಕಿಸನ್.

ಸ್ಥಳೀಯ ಬಿಜೆಪಿ ನಾಯಕರದ್ದೂ ಇದೇ ಮಾತು. ‘ಈ ಭಾರಿ ಮೋದಿ ಅವರಿಗೆ ಭಾರಿ ಅಂತರದ ಗೆಲುವಿನ ಉಡುಗೊರೆ ನೀಡುತ್ತೇವೆ’ ಎನ್ನುತ್ತಾರೆ ಇಲ್ಲಿನ ಬಿಜೆಪಿ ನಾಯಕ ದಯಾ ಶಂಕರ್ ಮಿಶ್ರಾ. ಬಿಜೆಪಿ ಕಾರ್ಯಕರ್ತರು ಮೋದಿ ಗೆಲುವಿನ ವಿಶ್ವಾಸದಲ್ಲಿದ್ದಾರೆ.

***

ಮೋದಿ ಗೆಲ್ಲುವ ಸೂಚನೆಗಳು

* 2014ರಲ್ಲಿ ಮೋದಿ ವಿರುದ್ಧ ಅರವಿಂದ ಕೇಜ್ರಿವಾಲ್ ಸ್ಪರ್ಧಿಸಿದ್ದರು. ಕೇಜ್ರಿವಾಲ್ 2 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದರು. ಆದರೆ ಈ ಬಾರಿ ಕೇಜ್ರಿವಾಲ್ ಕಣದಲ್ಲಿಲ್ಲ

* ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕೆ ಇಳಿಸಿದ್ದಿದ್ದರೆ, ಮೋದಿಯ ಗೆಲುವು ಕಷ್ಟವಾಗುತ್ತಿತ್ತು. ಆದರೆ 2014ರಲ್ಲಿ ಮೋದಿ ವಿರುದ್ಧದ ಸ್ಪರ್ಧೆಯಲ್ಲಿ ಕೆಲವೇ ಸಾವಿರ ಮತ ಪಡೆದಿದ್ದ ಅಜಯ್ ರಾಯ್ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ

* ಈ ಬಾರಿ ಯಾವುದೇ ಪ್ರಬಲ ಎದುರಾಳಿ ಇಲ್ಲದ ಕಾರಣ ಮೋದಿಯ ಗೆಲುವಿನ ಅಂತರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

***

ಕಳೆದ ಲೋಕಸಭಾ ಚುನಾವಣೆ ಚಿತ್ರಣ

5.81 ಲಕ್ಷ –ನರೇಂದ್ರ ಮೋದಿ ಪಡೆದಿದ್ದ ಮತಗಳು

2.09 ಲಕ್ಷ –ಅರವಿಂದ ಕೇಜ್ರಿವಾಲ್ ಪಡೆದಿದ್ದ ಮತಗಳು

75,000 –ಅಜಯ್ ರಾಯ್ ಪಡೆದಿದ್ದ ಮತಗಳು

Post Comments (+)